ADVERTISEMENT

ಪ್ರವಾಸದಲ್ಲಿ ಗ್ಯಾಜೆಟ್‌ ಸುರಕ್ಷತೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 19:30 IST
Last Updated 11 ಏಪ್ರಿಲ್ 2017, 19:30 IST
ಪ್ರವಾಸದಲ್ಲಿ ಗ್ಯಾಜೆಟ್‌ ಸುರಕ್ಷತೆ ಅಗತ್ಯ
ಪ್ರವಾಸದಲ್ಲಿ ಗ್ಯಾಜೆಟ್‌ ಸುರಕ್ಷತೆ ಅಗತ್ಯ   

ಪ್ರವಾಸಿಗರೇ ಎಚ್ಚರ. ನೀವು ಬೇರೆ ದೇಶಗಳಿಗೆ ಪ್ರವಾಸ ಹೋದಾಗ, ನಿಮ್ಮೊಂದಿಗೆ ತೆಗೆದುಕೊಂಡು ಹೋಗುವ ಗ್ಯಾಜೆಟ್‌ಗಳ ಸುರಕ್ಷತೆ ಬಗ್ಗೆ ತುಸು ಹೆಚ್ಚೇ ಗಮನಹರಿಸಿ. ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌, ಲ್ಯಾಪ್‌ಟಾಪ್‌ ಅಥವಾ ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಯಾವುದೇ ಡಿಜಿಟಲ್‌ ಉಪಕರಣವಾದರೂ ಅದರಲ್ಲಿನ ದತ್ತಾಂಶ ಸೋರಿಕೆಯಾಗದಂತೆ ನೋಡಿಕೊಳ್ಳಿ. ನೀವು ಎಷ್ಟೇ ಭದ್ರತಾ ಮುಂಜಾಗ್ರತೆ ವಹಿಸಿದ್ದರೂ, ಇದನ್ನು ಭೇದಿಸಿ ಅಥವಾ ಬೆದರಿಸಿ ನಿಮ್ಮ ವೈಯಕ್ತಿಕ ಮಾಹಿತಿಗೆ ಕನ್ನ ಹಾಕುವರು ಸುತ್ತಮುತ್ತ ಇರುತ್ತಾರೆ. ನಿಮ್ಮ ಜತೆಗೆ ತೆಗೆದುಕೊಂಡು ಹೋಗುವ ಇತರೆ ಅಮೂಲ್ಯ ವಸ್ತುಗಳಿಗಿಂತಳೂ (ಆಭರಣ, ನಗದು) ಈಗ ಗ್ಯಾಜೆಟ್‌ನಲ್ಲಿರುವ ದತ್ತಾಂಶದ ಮೇಲೆ ಕಣ್ಣಿಡಬೇಕು.

ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಸರ್ಕಾರಕ್ಕೆ ನಿಮ್ಮ ವೈಯಕ್ತಿಕ ಮಾಹಿತಿಯ ಕುರಿತು ಆಸಕ್ತಿ ಇದ್ದೇ ಇರುತ್ತದೆ. ಇದು ಭದ್ರತೆಯ ದೃಷ್ಟಿಯಿಂದಲೂ ಇರಬಹುದು. ವಿಮಾನ ನಿಲ್ದಾಣದ ಭದ್ರತಾ ತಪಾಸಣೆ ಹಂತದಲ್ಲೇ ಇದು ಎದುರಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನೀವು ಹೊಂದಿರುವ ಖಾತೆ ಮಾಹಿತಿ ಸೇರಿದಂತೆ ಸಾಧ್ಯವಿರುವ ಎಲ್ಲ ಮೂಲಗಳಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿರುತ್ತಾರೆ. ಇದು ಕೇವಲ ಊಹೆಯಲ್ಲ. ವಾಸ್ತವ.
ಸಾಕಷ್ಟು ಮಂದಿ ಪ್ರವಾಸಿಗರಿಗೆ  ವಿಮಾನ ನಿಲ್ದಾಣಗಳಲ್ಲಿ ಈ  ರೀತಿಯ ಕೆಟ್ಟ ಅನುಭವಗಳಾಗಿವೆ.  ವಿದೇಶ ಪ್ರಯಾಣದ ವೇಳೆ ತಮ್ಮೊಂದಿಗೆ ಡಿಜಿಟಲ್‌ ಉಪಕರಣಗಳನ್ನು ತೆಗೆದುಕೊಂಡು ಹೋಗುವವರು, ಹೊಸ ಭದ್ರತಾ ನಿಯಮದಂತೆ ಈಗ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಪರಿಶೀಲನೆಗೆ ಒಳಗಾಗಬೇಕು. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಅಮೆರಿಕದ ರಕ್ಷಣಾ ಇಲಾಖೆ ಹೊಸ ಆದೇಶವನ್ನೇ ಹೊರಡಿಸಿದೆ.  ಕಂಪ್ಯೂಟರ್‌, ಟ್ಯಾಬ್ಲೆಟ್‌ ಅಥವಾ ಇನ್ನಿತರ ಯಾವುದೇ ದೊಡ್ಡ ಡಿವೈಸ್‌ಗಳಿದ್ದರೂ, ಅದನ್ನು ಭದ್ರತಾ ಪರಿಶೀಲನೆ ಹಂತದಲ್ಲೇ ತಡೆದು, ಪ್ರವೇಶ ನಿರ್ಬಂಧಿಸಲಾಗುತ್ತದೆ. ಕೈಯಲ್ಲಿರುವುದು ಪುಟ್ಟ ಸೆಲ್‌ಫೋನ್‌ ಆದರೂ, ಅದನ್ನೂ ಬಿಗಿ ಭದ್ರತೆ ಪರಿಶೀಲನೆಗೆ ಒಳಪಡಿಸಿದ ನಂತರವೇ, ಜತೆಯಲ್ಲಿ ತೆಗೆದುಕೊಂಡು ಹೋಗಲು ಅವಕಾಶ ನೀಡುತ್ತಾರೆ.

ಕಾನೂನು ಪ್ರಕಾರ, ಪ್ರವಾಸಿ ತನ್ನ ಸ್ಮಾರ್ಟ್‌ಫೋನ್‌ನ ಅಥವಾ ಇತರೆ ಗ್ಯಾಜೆಟ್‌ಗಳ ಪಾಸ್‌ವರ್ಡ್‌ಗಳನ್ನು  ಅಧಿಕಾರಿಗಳಿಗೆ ಹೇಳುವ ಅಗತ್ಯವಿಲ್ಲ. ಆದರೆ, ಪ್ರವಾಸಿ  ಯಾವ ದೇಶದಿಂದ ಯಾವ ದೇಶಕ್ಕೆ ಪ್ರಯಾಣಿಸುತ್ತಿದ್ದಾನೆ ಎನ್ನುವುದರ ಆಧಾರದ ಮೇಲೆ ಈ ನಿಯಮ ಬದಲಾಗುತ್ತದೆ. ಕೆಲವೆಡೆ ಅಧಿಕಾರಿಗಳೇ ಒತ್ತಡ ಹೇರುತ್ತಾರೆ. ಡಿಜಿಟಲ್‌ ಉಪಕರಣಗಳ ಭದ್ರತಾ ತಪಾಸಣೆಗೆ ವಿರೋಧ ವ್ಯಕ್ತಪಡಿಸಿ, ಅಧಿಕಾರಿಗಳಿಂದ ಪಾರಾಗುವುದು ಅಷ್ಟೊಂದು ಸುಲಭದ ಮಾತಲ್ಲ. 

ADVERTISEMENT

  ವಿಮಾನ ನಿಲ್ದಾಣ ಅಥವಾ ಇನ್ನಿತರ ಕಡೆ ಭದ್ರತಾ ಸಿಬ್ಬಂದಿ ಗ್ಯಾಜೆಟ್‌ ಅಥವಾ ಸಾಮಾಜಿಕ ಜಾಲತಾಣಗಳ ಖಾತೆಗಳ  ಪಾಸ್‌ವರ್ಡ್‌ ಕೇಳಿದಾಗ ಸುಳ್ಳು ಹೇಳಬಾರದು. ಸುಳ್ಳು ಹೇಳಿದರೆ ಅದು ಇನ್ನೊಂದಿಷ್ಟು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.  ಅಧಿಕಾರಿಗಳು ನೀವು ಪಡಬಾರದ ಪಾಡು ಪಡುವಂತೆ ಮಾಡುತ್ತಾರೆ. ತಪಾಸಣೆಗೆ ವಶಕ್ಕೆ ಪಡೆದ ನಿಮ್ಮ ಡಿವೈಸ್‌ ಸುರಕ್ಷಿತವಾಗಿ ಮರಳಿ ನಿಮ್ಮ ಕೈಸೇರುತ್ತದೆ ಎನ್ನುವುದೇ ಅನುಮಾನವಾಗುತ್ತದೆ ಎನ್ನುತ್ತಾರೆ ಸೆಂಟಿನಲ್‌ ಒನ್‌ ಎನ್ನುವ ಕಂಪ್ಯೂಟರ್‌ ಭದ್ರತಾ ಕಂಪೆನಿಯೊಂದರ ತಾಂತ್ರಿಕ ಮುಖ್ಯಸ್ಥ ಜೆರೆಮಿಯಾ ಗ್ರೋಸ್‌ಮನ್‌.

ಪರಿಹಾರ ಸೂತ್ರ

ಪ್ರಯಾಣದ ನಡುವೆ ಇಂತಹ ದಾಳಿಗಳನ್ನು ತಡೆಯಲು ಕೆಲವು ಸೂತ್ರಗಳನ್ನು ಪಾಲಿಸಬಹುದು.  ಪ್ರವಾಸದ ಸಂದರ್ಭದಲ್ಲಿ ಬೆಲೆಬಾಳುವ ಡಿವೈಸ್‌ ಅನ್ನು ಜತೆಗೆ ತೆಗೆದುಕೊಂಡು ಹೋಗಬಾರದು. ಪ್ರಾಥಮಿಕ ಸೌಲಭ್ಯ ಹೊಂದಿರುವ, ಅಗ್ಗದ ದರದ ಉಪಕರಣ ಜತೆಗಿರಲಿ. ಅದಕ್ಕೆ ನಿಮ್ಮ ಫೇಸ್‌ಬುಕ್‌, ಟ್ವಿಟರ್‌, ಫೋಟೋ ಆಲ್ಬಂ ಸೇರಿದಂತೆ ಇನ್ನಿತರ ಯಾವುದೇ ಸಾಮಾಜಿಕ ಜಾಲತಾಣಗಳ ಅಪ್ಲಿಕೇಷನ್‌ ಹಾಕಿಕೊಳ್ಳಬೇಡಿ. ಒಂದು ವೇಳೆ ಪ್ರವಾಸದ ಸಮಯದಲ್ಲಿ ಡಿವೈಸ್‌ ಕಳುವಾದರೂ ಚಿಂತೆ ಬೇಡ.   ದುಬಾರಿ ಬೆಲೆಯ ಗ್ಯಾಜೆಟ್‌ ನಿಮ್ಮ ಮನೆಯಲ್ಲೇ ಸುರಕ್ಷಿತವಾಗಿ ಇರುತ್ತದೆ. ಜತೆಗೆ ವೈಯಕ್ತಿಕ ಮಾಹಿತಿ ದತ್ತಾಂಶವೂ ಸೋರಿಕೆಯಾಗುವ ಭಯ ಇರುವುದಿಲ್ಲ.
ಹಾಗಂತ ತೀರಾ ಕಳೆಪೆಯಾದ ಡಿವೈಸ್‌ ಖರೀದಿಸಲು ಆಗುವುದಿಲ್ಲ. ದಿ ವಯರ್‌ಕಟರ್‌ ಡಾಟ್‌ ಕಾಂ ಎಂಬ ಡಿಜಿಟಲ್‌ ಉಪಕರಣಗಳ ಮಾರ್ಗದರ್ಶಕ ಅಂತರ್ಜಾಲ ತಾಣವು 100 ಡಾಲರ್‌ ಒಳಗಿರುವ ಅತ್ಯುತ್ತಮ ಉಪಕರಣಗಳ ಪಟ್ಟಿಯನ್ನು ಪ್ರಕಟಿಸಿದೆ.

ಆ್ಯಪಲ್‌ ಮತ್ತು ಆಂಡ್ರಾಯ್ಡ್‌ನ ಹಲವು ಉಪಕರಣಗಳಲ್ಲಿ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಇರುತ್ತದೆ. ಪ್ರಯಾಣದ ವೇಳೆ ಇಂತಹ ಡಿವೈಸ್‌ ಜತೆಗಿದ್ದರೆ ಅದರಲ್ಲಿ ಫಿಂಗರ್‌ಪ್ರಿಂಟ್ ರೀಡರ್‌ ಆಯ್ಕೆಯನ್ನು ಡಿಸೇಬಲ್‌ ಮಾಡಿಕೊಳ್ಳಿ. ಈ ಆಯ್ಕೆ ಇದ್ದರೆ ನಿಮ್ಮ ಬೆರಳಚ್ಚು ಗುರುತನ್ನು ಭದ್ರತಾ ಸಿಬ್ಬಂದಿ ದಾಖಲು ಮಾಡಿಕೊಳ್ಳುತ್ತಾರೆ. ಮತ್ತು ಇದನ್ನು ಇತರೆ ತನಿಖಾ ಉದ್ದೇಶಗಳಿಗೂ ಬಳಸುವ ಸಾಧ್ಯತೆ ಇರುತ್ತದೆ. ಇದೆಲ್ಲಾ ಅನಗತ್ಯ ಕಿರಿಕಿರಿ ಎನಿಸುತ್ತದೆ. ಹೀಗಾಗಿ ಪ್ರಯಾಣದ ವೇಳೆ ಗ್ಯಾಜೆಟ್‌ನಲ್ಲಿ ಈ ಆಯ್ಕೆಯನ್ನು ಡಿಸೇಬಲ್‌ ಮಾಡಿಟ್ಟುಕೊಳ್ಳಿ.

ಪಾಸ್‌ವರ್ಡ್‌ ವಿಚಾರಕ್ಕೆ ಬಂದರೆ, ಬ್ಯಾಂಕ್‌ ಸೇರಿದಂತೆ ಹಲವು ಆನ್‌ಲೈನ್‌ ವ್ಯವಹಾರಗಳಿಗೆ ಈಗ ಒಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ವ್ಯವಸ್ಥೆ ಜಾರಿಯಲ್ಲಿದೆ. ಒಟಿಪಿಗಾಗಿ ನೀವು ನೋಂದಣಿ ಮಾಡಿರುವ ಮೊಬೈಲ್‌ ಅನ್ನು ಪ್ರಯಾಣದ ವೇಳೆ ಜತೆಗೆ ತೆಗೆದುಕೊಂಡು ಹೋಗಬೇಡಿ.

ಆನ್‌ಲೈನ್‌ ಖಾತೆಗಳ ನಿರ್ವಹಣೆಗೆ ಅತ್ಯಂತ ಸುರಕ್ಷಿತ ಪಾಸ್‌ವರ್ಡ್‌ ಕ್ರಿಯೇಟ್‌ ಮಾಡಲು ಒನ್‌ ಪಾಸ್‌ವರ್ಡ್‌ ಮತ್ತು ಲಾಸ್ಟ್‌ ಪಾಸ್‌ ಎಂಬ ಅಪ್ಲಿಕೇಷನ್ಸ್‌ಗಳು ನೆರವು ನೀಡುತ್ತವೆ. ಹೀಗೆ ಕ್ರಿಯೇಟ್‌ ಮಾಡಿಕೊಂಡ ಪಾಸ್‌ವರ್ಡ್‌ಗಳನ್ನು  ಕ್ಲೌಡ್‌ ಸೇವೆ ಒದಗಿಸುವ ಡ್ರಾಪ್‌ಬಕ್ಸ್‌ನಂತಹ ತಾಣದಲ್ಲಿ, ಆನ್‌ಲೈನ್‌ ವ್ಯಾಲೆಟ್‌ನಲ್ಲಿ ಸೇವ್‌ ಮಾಡಿ ಇಟ್ಟುಕೊಳ್ಳಬಹುದು. ಆದರೆ, ಇದನ್ನು ತೆರೆಯಲು ಮತ್ತೊಂದು ಮಾಸ್ಟರ್‌ ಪಾಸ್‌ವರ್ಡ್‌ ನೆನಪಿಟ್ಟುಕೊಳ್ಳಬೇಕಾಗುತ್ತದೆ.

ನೀವು ಬಳಸುತ್ತಿರುವ ಗ್ಯಾಜೆಟ್‌ನಲ್ಲಿ ಎನ್‌ಕ್ರಿಪ್ಷನ್‌ ತಂತ್ರಜ್ಞಾನ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ. ಬಿಟ್‌ ಲಾಕರ್‌ (BitLocker) ಅಥವಾ ಆ್ಯಪಲ್‌ನ ಫೈಲ್‌ ವ್ಯಾಲೆಟ್‌ ಇಂತಹ ಗೂಢಲಿಪಿ ಸೇವೆ ಒದಗಿಸುತ್ತದೆ. ಅಂದರೆ ನೀವು ಪ್ರವಾಸಕ್ಕೆ ತೆರಳುವ ಮುನ್ನ ನಿಮ್ಮ ಕಂಪ್ಯೂಟರ್‌ನಲ್ಲಿರುವ ಅಥವಾ ಸ್ಮಾರ್ಟ್‌ಫೋನ್‌ನಲ್ಲಿರುವ ದತ್ತಾಂಶವೆಲ್ಲವನ್ನೂ ಗೂಢಲಿಪಿಗೆ ಪರಿವರ್ತಿಸಿ, ಕ್ಲೌಡ್‌ ಸೇವೆ ಒದಗಿಸುವ ತಾಣದಲ್ಲಿ ಸುರಕ್ಷಿತವಾಗಿ ಇರಿಸಿ ಹೋಗಬಹುದು. ಮರಳಿ ಬಂದ ನಂತರ ಪಡೆಯಬಹುದು.   ಪ್ರಯಾಣದ ನಡುವೆ ದತ್ತಾಂಶ ಅಥವಾ ವೈಯಕ್ತಿಕ ಮಾಹಿತಿ ಸೋರಿಕೆ ಆಗುತ್ತದೆ ಎನ್ನುವ ಭಯವೂ ಬೇಡ, ಭದ್ರತಾ ಅಧಿಕಾರಿಗಳ ಕಿರಿಕಿರಿಯೂ ತಪ್ಪುತ್ತದೆ.

     ಬ್ರಿಯಾನ್‌ ಎಕ್ಸ್‌ ಚೆನ್‌  (ನ್ಯೂಯಾರ್ಕ್‌ ಟೈಮ್ಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.