ADVERTISEMENT

ಮತ್ತೆ ಬೇಸಿಕ್‌ ಫೋನ್‌ಗಳ ವೈಭವ

ಪೃಥ್ವಿರಾಜ್ ಎಂ ಎಚ್
Published 12 ಜೂನ್ 2018, 19:30 IST
Last Updated 12 ಜೂನ್ 2018, 19:30 IST
ಮತ್ತೆ ಬೇಸಿಕ್‌ ಫೋನ್‌ಗಳ ವೈಭವ
ಮತ್ತೆ ಬೇಸಿಕ್‌ ಫೋನ್‌ಗಳ ವೈಭವ   

ಬೆ ಳಗ್ಗೆ ಬೇಗ ಎದ್ದು ಜಿಮ್‌, ಯೋಗಾ, ಏರೋಬಿಕ್ಸ್ ಕೇಂದ್ರಗಳಲ್ಲಿ ಕಸರತ್ತು ಮಾಡುವವರು ದೊಡ್ಡ ಗಾತ್ರದ ಟ್ಯಾಬ್‌, ಫೋನ್‌ಗಳು, ದುಬಾರಿ ಐ–ಫೋನ್‌ಗಳನ್ನು ಬಳಸುವಾಗ ಎಚ್ಚರಿಕೆಯಿಂದ ಇರುತ್ತಾರೆ. ಕೆಳಗೆ ಬಿದ್ದರೆ ಒಡೆದುಹೋಗುವ ಭಯವೇ ಇದಕ್ಕೆ ಕಾರಣ. ಅದೇ ರೀತಿ, ಅಡುಗೆ, ಪೂಜೆ ಕಾರ್ಯಗಳಲ್ಲಿ ತೊಡಗಿರುವಾಗ ಮೊಬೈಲ್‌ಫೋನ್ ಬಳಸುವುದು ಅನಿವಾರ್ಯವಾದರೆ, ಎಣ್ಣೆ, ಹಿಟ್ಟು ಬೀಳದಂತೆ ನೋಡಿಕೊಳ್ಳಬೇಕು. ಕಿಕ್ಕಿರಿದು ತುಂಬಿರುವ ಜನಸಂದಣಿಯಲ್ಲಿ ದುಬಾರಿ ಫೋನ್‌ ಕೈಲಿ ಹಿಡಿದುಕೊಂಡು ಮಾತನಾಡುವುದೂ ಕಷ್ಟ. ಕದಿಯುವ ಸಾಧ್ಯತೆಯೂ ಇರುತ್ತದೆ. ಇಂತಹ ಸಮಯಗಳಲ್ಲಿ ಪುಟ್ಟಗಾತ್ರದ ಮೊಬೈಲ್‌ಫೋನ್‌ಗಳ ಕಡೆಗೆ ಮನಸು ಸೆಳೆಯುತ್ತದೆ. ಜತೆಗೆ ತಮ್ಮ ಖಾಸಗೀತನಕ್ಕೆ ಧಕ್ಕೆಯಾಗದಂತ ಫೋನ್ ಇದ್ದರೆ ಒಳ್ಳೆಯದು ಎಂದೂ ಕೆಲವರು ಭಾವಿಸುತ್ತಾರೆ. ಇಂತಹ ಅಗತ್ಯಗಳನ್ನು ಒದಗಿಸುವ ಕೆಲವು ಮೊಬೈಲ್‌ ಫೋನ್‌ಗಳ ಮಾಹಿತಿ ಇಲ್ಲಿದೆ.

ಇವು ನೋಡುವುದಕ್ಕೆ ಸ್ಮಾರ್ಟ್‌ಫೋನ್‌ನಂತೆ ಕಂಡರೂ, ಬೇಸಿಕ್‌ ಫೋನ್‌ಗಳು. ಪರದೆ ತಾಕುವ ಪರದೆಯಂತೆ ಕಂಡರೂ ಸಾಮಾನ್ಯವಾಗಿರುತ್ತವೆ. ಸ್ಲೀಪ್‌ ಮೋಡ್‌ನಲ್ಲಿರುವ ಬಣ್ಣದ ಫೋನ್‌ಗಳು ಎಂದು ಭಾವಿಸಿದರೂ ಗೋಚರಿಸುವುದು ಕಪ್ಪು ಮತ್ತು ಬಿಳಿ ಬಣ್ಣಗಳು ಮಾತ್ರ. ಎಷ್ಟು ಹುಡುಕಿದರೂ ತಂತ್ರಾಂಶಗಳು ಕಾಣಿಸುವುದಿಲ್ಲ. ಕೆಲವಂತೂ, ಕರೆ ಬಂದರೆ ಮಾತನಾಡುವುದು, ಸಂದೇಶ ಬಂದರೆ ಸ್ಪಂದಿಸುವುದಕ್ಕಷ್ಟೇ ಸೀಮಿತ. ಇನ್ನೂ ಕೆಲವನ್ನು ಮುಷ್ಟಿಯಲ್ಲಿ ಬಚ್ಚಿಡಬಹುದು. ಅಷ್ಟೇ ಏಕೆ ಜೀನ್ಸ್‌ ಪ್ಯಾಂಟ್‌ನ ದೊಡ್ಡ ಕಿಸೆಯ ಮೇಲಿರುವ ಪುಟ್ಟ ಕಿಸೆಯಲ್ಲೂ ಇಡಬಹುದು (ಕಾಯನಿ ಪ್ಯಾಕೆಟ್).

ಲೈಟ್ ಬಳಸಿ
ಇದು ನಮ್ಮ ಖಾಸಗಿತನಕ್ಕೆ ಧಕ್ಕೆ ತರುವ ಸ್ಮಾರ್ಟ್‌ಫೋನ್‌ನಂತೆ ಅಲ್ಲದೇ, ನಮ್ಮ ಸಮಯ ವ್ಯರ್ಥ ಮಾಡದಂತೆ ಕೆಲಸ ಮಾಡುತ್ತದೆ. ಪದೇ, ಪದೇ ನಮ್ಮ ಗಮನವನ್ನು ಸೆಳೆಯದು ಕಾರಣ, ಬಣ್ಣ ಬಣ್ಣದ ಹೈಎಂಡ್ ಗ್ರಾಫಿಕ್ಸ್‌ಗಳು ಕಾಣಿಸುವುದಿಲ್ಲ. ಕಣ್ಣಿಗೆ ಯಾವುದೇ ತೊಂದರೆ ಕೊಡುವುದಿಲ್ಲ. ತೆರೆಯ ಮೇಲೆ ಗೋಚರಿಸುವುದು ಕಪ್ಪು–ಬಿಳಿ ಬಣ್ಣಗಳಷ್ಟೇ.

ADVERTISEMENT

ಕಡಿಮೆ ತೂಕ ಮತ್ತು ಸುಲಭವಾದ ಆಯ್ಕೆಗಳಿಂದ ಮನಸಿಗೆ ಮುದ ನೀಡುತ್ತದೆ. ಇದರ ಹೆಸರು ‘ಲೈಟ್‌ಫೋನ್‌ 2’ ಇದು 4ಜಿ ಮೊಬೈಲ್‌ ನ್ಯಾನೊ ಸಿಮ್‌ ಕೂಡಿಸಿ ಬಳಸಬಹುದು. ಇ–ಪುಸ್ತಕ ರೀಡರ್‌ಗಳ ಪರದೆ ತಯಾರಿಸಿರುವಂತೆ  ರೂಪಿಸಿರುವ ಇದರ ಪರದೆಯನ್ನೂ ಇ–ಇಂಕ್‌ನಿಂದ ತಯಾರಿಸಲಾಗಿದೆ.

ಕರೆ ಮತ್ತು ಸಂದೇಶಗಳು ಬಂದಾಗ ಮಾತ್ರ ಸದ್ದು ಮಾಡುತ್ತದೆ. ಸದಾ ಸ್ಲೀಪ್‌ಮೋಡ್‌ನಲ್ಲಿ ಇರುವಂತೆ ಕೆಲಸ ಮಾಡುವ ಈ ಸಾಧನ ನಮ್ಮ ಏಕಾಗ್ರತೆಗೆ ಭಂಗ ತರುವುದಿಲ್ಲ. ಇದರ ಮತ್ತಷ್ಟು ವೈಶಿಷ್ಟ್ಯಗಳೆಂದರೆ, ನಿಗದಿತ ಸಮಯಕ್ಕೆ ಕರೆಗಂಟೆ ಎಚ್ಚರಿಸುತ್ತದೆ. ಹಾಡುಗಳನ್ನು ಕೇಳಿಸುತ್ತದೆ. ದಾರಿ ಮರೆತರೆ ತೋರಿಸುತ್ತದೆ.

ನಮ್ಮ ಧ್ವನಿಯ ಆಜ್ಞೆಗಳನ್ನೂ ಪಾಲಿಸುತ್ತದೆ. ಫೋನ್‌ನಲ್ಲಿ ಎರಡೇ ಗುಂಡಿಗಳಿವೆ. ಅವನ್ನು ಸ್ಕ್ರೋಲ್ ಮಾಡಿಯೇ ಎಲ್ಲ ಸೌಲಭ್ಯ ಬಳಸಬಹುದು. ಟೈಪಿಂಗ್ ಆಯ್ಕೆಯೂ ಸ್ಪರ್ಶ ಪರದೆಯಂತೆ ಇರುತ್ತದೆ. ಟೈಪೊಗ್ರಾಫಿಕ್ ಇಂಟರ್‌ಸ್ಪೇಸ್‌ ಇರುತ್ತದೆ. ಫೋನ್‌ನಲ್ಲಿ ಒಎಸ್ ಕೂಡ ಇರುತ್ತದೆ. ನೀರಿಗೆ ಬಿದ್ದರೂ ಹಾಳಾಗದಂತೆ ‘ವಾಟರ್ ಪ್ರೂಫ್‌ ರಕ್ಷಣೆ’ ಇದೆ.

ವೈಶಿಷ್ಟ್ಯಗಳು

* 1ಜಿಬಿ ರ‍್ಯಾಮ್

* 8ಜಿಬಿ ಮೆಮೊರಿ

* 500ಎಂಎಎಚ್

* ಬ್ಯಾಟರಿ ಸಾಮರ್ಥ್ಯ

ನಯಾ ನೋಕಿಯಾ

ಹಿಂದೆ ರಂಜಿಸಿದ್ದ ಸ್ಲೈಡ್ ಫೋನ್‌ಗಳನ್ನು ನೋಕಿಯಾ ಮತ್ತೆ ತರುತ್ತಿದೆ. ಕೀಪ್ಯಾಡ್‌ ಅನ್ನು ಮುಚ್ಚುವ ಹೊದಿಕೆ ಇರುವಂತಹ ಫೋನ್ ತಯಾರಿಸಿದೆ.‌ ನೋಕಿಯಾ 8110 ಹೆಸರಿನ ನಾಜುಕಾದ ಈ ಫೋನ್, 4ಜಿ ನೆಟ್‌ವರ್ಕ್‌ಗೆ ಸಹಕರಿಸುತ್ತದೆ. ಹೊಸ ರೂಪ, ಆಕರ್ಷಕ ವಿನ್ಯಾಸದೊಂದಿಗೆ ಗ್ರಾಹಕರ ಮನಸೆಳೆಯಲು ತುದಿಗಾಲಲ್ಲಿ ನಿಂತಿದೆ. ನೇರವಾಗಿ ಇಲ್ಲದೆ, ಸ್ವಲ್ಪ ಡೊಂಕಾಗಿದೆ. ಕರೆ ಬಂದಾಗ ಸ್ಲೈಡ್ ಕೆಳಗೆ ಎಳೆದು ಮಾತನಾಡಬಹುದು. ಸ್ಲೈಡ್ ಮತ್ತೆ ಮುಚ್ಚಿದರೆ ಕರೆ ಕಟ್ ಆಗುತ್ತದೆ. ಇದನ್ನು ವೈ–ಫೈ ಹಾಟ್‌ಸ್ಟಾಟ್ ಆಗಿಯೂ ಬಳಸಿಕೊಳ್ಳಬಹುದು.

ವೈಶಿಷ್ಟ್ಯಗಳು

* 2.4 ಇಂಚಿನ ಪರದೆ

* ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 2 ಎಂ.ಪಿ ಕ್ಯಾಮೆರಾ

* 512 ಎಂಬಿ ರ‍್ಯಾಮ್

* 4ಜಿಬಿ ಇಂಟರ್ನಲ್ ಮೆಮೊರಿ

* ಜಿ–ಮೇಲ್‌ ಬ್ಯಾಕ್ ಅಪ್‌ ಸೌಲಭ್ಯ

* 1500ಎಂಎಎಚ್‌ ಬ್ಯಾಟರಿ ಸೌಲಭ್ಯ.

* ಒಮ್ಮೆ ಚಾರ್ಜ್‌ ಮಾಡಿದರೆ 25 ದಿನ ಕೆಲಸ ಮಾಡುತ್ತದೆ.

* ಎರಡು ಸಿಮ್ ಬಳಸಬಹುದು

ಜೆಲ್ಲಿ ಫೋನ್‌
ಮುಷ್ಟಿಯಲ್ಲಿ ಹುದುಗಿಹೋಗುವ ಫೋನ್ ಬೇಕು ಎನ್ನುವವರಿಗೆ ಇದು ಉತ್ತಮ ಮೊಬೈಲ್‌. ಕ್ರೆಡಿಟ್‌ ಕಾರ್ಡ್‌ ಗಾತ್ರದಷ್ಟು ಇರುತ್ತದೆ. ಇದರಲ್ಲಿ ಅಳವಡಿಸಿರುವ ಜಿಪಿಎಸ್ ಮತ್ತು ಪೆಡೊಮೀಟರ್ ಸಹಾಯದಿಂದ ಎಷ್ಟು ದೂರ ನಡೆದಿದ್ದೇವೆ ಎಂಬುದನ್ನು ತೋರಿಸುತ್ತದೆ.

ವಾಯುವಿಹಾರಕ್ಕೆ, ಜಿಮ್‌ಗೆ ಹೋಗುವಾಗ ಫಿಟ್‌ನೆಸ್‌ ಬ್ಯಾಂಡ್‌ಗಳಂತೆ ಕೈಗೆ ಕಟ್ಟಿಕೊಂಡು ಹೋಗಬಹುದು. ಜೀನ್ಸ್‌ ಪ್ಯಾಂಟ್‌ನ ಪುಟ್ಟ ಕಿಸೆಯಲ್ಲಿ ಇಟ್ಟುಕೊಳ್ಳಬಹುದು. ಇದು 4ಜಿ ಸ್ಮಾರ್ಟ್‌ಫೋನ್‌. ಇದರ ಪರದೆ 2.45 ಇಂಚು. ಬ್ಯಾಟರಿ ಸೇರಿದಂತೆ ಇದರ ತೂಕ 60. 04 ಗ್ರಾಂ. ಎರಡು ಸಿಮ್‌ಗಳನ್ನು ಅಳವಡಿಸಬಹುದಾದ ಈ ಸಾಧನವು ಹಿಂಬದಿ 2 ಮೆಗಾಪಿಕ್ಸೆಲ್ ಮತ್ತು ಮುಂಬದಿ 8ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.

ವೈಶಿಷ್ಟ್ಯಗಳು

* 1ಜಿಬಿ ರ‍್ಯಾಮ್ * 8 ಜಿಬಿ ಮೆಮೊರಿ (ಜೆಲ್ಲಿ)

* 950 ಎಂಎಚ್‌ ಬ್ಯಾಟರಿ * 7.0 ಆಂಡ್ರಾಯ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.