ADVERTISEMENT

ಮಹಿಳೆಯರಿಗೆ ವಿಮೆ ಗಗನಕುಸುಮವೇ?

​ಪ್ರಜಾವಾಣಿ ವಾರ್ತೆ
Published 27 ಜೂನ್ 2017, 19:30 IST
Last Updated 27 ಜೂನ್ 2017, 19:30 IST
ಮಹಿಳೆಯರಿಗೆ ವಿಮೆ  ಗಗನಕುಸುಮವೇ?
ಮಹಿಳೆಯರಿಗೆ ವಿಮೆ ಗಗನಕುಸುಮವೇ?   

ಕೌಟುಂಬಿಕ ವ್ಯವಸ್ಥೆಯಲ್ಲಿ ಮಹಿಳೆ ಪಾತ್ರವೇ ಮುಖ್ಯ. ವೃತ್ತಿಪರ ಉದ್ಯೋಗದಲ್ಲಿರಬಹುದು,  ಗೃಹಿಣಿಯಾಗಿರಬಹುದು ಅಥವಾ ತಾತ್ಕಾಲಿಕ ನೌಕರಿ ಇರಬಹುದು. ಎಲ್ಲವನ್ನೂ ನಿಭಾಯಿಸಿಕೊಂಡು ತನ್ನ ಕುಟುಂಬಕ್ಕೆ ಮಹಿಳೆ ನೀಡುವ ಕೊಡುಗೆ ಅಪಾರ. ಆದರೆ, ದುರದೃಷ್ಟವಷಾತ್‌ ಪುರುಷರಿಗೆ ಹೋಲಿಸಿದರೆ ಮಹಿಳೆಯರು ವಿಮೆ ವ್ಯಾಪ್ತಿಗೆ ಕಡಿಮೆ ಸಂಖ್ಯೆಯಲ್ಲಿ ಒಳಗಾಗಿದ್ದಾರೆ.

ಮಹಿಳೆಯರು ವಿಮೆ ಪಾಲಿಸಿಗಳನ್ನು ಖರೀದಿಸುವ ಬಗ್ಗೆ ಬಿರ್ಲಾ ಸನ್‌ ಲೈಫ್‌ ಇನ್ಶುರನ್ಸ್‌ ಇತ್ತೀಚೆಗೆ ಸಮೀಕ್ಷೆಯನ್ನು ಕೈಗೊಂಡಿತ್ತು. ಈ ಸಮೀಕ್ಷೆ ಪ್ರಕಾರ, ನಗರ ಪ್ರದೇಶದಲ್ಲಿ ಕೇವಲ ಶೇಕಡ 50ರಷ್ಟು  ಮಹಿಳೆಯರು ಮಾತ್ರ ವಿಮೆ ವ್ಯಾಪ್ತಿಗೆ ಒಳಗಾಗಿದ್ದರೆ, ಒಟ್ಟು ಪುರುಷರಲ್ಲಿ ಶೇಕಡ 72ರಷ್ಟು ಮಂದಿ ವಿಮೆ ವ್ಯಾಪ್ತಿಗೆ ಒಳಗಾಗಿದ್ದಾರೆ. ಬಿರ್ಲಾ ಸನ್‌ ಲೈಫ್‌ ಇನ್ಶುರನ್ಸ್‌ನ ಗ್ರಾಹಕರಲ್ಲೂ ಶೇಕಡ 23ರಷ್ಟು ಮಾತ್ರ ಮಹಿಳೆಯರಿದ್ದಾರೆ.

ಸಣ್ಣ ವಯಸ್ಸಿನಿಂದಲೇ ಹಣ ಉಳಿತಾಯ ಮಾಡಬೇಕು ಎನ್ನುವುದು ಸಾಮಾನ್ಯ ಮನೋಭಾವ ಸಹಜ. ಆದರೆ, ವಿಮೆ ವಿಷಯ ಬಂದಾಗ ಮಹಿಳೆಯರು ವಿಮೆ ಪಾಲಿಸಿಗಳನ್ನು ಖರೀದಿಸುವುದು ಅಥವಾ ವಿಮೆ ವ್ಯಾಪ್ತಿಗೆ ಒಳಪಡುವುದು 30ರಿಂದ 40ನೇ ವಯಸ್ಸಿನಲ್ಲಿ. ಕೇವಲ ಶೇಕಡ 26ರಷ್ಟು ಮಹಿಳೆಯರು ಮಾತ್ರ ತಮ್ಮ 20ರಿಂದ 30ನೇ ವಯಸ್ಸಿನ ಅವಧಿಯಲ್ಲಿ ವಿಮೆ ವ್ಯಾಪ್ತಿಗೆ ಒಳಪಡುತ್ತಾರೆ ಎನ್ನುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. ವಿಮೆ ಪಾಲಿಸಿಗಳನ್ನು ಆರಂಭಿಸಿದ ದಿನದಿಂದಲೂ ಈ ಅಂಶದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ.

ADVERTISEMENT

ಸಮೀಕ್ಷೆಯ ಇತರ ಅಂಶಗಳು
ವಿಮೆ ಪಾಲಿಸಿಗಳನ್ನು ಖರೀದಿಸುವ ಶೇಕಡ 52ರಷ್ಟು ಮಹಿಳೆಯರು ಉಳಿತಾಯಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಇದರಿಂದ ಒಂದಿಷ್ಟು ಹಣ ದೊರೆಯಲಿ ಎನ್ನುವ ಮನೋಭಾವ ಹೆಚ್ಚು. ನಿವೃತ್ತಿ ಜೀವನ, ಆರೋಗ್ಯ ಮತ್ತು ಜೀವನ ಭದ್ರತೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ.

ಉಳಿತಾಯ ಯೋಜನೆಗೆ ಸಂಬಂಧಿಸಿದ ವಿಮೆ ಪಾಲಿಸಿಗಳನ್ನು 20ರಿಂದ 30 ವಯಸ್ಸಿನ ಮಹಿಳೆಯರು ಹೆಚ್ಚು ಖರೀದಿಸುತ್ತಾರೆ.  ಹೆಚ್ಚು ಆದಾಯ ಗಳಿಸುವ ಮಹಿಳೆಯರು ನಿವೃತ್ತಿಗೆ ಸಂಬಂಧಿಸಿದ ಯೋಜನೆಗಳಿಗೆ ಆದ್ಯತೆ ನೀಡುತ್ತಾರೆ. ಇಂದಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಮಹಿಳೆಯರು ಸಹ ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆ. ಹಣಕಾಸಿನ ನಿರ್ವಹಣೆಯ ಜವಾಬ್ದಾರಿ ಸಹ ವಹಿಸಿಕೊಂಡು ಕುಟುಂಬದ ನಿರ್ವಣೆಯಲ್ಲಿ ಯಶ ಕಂಡುಕೊಂಡಿದ್ದಾರೆ.

ಆದರೆ, ಮಹಿಳೆಯರಿಗೆ ಎದುರಾಗುವ ಅಪಾಯಗಳ ಬಗ್ಗೆ ಎಚ್ಚರವಹಿಸು ವುದಿಲ್ಲ. ಹೀಗಾಗಿ ಮಹಿಳೆಯರ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಈ ಮೂಲಕ ಭವಿಷ್ಯಕ್ಕೂ ಅನುಕೂಲವಾಗುವಂತೆ ಮಹಿಳೆಯರಿಗೆ ಅನುಕೂಲ ಕಲ್ಪಿಸಬೇಕು. ಜೀವ ವಿಮಾ ಕಂಪೆನಿಗಳು ವಿವಿಧ ರೀತಿಯ ಮಾರ್ಗೋಪಾಯಗಳನ್ನು ಸೂಚಿಸುತ್ತವೆ. ಇದಕ್ಕಾಗಿಯೇ ಹಲವು ಪಾಲಿಸಿಗಳನ್ನು ರೂಪಿಸಲಾಗಿದೆ. ಮಹಿಳೆಯರು ತಮ್ಮ ಅಗತ್ಯಗಳ ಬಗ್ಗೆ ಮೊದಲು ಯೋಚಿಸಬೇಕು. ಅದರ ಅನ್ವಯ ಸಮರ್ಪಕವಾಗಿ ಪಾಲಿಸಿಯನ್ನು ಪಡೆದು ತಮ್ಮ ಹಾಗೂ ಕುಟುಂಬದ ರಕ್ಷಣೆಗೆ ನೆರವಾಗಬೇಕು.
ಪಂಕಜ್ ರಜ್ದಾನ್‌, ಬಿರ್ಲಾ ಸನ್‌ ಲೈಫ್‌ ಇನ್ಸೂರೆನ್ಸ್‌ ವ್ಯವಸ್ಥಾಪಕ, ನಿರ್ದೇಶಕ ಮತ್ತು ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.