ADVERTISEMENT

ಪೇಟೆ: ದಾಖಲೆ ವಹಿವಾಟು

ಅಮೆರಿಕ ಕೇಂದ್ರ ಬ್ಯಾಂಕ್‌ ಬಡ್ಡಿದರ ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ಮುಂಬೈ (ಪಿಟಿಐ): ನಿರ್ಮಾಣ ವಲಯದಲ್ಲಿ ಎಫ್‌ಡಿಐ ನಿಯಮ ಸಡಿಲಿಕೆ ಮತ್ತು ಅಮೆರಿಕ ಕೇಂದ್ರ ಬ್ಯಾಂಕ್‌ ಬಡ್ಡಿದರ ಕನಿಷ್ಠ ಮಟ್ಟದಲ್ಲಿ ಮುಂದುವರಿಸಲು ನಿರ್ಧರಿಸಿದ್ದರಿಂದ ದೇಶದ ಷೇರುಪೇಟೆ-­ಗಳಲ್ಲಿ ವಿದೇಶಿ ಹೂಡಿಕೆ ಒಳಹರಿವು ಹೆಚ್ಚಿದ್ದು, ಗುರುವಾರ ದಾಖಲೆಯ ವಹಿವಾಟಿಗೆ ಕಾರಣ­ವಾಯಿತು.

ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ (ಬಿಎಸ್‌ಇ) ಸಂವೇದಿ ಸೂಚ್ಯಂಕ 248 ಅಂಶಗಳ ಏರಿಕೆ ಕಂಡು,  27,346.33 ಅಂಶಗಳಲ್ಲಿ ದಾಖಲೆಯ ವಹಿವಾಟು ನಡೆಸಿತು.

ಸೆ.8ರಂದು 27,319.85 ಅಂಶ­ಗಳಲ್ಲಿ ಗರಿಷ್ಠ ವಹಿವಾಟು ನಡೆಸಿದ ಬಳಿಕ ಇದೇ ಈ ಮಟ್ಟದ ಗರಿಷ್ಠ ವಹಿವಾಟು  ದಾಖಲಾಗಿದೆ. ಕಳೆದ 3 ವಹಿವಾಟು ದಿನಗಳಿಂದ ಸೂಚ್ಯಂಕ 600 ಅಂಶಗಳಷ್ಟು ಏರಿಕೆ ಕಂಡು­ಕೊಂಡಿದೆ. ಇನ್ನೊಂದೆಡೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್‌ಎಸ್‌ಇ) ನಿಫ್ಟಿ ಕೂಡಾ 78.75 ಅಂಶಗಳ ಏರಿಕೆ ಕಂಡು, ಗರಿಷ್ಠ 8,169.20

ಅಂಶ­­­­ಗಳಲ್ಲಿ ದಿನದ ವಹಿವಾಟು ಅಂತ್ಯ­ಗೊಳಿಸಿತು. ಬಂಡವಾಳ ಒಳಹರಿವು ಮತ್ತು 2ನೇ ತ್ರೈಮಾಸಿಕದಲ್ಲಿ ಕಂಪೆನಿಗಳ ಉತ್ತಮ ಫಲಿತಾಂಶದಿಂದ ಷೇರುಪೇಟೆ ವಹಿವಾಟು ಧನಾತ್ಮಕ ಮಾರ್ಗಕ್ಕೆ ಮರಳಿದೆ ಎಂದು ದಳ್ಳಾಳಿಗಳು ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ (ಐಟಿ), ತಂತ್ರಜ್ಞಾನ ಮತ್ತು ಗ್ರಾಹಕ ಬಳಕೆ ವಸ್ತುಗಳ ಷೇರುಗಳು ಸೇರಿದಂತೆ ಒಟ್ಟಾರೆ 1,586 ಷೇರುಗಳು ಉತ್ತಮ ಗಳಿಕೆ ಕಂಡುಕೊಂಡವು. ಇದರಿಂದ ಹೂಡಿಕೆದಾರರ ಒಟ್ಟು ಸಂಪತ್ತು ₨95.35 ಲಕ್ಷಕ್ಕೆ ಏರಿಕೆ ಕಂಡಿದೆ.

ನಿರ್ಮಾಣ ವಲಯದಲ್ಲಿ ಎಫ್‌ಡಿಐ ನಿಯಮ ಸಡಿಲಗೊಳಿಸಿರುವುದರಿಂದ ರಿಯಲ್‌ ಎಸ್ಟೇಟ್‌ ಕಂಪೆನಿಗಳಾದ ಡಿಎಲ್‌ಎಫ್‌, ಯುನಿಟೆಕ್‌ ಮತ್ತು ಎಚ್‌ಡಿಐಎಲ್‌ ಷೇರುಗಳ ಮೌಲ್ಯ­ದಲ್ಲಿ ಏರಿಕೆ ಕಂಡಿತು.

ವಿದೇಶಿ ಹೂಡಿಕೆದಾರರು ಷೇರು­ಪೇಟೆಯಲ್ಲಿ ಬುಧವಾರ ₨785.61 ಕೋಟಿಯಷ್ಟು ಬಂಡವಾಳ ಹೂಡಿಕೆ ಮಾಡಿದ್ದೂ ಕೂಡಾ ದಿನದ ವಹಿವಾಟು ಏರಿಕೆ ಕಾಣಲು ನೆರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.