ADVERTISEMENT

ಬದುಕಿನ ಬಂಡಿಗೆ ಅಡ್ಡಗಾಲು...

ಮಲ್ಲೇಶ್ ನಾಯಕನಹಟ್ಟಿ
Published 3 ಜನವರಿ 2017, 19:30 IST
Last Updated 3 ಜನವರಿ 2017, 19:30 IST
ಸ್ಥಳೀಯವಾಗಿ ಕೂಲಿ ಅರಸಿ ಹೊರಟಿರುವ ಮಹಿಳೆಯರು
ಸ್ಥಳೀಯವಾಗಿ ಕೂಲಿ ಅರಸಿ ಹೊರಟಿರುವ ಮಹಿಳೆಯರು   

‘ಎಲ್ಲಿಗ್‌ ಹೋಗೋದ್‌ ಬಿಡ್ರಿಪಾ... ಇದೇ ತಿಂಗ್ಳಾಗ ಮನಿಮಂದಿಯೆಲ್ಲಾ ಗೋವಾಕ್ಕೆ ಹೋಗಿ ವರ್ಸಾಪೂರ ಉಣ್ಣೋ ಅಷ್ಟು ದುಡುದು ತಂದಿದ್ವಿ... ಈ ವರ್ಸಾ ಎಷ್ಟ್‌ ದುಡಿದ್ರೂ ಮಾಲಕ್ರು ರೊಕ್ಕಾ ಇಲ್ಲ ಅಂತಾರ್ರಿ... ಅದಕ್ಕಾ ತಾಂಡಾಕ್ಕೆ ವಾಪಸ್ ಹೊಂಟಿವ್ರಿ...’

ಹೈದರಾಬಾದ್‌ನಲ್ಲಿ ಬಿಲ್ಡರ್‌ಗಳು ವಾರದ ವೇತನ ನೀಡದ್ದಕ್ಕೆ ಮುನಿಸಿಕೊಂಡು ರಾತ್ರೋರಾತ್ರಿ ಗಂಟುಮೂಟೆ ಕಟ್ಟಿಕೊಂಡು ಯಾದಗಿರಿ ಬಸ್‌ ನಿಲ್ದಾಣಕ್ಕೆ ಬಂದಿಳಿದಿದ್ದ ಗುಂಪಿನ ಯಜಮಾನಿ ಲಚ್ಚಿಬಾಯಿಯ ನೋವಿನ ಮಾತುಗಳಿವು.

ಜಿಲ್ಲೆಯಲ್ಲಿ ಯಾದಗಿರಿ ಹಾಗೂ ಸುರಪುರ ತಾಲ್ಲೂಕಿನ ಬಹುತೇಕ ಜನರು ಗುಳೆಯನ್ನೇ ನೆಚ್ಚಿಕೊಂಡಿದ್ದಾರೆ. ಯಾದಗಿರಿ ಸಮೀಪದ ವಡಗೇರಾ ಗ್ರಾಮದಲ್ಲಿನ ಶೇ 80ರಷ್ಟು ಕುಟುಂಬಗಳು ಗುಳೆ ಹೋಗುವುದರಿಂದಲೇ ಬದುಕಿನ ಬಂಡಿ ಸಾಗಿಸುತ್ತಾ ಬಂದಿದ್ದಾರೆ. ಗುರುಮಠಕಲ್‌ ಹೋಬಳಿಯಲ್ಲಿರುವ ಶೇ 60ರಷ್ಟು ಗ್ರಾಮಗಳ ಜನರು ಗುಳೆಯನ್ನೇ ನಂಬಿಕೊಂಡಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಕೃಷಿ ಮತ್ತು ಕೃಷಿಯೇತರ ಎರಡೂ ರೀತಿಯ ವಲಸೆ ಕಾರ್ಮಿಕರು ಇಲ್ಲಿದ್ದಾರೆ. ಮುಖ್ಯವಾಗಿ ಬೇಸಿಗೆ ಆರಂಭವಾಗುತ್ತಿದ್ದಂತೆ ನಾರಾಯಣಪುರ ಕೊನೆ ಅಚ್ಚುಕಟ್ಟು ಪ್ರದೇಶದ ಬಹುತೇಕ ಗ್ರಾಮಗಳು ಬಿಕೋ ಅನ್ನುತ್ತವೆ. ಕೋಳಿಹಾಳ, ಇಸಾಂಪುರ, ಗೆದ್ದಲಮನಿ ತಾಂಡಾ, ಮಾದ್ಲಮನಿ ತಾಂಡಾ, ಸೂಗೂರು, ಹೆಮ್ಮಡಗಿ, ಬೇನಾಳ, ಚಲ್ಲಾಪುರ ಗ್ರಾಮಗಳಲ್ಲಿನ ರೈತ ಕಾರ್ಮಿಕ ಜನರ ಬದುಕಿನ ಏಕೈಕ ಆಧಾರ ‘ಗುಳೆ’!.
ಜಿಲ್ಲೆಯ ಬಡ ಜನರ ಬದುಕಿಗೆ ಅಂಟಿಕೊಂಡಿರುವ ‘ಗುಳೆ’ಗೆ ಈಗ ನೋಟು ರದ್ದತಿ ಎಂಬ ಪೆಟ್ಟು ಬಿದ್ದಿದೆ. ಇದರಿಂದ ಅದನ್ನೇ ನಂಬಿಕೊಂಡು ಊರುಬಿಟ್ಟಿದ್ದ ಜನರು ಈಗ ಮರಳಿ ಗೂಡು ಸೇರುತ್ತಿದ್ದಾರೆ.

ನಿತ್ಯದ ಸಾಂಸಾರಿಕ ಬದುಕು ನಿರ್ವಹಿಸಲು ಕೂಲಿ ಸಿಕ್ಕಷ್ಟು ಸಿಗಲಿ ಎಂಬ ಧೋರಣೆ ತಾಳಿದ್ದಾರೆ. ಹೀಗಾಗಿ, ಹಬ್ಬ ಹರಿದಿನಗಳಲ್ಲಿ ಮಾತ್ರ ಜನರಿಂದ ತುಂಬಿರುತ್ತಿದ್ದ ಗ್ರಾಮಗಳಲ್ಲಿ ಈಗ ಜನರ ಓಡಾಟ, ಕೂಗಾಟ ಸುದ್ದು ಕೇಳಿಬರುತ್ತಿದೆ.

‘ಮಾಲಕ್ರು ಕೊಟ್ಟಷ್ಟು ರೊಕ್ಕ ತಗೊಂಡು ಒಂದು ತಿಂಗ್ಳು ಬಿಲ್ಡಿಂಗ್‌ ಕೆಲ್ಸ ಮಾಡ್ತಾ ಬಂದಿವ್ರಿ... ಆದ್ರೆ... ತಿಂಗ್ಳಾದ್ರೂ ಪಗಾರ ಕೊಡ್ಲಿಲ್ರಿ... ಬರಬರ್‍್ತಾ ಮಾಲಕ ರೊಕ್ಕಾ ಇಲ್ಲ ಅನ್ನಕ್ಕತ್ತಾ... ನಮ್ಗೂ ತ್ರಾಸ್‌ ಆತ್ರಿ... ಈಗ ತಾಂಡಾಕ್ಕೆ ಬಂದು ಶೇಂಗಾ ಹೊಲಕ್ಕೆ ಕೂಲಿ ಹೊಂಟೀವ್ರಿ...’ ಎಂದು ಆಸನಾಳದ ಶಿವಣ್ಣ ರಾಥೋಡ ಮುಂಬೈ ನಗರಕ್ಕೆ ಗುಳೆ ಹೋಗಿದ್ದಾಗ ಪಟ್ಟ ಸಂಕಷ್ಟವನ್ನು ಬಿಚ್ಚಿಟ್ಟರು.

ಭೀಮಾನದಿ ಮತ್ತು ನಾರಾಯಣಪುರ ಜಲಾಶಯಗಳ ಮಧ್ಯಭಾಗದಲ್ಲಿರುವ ಶಹಾಪುರ ತಾಲ್ಲೂಕು ಶೇ 80ರಷ್ಟು ನೀರಾವರಿ ಹೊಂದಿದೆ. ಹೀಗಾಗಿ, ಇಲ್ಲಿ ಗುಳೆ ಹೋಗುವವರ ಸಂಖ್ಯೆ ಕಡಿಮೆ. ಆದರೆ, ಯಾದಗಿರಿ ಮತ್ತು  ಸುರಪುರ  ತಾಲ್ಲೂಕಿನ ಬಹುತೇಕ ಕುಟುಂಬಗಳಲ್ಲಿ ಶೇ 50ರಷ್ಟು ಸದಸ್ಯರು ಗುಳೆ ಹೋಗುತ್ತಾರೆ. ಜಿಲ್ಲೆಯಲ್ಲಿ ಜೀವನಾಧಾರದ ಆಯ್ಕೆಗಳು ಲಭ್ಯ ಇಲ್ಲದೇ ಇರುವುದು ಈ ಭಾಗದ ಜನರು ಗುಳೆ ಹೋಗಲು ಪ್ರಮುಖ ಕಾರಣವಾಗಿದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಯಾದಗಿರಿ ಜಿಲ್ಲೆ ಅತೀ ಹೆಚ್ಚಿನ ವಲಸೆ ಪ್ರಮಾಣ ಕಂಡಿದೆ.

‘ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳು ಜನಕ್ಕೆ ಸೀದಾ ಕೂಲಿ ಕೊಟ್ರೆ ಜನನಾದ್ರೂ ಯಾಕ್ರಿ ಗುಳೆ ಹೋಗ್ತಾರ್. ಊರಾಗ್‌ ಕೂಲಿ ಮಾಡಿದ್ರೆ ಬರೀ ₹ 200 ಸಿಗುತ್ರಿ. ಆದ್ರೆ ಅದೇ ಕೂಲಿ ಗೋವಾದಾಗ ಮಾಡಿದ್ರೆ  ₹ 500 ಕೊಡ್ತಾರ್ರಿ... ಗೋವಾದಾಗ ವರ್ಷಾಪೂರ ಕೆಲ್ಸ ಕೊಡ್ತಾರ್ರಿ. ಆದ್ರ ಊರಾಗ್‌ ಕೆಲ್ಸ ಸಿಗುತ್ತೇನ್ರಿ...  ಈ ಮೋದಿ ನೋಟು ಬಂದ್‌ ಮಾಡಿ ನಮ್‌ ಬದುಕು ಹಾಳ್‌ ಮಾಡ್ಯಾನ್‌ ನೋಡ್ರಿ...’ ಎಂದು ಸೈದಾಪುರ, ಬಳಿಚಕ್ರ ಗ್ರಾಮಗಳ ರೈತ ಮಹಿಳೆ ಲಕ್ಷ್ಮವ್ವ, ರೇಣುಕಾ ಸಡರಗಿ ಹೇಳುತ್ತಾರೆ.

ಜಿಲ್ಲೆಯಲ್ಲಿ ಗುಳೆಯಿಂದ ಹಿಂದಿರುಗಿದವರು ಸ್ವಂತ ಹಾಗೂ ಬೇರೆಯವರ ಜಮೀನಿನಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಗರಿಷ್ಠ ಮುಖಬೆಲೆಯ ನೋಟು ರದ್ದು ಹಾಗೂ  ಬದಲಾಗುತ್ತಿರುವ ಬ್ಯಾಂಕ್‌ ನಿಯಮಗಳಿಂದಾಗಿ ಕಟ್ಟಡ ನಿರ್ಮಾಣಗಾರರಿಗೆ  ಕೂಲಿ ಹಂಚಲು ಹಣದ ತೊಂದರೆ ಉಂಟಾಗಿದೆ. ವಾರದ ಪಗಾರ ಕೊಡಲು ಬಿಲ್ಡರ್‍್ಸ್ ಗಳಿಗೆ ಲಕ್ಷಾಂತರ ರೂಪಾಯಿ ಅಗತ್ಯ ಇರುತ್ತದೆ. ಅಷ್ಟೂ ಹಣ ಬಿಲ್ಡರ್‍್ಸ ಗಳಿಗೆ ಸಿಗುತ್ತಿಲ್ಲ. ಕೈತುಂಬಾ ಕೂಲಿ ಸಿಗಬಹುದು ಎಂದು ನಿರೀಕ್ಷೆ ಇಟ್ಟುಕೊಂಡು ಬೆಂಗಳೂರು, ಮುಂಬೈ, ಗೋವಾ, ಹೈದರಾಬಾದ್‌ ನಗರಗಳಿಗೆ ಗುಳೆ ಹೋಗಿದ್ದ ಜನರಿಗೆ ನಿರೀಕ್ಷಿಸಿದಷ್ಟು ಕೂಲಿಹಣ ಸಿಗದೇ ಮರಳಿ ಊರು ಸೇರುತ್ತಿದ್ದಾರೆ.

ಫೆಬ್ರುವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳುಗಳು ಜಿಲ್ಲೆಯ ಬಹುತೇಕ ಜನರು ಗುಳೆ ಹೋಗುವ ಕಾಲ. ಅಷ್ಟೊತ್ತಿಗಾದ್ರೂ ರೊಕ್ಕಾ ಚಲಾವಣೆ ಸರಿಹೋಗತ್ತೇನ್ರಿ ಎಂದು ಗುಳೆ ನಂಬಿರುವ ಜನರು ಪ್ರಶ್ನಿಸುತ್ತಾರೆ.

* ರಾಜ್ಯದಲ್ಲಿ ಯಾದಗಿರಿಜಿಲ್ಲೆಯಲ್ಲಿ ವಲಸೆ ಪ್ರಮಾಣ ಹೆಚ್ಚು

* ಗುರುಮಿಠಕಲ್‌ ಹೋಬಳಿ ಜನರು ಹೈದರಾಬಾದ್‌ನತ್ತ ಹೆಚ್ಚು ಗುಳೆ
* ಜನರ ಕೈಹಿಡಿಯದ ಉದ್ಯೋಗ ಖಾತ್ರಿ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.