ADVERTISEMENT

ಬೆಳಗಾವಿಯಲ್ಲಿ ವಿದೇಶ ವ್ಯಾಪಾರ ನಿರ್ದೇಶನಾಲಯ

ಎಂ.ಮಹೇಶ
Published 25 ಸೆಪ್ಟೆಂಬರ್ 2016, 19:30 IST
Last Updated 25 ಸೆಪ್ಟೆಂಬರ್ 2016, 19:30 IST
ಸುರೇಶ ಅಂಗಡಿ, ಸಂಸತ್‌ ಸದಸ್ಯ
ಸುರೇಶ ಅಂಗಡಿ, ಸಂಸತ್‌ ಸದಸ್ಯ   

ಬೆಳಗಾವಿ: ರಾಜ್ಯದ ಎರಡನೇ ಡಿಜಿಎಫ್‌ಟಿ (ವಿದೇಶಿ ವ್ಯಾಪಾರ ನಿರ್ದೇಶನಾಲಯ) ಕಚೇರಿಯು ನಗರದಲ್ಲಿ ನವೆಂಬರ್‌ನಿಂದ ಕಾರ್ಯಾರಂಭ ಮಾಡಲಿದ್ದು, ಈ ಭಾಗದ ರಫ್ತು ಚಟುವಟಿಕೆಗಳಿಗೆ ಪ್ರೋತ್ಸಾಹ ದೊರೆಯುವ ಆಶಾಭಾವನೆ ವ್ಯಕ್ತವಾಗಿದೆ.

ಪ್ರಸ್ತುತ ಡಿಜಿಎಫ್‌ಟಿ ಕಚೇರಿಯು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಉತ್ಪನ್ನಗಳನ್ನು ಅನ್ಯ ದೇಶಗಳಿಗೆ ರಫ್ತು ಮಾಡಲು ವಿದೇಶಿ ವ್ಯಾಪಾರ ನಿರ್ದೇಶನಾಲಯದ ಅನುಮತಿ ಪಡೆಯುವುದು ಕಡ್ಡಾಯ. ಇದಕ್ಕಾಗಿ ಉದ್ಯಮಿಗಳು ಬೆಂಗಳೂರಿಗೆ ಹೋಗಬೇಕಾದ ಪರಿಸ್ಥಿತಿ ಇದೆ.

ಬೆಳಗಾವಿಯಲ್ಲಿ ಈ ಕಚೇರಿ ಆರಂಭವಾದ ನಂತರ ಜಿಲ್ಲೆ ಮಾತ್ರವಲ್ಲದೆ ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳ ಉದ್ಯಮಿಗಳಿಗೂ ಅನುಕೂಲವಾಗಲಿದೆ.
ಕಳೆದ ತಿಂಗಳು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಡಿಜಿಎಫ್‌ಟಿ ಕಚೇರಿ ಆರಂಭಿಸುವುದಾಗಿ ಘೋಷಿಸಿದ್ದರು. ಈಗ ಈ ಕಚೇರಿ ಪ್ರಾರಂಭಕ್ಕೆ ಸಿದ್ಧತೆ ತ್ವರಿತವಾಗಿ ನಡೆದಿದೆ.

ಮಾರ್ಗದರ್ಶನ, ತರಬೇತಿ: ‘ಡಿಜಿಎಫ್‌ಟಿ ಕಚೇರಿ ಬೆಳಗಾವಿಗೆ ದೊಡ್ಡ ಕೊಡುಗೆಯಾಗಲಿದೆ. ರಫ್ತು ಚಟುವಟಿಕೆ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ. ಹೊಸದಾಗಿ ವಹಿವಾಟು ಆರಂಭಿಸುವವರಿಗೂ ಮಾರ್ಗದರ್ಶನ ಸಿಗಲಿದೆ. ರಫ್ತಿಗೆ ಅನುಮತಿ ಪಡೆಯುವುದಕ್ಕೆ ಉದ್ಯಮಿಗಳು ಇಲ್ಲಿ ವ್ಯವಹರಿಸಬಹುದು. ಈ ಕಚೇರಿಯು ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಉತ್ತರಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುತ್ತದೆ. 

