ADVERTISEMENT

ಪೋಸ್ಟ್‌ಗಳಿಗೆ ಹೊಣೆಯಲ್ಲ: ಫೇಸ್‌ಬುಕ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 19:30 IST
Last Updated 11 ಫೆಬ್ರುವರಿ 2017, 19:30 IST
ಪೋಸ್ಟ್‌ಗಳಿಗೆ ಹೊಣೆಯಲ್ಲ: ಫೇಸ್‌ಬುಕ್‌ ಸ್ಪಷ್ಟನೆ
ಪೋಸ್ಟ್‌ಗಳಿಗೆ ಹೊಣೆಯಲ್ಲ: ಫೇಸ್‌ಬುಕ್‌ ಸ್ಪಷ್ಟನೆ   

ನವದೆಹಲಿ: ‘ಭಾರತದಲ್ಲಿನ ಫೇಸ್‌ಬುಕ್‌ ಬಳಕೆದಾರರು ನಮ್ಮ ಸೇವೆಗಳಿಗೆ ಹೆಸರು ನೋಂದಾಯಿಸುವ ಮೊದಲು ಐರ್ಲೆಂಡ್‌ನಲ್ಲಿರುವ ಫೇಸ್‌ಬುಕ್‌ ಕಂಪೆನಿ ಜೊತೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಹಾಗಾಗಿ, ಇವರು ಪೋಸ್ಟ್‌ ಮಾಡುವ ಯಾವುದೇ ಬರಹ, ಚಿತ್ರ, ದೃಶ್ಯಾವಳಿಗಳಿಗೆ ನಾವು ಹೊಣೆಯಲ್ಲ.’ ಇದು ಫೇಸ್‌ಬುಕ್‌ ಇಂಡಿಯಾ ಕಂಪೆನಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿರುವ ಹೇಳಿಕೆ.

ಫೇಸ್‌ಬುಕ್‌ ಇಂಡಿಯಾದ ಮುಖ್ಯ ಕಚೇರಿ ಇರುವುದು ಹೈದರಾಬಾದ್‌ನಲ್ಲಿ. ‘ಭಾರತದಲ್ಲಿರುವವರು ಕಂಪ್ಯೂಟರ್‌, ಮೊಬೈಲ್‌ ಹಾಗೂ ಟ್ಯಾಬ್ಲೆಟ್‌ಗಳ ಮೂಲಕ ನಮ್ಮ ಸೇವೆ ಬಳಸಿಕೊಳ್ಳುವುದರ ಮೇಲೆ ನಮಗೆ ನಿಯಂತ್ರಣ ಇಲ್ಲ. ನಮ್ಮ ಕೆಲಸ ಭಾರತದಲ್ಲಿ ವ್ಯವಹಾರ ನಡೆಸುವುದು, ತಂತ್ರಾಂಶ ಅಭಿವೃದ್ಧಿಪಡಿಸುವುದು ಮತ್ತು ಪೂರಕ ತಾಂತ್ರಿಕ ಸೇವೆಗಳನ್ನು ಒದಗಿಸುವುದು ಮಾತ್ರ’ ಎಂದು ಕಂಪೆನಿ ಸುಪ್ರೀಂ ಕೋರ್ಟ್‌ಗೆ ವಿವರಣೆ ನೀಡಿದೆ.

ಭಾರತದಲ್ಲಿ  ಫೇಸ್‌ಬುಕ್‌ ಸೇವೆಗಳನ್ನು ಒದಗಿಸುವುದು ಅಮೆರಿಕದ ಡಲವೇರ್‌ ರಾಜ್ಯದ ಕಾನೂನಿನ ಅಡಿ ಸ್ಥಾಪನೆಯಾಗಿರುವ ಫೇಸ್‌ಬುಕ್‌ ಕಾರ್ಪೊರೇಷನ್‌ ಹಾಗೂ ಫೇಸ್‌ಬುಕ್‌ ಐರ್ಲೆಂಡ್‌ ಲಿಮಿಟೆಡ್‌ ಕಂಪೆನಿಗಳು. ಐರ್ಲೆಂಡ್‌ ಕಂಪೆನಿಯ ಕೇಂದ್ರ ಇರುವುದು ಡಬ್ಲಿನ್‌ನಲ್ಲಿ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ಅಮೆರಿಕ ಮತ್ತು ಕೆನಡಾ ಹೊರತುಪಡಿಸಿ ಇತರ ಎಲ್ಲ ದೇಶಗಳ ಜನ ಫೇಸ್‌ಬುಕ್‌ಗೆ ಹೆಸರು ನೋಂದಾಯಿಸಿಕೊಳ್ಳುವ ವೇಳೆ, ಐರ್ಲೆಂಡ್‌ ಕಂಪೆನಿ ಜೊತೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಹಾಗಾಗಿ, ಭಾರತದಲ್ಲಿನ ಬಳಕೆದಾರರು ಪೋಸ್ಟ್‌ ಮಾಡುವ ಮಾಹಿತಿ ನಿಯಂತ್ರಿಸುವುದು ಐರ್ಲೆಂಡಿನ ಕಂಪೆನಿ ಎಂದು ಹೇಳಲಾಗಿದೆ.

ಫೇಸ್‌ಬುಕ್‌ನಲ್ಲಿ ಲೈಂಗಿಕ ಹಿಂಸೆಯ ದೃಶ್ಯಾವಳಿಗಳು ಇರದಂತೆ ಮಾಡಬೇಕು ಎಂದು ‘ಪ್ರಜ್ವಲಾ’ ಎಂಬ ಎನ್‌ಜಿಒ ಬರೆದಿದ್ದ ಪತ್ರವನ್ನು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಎತ್ತಿಕೊಂಡಿದೆ. ಈ ವಿಚಾರಣೆಯ ಭಾಗವಾಗಿ ಫೇಸ್‌ಬುಕ್‌ ಇಂಡಿಯಾ ಕಂಪೆನಿಗೆ ನೋಟಿಸ್‌ ನೀಡಲಾಗಿತ್ತು.

‘ಫೇಸ್‌ಬುಕ್‌ನಲ್ಲಿ ಕಾಣಿಸಿಕೊಳ್ಳುವ ಯಾವುದೇ ಬರಹ, ಚಿತ್ರ, ದೃಶ್ಯಾವಳಿಗೆ ಫೇಸ್‌ಬುಕ್‌ ಇಂಡಿಯಾ ಕಂಪೆನಿ ಜವಾಬ್ದಾರ ಅಲ್ಲ. ಹಾಗಾಗಿ ಈ ವಿಚಾರಣೆಯಲ್ಲಿ ನಾವು ಪ್ರತಿವಾದಿ ಆಗಬೇಕಿಲ್ಲ’ ಎಂದು ಕಂಪೆನಿ ಹೇಳಿಕೊಂಡಿದೆ.

ಫೇಸ್‌ಬುಕ್‌ ಇಂಡಿಯಾ ಕಂಪೆನಿಯು ದೇಶದಲ್ಲಿ ಯಾವುದೇ ದತ್ತಾಂಶ ಸಂಗ್ರಹಣಾ ಕೋಶ (ಸರ್ವರ್) ಹೊಂದಿರದ ಕಾರಣ ಕೆಲವು ಅರ್ಜಿಗಳಲ್ಲಿ ಕಂಪೆನಿಯನ್ನು ಪ್ರತಿವಾದಿ ಮಾಡಬಾರದು ಎಂದು ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಯನ್ನು ದೆಹಲಿ ಹೈಕೋರ್ಟ್‌ ಮಾನ್ಯ ಮಾಡಿದೆ ಎಂಬ ಅಂಶವನ್ನೂ ಸುಪ್ರೀಂ ಕೋರ್ಟ್‌ ಗಮನಕ್ಕೆ ತರಲಾಗಿದೆ.

‘ನಮ್ಮನ್ನು ಈ ಅರ್ಜಿಯಲ್ಲಿ ತಪ್ಪಾಗಿ ಪ್ರತಿವಾದಿಯನ್ನಾಗಿಸಲಾಗಿದೆ. ನೋಟಿಸ್‌ಗೆ ಉತ್ತರ ನೀಡಲು ಸೂಕ್ತವಾಗಿರುವ ಕಂಪೆನಿ ಐರ್ಲೆಂಡಿನಲ್ಲಿದೆ’ ಎಂದು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.