ADVERTISEMENT

ಮಹಿಳೆಯರಿಗೆ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2017, 19:30 IST
Last Updated 17 ಮಾರ್ಚ್ 2017, 19:30 IST
ರೂಪಾ ರಾಣಿ
ರೂಪಾ ರಾಣಿ   

ಬೆಂಗಳೂರು: ಉದ್ದಿಮೆ ಆರಂಭಿಸಲು ಬಯಸುವ ಮಹಿಳೆಯರಿಗಾಗಿ ಒಂದು ವಾರದ ಸಮಗ್ರ ತರಬೇತಿ ಕಾರ್ಯಕ್ರಮ ನೀಡಲು ಮಹಿಳಾ ಉದ್ಯಮಿಗಳ ಒಕ್ಕೂಟ  (ಸಿಒಡಬ್ಲ್ಯುಇ) ಮುಂದಾಗಿದೆ.

‘ಅನೇಕ ಮಹಿಳೆಯರಲ್ಲಿ ಉದ್ದಿಮೆ ಆರಂಭಿಸುವ ಉತ್ಸಾಹ ಇದ್ದರೂ, ಮಾಹಿತಿ ಕೊರತೆಯಿಂದ ಹಿಂದೇಟು ಹಾಕಿರುತ್ತಾರೆ. ಅಂತಹವರಿಗೆ ಉದ್ದಿಮೆ ರಂಗದ ಸಮಗ್ರ ಮಾಹಿತಿ ನೀಡಿ, ಅವರಲ್ಲಿ ಉದ್ಯಮಶೀಲತೆ ಬೆಳೆಸುವ ಉದ್ದೇಶದ ಈ ತರಬೇತಿ ಕಾರ್ಯಕ್ರಮ ಬಹು ಬಗೆಯಲ್ಲಿ ಉಪಯುಕ್ತವಾಗಿರಲಿದೆ’ ಎಂದು ಒಕ್ಕೂಟದ ಅಧ್ಯಕ್ಷೆ ರೂಪಾ ರಾಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟೇಲರಿಂಗ್‌, ಮೋಂಬತ್ತಿ ತಯಾರಿಕೆ, ಪೇಪರ್‌  ಬ್ಯಾಗ್‌, ಸೌಂದರ್ಯ ಪ್ರಸಾಧನ ಕ್ಷೇತ್ರದಲ್ಲಿ ತರಬೇತಿ ನೀಡಲಾಗುವುದು. ಸಿದ್ಧ ಉಡುಪು, ಕೈತೋಟ ವಿಷಯದಲ್ಲಿಯೂ  ಉದ್ದಿಮೆ ಅವಕಾಶಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶ ಇದೆ.

ಎಸ್ಎಸ್‌ಎಲ್‌ಸಿ ಉತ್ತೀರ್ಣರಾದವರು ತರಬೇತಿಗೆ ಅರ್ಹರು. ನಗರ ಮತ್ತು ಗ್ರಾಮೀಣ ಮಹಿಳೆಯರೂ ಭಾಗವಹಿಸಬಹುದು. ವರ್ಷದಲ್ಲಿ 3 ಬಾರಿ ಇಂಥ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಒಂದು ತಂಡದಲ್ಲಿ 20 ಮಹಿಳೆಯರಿಗೆ ಅವಕಾಶ ಇರುತ್ತದೆ.

‘ಸರ್ಕಾರಿ ಅಧಿಕಾರಿಗಳಿಂದ ವಿವಿಧ ಯೋಜನೆ,ಬ್ಯಾಂಕ್ ಅಧಿಕಾರಿಗಳಿಂದ ಸಾಲ ಸೌಲಭ್ಯಗಳ ಮಾಹಿತಿ  ಒದಗಿಸಲಾಗುವುದು. ಯಶಸ್ವಿ ಮಹಿಳಾ ಉದ್ಯಮಿಗಳು ತಮ್ಮ ಯಶೋಗಾಥೆ ಹಂಚಿಕೊಳ್ಳಲಿದ್ದಾರೆ’ ಎಂದರು.

‘ಸರ್ಕಾರಿ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು, ಬ್ಯಾಂಕ್‌ ಹಣಕಾಸು ನೆರವು ಒದಗಿಸಲೂ ಒಕ್ಕೂಟವು ಮಹಿಳೆಯರ ಬೆನ್ನಿಗೆ ನಿಲ್ಲಲಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಇರುವ ಉದ್ದಿಮೆ ಅವಕಾಶಗಳನ್ನೆಲ್ಲ ಪರಿಚಯಿಸಿ, ಸರ್ಕಾರ ಮತ್ತು ಮಹಿಳೆಯರ ಮಧ್ಯೆ ಸಂಪರ್ಕಕೊಂಡಿಯಾಗಿ ‘ಕೋವೆ’ ತನ್ನ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ’ ಎಂದು ರೂಪಾರಾಣಿ ಹೇಳುತ್ತಾರೆ.

ರಾಜ್ಯದ ವಿವಿಧ ಭಾಗಗಳಿಂದ ಬರುವ ಮಹಿಳೆಯರಿಗೆ ವೈಎಂಸಿಎನಲ್ಲಿ ದಿನಕ್ಕೆ ₹200 ಬಾಡಿಗೆ ದರದಲ್ಲಿ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು.   ನೋಂದಣಿಗೆ ಸಂಪರ್ಕಿಸಿ - 93419 42456.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.