ADVERTISEMENT

ಪಿಎಫ್‌ ಹೂಡಿಕೆ ಶೇ15ರಷ್ಟು ಹೆಚ್ಚಳ?

ಪಿಟಿಐ
Published 19 ಮಾರ್ಚ್ 2017, 19:30 IST
Last Updated 19 ಮಾರ್ಚ್ 2017, 19:30 IST
ಹೈದರಾಬಾದ್‌: ಮುಂದಿನ ಹಣಕಾಸು ವರ್ಷದಲ್ಲಿ ಷೇರುಪೇಟೆಯಲ್ಲಿ ಶೇ15ರಷ್ಟು ಹಣ ತೊಡಗಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.
 
‘ಏರುಗತಿಯಲ್ಲಿ ಸಾಗಿರುವ ಷೇರುಪೇಟೆಯ ವಹಿವಾಟು ಮತ್ತು ಹೂಡಿಕೆಗೆ ಉತ್ತಮ ಪ್ರತಿಫಲ ಬಂದಿರುವ ಕಾರಣಕ್ಕೆ ಹೂಡಿಕೆ ಮಿತಿ ಹೆಚ್ಚಿಸುವ ಕುರಿತು ಉದ್ದೇಶಿಸಲಾಗಿದೆ. ಇದೇ 30ರಂದು ನಡೆಯಲಿರುವ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು’ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದ್ದಾರೆ.
 
‘ಒಂದೂವರೆ ವರ್ಷದಲ್ಲಿನ ಹೂಡಿಕೆಗೆ ಉತ್ತಮ ಪ್ರತಿಫಲ ಬಂದಿದೆ. ಷೇರುಪೇಟೆಯ ಹೂಡಿಕೆ ನಿಧಿಗಳಲ್ಲಿನ  (ಇಟಿಎಫ್‌) ಹೂಡಿಕೆಯು ಶೇ 18.13ರಷ್ಟು ಲಾಭ ತಂದುಕೊಟ್ಟಿದೆ’ ಎಂದು ದತ್ತಾತ್ರೇಯ ಹೇಳಿದ್ದಾರೆ.
 
ಹೂಡಿಕೆ ಮಾಡಬಹುದಾದ ಮೊತ್ತದ ಶೇ 5 ರಿಂದ ಶೇ 15ರವರೆಗಿನ  ಬಂಡವಾಳವನ್ನು ಷೇರುಪೇಟೆಯಲ್ಲಿ ತೊಡಗಿಸಬಹುದು ಎಂದು ಹಣಕಾಸು ಸಚಿವಾಲಯವು ಈ ಮೊದಲೇ ‘ಇಪಿಎಫ್‌ಒ’ಗೆ ಸಮ್ಮತಿ ನೀಡಿದೆ.
 
ವಿವಿಧ ಬಗೆಯಲ್ಲಿ ಮಾಡಿದ ಹೂಡಿಕೆಯಿಂದ ಸಂಘಟನೆಗೆ ಬಂದ ನಿವ್ವಳ ವರಮಾನ ಮತ್ತು ಚಂದಾದಾರರಿಂದ ಸಂಗ್ರಹವಾದ ಹೊಸ ಮೊತ್ತವು  ಹಣಕಾಸು ವರ್ಷವೊಂದರಲ್ಲಿನ ಹೂಡಿಕೆ ಮಾಡಬಹುದಾದ ಮೊತ್ತವಾಗಿರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.