ಬೆಳಗಾವಿಯಲ್ಲಿ ಕಚೇರಿ ಸ್ಥಾಪನೆಗೆ ಒಪ್ಪಿಗೆ ದೊರೆತಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
‘ರಫ್ತು ಚಟುವಟಿಕೆಯಲ್ಲಿ ಬೆಂಗಳೂರು ಹೊರತುಪಡಿಸಿದರೆ ಬೆಳಗಾವಿ 2ನೇ ಸ್ಥಾನದಲ್ಲಿದೆ. ಇಲ್ಲಿ 4,560 ಅಧಿಕೃತ ಕೈಗಾರಿಕೆಗಳಿದ್ದು, 54 ಘಟಕ ರಫ್ತು ಚಟುವಟಿಕೆ ನಡೆಸುತ್ತಿವೆ.  ನವೆಂಬರ್‌ ವೇಳೆಗೆ ಕಚೇರಿ ಉದ್ಘಾಟನೆಗೊಳ್ಳಲಿದೆ’ ಎನ್ನುತ್ತಾರೆ ಅವರು.

ಐಇಸಿ: ‘ರಫ್ತು ಚಟುವಟಿಕೆ ನಡೆಸಲು ಕಡ್ಡಾಯವಾಗಿ ಬೇಕಾಗಿರುವ ಐಇಸಿಯನ್ನು (ಇಂಪೋರ್ಟ್‌ ಎಕ್ಸ್‌ಪೋರ್ಟ್‌ ಕೋಡ್‌) ಇಲ್ಲಿ ನೀಡಲಾಗುವುದು. ಇದಕ್ಕಾಗಿ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ. ರಫ್ತು ಉದ್ಯಮಿಗಳಿಗೆ ಕೆಲವು ಪ್ರೋತ್ಸಾಹಧನ ದೊರೆಯುತ್ತವೆ. ತಂತ್ರಜ್ಞಾನ ಸುಧಾರಣೆ ಹಾಗೂ ಯುವ ಪದವೀಧರರು, ನವ ಉದ್ಯಮಿಗಳಿಗೆ ತರಬೇತಿಯನ್ನೂ ನೀಡಲಾಗುವುದು.

ಈಗಾಗಲೇ ದೆಹಲಿಯಿಂದ ಡಿ.ಎನ್‌. ವಿಶ್ವಾಸ್‌ ಎಂಬ ಅಧಿಕಾರಿಯನ್ನು ಇಲ್ಲಿಗೆ ಡೆಪ್ಯುಟಿ ಡಿಜಿಎಫ್‌ಟಿಯನ್ನಾಗಿ ನೇಮಿಸಲಾಗಿದೆ. ಮುಂದಿನ ತಿಂಗಳು ಅಧಿಕಾರ  ವಹಿಸಿಕೊಳ್ಳಲಿದ್ದಾರೆ’ ಎಂದು ಬೆಂಗಳೂರಿನ  ಡೆಪ್ಯುಟಿ ಡಿಜಿಎಫ್‌ಟಿ ಕೆ.ವಿ. ತಿರುಮಲ ಪ್ರತಿಕ್ರಿಯಿಸಿದ್ದಾರೆ.

ADVERTISEMENT

*
ಈ ಕಚೇರಿ ಆರಂಭಿಸುವುದರಿಂದ, ತರಕಾರಿ ರಫ್ತಿಗೂ  ಅವಕಾಶ ದೊರೆಯುವುದರಿಂದ ಉದ್ಯಮಿಗಳಷ್ಟೆ ಅಲ್ಲದೆ ರೈತರಿಗೂ ಅನುಕೂಲವಾಗಲಿದೆ
-ಸುರೇಶ ಅಂಗಡಿ, ಸಂಸತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.