ADVERTISEMENT

ಮಹತ್ವದ ಪಂದ್ಯದಲ್ಲಿ ಮಿಂಚಿದ ಅನುಭವಿ ಗೋಸ್ವಾಮಿ: ಭಾರತ ಗೆಲುವಿಗೆ 229ರನ್‌ ಗುರಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 13:04 IST
Last Updated 23 ಜುಲೈ 2017, 13:04 IST
ಬಿಸಿಸಿಐ ಚಿತ್ರ
ಬಿಸಿಸಿಐ ಚಿತ್ರ   

ಲಾರ್ಡ್‌: ಕ್ರಿಕೆಟ್‌ ಕಾಶಿ ಖ್ಯಾತಿಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ಪಂದ್ಯಾವಳಿಯ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಭಾರತಕ್ಕೆ 229ರನ್‌ಗಳ ಗುರಿ ನೀಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ತಂಡಕ್ಕೆ ಉತ್ತಮ ಆರಂಭ ದೊರಕಿತು. ಟಾಮಿ ಬ್ಯೂಮೌಂಟ್‌ ಹಾಗೂ ಲಾರೆನ್‌ ವಿನ್‌ಫೀಲ್ಡ್‌ ಜೋಡಿ 11.1ಓವರ್‌ಗಳಲ್ಲಿ 47ರನ್‌ಗಳಿಸಿ ಬೃಹತ್‌ ಮೊತ್ತ ಕಲೆ ಹಾಕುವ ಸೂಚನೆ ನೀಡಿತ್ತು.

ಈ ಹಂತದಲ್ಲಿ ಮೊದಲ ವಿಕೆಟ್‌ ರೂಪದಲ್ಲಿ ವಿನ್‌ಫೀಲ್ಡ್‌ಗೆ ಪೆವಿಲಿಯನ್‌ ದಾರಿ ತೋರಿದ ಕನ್ನಡತಿ ರಾಜೇಶ್ವರಿ ಗಾಯಕ್‌ವಾಡ್‌ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ADVERTISEMENT

62 ಹಾಗೂ 63 ರನ್‌ಗಳಿಸಿದ್ದಾಗ ಇಂಗ್ಲೆಂಡ್‌ನ ಬ್ಯೂಮೌಂಟ್‌ ಮತ್ತು ನಾಯಕಿ ಹೀದರ್ ನೈಟ್‌ ಒಬ್ಬರ ಹಿಂದೊಬ್ಬರು ವಿಕೆಟ್‌ ಒಪ್ಪಿಸಿ ಅಲ್ಪ ಮೊತ್ತಕ್ಕೆ ಕುಸಿಯುವ ಹಂತ ತಲುಪಿದರು. ಆದರೆ, ನಾಲ್ಕನೇ ವಿಕೆಟ್‌ಗೆ 83ರನ್‌ ಜತೆಯಾಟವಾಡಿದ ಸಾರಾ ಟೇಲರ್‌(45) ಹಾಗೂ ನಥಾಲಿ ಶಿವರ್‌(51) ತಮ್ಮ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಇವರಿಬ್ಬರು ಔಟಾದ ನಂತರ ಮತ್ತೆ ಭಾರತ ಮೇಲುಗೈ ಸಾಧಿಸಿತು.

ಅಂತಿಮವಾಗಿ ಹೀದರ್ ನೈಟ್‌ ಪಡೆ ನಿಗದಿತ 50ಓವರ್‌ಗಳಲ್ಲಿ 7ವಿಕೆಟ್‌ ನಷ್ಟಕ್ಕೆ 228ರನ್‌ ಕಲೆ ಹಾಕಿತು.

ಭಾರತ ಪರ ಅನುಭವಿ ಆಟಗಾರ್ತಿ ಜೂಲನ್‌ ಗೋಸ್ವಾಮಿ 23ರನ್‌ ನೀಡಿ 3ವಿಕೆಟ್‌ ಪಡೆದು ಮಿಂಚಿದರು. ಉಳಿದಂತೆ ಪೂನಮ್‌ ಯಾದವ್‌ 2, ರಾಜೇಶ್ವರಿ ಗಾಯಕ್‌ವಾಡ್‌ 1 ವಿಕೆಟ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.