ADVERTISEMENT

ಫ್ಲಿಪ್‌ಕಾರ್ಟ್‌ ತೊರೆದ ಮುಕೇಶ್‌, ಅಂಕಿತ್‌

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST
ಫ್ಲಿಪ್‌ಕಾರ್ಟ್‌ ತೊರೆದ  ಮುಕೇಶ್‌, ಅಂಕಿತ್‌
ಫ್ಲಿಪ್‌ಕಾರ್ಟ್‌ ತೊರೆದ ಮುಕೇಶ್‌, ಅಂಕಿತ್‌   

ನವದೆಹಲಿ (ಪಿಟಿಐ): ದೇಶದ ಇ–ವಾಣಿಜ್ಯ ವಹಿವಾಟಿನ ಮುಂಚೂಣಿ ಸಂಸ್ಥೆಯಾಗಿರುವ ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್‌ನ ಉನ್ನತ ಹುದ್ದೆ ತೊರೆಯಲು  ಇಬ್ಬರು ಮುಂದಾಗಿದ್ದಾರೆ.

ವಾಣಿಜ್ಯ ಮತ್ತು ಜಾಹೀರಾತು ವಿಭಾಗದ ಮುಖ್ಯಸ್ಥ ಮುಕೇಶ್ ಬನ್ಸಲ್‌ ಮತ್ತು ಮುಖ್ಯ ವಹಿವಾಟು ಅಧಿಕಾರಿ ಅಂಕಿತ್‌ ನಾಗೋರಿ ಅವರು ಸಂಸ್ಥೆ ತೊರೆಯಲಿದ್ದಾರೆ. ಹುದ್ದೆ ತೊರೆದ ನಂತರವೂ ಮುಕೇಶ್‌ ಸಂಸ್ಥೆಯ ಸಲಹೆಗಾರರಾಗಿ ಮುಂದುವರೆಯಲಿದ್ದಾರೆ.

ಅಂಕಿತ್‌ ನಾಗೋರಿ ಅವರು ಕ್ರೀಡಾ ಕ್ಷೇತ್ರದಲ್ಲಿ ಹೊಸ ಉದ್ಯಮ ಆರಂಭಿಸಲಿದ್ದಾರೆ. ಫ್ಲಿಪ್‌ಕಾರ್ಟ್‌ನ ಸಹ ಸ್ಥಾಪಕರಾದ ಸಚಿನ್‌ ಮತ್ತು ಬಿನ್ನಿ ಬನ್ಸಲ್‌ ಅವರು ಈ ಹೊಸ ಸಂಸ್ಥೆಯಲ್ಲಿ ಬಂಡವಾಳ ತೊಡಗಿಸಲಿದ್ದಾರೆ.

ಮುಕೇಶ್‌ ಬನ್ಸಲ್‌ ಅವರು ತಾವು 2007ರಲ್ಲಿ ಸ್ಥಾಪಿಸಿದ್ದ ಫ್ಯಾಷನ್‌ ರಿಟೇಲ್‌   ಸಂಸ್ಥೆ  ಮಿಂತ್ರಾವನ್ನು ಫ್ಲಿಪ್‌ಕಾರ್ಟ್‌ಗೆ 2014ರಲ್ಲಿ ಮಾರಾಟ ಮಾಡಿದ್ದರು.  ಈ ವಹಿವಾಟಿನ ಮೊತ್ತವನ್ನು ಬಹಿರಂಗಪಡಿಸಲಾಗಿರಲಿಲ್ಲ. ಇದು ₹ 2,000 ಕೋಟಿಗಳಷ್ಟಿತ್ತು ಎಂದು ಅಂದಾಜಿಸಲಾಗಿತ್ತು.

ದೇಶದ ಆನ್‌ಲೈನ್‌ ರಿಟೇಲ್‌ ಉದ್ದಿಮೆಯಲ್ಲಿ ದೈತ್ಯಸಂಸ್ಥೆಗಳಾದ ಅಮೆಜಾನ್‌ ಮತ್ತು ಸ್ನ್ಯಾಪ್‌ಡೀಲ್‌ ಜತೆಗೆ ಫ್ಲಿಪ್‌ಕಾರ್ಟ್‌ ತೀವ್ರ ಪೈಪೋಟಿ ನಡೆಸುತ್ತಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.