ADVERTISEMENT

ಭಾರತದ ಆರ್ಥಿಕತೆ: ಜಿಮ್‌ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST
ವಿಶ್ವಬ್ಯಾಂಕ್‌ ಅಧ್ಯಕ್ಷ ಜಿಮ್‌ ಯಾಂಗ್‌ ಕಿಮ್‌ ಜತೆ ಇಂಧನ ಸಚಿವ ಪೀಯೂಷ್‌ ಗೋಯೆಲ್‌ ಹಾಗೂ ಹಣಕಾಸು ಸಚಿವ ಅರುಣ್‌ ಜೇಟ್ಲಿ.   -ಪಿಟಿಐ ಚಿತ್ರ
ವಿಶ್ವಬ್ಯಾಂಕ್‌ ಅಧ್ಯಕ್ಷ ಜಿಮ್‌ ಯಾಂಗ್‌ ಕಿಮ್‌ ಜತೆ ಇಂಧನ ಸಚಿವ ಪೀಯೂಷ್‌ ಗೋಯೆಲ್‌ ಹಾಗೂ ಹಣಕಾಸು ಸಚಿವ ಅರುಣ್‌ ಜೇಟ್ಲಿ. -ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಡಿ ಭಾರತದ ಆರ್ಥಿಕತೆಯು ಅದ್ಭುತ ರೀತಿಯಲ್ಲಿ ಪ್ರಗತಿ ದಾಖಲಿಸುತ್ತಿದೆ’ ಎಂದು ವಿಶ್ವಬ್ಯಾಂಕ್‌ ಅಧ್ಯಕ್ಷ ಜಿಮ್‌ ಯಾಂಗ್‌ ಕಿಮ್‌ ಅಭಿಪ್ರಾಯಪಟ್ಟಿದ್ದಾರೆ.

ಎರಡು ದಿನಗಳ ಭಾರತ ಭೇಟಿಯ ಕೊನೆಯ ದಿನವಾದ ಗುರುವಾರ, ಮೋದಿ ಅವರನ್ನು ಭೇಟಿಯಾದ ಕಿಮ್, ಪೌಷ್ಟಿಕ ಆಹಾರ ಮತ್ತು ಪುನರ್‌ಬಳಕೆ ಇಂಧನ ಕ್ಷೇತ್ರಗಳಲ್ಲಿ ಸರ್ಕಾರದ ಕಾರ್ಯಕ್ರಮಗಳಿಗೆ ವಿಶ್ವಬ್ಯಾಂಕ್‌ನ ಅಗತ್ಯ ನೆರವು ನೀಡುವುದಾಗಿ ಹೇಳಿದರು.

‘ಭಾರತವು ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿ ಬೆಳವಣಿಗೆ ದಾಖಲಿಸುತ್ತಿರುವ ಅರ್ಥ ವ್ಯವಸ್ಥೆಯಾಗಿರುವ ಜತೆಗೆ, ‘ಬ್ರೆಕ್ಸಿಟ್‌’ನ ಪ್ರತಿಕೂಲ ಪರಿಣಾಮಗಳನ್ನೂ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ತನಗೆ ಇರುವುದನ್ನು ಸಾಬೀತುಪಡಿಸಿದೆ’ ಎಂದರು.

‘ಶ್ರೇಷ್ಠ ನಾಯಕರಂತೆ ಮೋದಿ ಅವರೂ ಮಹತ್ವಾಕಾಂಕ್ಷೆಯ ಗುರಿ ಹಾಕಿಕೊಂಡಿದ್ದಾರೆ. ಅವುಗಳನ್ನು ಸಾಧಿಸಲು ಕಾಲಮಿತಿಯನ್ನೂ ವಿಧಿಸಿ, ಈ ಉದ್ದೇಶ ಈಡೇರಿಕೆಗೆ ತಮ್ಮ ಜತೆಗಾರರನ್ನೂ ಹೊಣೆಗಾರರನ್ನಾಗಿಸಿದ್ದಾರೆ. ಇದೇ ಕಾರಣಕ್ಕೆ ನಾನು ಅವರ ಅಭಿಮಾನಿಯಾಗಿರುವೆ’ ಎಂದು ಕಿಮ್‌ ಹೇಳಿದ್ದಾರೆ.

‘ಮೋದಿ ಅವರ ಪ್ರಯತ್ನಗಳು ಫಲ ನೀಡಲು ಆರಂಭಿಸಿದ್ದು, ಉದ್ದಿಮೆ ವಹಿವಾಟು ಆರಂಭಿಸಲು ಅನುಕೂಲಕರ ವಾತಾವರಣ ಕಲ್ಪಿಸಿಕೊಡುವುದಕ್ಕೆ ಸಂಬಂಧಿಸಿದಂತೆ ವಿಶ್ವ ಬ್ಯಾಂಕ್‌ ವರದಿಯಲ್ಲಿ ಭಾರತದ ಸ್ಥಾನಮಾನವು ಏರಿಕೆಯಾಗಿದೆ’ ಎಂದರು.

ಸೌರಶಕ್ತಿ ಯೋಜನೆಗೆ ನೆರವು: ಭಾರತದಲ್ಲಿ ಸೌರಶಕ್ತಿ  ಯೋಜನೆಗಳಿಗೆ ನೆರವಾಗಲು ₹ 6,750 ಕೋಟಿಗಳ ನೆರವು ನೀಡಲು ವಿಶ್ವಬ್ಯಾಂಕ್‌ ಮುಂದಾಗಿದೆ. ಈ ಸಂಬಂಧ, ಜಿಮ್‌ ಯಾಂಗ್‌ ಕಿಮ್‌ ಅವರು ಇಂಧನ ಸಚಿವ ಪೀಯೂಷ್‌ ಗೋಯೆಲ್‌ ಅವರ ಜತೆ ಗುರುವಾರ ಇಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.

ರಾಜನ್‌ ಹೊಗಳಿಕೆ: ‘ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ರಘುರಾಂ ರಾಜನ್‌ ಅವರು ಅಸಾಮಾನ್ಯ ಸಾಮರ್ಥ್ಯದ ವಿಶಿಷ್ಟ ಗವರ್ನರ್‌ ಆಗಿದ್ದಾರೆ’ ಎಂದು ಕಿಮ್‌ ಬಣ್ಣಿಸಿದ್ದಾರೆ. 

ರಾಜನ್‌ ಅವರ ಪಾಂಡಿತ್ಯವನ್ನು ತಾವು ಅಪಾರವಾಗಿ ಗೌರವಿಸುವುದಾಗಿಯೂ ಕಿಮ್‌ ಅವರು ಖಾಸಗಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಸ್ವತಂತ್ರವಾಗಿ ಆಲೋಚಿಸುವವರನ್ನೇ ಆರ್‌ಬಿಐ ಗವರ್ನರ್‌ ಹುದ್ದೆಗೆ ನೇಮಿಸಬೇಕು ಎಂದು ತಾವು ಭಾರತದ ಮುಖಂಡರಿಗೆ ತಿಳಿಸಿರುವುದಾಗಿ ಕಿಮ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.