ADVERTISEMENT

ಪೇಟೆಯಲ್ಲಿ ದಾಖಲೆಯ ವಹಿವಾಟು

ಮೊದಲ ತ್ರೈಮಾಸಿಕದಲ್ಲಿ ಕಂಪೆನಿಗಳ ನಿರೀಕ್ಷೆಗೂ ಮೀರಿದ ಆರ್ಥಿಕ ಸಾಧನೆ

ಪಿಟಿಐ
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST
ಪೇಟೆಯಲ್ಲಿ ದಾಖಲೆಯ ವಹಿವಾಟು
ಪೇಟೆಯಲ್ಲಿ ದಾಖಲೆಯ ವಹಿವಾಟು   

ಮುಂಬೈ: ಕಂಪೆನಿಗಳ ತ್ರೈಮಾಸಿಕ ಫಲಿತಾಂಶವು ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದೆ. ಸೋಮವಾರ ಎರಡೂ ಷೇರುಪೇಟೆಗಳಲ್ಲಿ ದಾಖಲೆಯ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 217 ಅಂಶ ಜಿಗಿತ ಕಂಡು ಗರಿಷ್ಠ ಮಟ್ಟವಾದ 32,246 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 51 ಅಂಶ ಏರಿಕೆ ಕಂಡು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ 9,982 ಅಂಶಗಳಿಗೆ ತಲುಪಿತ್ತು. ನಂತರ   9,966 ಅಂಶಗಳಲ್ಲಿ ವಹಿವಾಟು ಅಂತ್ಯ ಕಂಡಿದೆ.

ಉತ್ತಮ ಆರ್ಥಿಕ ಸಾಧನೆ: ರಿಲಯನ್ಸ್‌ ಇಂಡಸ್ಟ್ರೀಸ್‌, ನಿರೀಕ್ಷೆಗಿಂತಲೂ ಉತ್ತಮ ಆರ್ಥಿಕ ಸಾಧನೆ ಪ್ರಕಟಿಸಿದೆ.  ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಲಾಭ ₹9,108 ಕೋಟಿಗಳಿಗೆ ತಲುಪಿದೆ. ಇದರಿಂದ ಕಂಪೆನಿ ಷೇರುಗಳು ಶೇ 1.89 ರಷ್ಟು ಏರಿಕೆ ಕಂಡಿದೆ. ಇದರಿಂದ ಬಿಎಸ್ಇನಲ್ಲಿ ಪ್ರತಿ ಷೇರಿನ ಬೆಲೆ ₹1,616ಕ್ಕೆ ಏರಿಕಯಾಗಿದೆ.

ಅಂತೆಯೇ ಎಚ್‌ಡಿಎಫ್‌ಸಿ ಬ್ಯಾಂಕ್‌ ನಿವ್ವಳ ಲಾಭ ಶೇ 20 ರಷ್ಟು ಹೆಚ್ಚಾಗಿ ₹3,894ಕ್ಕೆ ತಲುಪಿದೆ. ಇದರಿಂದ ಷೇರುಗಳ ಬೆಲೆಯೂ ಶೇ 1.83 ರಷ್ಟು ಏರಿಕೆ ಕಂಡಿತು. ಷೇರುಗಳ ಈ ಗಳಿಕೆಯು ಸೂಚ್ಯಂಕದ ಏರುಮುಖ ಚಲನೆಗೆ ಬೆಂಬಲ ನೀಡಿತು. ಭಾರ್ತಿ ಏರ್‌ಟೆಲ್‌, ಐಟಿಸಿ, ಟಿಸಿಎಸ್‌, ವಿಪ್ರೊ, ಇನ್ಫೊಸಿಸ್‌, ಐಸಿಐಸಿಐ ಬ್ಯಾಂಕ್ ಮತ್ತು ಎಸ್‌ಬಿಐ ಶೇ 2.20 ರವರೆಗೂ ಏರಿಕೆ ಕಂಡಿವೆ.

ಉತ್ತಮ ಮುಂಗಾರು ಸಹ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದೆ. ಅಮೆರಿಕದ ಫೆಡರಲ್‌ ರಿಸರ್ವ್‌ ಬುಧವಾರ ಬಡ್ಡಿದರ ಪರಾಮರ್ಶೆ ನಡೆಸಲಿದೆ. ಹಾಗಾಗಿ ಏಷ್ಯಾದ ಷೇರುಪೇಟೆಯಲ್ಲಿ ಮಿಶ್ರ ವಹಿವಾಟು ನಡೆಯಿತು. ದೇಶಿ ಮತ್ತು ವಿದೇಶಿ ಹೂಡಿಕೆದಾರರು ಷೇರುಗಳ ಖರೀದಿಗೆ ಹೆಚ್ಚು ಒತ್ತು ನೀಡುತ್ತಿರುವುದೂ ಸೂಚ್ಯಂಕದ ಏರಿಕೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT