ADVERTISEMENT

ಮಲ್ಯ ಯುಬಿಎಲ್‌ ಅಧ್ಯಕ್ಷ ಸ್ಥಾನಕ್ಕೆ ಕುತ್ತಿಲ್ಲ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2016, 19:30 IST
Last Updated 7 ಸೆಪ್ಟೆಂಬರ್ 2016, 19:30 IST
ವಿಜಯ್‌ ಮಲ್ಯ
ವಿಜಯ್‌ ಮಲ್ಯ   

ಬೆಂಗಳೂರು: ಸಾಲದ ಸುಳಿಗೆ ಸಿಲುಕಿ ದೇಶ ತೊರೆದಿರುವ ಉದ್ಯಮಿ ವಿಜಯ್‌ ಮಲ್ಯ ಅವರ ಯುನೈಟೆಡ್‌ ಬ್ರಿವರೀಸ್‌ ಲಿಮಿಟೆಡ್‌ (ಯುಬಿಎಲ್‌)  ಅಧ್ಯಕ್ಷ ಸ್ಥಾನಕ್ಕೆ ಯಾವ ಸಂಚಕಾರವೂ ಇಲ್ಲ ಎಂದು ಸಂಸ್ಥೆಯ ನಿರ್ದೇಶಕರ ಮಂಡಳಿ ಬುಧವಾರ ಹೇಳಿದೆ.

ಮಲ್ಯ ಯುಬಿಎಲ್‌ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಹೇಳುವ ಮೂಲಕ  ಸಂಸ್ಥೆಯ ಆಡಳಿತ ಮಂಡಳಿ  ಬಹಿರಂಗವಾಗಿ ಮಲ್ಯ ಅವರ ಬೆಂಬಲಕ್ಕೆ ನಿಂತಿದೆ.

ಮಲ್ಯ ಅವರು ಯುಬಿಎಲ್‌ನಲ್ಲಿ ಹೊಂದಿರುವ  ಷೇರುಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಇತ್ತೀಚೆಗೆ ಮುಟ್ಟುಗೋಲು ಹಾಕಿಕೊಂಡ ಬೆಳವಣಿಗೆಯು  ಅವರ ಅಧಿಕಾರಕ್ಕೆ ಕುತ್ತು ತರಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಈ ವರದಿಗಳಿಗೆ ಸ್ಪಷ್ಟನೆ ನೀಡಿರುವ  ಆಡಳಿತ ಮಂಡಳಿಯು, ಜಾರಿ ನಿರ್ದೇಶನಾಲಯದ ಕ್ರಮದ ಹೊರತಾಗಿಯೂ ಮಲ್ಯ  ಯುಬಿಎಲ್‌ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ ಎಂದು ಹೇಳಿದೆ.

‘ಅಧ್ಯಕ್ಷ ಹುದ್ದೆಯಲ್ಲಿ ಮಲ್ಯ ಅವರನ್ನು ಮುಂದುವರೆಸುವ ಕುರಿತಂತೆ ಇರುವ ಕಾನೂನು ತೊಡಕುಗಳ ಬಗ್ಗೆ  ಆಡಳಿತ ಮಂಡಳಿಯು ಸುಪ್ರೀಂ ಕೋರ್ಟ್‌  ಮಾಜಿ ಮುಖ್ಯ ನ್ಯಾಯಮೂರ್ತಿಯೊಬ್ಬರಿಂದ    ಸಲಹೆ ಕೇಳಲಾಗಿತ್ತು ’ ಎಂದು ಸಂಸ್ಥೆಯ ನಿರ್ದೇಶಕ ಚುಗ್‌ ಯೋಗೇಂದ್ರ ಪಾಲ್‌  ಹೇಳಿದ್ದಾರೆ. ಪಾಲ್‌ ಅವರು ಬುಧವಾರ ಇಲ್ಲಿ ನಡೆದ ಸಂಸ್ಥೆಯ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆವಹಿಸಿದ್ದರು.

ಕಾನೂನು ತೊಡಕು ಇಲ್ಲ: ‘ಮಲ್ಯ ಅಧ್ಯಕ್ಷರಾಗಿ ಮುಂದುವರೆಯಲು ಕಾನೂನು ತೊಡಕುಗಳಿಲ್ಲ’ ಎಂದು ಯುಬಿಎಲ್‌ ನಿರ್ದೇಶಕ ಪಾಲ್‌ ಹೇಳಿದ್ದಾರೆ.
ಸದ್ಯದ ಮಾಹಿತಿಯಂತೆ  ಜಾರಿ ನಿರ್ದೇಶನಾಲಯವು ‘ಯುಬಿಎಲ್‌ ಅಥವಾ ಮಲ್ಯ ಅವರ ಆಸ್ತಿ ಇಲ್ಲವೇ ಷೇರುಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ.

ಹೀಗಾಗಿ ಮಲ್ಯ ಯುಬಿಎಲ್‌ ಅಧ್ಯಕ್ಷ ಸ್ಥಾನದಿಂದ ಅನರ್ಹರಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಕ್ರಮ ಹಣ ವರ್ಗಾವಣೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ಅವರ ತೋಟದ ಮನೆ, ಫ್ಲ್ಯಾಟ್ಸ್‌ ಸೇರಿ  ₹6,630 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಇ.ಡಿ ಸೆ.5ರಂದು  ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT