ADVERTISEMENT

ಬೋರ್ಡ್‌ರೂಂ ಸಮರ ಇಲ್ಲ ಇನ್ಫೊಸಿಸ್‌ ಅಧ್ಯಕ್ಷರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 19:30 IST
Last Updated 13 ಫೆಬ್ರುವರಿ 2017, 19:30 IST
ಸುದ್ದಿಗೋಷ್ಠಿಯಲ್ಲಿ ಶೇಷಸಾಯಿ, ಸಿಕ್ಕಾ
ಸುದ್ದಿಗೋಷ್ಠಿಯಲ್ಲಿ ಶೇಷಸಾಯಿ, ಸಿಕ್ಕಾ   
ಮುಂಬೈ/ಬೆಂಗಳೂರು: ‘ಸಂಸ್ಥೆಯ ಪ್ರವರ್ತಕರು ಮತ್ತು ನಿರ್ದೇಶಕ ಮಂಡಳಿ ಮಧ್ಯೆ ಬೋರ್ಡ್‌ ರೂಂ ಸಮರ ನಡೆಯುತ್ತಿಲ್ಲ’ ಎಂದು ಇನ್ಫೊಸಿಸ್‌ ಅಧ್ಯಕ್ಷ ಆರ್‌. ಶೇಷಸಾಯಿ ಅವರು ಸ್ಪಷ್ಟಪಡಿಸಿದ್ದಾರೆ.
 
ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ‘ಸಂಸ್ಥೆಯಲ್ಲಿ ಹಿತಾಸಕ್ತಿ ಸಂಘರ್ಷ  ನಡೆಯುತ್ತಿಲ್ಲ’ ಎಂದೂ ಹೇಳಿದ್ದಾರೆ.
 
‘ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವಿಶಾಲ್‌ ಸಿಕ್ಕಾ ಅವರ ವೇತನ ಮತ್ತು ಭತ್ಯೆ ನಿಗದಿಪಡಿಸುವುದಕ್ಕೂ ಕಾರ್ಪೊರೇಟ್‌ ಆಡಳಿತದ ನಿಯಮಗಳ ಪಾಲನೆಗೂ ಸಂಬಂಧ ಇಲ್ಲ. ವಹಿವಾಟಿನ ಮಹತ್ವಾಕಾಂಕ್ಷೆಯ ಗುರಿಗೆ ಈ ವೇತನ ಸಂಬಂಧಿಸಿದೆ. ಜಾಗತಿಕ ಮಾನದಂಡಗಳ ಪ್ರಕಾರವೇ ಈ ವೇತನ ಪ್ಯಾಕೇಜ್‌ ನಿಗದಿ ಮಾಡಲಾಗಿದೆ.
 
‘ಸಂಸ್ಥೆ ಬಿಟ್ಟು ಹೋಗಿರುವ ಮಾಜಿ ಮುಖ್ಯ ಹಣಕಾಸು ಅಧಿಕಾರಿ ರಾಜೀವ್‌ ಬನ್ಸಲ್‌ ಅವರು  ಸಂಸ್ಥೆಯ  ಹಣಕಾಸಿನ ವ್ಯವಹಾರ ಸಂಬಂಧ ಯಾವುದೇ ಗುಟ್ಟು ಬಹಿರಂಗಪಡಿಸಬಾರದು ಎನ್ನುವ ಕಾರಣಕ್ಕೆ ಅವರಿಗೆ ಗುತ್ತಿಗೆ ಒಪ್ಪಂದದ ಅನ್ವಯ 30 ತಿಂಗಳ ವೇತನ ನೀಡಲಾಗಿದೆ  ಎಂದು ಶಂಕಿಸಿರುವುದು ನಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಿದೆ.
 
‘ಸಿಕ್ಕಾ ಖಾಸಗಿ ವಿಮಾನ ಬಳಸಿದ್ದಕ್ಕೆ ಸಂಸ್ಥೆ ಹಣ ಪಾವತಿಸಿದೆ ಎನ್ನುವುದು ಸರಿಯಲ್ಲ. ಸಿಕ್ಕಾ ಅವರು ಬಾಡಿಗೆ ವಿಮಾನ ಬಳಸಿ ಪ್ರಯಾಣಿಸಿರುವುದು ಕೇವಲ ಶೇ 8ರಷ್ಟು ಮಾತ್ರ. ಬಾಡಿಗೆ ವಿಮಾನ ಬಳಸುವುದಕ್ಕೆ ಹಣ ಪಾವತಿಸಲು ಮಂಡಳಿ ನಿರ್ಧಾರ ಕೈಗೊಂಡಿತ್ತು’ ಎಂದೂ ಶೇಷಸಾಯಿ ಸ್ಪಷ್ಟಪಡಿಸಿದ್ದಾರೆ.
 
‘ನಾನು ಷೇರುದಾರರಿಂದ ನೇಮಕಗೊಂಡಿರುವೆ. ಹೀಗಾಗಿ ಆ ಹುದ್ದೆಯಲ್ಲಿ ಮುಂದುವರೆಯುವೆ. ಡಿ. ಎನ್‌.  ಪ್ರಹ್ಲಾದ್‌ ಸ್ವತಂತ್ರ ನಿರ್ದೇಶಕ ಹುದ್ದೆಗೆ ಎಲ್ಲ ಮಾನದಂಡಗಳ ಪ್ರಕಾರ  ಅರ್ಹರಾಗಿದ್ದಾರೆ. ಸಂಸ್ಥೆಯ ವಹಿವಾಟಿನ ಬಗ್ಗೆ ಅವರಿಗೆ ತಿಳಿವಳಿಕೆ ಇದೆ’ ಎಂದು ಹೇಳಿದ್ದಾರೆ. 

ಶೇಷಸಾಯಿ ಅವರ ಸುದ್ದಿಗೋಷ್ಠಿಗೂ ಮುಂಚೆ ಸುದ್ದಿಸಂಸ್ಥೆ ಜತೆ ಮಾತನಾಡಿದ್ದ ಎನ್‌. ಆರ್‌. ನಾರಾಯಣಮೂರ್ತಿ  ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದರು.
ಸಂಸ್ಥೆಯಲ್ಲಿ ಕಾರ್ಪೊರೇಟ್‌ ಆಡಳಿತದ ವೈಫಲ್ಯ ಕಂಡುಬಂದಿದೆ ಎನ್ನುವ ತಮ್ಮ ಆಕ್ಷೇಪವನ್ನು ವಾಪಸ್‌ ತೆಗೆದುಕೊಂಡಿರುವೆ ಎನ್ನುವ ವರದಿಯನ್ನು ಮೂರ್ತಿ ಅಲ್ಲಗಳೆದಿದ್ದಾರೆ.
‘ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿ  ಉತ್ತಮ ಉದ್ದೇಶ ಹೊಂದಿರುವ, ಪ್ರಾಮಾಣಿಕರಾದವರೇ ಇದ್ದಾರೆ. 

ಎಲ್ಲ ಪಾಲುದಾರರ ಅಹವಾಲು ಕೇಳಬೇಕು. ತಮ್ಮ ನಿರ್ಧಾರ ಮರುಪರಿಶೀಲಿಸಬೇಕು ಮತ್ತು ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಉತ್ತಮ ನಾಯಕತ್ವವು ಬಯಸುತ್ತದೆ. ಮಂಡಳಿಯು ಶೀಘ್ರದಲ್ಲಿಯೇ ತಪ್ಪನ್ನು ಸರಿಪಡಿಸಿಕೊಳ್ಳಲಿದೆ. ಸಂಸ್ಥೆಯ ಉತ್ತಮ ಭವಿಷ್ಯದ ದೃಷ್ಟಿಯಿಂದ ಆಡಳಿತದಲ್ಲಿ ಸುಧಾರಣೆ ತರಲಿದೆಯೆಂದು ನಾನು ಆಶಿಸುವೆ’ ಎಂದು ಹೇಳಿದ್ದಾರೆ.

ಉತ್ತಮ ಬಾಂಧವ್ಯ: ‘ನಾರಾಯಣ ಮೂರ್ತಿ ಅವರ ಜತೆ ನಾನು  ಆತ್ಮೀಯ ಸಂಬಂಧ ಹೊಂದಿದ್ದೇನೆ’ ಎಂದು ಇನ್ಫೊಸಿಸ್‌ನ ಸಿಇಒ ವಿಶಾಲ್‌ ಸಿಕ್ಕಾ  ಅವರು ಹೇಳಿದ್ದಾರೆ.
‘ಮೂರ್ತಿ ಅವರನ್ನು ವರ್ಷದಲ್ಲಿ ಐದಾರು ಬಾರಿ ಭೇಟಿಯಾಗುತ್ತೇನೆ.  ಅವರೊಬ್ಬ ಸೋಜಿಗದ ವ್ಯಕ್ತಿ. ನಾವಿಬ್ಬರೂ ಭೇಟಿಯಾದಾಗಲೆಲ್ಲ  ತಂತ್ರಜ್ಞಾನದ ಪ್ರಗತಿ ಮತ್ತು ಭೌತಶಾಸ್ತ್ರ ಬಗ್ಗೆಯೇ ಹೆಚ್ಚಾಗಿ ಮಾತನಾಡುತ್ತೇವೆ’ ಎಂದು ಸಿಕ್ಕಾ ಹೇಳಿದ್ದಾರೆ. ಮುಂಬೈನಲ್ಲಿ ನಡೆದ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.