ADVERTISEMENT

ಮೊಟ್ಟೆ ಚಿಲ್ಲರೆ ದರ ದುಬಾರಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST
ಮೊಟ್ಟೆ ಚಿಲ್ಲರೆ ದರ ದುಬಾರಿ
ಮೊಟ್ಟೆ ಚಿಲ್ಲರೆ ದರ ದುಬಾರಿ   

ಬೆಂಗಳೂರು: ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆ ದರ ಈ ಬಾರಿ ಗರಿಷ್ಠ ಶೇ 40ರಷ್ಟು ದುಬಾರಿಯಾಗಿ ಪರಿಣಮಿಸಿದ್ದು ಬೆಂಗಳೂರಿನಲ್ಲಿ ಪ್ರತಿ ಮೊಟ್ಟೆ ಬೆಲೆ ₹ 6 ರಿಂದ ₹ 6.50ರವರೆಗೆ ಮಾರಾಟ ಆಗುತ್ತಿದೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿರುತ್ತದೆ. ಅದರಲ್ಲೂ ಉತ್ತರ ಭಾರತದಲ್ಲಿ ಬೇಡಿಕೆ ಪ್ರಮಾಣ ಗರಿಷ್ಠ ಮಟ್ಟದಲ್ಲಿ ಇರುತ್ತದೆ. ಹೀಗಾಗಿ ಬೆಲೆ ಏರುಗತಿಯಲ್ಲಿ ಇರುತ್ತದೆ. ಆದರೆ, ಈ ಬಾರಿ ಬೆಲೆ ಏರಿಕೆ ಪ್ರಮಾಣವು ಈ ಹಿಂದಿನ ದಾಖಲೆಗಳನ್ನು ಮೀರಿದೆ. ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಬೇಡಿಕೆ ಹೆಚ್ಚಲು ಇದೂ ಒಂದು ಕಾರಣವಾಗಿದೆ. ಇನ್ನೊಂದೆಡೆ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ದೇಶದ ಬಹುತೇಕ ಭಾಗಗಳಲ್ಲಿ ಈ ಬೆಲೆ ₹ 7ರಿಂದ 7.50ರವರೆಗೂ ಏರಿಕೆಯಾಗಿದೆ ಎಂದು ಕೋಳಿ ಸಾಕಾಣಿಕೆ ಒಕ್ಕೂಟದ ಮೂಲಗಳು ತಿಳಿಸಿವೆ.

‘ರಾಜ್ಯದಲ್ಲಿ ಇದುವರೆಗೆ ಪ್ರತಿ ದಿನ ಒಂದೂವರೆ ಕೋಟಿಗಳಷ್ಟು ಮೊಟ್ಟೆ ಉತ್ಪಾದನೆಯಾಗುತ್ತಿತ್ತು. ಈಗ ಅದು 1.35 ಕೋಟಿಗೆ ಇಳಿದಿದೆ’ ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ ಬೆಂಗಳೂರು ವಲಯದ ಅಧ್ಯಕ್ಷ ಜಿ. ಆರ್‌. ಸಾಯಿನಾಥ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ದೇಶದಾದ್ಯಂತ ಈಗ ಮೊಟ್ಟೆ ಉತ್ಪಾದನೆಯು ಶೇ 10ರಷ್ಟು ಕಡಿಮೆಯಾಗಿದೆ. ಹಳೆ ಕೋಳಿಗಳ ಮೊಟ್ಟೆ ಉತ್ಪಾದನೆ ಸಾಮರ್ಥ್ಯ ಕಡಿಮೆಯಾಗುತ್ತಿದ್ದಂತೆ ಅವುಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಕೋಳಿಗಳಿಗೂ ಉತ್ತಮ ಬೆಲೆ ಸಿಗುತ್ತಿರುವುದರಿಂದ ಕೋಳಿ ಸಾಕಾಣಿಕೆ
ದಾರರು ಅವುಗಳ ