ADVERTISEMENT

ಫುಡ್‌ಪಾರ್ಕ್‌ ಸ್ಥಳೀಯರ ನೌಕರಿ ಕನಸು

ಸಿ.ಕೆ.ಮಹೇಂದ್ರ
Published 28 ಅಕ್ಟೋಬರ್ 2014, 19:30 IST
Last Updated 28 ಅಕ್ಟೋಬರ್ 2014, 19:30 IST

ಹೆಚ್ಚು ಫುಡ್‌ಪಾರ್ಕ್‌ ಸ್ಥಾಪಿಸುವ ಮೂಲಕ 2015ರ ಅಂತ್ಯದ ವೇಳೆಗೆ ದೇಶದಲ್ಲಿ ಹಣ್ಣು, ತರಕಾರಿ ಸಂಸ್ಕರಣೆ ಪ್ರಮಾಣವನ್ನು ಈಗಿನ ಶೇ 6ರಿಂದ 20ಕ್ಕೂ, ಮೌಲ್ಯವರ್ಧನೆ ಪ್ರಮಾಣವನ್ನು ಶೇ 20ರಿಂದ 35ಕ್ಕೂ, ದೇಶದ ಜಾಗತಿಕ ಆಹಾರ ವಹಿವಾಟನ್ನು ಶೇ 1.5ರಿಂದ      ಶೇ 3ಕ್ಕೂ ಹೆಚ್ಚಿಸುವ ಉದ್ದೇಶ ಕೇಂದ್ರ ಸರ್ಕಾರದ್ದು. ಆದರೆ, ಕೃಷಿಯನ್ನು ತೀವ್ರಗತಿಯಲ್ಲಿ ಯಾಂತ್ರೀಕರಣಗೊಳಿಸುವ ರಹಸ್ಯ ಕಾರ್ಯಸೂಚಿ ಫುಡ್‌ಪಾರ್ಕ್‌ಗಳ ಹಿಂದಿದೆ. ರೈತರಿಗೆ ಅನುಕೂಲಕ್ಕಿಂತ ಅಪಾಯವೇ ಹೆಚ್ಚಿರುವಂತಿದೆ. ನಿಧಾನವಾಗಿ ಕೃಷಿಕರನ್ನು ಅವರದೇ ಭೂಮಿಯಿಂದ ಅತಂತ್ರರನ್ನಾಗಿಸುವ ಹುನ್ನಾರಗಳಿರುವಂತಿದೆ.

ತುಮಕೂರು ಸಮೀಪದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಫ್ಯೂಚರ್‌ ಗ್ರೂಪ್ಸ್ ಸ್ಥಾಪಿಸಿರುವ ಏಷ್ಯಾದ ಅತಿ ದೊಡ್ಡ ಫುಡ್ ಪಾರ್ಕ್‌ನಲ್ಲಿ ಕೆಲಸಕ್ಕಾಗಿ ಜಿಲ್ಲೆಯ ಜನರು ದುಂಬಾಲು ಬೀಳುತ್ತಿದ್ದಾರೆ. ಕಂಡ ಕಂಡವರಿಗೆಲ್ಲ ಕೈ ಮುಗಿಯುತ್ತಾ  ಕೆಲಸ ಕೊಡಿಸುವಂತೆ ಅಂಗಲಾಚು ತ್ತಿರುವುದು ನಿರುದ್ಯೋಗದ ಸಮಸ್ಯೆಯನ್ನು ಎತ್ತಿತೋರಿಸುತ್ತಿದೆ.

ಇಲ್ಲಿನ ಸಂಸದರು ಹೇಳಿರುವಂತೆ ಅವರ ಬಳಿಯೇ ಎರಡು ಸಾವಿರ ಯುವಕರು ಕೆಲಸಕ್ಕಾಗಿ ಶಿಫಾರಸು ಪತ್ರ ಪಡೆದಿದ್ದಾರೆ!
ಪ್ರಧಾನಿ ನರೇಂದ್ರ ಮೋದಿ ಅವರು ಫುಡ್‌ಪಾರ್ಕ್‌ ಉದ್ಘಾಟಿಸಿದಾಗ ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ  ಘಟಕಗಳಿಂದಾಗಿ ರೈತರ ಬದುಕು ಉನ್ನತಿಗೇರಲಿದೆ, ಕೃಷಿ ಉತ್ಪನ್ನಗಳಿಗೆ ಅತ್ಯುತ್ತಮ ಬೆಲೆ ಸಿಗಲಿದೆ, ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಗಳೂ ಸೃಷ್ಟಿಯಾಗಲಿವೆ ಎಂದೇ ಹೇಳಲಾಗಿತ್ತು. ಆದರೆ, ವಾಸ್ತವ ಹಾಗಿಲ್ಲ ಎಂಬುದು ಆರಂಭದಲ್ಲೇ ಗೋಚರಿಸುತ್ತಿದೆ. ಫುಡ್‌ಪಾರ್ಕ್‌ ಎಂಬುದು ಹೊಸ ಮಾದರಿ ಏನಲ್ಲ, ಶ್ರೀಮಂತ ದೇಶಗಳಿಂದ ಅಮದಾದ ಚಿಂತನೆ ಅಷ್ಟೆ.

ಕೃಷಿಯನ್ನು ತೀವ್ರಗತಿಯಲ್ಲಿ ಯಾಂತ್ರೀಕರಣ ಗೊಳಿಸುವ ಹಿಡನ್‌ ಅಜೆಂಡಾ (ಗುಪ್ತ ಕಾರ್ಯಸೂಚಿ) ಫುಡ್‌ಪಾರ್ಕ್‌ಗಳ ಹಿಂದಿದೆ. ರೈತರಿಗೆ ಅನುಕೂಲಕ್ಕಿಂತ ಅಪಾಯವೇ ಹೆಚ್ಚಿರುವಂತಿದೆ. ವಾಲ್‌ಮಾರ್ಟ್‌ನಂತಹ ಬೃಹತ್‌ ಬಹುರಾಷ್ಟ್ರೀಯ ಕಂಪೆನಿಗಳು ಚಿಲ್ಲರೆ ವಹಿವಾಟು ಕ್ಷೇತ್ರ ಪ್ರವೇಶಿಸಿದರೆ ಸಾಂಪ್ರದಾಯಿಕ ಕಿರಾಣಿ ಅಂಗಡಿಗಳಿಗೆ ಆಗುವ ಪರಿಣಾಮವೇ ಈ ದೊಡ್ಡ ದೊಡ್ಡ ಫುಡ್‌ಪಾರ್ಕ್‌ಗಳಿಂದ ಕೃಷಿಕರಿಗೂ ಆಗಲಿದೆ. ಅಂದರೆ ನಿಧಾನವಾಗಿ ಕೃಷಿಕರನ್ನು ಅವರದೇ ಭೂಮಿಯಿಂದ ಅತಂತ್ರರನ್ನಾಗಿಸುವ ಹುನ್ನಾರಗಳಿವೆ.
10ನೇ ಪಂಚವಾರ್ಷಿಕ ಯೋಜನೆಯಲ್ಲೇ ಫುಡ್‌ಪಾರ್ಕ್‌ಗಳನ್ನು ಸ್ಥಾಪಿಸಬೇಕೆಂಬ ಉದ್ದೇಶ ಇಟ್ಟುಕೊಳ್ಳಲಾಗಿತ್ತು. 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದು ಸಾಕಾರಗೊಂಡಿದೆ.

ಖರೀದಿಗೆ ಮಾನದಂಡ?

ADVERTISEMENT

ಖರೀದಿಗೆ ಮಾನದಂಡ ಏನೆಂಬುದೇ ಇದೂ ವರೆಗೂ ತಿಳಿದುಬಂದಿಲ್ಲ. ಯಾವ ರೈತರು ಮಾರಬಹುದು ಎಂಬುದೂ ತಿಳಿದಿಲ್ಲ. ಆಹಾರದ ಬೆಳೆಗಳನ್ನು ಸಂಸ್ಕರಣೆ ಮಾಡು ತ್ತಾರೆ ಎಂಬುದು ಮಾತ್ರ ಗೊತ್ತು. ರೈತರಿಗೆ ಅನುಕೂಲ ಆಗಲಿದೆ ಎನ್ನುತ್ತಾರೆಯೇ ಹೊರತು ಪ್ರಯೋಜನ ಏನು ಎಂಬುದನ್ನು ಸ್ಪಷ್ಟವಾಗಿ ಯಾರೂ ಹೇಳುತ್ತಿಲ್ಲ.
– ಸಿಂಗದಹಳ್ಳಿ ರಾಜ್‌ಕುಮಾರ್‌
ರೈತ, ಸಾಮಾಜಿಕ ಹೋರಾಟಗಾರ

ಬಹುರಾಷ್ಟ್ರೀಯ ಕಂಪೆನಿಗಳ, ಬಂಡವಾಳಶಾಹಿಗಳ  ಪರವಾದ ನೀತಿಯಲ್ಲಿ ಒಲವು ತೋರಿದ ಯುಪಿಎ ಸರ್ಕಾರದ ಅವಧಿಯಲ್ಲೇ ದೇಶದಲ್ಲಿ 10 ಕಡೆ ಇಂಥ ಫುಡ್‌ಪಾರ್ಕ್‌ಗಳಿಗೆ ಅವಕಾಶ ನೀಡಲಾಗಿದೆ. ಇನ್ನೂ 20 ಪಾರ್ಕ್‌ಗಳನ್ನು ಸ್ಥಾಪಿಸುವ ಉದ್ದೇಶ ಕೇಂದ್ರ ಸರ್ಕಾರದ ಮುಂದಿದೆ.

ಫುಡ್‌ಪಾರ್ಕ್‌ ನರೇಂದ್ರ ಮೋದಿ ಅವರ ಕಲ್ಪನೆ. ಇದರಿಂದ ರೈತರ ಬದುಕು ಬಂಗಾರವಾಗಲಿದೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಇದು ಮೋದಿ ಅವರ ಕೊಡುಗೆ ಅಲ್ಲ ಎಂಬುದು ಬೇರೆ ಮಾತು. ಹೆಚ್ಚು ಹೆಚ್ಚು ಫುಡ್‌ಪಾರ್ಕ್‌ಗಳನ್ನು ಸ್ಥಾಪಿಸುವುದರ ಮೂಲಕ 2015ರ ಕೊನೆ ವೇಳೆಗೆ ದೇಶದಲ್ಲಿ ಹಣ್ಣು, ತರಕಾರಿ ಸಂಸ್ಕರಣೆ ಮಾಡುವ ಪ್ರಮಾಣವನ್ನು ಈಗಿರುವ ಶೇ 6ರಿಂದ 20ಕ್ಕೂ, ಮೌಲ್ಯವರ್ಧನೆ ಪ್ರಮಾಣವನ್ನು ಶೇ 20ರಿಂದ 35ಕ್ಕೂ ಹಾಗೂ ದೇಶದ ಜಾಗತಿಕ ಆಹಾರ ವಹಿವಾಟನ್ನು ಶೇ 1.5ರಿಂದ ಶೇ 3ಕ್ಕೂ ಹೆಚ್ಚಿಸುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ.

ಕೃಷಿಗೆ ಮೂಲ ಸೌಕರ್ಯ ಸೃಷ್ಟಿಸುವುದು ಯೋಜನೆಯ ಉದ್ದೇಶ ಎಂದು ಆಹಾರ ಮತ್ತು ಸಂಸ್ಕರಣಾ ಸಚಿವಾಲಯ ಹೇಳಿದೆ. ಸೂಪರ್‌ ಮಾರ್ಕೆಟ್‌ಗಳನ್ನು ಗುರಿಯಾಗಿರಿಸಿಕೊಂಡು ಫುಡ್‌ಪಾರ್ಕ್‌ಗಳನ್ನು ಆರಂಭಿಸುತ್ತಿರುವುದಕ್ಕೂ, ಕೃಷಿಗೆ ಮೂಲ ಸೌಕರ್ಯ ಹೆಚ್ಚಲಿದೆ ಎಂಬುದು ಒಂದಕ್ಕೊಂದು ಸಂಬಂಧವಿಲ್ಲದ ಮಾತುಗಳು. ಆದರೆ ಇದರರ್ಥ ದೊಡ್ಡ ದೊಡ್ಡ ಕಂಪೆನಿಗಳಿಗೆ ನಿಧಾನವಾಗಿ ಕೃಷಿಯನ್ನು ಹಸ್ತಾಂತರಿಸುವುದೇ ಆಗಿದೆ.

ಫುಡ್‌ಪಾರ್ಕ್‌ನಿಂದ ರೈತರ ಉತ್ಪನ್ನಗಳಿಗೆ ಬೆಲೆ ಹೆಚ್ಚಲಿದೆ ಎಂಬುದು ಕೇವಲ ಬಣ್ಣದ ಮಾತು. ಈ ಕಂಪೆನಿಗಳು ರೈತರಿಂದ ನೇರ ಖರೀದಿ ಮಾಡಿದರೂ ಬೆಲೆ ಮಾತ್ರ ಮುಕ್ತ ಮಾರುಕಟ್ಟೆಯಲ್ಲಿನ ಧಾರಣೆಯೇ ಆಗಿರುತ್ತದೆ. ಮೊದಲಿಗೆ ನಿಗದಿತ ಪ್ರದೇಶಗಳಲ್ಲಿ ಮಳಿಗೆ ತೆರೆದು ಅಲ್ಲಿಂದ ಇವು ಖರೀದಿ ಆರಂಭಿಸುತ್ತವೆ.

ಬೆಲೆ ನಿರ್ಧರಿಸುವಲ್ಲಿ ಮುಕ್ತ ಮಾರುಕಟ್ಟೆಯೇ ಪ್ರಮುಖ ಮಾನದಂಡವಾಗುವುದರಿಂದ ಇದರಿಂದ ರೈತರಿಗೆ ಏನೂ ಪ್ರಯೋಜನವಿಲ್ಲ. ಅತ್ಯಂತ ಕಡಿಮೆ ಬೆಲೆ ಇದ್ದರೂ ಪರ್ಯಾಯ ದಾರಿ ಇಲ್ಲದೇ ರೈತರು ತರಕಾರಿ, ಹಣ್ಣು ಮಾರಾಟ ಮಾಡಬೇಕಾಗುತ್ತದೆ. ಹೀಗಾಗಿ ರೈತರಿಗೆ ಅತಿ ಹೆಚ್ಚು ಬೆಲೆ ಸಿಗಲಿದೆ ಎಂಬುದು ನಂಬಲಾಗದಂತಹ ಸಂಗತಿಯಾಗಿದೆ. ಈ ಖರೀದಿಯೂ ಕಂಪೆನಿಯ ಬೇಡಿಕೆಗೆ ಅನುಗುಣವಾಗಿ ನಡೆಯಲಿದೆಯೇ ಹೊರತು ರೈತರು ಬೆಳೆಯುವ ಬೆಳೆಯ ಪ್ರಮಾಣಕ್ಕೆ ಅನುಗುಣವಾಗಿ ಅಲ್ಲ ಎಂಬುದು ಇಲ್ಲಿ ಗಮನಿಸಬೇಕಾಗಿದೆ.

ಫುಡ್‌ಪಾರ್ಕ್‌ನಲ್ಲಿ ನೆಲೆಗೊಳ್ಳುವ  ಕಂಪೆನಿಗಳು ನೂರಾರು ಟನ್‌ ತರಕಾರಿ, ಹಣ್ಣು ಸಂಗ್ರಹಿಸುವ ಶೀಥಲೀಕರಣ ಘಟಕ, ಫ್ರೀಜರ್‌ಗಳನ್ನು ಹೊಂದಿರುತ್ತವೆ. ಆದರೆ ಇದು ರೈತರ ಅನುಕೂಲಕ್ಕೆ ಅಲ್ಲ, ಬದಲಿಗೆ ಕಡಿಮೆ ಬೆಲೆ ಇದ್ದಾಗ ಹಣ್ಣು, ತರಕಾರಿ ಖರೀದಿಸಿ ಅದನ್ನು ಸಂಗ್ರಹಿಸಿಟ್ಟುಕೊಳ್ಳಲು ಕಂಪೆನಿ ಬಳಸಿಕೊಳ್ಳುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿದಾಗ ಕಂಪೆನಿ ಖರೀದಿಸುವ ಪ್ರಮಾಣವೂ ಕಡಿಮೆಯಾಗಬಹುದು. ಇನ್ನೊಂದೆಡೆ ಈ ಕಂಪೆನಿ ನಡೆಸುವ ನೂರಾರು ಮಾಲ್‌ಗಳಲ್ಲಿ ಮೊದಲೇ ಕೊಂಡಿಟ್ಟುಕೊಂಡ ತರಕಾರಿ ಮತ್ತು ಹಣ್ಣುಗಳನ್ನು ಮುಕ್ತ ಮಾರುಕಟ್ಟೆಗಿಂತ ತುಸು ಕಡಿಮೆ ಬೆಲೆಗೆ ಮಾರಿ ಗ್ರಾಹಕರನ್ನು ಹೆಚ್ಚಿಸಿಕೊಳ್ಳುವ ಚತುರ ತಂತ್ರವೂ ಅಡಗಿದೆ.
ಎರಡನೇ ಹಂತದ ಕಾರ್ಯಾಚರಣೆ ಭಾಗವಾಗಿ ಇವು ಗುತ್ತಿಗೆ ಕೃಷಿಗೆ ಇಳಿಯಲಿವೆ. ಕಾರ್ಪೊರೇಟ್‌ ಕೃಷಿ ಪದ್ಧತಿ ಬೆಂಬಲಿಸಲಿವೆ.

ಗುತ್ತಿಗೆ ಕೃಷಿ ಮತ್ತು ನೇರ ಖರೀದಿ

ಎಪಿಎಂಸಿ, ಸಾಮಾನ್ಯ ಮಾರುಕಟ್ಟೆಗಳಂತೆ ರೈತರು ತರುವ ಎಲ್ಲ ತರಕಾರಿ, ಹಣ್ಣುಗಳನ್ನೂ ಕೊಳ್ಳುವುದಿಲ್ಲ. ನಮ್ಮದೇ ಖರೀದಿ ಕೇಂದ್ರಗಳು ಇರಲಿವೆ. ಕಂಪೆನಿಗೆ ಬೇಕಾದ ಗುಣಮಟ್ಟದ, ವೈಜ್ಞಾನಿಕ ಕೃಷಿ ಅನುಸರಿಸಿ, ನಮ್ಮ ಬೇಡಿಕೆಗೆ ಅನುಗುಣವಾಗಿ ಬೆಳೆದ ತರಕಾರಿ, ಹಣ್ಣುಗಳನ್ನು ಮಾತ್ರ ಖರೀದಿ ಮಾಡಲಾಗುತ್ತದೆ. ಇದಕ್ಕೂ ಮುನ್ನ ರೈತರ ಹೊಲ, ತೋಟಗಳಿಗೆ ತೆರಳಿ ಪಟ್ಟಿ ಮಾಡಿಕೊಳ್ಳುತ್ತೇವೆ. ಈ ರೈತರಿಂದ ಮಾತ್ರ ಖರೀದಿ ನಡೆಯಲಿದೆ. ಎಪಿಎಂಸಿ ಹಾಗೂ ಇನ್ನಿತರ ಮಾರುಕಟ್ಟೆಗಳ ಬೆಲೆ ಹಾಗೂ ಉತ್ಪನ್ನದ ಗುಣಮಟ್ಟದ ಆಧಾರದ ಮೇಲೆ ಬೆಲೆ ನಿರ್ಧಾರವಾಗಲಿದೆ.

ಗುತ್ತಿಗೆ ಕೃಷಿ
ಮೊದಲ ಹಂತದಲ್ಲಿ ಗುತ್ತಿಗೆ ಕೃಷಿ ಮಾಡುವುದಿಲ್ಲ. ಎರಡನೇ ಹಂತದಲ್ಲಿ ಗುತ್ತಿಗೆ ಕೃಷಿಯ ಮೂಲಕವೇ ಕಂಪೆನಿಗೆ ಬೇಕಾದ ಉತ್ಪನ್ನಗಳನ್ನು ಬೆಳೆಸಲಾಗುತ್ತದೆ. ಇದಕ್ಕಾಗಿ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ.

ಸ್ಥಳೀಯರಿಗೆ ಉದ್ಯೋಗ
ಕೌಶಲ ರಹಿತ, ಅರೆ ಕೌಶಲ ಹೊಂದಿದ ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಲಾಗುವುದು. ತಾಂತ್ರಿಕ ಶಿಕ್ಷಣ, ಉನ್ನತ ಶಿಕ್ಷಣ ಪಡೆದವರ ಹೆಚ್ಚಿನ ಅಗತ್ಯತೆ ಇಲ್ಲ. ಹಣ್ಣು ತರಕಾರಿ ಇಳಿಸುವುದು, ಹೊತ್ತು ಹಾಕುವುದು, ಬೇರ್ಪಡಿಸುವುದು, ಪ್ಯಾಕ್‌  ಮಾಡುವುದು ಸೇರಿದಂತೆ ಇನ್ನಿತರ ಕೆಲಸದ ಉದ್ಯೋಗ ಮಾತ್ರ ಸಿಗಲಿದೆ. ಹೊರ ಗುತ್ತಿಗೆ ಹಾಗೂ ಗುತ್ತಿಗೆ ಆಧಾರದಲ್ಲಿ ಇಂಥವರನ್ನು ನೇಮಕ ಮಾಡಿಕೊಳ್ಳಲಾಗುವುದು. ತಾಂತ್ರಿಕ ಹಾಗೂ ತೀರಾ ಅಗತ್ಯವಾಗಿ ಬೇಕಾದ ಮಾನವ ಸಂಪನ್ಮೂಲವನ್ನು ಕಂಪೆನಿ ನೇರ ಆಯ್ಕೆ ಮಾಡಿಕೊಳ್ಳಲಿದೆ.
–ಜಿ.ವೆಂಕಟಸುಬ್ರಮಣ್ಯಂ
ಪ್ರಧಾನ ವ್ಯವಸ್ಥಾಪಕ (ಕಾರ್ಯಾಚರಣೆ ಹಾಗೂ ವ್ಯವಹಾರ ಅಭಿವೃದ್ಧಿ) ಫುಡ್‌ ಪಾರ್ಕ್‌

ಈಗ ದೇಶದ ಎಲ್ಲಾ ಕಡೆ ಅಭದ್ರತೆ, ಸಾಮಾಜಿಕ ಮನ್ನಣೆ ಸಿಗದ ಕಾರಣ ಕೃಷಿ ಕಾರ್ಮಿಕರ ಕೊರತೆ ಹೆಚ್ಚಾಗ ತೊಡಗಿದೆ. ಇನ್ನೊಂದೆಡೆ ರಾಸಾಯನಿಕ ಗೊಬ್ಬರಗಳಿಗೆ ಹಂತಹಂತವಾಗಿ ಸಬ್ಸಿಡಿ ಕಡಿಮೆಯಾದಂತೆ ಕೃಷಿ ವೆಚ್ಚದಾಯಕವಾಗಿ ಕೃಷಿ ವಿಮುಖರ ಸಂಖ್ಯೆಯೂ ಹೆಚ್ಚತೊಡಗಲಿದೆ. ಆಗ ನಿಜ ಅರ್ಥದಲ್ಲಿ ಫುಡ್‌ಪಾರ್ಕ್‌ಗಳು ಕೃಷಿಯ ಕಾರ್ಯಾಚರಣೆಗೆ ದೊಡ್ಡಮಟ್ಟದಲ್ಲೇ ಇಳಿಯಲಿವೆ.

ತಮಗೆ ಬೇಕಾದ ಬೆಳೆಯನ್ನು ಕಂಪೆನಿಗಳು ನೇರವಾಗಿ ಕೃಷಿಕರ ಬಳಿ ಬೀಜ, ಗೊಬ್ಬರ ನೀಡಿ ಬೆಳೆಸಿಕೊಳ್ಳುತ್ತವೆ. ಇಂತಹ ಮಾದರಿಗಳು ಸಣ್ಣ ಮಟ್ಟದಲ್ಲಿ ರಾಜ್ಯದ ಬೇರೆ ಬೇರೆ ಭಾಗದಲ್ಲಿ ಈಗಾಗಲೇ ಕಂಡುಬರುತ್ತಿವೆ. ಮೆಣಸಿನಪುಡಿ ಮಾರಾಟ ಮಾಡುತ್ತಿರುವ ಕಂಪೆನಿಗಳು, ಮಿಡಿಸೌತೆಯ ಅಗತ್ಯ ಇರುವ ಔಷಧ ಕಂಪೆನಿಗಳು ಇಂತಹ ಪ್ರಯೋಗಗಳನ್ನು ಈಗಾಗಲೇ ಮಾಡಿವೆ.

ಪೆಪ್ಸಿ ಕಂಪೆನಿ ಆಲೂಗಡ್ಡೆ ಚಿಪ್ಸ್ ತಯಾರಿಕಾ ಕಾರ್ಖಾನೆ ಆರಂಭಿಸಿದಾಗ ಸಾವಿರಾರು ಉದ್ಯೋಗಗಳ ಸೃಷ್ಟಿಯಾಗಲಿದೆ ಎಂಬ ಕನಸು ಬಿತ್ತಲಾಗಿತ್ತು. ಆದರೆ ಅದು ಸುಳ್ಳೆಂಬುದು ಕೆಲವೇ ವರ್ಷಗಳಲ್ಲಿ ಸಾಬೀತಾಗಿ ಹೋಯಿತು. ಅಲ್ಲೀಗ  ಕಾರ್ಪೊರೇಟ್‌ ಕೃಷಿಯನ್ನು ಹುಲುಸಾಗಿ ಬೆಳೆಯಲಾಗುತ್ತಿದೆ. ಚಿಪ್ಸ್‌ಗೆ ಬೇಕಾದ ಆಲೂಗಡ್ಡೆಯನ್ನು ಕಂಪೆನಿಯೇ ಬೆಳೆಸಿಕೊಳ್ಳುತ್ತಿದೆ.

ಇಷ್ಟಾಗಿಯೂ ಬೆಲೆ ಮಾತ್ರ ರೈತರ ಕೈಯಲ್ಲಿ ಇರುವುದಿಲ್ಲ. ಹೆಚ್ಚು ಹೆಚ್ಚು ಗುತ್ತಿಗೆ ಕೃಷಿ ಪ್ರಾಧ್ಯಾನತೆ ಪಡೆದಂತೆ ಸ್ಥಳೀಯ ಸಂತೆ, ಸಣ್ಣ ಮಾರುಕಟ್ಟೆಗಳಿಗೆ ತರಕಾರಿ, ಹಣ್ಣಿನ ಪೂರೈಕೆಯೇ ನಿಂತು ಅವುಗಳು ಬಾಗಿಲು ಮುಚ್ಚಬಹುದು. ಇನ್ನು ಮನೆ ಬಾಗಿಲಲ್ಲೇ ತರಕಾರಿ ಕೊಳ್ಳುತ್ತಿರುವ ಹಳ್ಳಿ ಮಹಿಳೆಯರು  ತರಕಾರಿಗಾಗಿ ನಗರಗಳಿಗೆ ಹೋಗಬಹುದಾದ ಸನ್ನಿವೇಶವೂ ಸೃಷ್ಟಿಯಾಗಬಹುದು. ಇದರಿಂದಾಗಿ ತರಕಾರಿ ಮಾರಾಟ ಮಾಡಿ ಬದುಕುವ ಸಾವಿರಾರು ಜನರು ನಿರುದ್ಯೋಗಿಗಳಾಗಬಹುದು.

