ADVERTISEMENT

ಮಾರುಕಟ್ಟೆ ಮಾತು

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST
ಮಾರುಕಟ್ಟೆ ಮಾತು
ಮಾರುಕಟ್ಟೆ ಮಾತು   

ಇಟಿಎಫ್‌ನಲ್ಲಿ ₹6,577 ಕೋಟಿ  ಇಪಿಎಫ್‌ಒ ಹಣ ಹೂಡಿಕೆ
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) 2016ರ ಮಾರ್ಚ್‌ 31ರ ಅಂತ್ಯಕ್ಕೆ  ಷೇರುಪೇಟೆಗಳಲ್ಲಿ ವಹಿವಾಟು ನಡೆಸುವ ನಿಧಿಗಳಲ್ಲಿ  (ಇಟಿಎಫ್) ಹೂಡಿಕೆ ಮಾಡಿರುವ ಮೊತ್ತವು ₹ 6,577 ಕೋಟಿಗಳಷ್ಟಾಗಿದೆ.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹಾ ಅವರು ಶುಕ್ರವಾರ  ಲೋಕಸಭೆಗೆ ಈ ಮಾಹಿತಿ ನೀಡಿದರು. ಷೇರುಪೇಟೆಯಲ್ಲಿ ಇಪಿಎಫ್ಒ ಹೂಡಿಕೆಯಿಂದ ಆಗಬಹುದಾದ ಸಮಸ್ಯೆಯ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಈ ಕಾರಣಕ್ಕಾಗಿಯೇ ಇಪಿಎಫ್‌ನ ಕೇಂದ್ರೀಯ ಧರ್ಮದರ್ಶಿಗಳ ಮಂಡಳಿಯು (ಸಿಬಿಟಿ) ಶೇ 5ರಷ್ಟು ಹೂಡಿಕೆ ಮಾಡಲು ಅನುಮತಿ ನೀಡಿದೆ ಎಂದು ಅವರು ತಿಳಿಸಿದರು.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿರುವ 48 ಲಕ್ಷ ಕೇಂದ್ರೀಯ ಪಿಂಚಣಿ ಖಾತೆಗಳಲ್ಲಿ 30 ಲಕ್ಷ ಖಾತೆಗಳನ್ನು ಆಧಾರ್‌ ಜತೆ ಸಂಪರ್ಕಿಸಲಾಗಿದೆ ಎಂದು ಸಚಿವರು ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

***
ತಗ್ಗಿದ ಹರಳು, ಚಿನ್ನಾಭರಣ ರಫ್ತು
ಹರಳು ಮತ್ತು ಚಿನ್ನಾಭರಣ ರಫ್ತು ಪ್ರಮಾಣವು 2015–16ರಲ್ಲಿ ಶೇ 5.30ರಷ್ಟು ತಗ್ಗಿದ್ದು, ಒಟ್ಟು ₹2.09 ಲಕ್ಷ ಕೋಟಿ ಮೌಲ್ಯದಷ್ಟಾಗಿದೆ. 2014–15ರಲ್ಲಿ ಒಟ್ಟು ₹22.13 ಲಕ್ಷ ಕೋಟಿ ಮೌಲ್ಯದ ಸರಕುಗಳು ರಫ್ತಾಗಿದ್ದವು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ತಗ್ಗಿರುವುದು ಮತ್ತು ಕಚ್ಚಾ ವಜ್ರದ ಬೆಲೆ ಗರಿಷ್ಠ ಮಟ್ಟದಲ್ಲಿ ಇರುವುದೇ ರಫ್ತು ಪ್ರಮಾಣ ಕಡಿಮೆಯಾಗಲು ಕಾರಣ ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನ ಸಮಿತಿ (ಜಿಜೆಇಪಿಸಿ) ತಿಳಿಸಿದೆ.

ಕತ್ತರಿಸಿದ ಮತ್ತು ಹೊಳಪು ನೀಡಿದ ವಜ್ರದ ರಫ್ತು 2015–16ರಲ್ಲಿ ಶೇ 13ರಷ್ಟು ಕುಸಿತ ಕಂಡಿದೆ. ಕಚ್ಚಾ ವಜ್ರದ ರಫ್ತು ಸಹ ಶೇ 16ರಷ್ಟು ಇಳಿಕೆ ಕಂಡಿದೆ ಎಂದು ಸಮಿತಿ ಅಧ್ಯಕ್ಷ ಪ್ರವೀಣ್‌ ಶಂಕರ್‌ ಪಾಂಡ್ಯ ಅವರು ತಿಳಿಸಿದ್ದಾರೆ.

