ADVERTISEMENT

ಮೇಲ್‌ಗೆ ಎರಡು ಹಂತದ ರಕ್ಷಣೆ

ಪೃಥ್ವಿರಾಜ್ ಎಂ ಎಚ್
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST
ಮೇಲ್‌ಗೆ ಎರಡು ಹಂತದ ರಕ್ಷಣೆ
ಮೇಲ್‌ಗೆ ಎರಡು ಹಂತದ ರಕ್ಷಣೆ   

ಅಂತರ್ಜಾಲ ಬಳಕೆ ಹೆಚ್ಚಾದಂತೆ ಇ–ಲೋಕದಲ್ಲಿ ಕನ್ನ ಹಾಕುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಿಮಗೇ ಗೊತ್ತಿಲ್ಲದಂತೆ ನಿಮ್ಮ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಕದಿಯುತ್ತಾರೆ ಹ್ಯಾಕರ್ಸ್‌. ಗೂಗಲ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಂದರ್ ಪಿಚೈ, ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌, ಟ್ವಿಟರ್‌ನ ಜಾಕ್‌ ಡೋರ್ಸಿ ಅವರಂತಹ ಅಂತರ್ಜಾಲ ಕ್ಷೇತ್ರದ ದಿಗ್ಗಜರಿಗೂ ಹ್ಯಾಕಿಂಗ್‌ ಕಾಟ ತಪ್ಪಿಲ್ಲ. ಹೀಗಾಗಿ ಕಂಪ್ಯೂಟರ್‌, ಮೊಬೈಲ್‌, ವೈ–ಫೈ ಇತ್ಯಾದಿ ಯಾವುದೇ ರೀತಿಯ ಅಂತರ್ಜಾಲ ಪರಿಕರಗಳನ್ನು ಬಳಸಿದರೂ ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ಒಂದಿಷ್ಟು ಸಲಹೆ.

ಜಿ–ಮೇಲ್‌ಗೆ ಎರಡು ಹಂತದ ರಕ್ಷಣೆ
ಹಲವು ಕೆಲಸಗಳಿಗೆ ಮೇಲ್‌ ಬಳಕೆಯಾಗುತ್ತಿದೆ. ಇವಕ್ಕೆ ಕಠಿಣ ರಹಸ್ಯಪದಗಳಿಂದ (ಪಾಸ್‌ವರ್ಡ್‌) ರಕ್ಷಣೆ ಒದಗಿಸುತ್ತಿದ್ದೇವೆ. ಆದರೆ, ಕೇವಲ ಪಾಸ್‌ವರ್ಡ್‌ ರಕ್ಷಣೆ ಸಾಲದು ಎನ್ನುತ್ತಾರೆ ತಜ್ಞರು. ಇದಕ್ಕಾಗಿ ಈಚೆಗೆ ಟೂ ಸ್ಟೆಪ್‌ ವೆರಿಫಿಕೇಷನ್‌ ವ್ಯವಸ್ಥೆಯನ್ನು ಗೂಗಲ್ ಜಾರಿಗೆ ತಂದಿದೆ. ಇದರಲ್ಲಿ ಜಿ–ಮೇಲ್‌, ಖಾತೆ ತೆರೆಯಲು ಬಳಕೆದಾರರ ಹೆಸರು ಮತ್ತು ರಹಸ್ಯ ಪದಗಳನ್ನು ಕೀಲಿಸಿದ ನಂತರ ಖಾತೆಗಳ ಜತೆ ಜೋಡಿಸಿರುವ ಮೊಬೈಲ್‌ ಸಂಖ್ಯೆಗೆ ಒಟಿಪಿ (One Time Password) ಸಂಖ್ಯೆ ಬರುತ್ತದೆ. 

ಬೇರೊಬ್ಬರು ನಿಮ್ಮ ಖಾತೆಯ ಪಾಸ್‌ವರ್ಡ್‌ ಹ್ಯಾಕ್‌ ಮಾಡಿ ತೆರೆಯಲು ಪ್ರಯತ್ನಿಸಿದರೆ ಕೂಡಲೇ ನಿಮ್ಮ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬರುತ್ತದೆ. ಆಗ ನೀವು ಎಚ್ಚರ ವಹಿಸಬಹುದು. ಜೀ–ಮೇಲ್ ಟೂ ಸ್ಟೆಪ್‌ ವೆರಿಫಿಕೇಷನ್‌ ಮಾಡಲು https://www.google.com/landing/2step/ ಎಂದು ಜಾಲಪುಟದಲ್ಲಿ ಟೈಪ್ ಮಾಡಿ ಆ್ಯಕ್ಟಿವೇಟ್‌ ಮಾಡಿಕೊಳ್ಳಬಹುದು.

ADVERTISEMENT

ಅಥೆಂಟಿಕೇಟರ್
ಗೂಗಲ್‌ನ ಟೂ ಸ್ಟೆಪ್‌ ವೆರಿಫಿಕೇಷನ್ನಿನ ಅತ್ಯಾಧುನಿಕ ರೂಪವೆಂಬಂತೆ ಅಥೆಂಟಿಕೇಟರ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಗೂಗಲ್‌ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಮೊಬೈಲ್‌ನಲ್ಲಿ ಅಳವಡಿಸಿಕೊಂಡ ನಂತರ https://www.google.com/landing/2step/ ಲಿಂಕ್‌ಗೆ ಹೋದರೆ ಅಲ್ಲಿ Authenticator app ಎಂಬ ಆಯ್ಕೆ ಕಾಣಿಸುತ್ತದೆ.

ಇದರ ಕೆಳಗೆ ಕಾಣಿಸುವ ಸೆಟಪ್‌ ಆಪ್ಶನ್‌ನಲ್ಲಿ ಕ್ಯೂಆರ್ ಕೋಡ್‌ ಆಯ್ಕೆ ಇರುತ್ತದೆ. ಇದನ್ನು ನಿಮ್ಮ ಮೊಬೈಲ್‌ನ ಸ್ಕ್ಯಾನರ್ ಮೂಲಕ ಸ್ಕ್ಯಾನ್‌ ಮಾಡಿದರೆ ನಿಮ್ಮ ಜಿ–ಮೇಲ್‌ ಜೊತೆ ಅಂಥೆಟಿಕೇಟರ್ ತಂತ್ರಾಂಶ ಜೋಡಣೆಯಾಗುತ್ತದೆ.

ಇದಾದ ನಂತರ ನೀವು ಪ್ರತಿಬಾರಿ ಜೀ–ಮೇಲ್‌ ಖಾತೆ ತೆೆಯುವಾಗ ಆ್ಯಪ್‌ನಲ್ಲಿ ಜನರೇಟ್‌ ಆಗುವ ಕೋಡ್‌ ಅನ್ನು ಕಡ್ಡಾಯವಾಗಿ ಕೊಡಬೇಕು. ಇದರಲ್ಲಿ 30 ಸೆಕೆಂಡುಗಳಿಗೆ ಒಮ್ಮೆ ಕೋಡ್‌ ಜನರೇಟ್‌ ಆಗುತ್ತದೆ.

ಸಿಮ್‌ಗೆ ಬೀಗ
ಈ ರೀತಿ ಎರಡೂ ಹಂತದ ರಕ್ಷಣೆ ಒದಗಿಸಿದರೂ ನಿಮ್ಮ ಮೇಲ್‌ ಖಾತೆ ಸುರಕ್ಷಿತವಾಗಿದೆ ಎಂದು ಹೇಳಲಾಗದು. ಏಕೆಂದರೆ ಜಿ–ಮೇಲ್‌ ಖಾತೆಗೆ ಜೋಡಿಸಿರುವ ನಿಮ್ಮ ಮೊಬೈಲ್‌ ಅಥವಾ ಸಿಮ್‌ ಕಳುವಾದರೆ, ಖಾತೆ ತೆರೆಯಲು ಬೇಕಾಗುವ ಒಟಿಪಿ ಸಂಖ್ಯೆಗಳು ಬೇರೊಬ್ಬರ ಕೈ ಸೇರುತ್ತವೆ. ಇದಕ್ಕಾಗಿ ನಿಮ್ಮ ಮೊಬೈಲ್ ಸಿಮ್‌ಗೂ ರಕ್ಷಣೆ ಒದಗಿಸಬೇಕು.

ಪ್ರತಿ ಮೊಬೈಲ್‌ ಸಂಖ್ಯೆಗೂ ಡಿಫಾಲ್ಟ್‌ ಆಗಿ ಒಂದು ಸಿಮ್‌ಕಾರ್ಡ್‌ ಪಿನ್‌ ಇರುತ್ತದೆ. ಇದರ ಸಹಾಯದಿಂದ ನಿಮ್ಮ ಸಿಮ್‌ ಅನ್ನು ಲಾಕ್ ಮಾಡಬಹುದು. ನಂತರ ಪಿನ್‌ ಸಂಖ್ಯೆಯನ್ನು ಬದಲಾಯಿಸಿಕೊಳ್ಳುವ ಸೌಲಭ್ಯವೂ ಇದೆ. ಇದಕ್ಕಾಗಿ ನಿಮ್ಮ ಮೊಬೈಲ್‌ಫೋನ್‌ನ ಸೆಟ್ಟಿಂಗ್ಸ್‌ಗೆ ಹೋಗಿ ಸೆಕ್ಯೂರಿಟಿ ಸೆಟ್ಟಿಂಗ್ಸ್‌ ಅನ್ನು ಆಯ್ಕೆಮಾಡಿ ಅಲ್ಲಿ ಸೆಟಪ್‌ ಸಿಮ್‌ ಕಾರ್ಡ್ ಆಯ್ಕೆ ಇರುತ್ತದೆ ಅದನ್ನು ಎನೇಬಲ್‌ ಮಾಡಿ. ಇದನ್ನು ಬಳಸುವಾಗ ಬಹಳ ಎಚ್ಚರಿಕೆ ವಹಿಸಬೇಕು. ಏಕೆಂದರೆ ಇದರಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.