ಇನ್ನೊಂದೆಡೆ ಕೃಷಿಭೂಮಿಯನ್ನು ಕಂಪೆನಿಗೆ ಕೊಡುವ ಕೃಷಿಕರು ಅದೇ ಕಂಪೆನಿಯಲ್ಲಿ ಕೃಷಿ ಕೂಲಿಕಾರರಾಗಿ ದುಡಿಯವ ಸನ್ನಿವೇಶವೂ ಸೃಷ್ಟಿಯಾಗಲಿದೆ. ಮುಂದೊಂದು ದಿನ ಕೈಗಾರಿಕೆಗಳಿಗೆ ಭೂಸ್ವಾಧೀನ ಮಾಡಿಕೊಡುವಂತೆ ಕಾರ್ಪೊರೇಟ್‌ ಕೃಷಿಗೆ ಬೇಕಾದ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡರೆ ಅಚ್ಚರಿಯೇನಿಲ್ಲ.

ಒಂದೆಡೆ ಕೃಷಿ ಯಾಂತ್ರೀಕರಣ ತೀವ್ರಗೊಳಿಸುವುದು, ಇನ್ನೊಂದೆಡೆ ಕೃಷಿಕರಿಗೆ ನೇರವಾಗಿ ನೀಡುವ ರಸಗೊಬ್ಬರ, ಬೀಜಗಳ ಮೇಲಿನ ಸಬ್ಸಿಡಿ ಕಡಿತಗೊಳಿಸುವ ಮೂಲಕ ಅವುಗಳನ್ನು ದುಬಾರಿಯಾಗಿ ಮಾಡುವ ನೀತಿಗಳನ್ನು ಸರ್ಕಾರಗಳೇ ಜಾರಿಗೆ ತರುತ್ತಿರುವುದು ಇದೇ ಉದ್ದೇಶಕ್ಕಾಗಿಯೇ. ಕೂಲಿ ಆಳುಗಳ ಕೊರತೆಯಿಂದ ಸಮಸ್ಯೆ ಎದುರಿಸುತ್ತಿರುವ ಸಣ್ಣ ಕೃಷಿಕರು ಮತ್ತೂ ಅಪಾಯಕ್ಕೆ ಸಿಲುಕಲಿದ್ದಾರೆ. ಸಣ್ಣ, ಸಣ್ಣ ಹಿಡುವಳಿಗೆ ಯಂತ್ರಗಳಿಂದ ಕೃಷಿ ಸಾಧ್ಯವಾಗುವುದಿಲ್ಲ. ಇನ್ನೊಂದೆಡೆ ಕೂಲಿಕಾರರು ಇಲ್ಲದೇ ಇಂಥ ಕೃಷಿಕರು ಅನಿವಾರ್ಯವಾಗಿ ತಮ್ಮ ಭೂಮಿಯನ್ನು ಕೃಷಿ ಕಂಪೆನಿಗಳಿಗೆ ನೀಡಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ.

ಪರಿಹಾರ ಅಲ್ಲ

ಆಹಾರ ಸಂಸ್ಕರಣೆಗೆ ಖಾಸಗಿ ಫುಡ್‌ ಪಾರ್ಕ್‌ಗಳಷ್ಟೇ ಪರಿಹಾರ ಮಾರ್ಗ ಅಲ್ಲ. ಸರ್ಕಾರ, ಸಹಕಾರ ಸಂಸ್ಥೆಗಳ ಮೂಲಕ ಆಹಾರ ಸಂಸ್ಕರಣೆಗೆ ಗಮನಕೊಟ್ಟರೆ ಮಾತ್ರ ರೈತರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ ಶೇ 84ರಷ್ಟು ರೈತರು ಸಣ್ಣ, ಮಧ್ಯಮ ವರ್ಗದ ರೈತರೇ ಆಗಿದ್ದಾರೆ. ಇವರನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಬಳಸಬೇಕು. ಆದರೆ ಫುಡ್‌ ಪಾರ್ಕ್‌ಗಳ ಮೂಲಕ  ಬಂಡವಾಳಗಾರ ಭೂ ಮಾಲೀಕರ ಅಭಿವೃದ್ಧಿ ಕೆಲಸ ಆಗುತ್ತಿದೆ. ಮಾರುಕಟ್ಟೆ, ಉತ್ಪಾದನೆ, ಸಾಗಾಟ ಕಂಪೆನಿಗಳ ಕೈ ಸೇರಲಿದೆ. ಈ ಕಂಪೆನಿಗಳು ಸಣ್ಣ ರೈತರ ಬದಲಿಗೆ  ದೊಡ್ಡ ದೊಡ್ಡ ರೈತರೊಂದಿಗೆ ಕೃಷಿ ಒಪ್ಪಂದ ಮಾಡಿಕೊಳ್ಳಲಿವೆ. ಇನ್ನು ಹೆಚ್ಚು ಸ್ಥಳೀಯರಿಗೆ ಉದ್ಯೋಗ ಸಿಗಲಿದೆ ಎಂಬುದು ವಾಸ್ತವವಲ್ಲ. ಬೀಜ ಉತ್ಪಾದನೆ, ಕೋಳಿ, ಹೂವು ಬೆಳೆ ಕ್ಷೇತ್ರದಲ್ಲಿ ಈಗಾಗಲೇ ಗುತ್ತಿಗೆ ಕೃಷಿ ಜಾರಿಯಲ್ಲಿದೆ. ಈಗ  ಆಹಾರ ಕ್ಷೇತ್ರಕ್ಕೂ ಹಿಂಬಾಗಿಲ ಮೂಲಕ ಪ್ರವೇಶ ಮಾಡುತ್ತಿದೆ. ಇದರಿಂದ ರಫ್ತು, ವಹಿವಾಟಿನ ಅಂಕಿ ಅಂಶಗಳು ಹೆಚ್ಚ ಬಹುದೇ ಹೊರತು ಕೃಷಿಕರಿಗೆ, ಕೃಷಿ ಕಾರ್ಮಿಕರ ಜೀವನ ಮಟ್ಟ ಸುಧಾರಿಸುವುದಿಲ್ಲ. ಮತ್ತಷ್ಟು ರೈತರು ಕೃಷಿಯಿಂದ ವಿಮುಖರಾಗುವ ಅಪಾಯವಿದೆ.
–ಬಯ್ಯಾರೆಡ್ಡಿ, ಅಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ


ಕೃಷಿಯನ್ನು ಅಮೆರಿಕೀಕರಣ ಮಾಡುವುದು ಫುಡ್‌ಪಾರ್ಕ್‌ಗಳ ಉದ್ದೇಶ. ಬಂಡವಾಳಶಾಹಿಗಳು ಮತ್ತು ಕಾರ್ಮಿಕರು ಇವರಿಬ್ಬರು ಮಾತ್ರ ಜಗತ್ತಿ ನಲ್ಲಿರಬೇಕು. ಸ್ವಂತ ಉದ್ದಮದ ಮೂಲಕ ಸ್ವಂತಿಕೆ ಕಾಪಾಡಿಕೊಳ್ಳುವ ಕೃಷಿಕರು, ಮೀನುಗಾರರು, ಬುಡಕಟ್ಟು ಜನರು, ಕರಕುಶಲಗಾರರನ್ನು ನಿಧಾನ ವಾಗಿ ಇಲ್ಲವಾಗಿಸುವ ಮೊದಲ ಹುನ್ನಾರವೇ ಇಂತಹ ಫುಡ್‌ಪಾರ್ಕ್‌ಗಳು, ಮಾಲ್‌ಗಳು ಜನ್ಮತಾಳಲು ಕಾರಣ.

ಕೃಷಿಕರ ಬದುಕು ಬದಲಿಸುವ, ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡಬೇಕೆಂಬ ಮಹಾದಾಸೆ ಸರ್ಕಾರಕ್ಕೆ ಇದ್ದರೆ ಪ್ರತಿ ತಾಲ್ಲೂಕು ಮಟ್ಟದಲ್ಲಿ ಶೀಥಲೀಕರಣ ಘಟಕ, ಫ್ರೀಜರ್‌ಗಳನ್ನು ನಿರ್ಮಾಣ ಮಾಡಬಹುದು. ಬೆಲೆ ಕುಸಿದಾಗ ಉತ್ಪನ್ನಗಳನ್ನು ರೈತರು ಸಂರಕ್ಷಿಸಿಕೊಳ್ಳಬಹುದು. ಕೃಷಿ ಸಂಸ್ಕರಣೆ, ಮೌಲ್ಯ ವರ್ಧನೆಗೆ ಸಣ್ಣ ಸಣ್ಣ ತಂತ್ರಜ್ಞಾನಗಳೇ ಸಾಕಾಗುವ ಕಾರಣ ಅದನ್ನು ಉನ್ನತ ಶಿಕ್ಷಣ ಪಡೆದ ಹಳ್ಳಿ ಮಕ್ಕಳಿಗೆ ನೀಡುವ ಮೂಲಕ ಅವರಿಗೇನೆ ನೇರವಾಗಿ ಉತ್ಪನ್ನಗಳನ್ನು ರಫ್ತು ಮಾಡುವ ಶಕ್ತಿ, ನೀತಿ ಜಾರಿಗೆ ತರಬಹು ದಲ್ಲವೇ? ಆದರೆ ಇದನ್ನು ಸರ್ಕಾರ ಮಾಡುವುದಿಲ್ಲ ಹಾಗೂ ಮಾಡುವುದಿಲ್ಲ ಏಕೆ ಎಂಬುದೇ ಮುಖ್ಯವಾದ ಪ್ರಶ್ನೆ ಆಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.