***
ದುಬೈ: ಭಾರತದ ಪ್ರವಾಸಿಗರ ಸಂಖ್ಯೆ ಹೆಚ್ಚಳ
ದುಬೈಗೆ ಭೇಟಿ ನೀಡುವ ಭಾರತದ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ಈ ವರ್ಷದ ಜನವರಿಯಿಂದ ಮಾರ್ಚ್‌ ತಿಂಗಳ ಅವಧಿಯಲ್ಲಿ 4.67 ಲಕ್ಷ ಪ್ರವಾಸಿಗರು ದುಬೈಗೆ ಭೇಟಿ ನೀಡಿದ್ದು, ಶೇ  17ರಷ್ಟು ಏರಿಕೆ ಕಂಡು ಬಂದಿದೆ. 2016ರ ಮೊದಲ ಮೂರು ತಿಂಗಳಲ್ಲಿ ವಿದೇಶಗಳಿಂದ ಒಟ್ಟಾರೆ 41 ಲಕ್ಷ  ಪ್ರವಾಸಿಗರು ದುಬೈಗೆ ಭೇಟಿ ನೀಡಿದ್ದಾರೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ 5ರಷ್ಟು ಹೆಚ್ಚಾಗಿದೆ. ಪ್ರಾದೇಶಿಕ ವಲಯದಲ್ಲಿ ಪ್ರವಾಸಿಗರ ಸಂಖ್ಯೆ  ಹೆಚ್ಚಳದಲ್ಲಿ ಭಾರತೀಯರ ಕೊಡುಗೆ ಗಮನಾರ್ಹವಾಗಿದೆ. ಎರಡನೆ ಸ್ಥಾನದಲ್ಲಿ ಪಾಕಿಸ್ತಾನ ಎಂದು ದುಬೈ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

***
ಏರ್‌ಟೆಲ್‌ ಪಾವತಿ ಸರಳ
ಎಲ್ಲಾ ರೀತಿಯ ಪಾವತಿ ಸೌಲಭ್ಯವನ್ನು ತನ್ನ ಏರ್‌ಟೆಲ್‌ ಜಾಲತಾಣದಲ್ಲಿ ನೀಡಲು ಭಾರ್ತಿ ಏರ್‌ಟೆಲ್‌ ಕಂಪೆನಿ ನಿರ್ಧರಿಸಿದೆ.ಗ್ರಾಹಕರ ಪ್ರತಿಕ್ರಿಯೆ ಪಡೆದು ಜಾಲತಾಣದಲ್ಲಿ ಈ ಸೌಲಭ್ಯಗಳನ್ನು ನೀಡಲು ನಿರ್ಧರಿಸಿದ್ದಾಗಿ ಕಂಪೆನಿ ಹೇಳಿಕೊಂಡಿದೆ. ಸದ್ಯಕ್ಕೆ ಏರ್‌ಟೆಲ್‌ ಗ್ರಾಹಕರು ವಿವಿಧ ಮೊಬೈಲ್‌ ವಾಲೆಟ್‌ ಅಥವಾ ಡಿಜಿಟಲ್‌ ಸೌಲಭ್ಯಗಳ ಮೂಲಕವಷ್ಟೇ ಆನ್‌ಲೈನ್‌ ರಿಚಾರ್ಜ್‌ ಮತ್ತು ಡಿಟಿಎಚ್‌ ಖಾತೆಗೆ ಹಣ ತುಂಬಬಹುದಾಗಿದೆ.

ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವಂತೆಯೇ, ಆನ್‌ಲೈನ್ ರಿಚಾರ್ಜ್‌ ಬಗ್ಗೆ ಕೇಳಿಬರುತ್ತಿರುವ ದೂರಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಹೀಗಾಗಿ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಮತ್ತು ನೆಟ್‌ ಬ್ಯಾಂಕಿಂಗ್‌ ಸೌಲಭ್ಯಗಳ ಜತೆಗೆ ‘ಮೈ ಏರ್‌ಟೆಲ್‌ ಆ್ಯಪ್‌’ ನಂತಹ ಡಿಜಿಟಲ್‌ ಪಾವತಿ ವ್ಯವಸ್ಥೆ ಬಳಸಲೂ ಅವಕಾಶ ನೀಡಲಾಗಿದೆ. ಕಂಪೆನಿಯು ಭಾರತದಲ್ಲಿ 24 ಕೋಟಿ ಮೊಬೈಲ್‌ ಗ್ರಾಹಕರು, 36 ಲಕ್ಷ ಸ್ಥಿರ ದೂರವಾಣಿ ಮತ್ತು 1.1 ಕೋಟಿ ಡಿಟಿಎಚ್‌ ಗ್ರಾಹಕರನ್ನು ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.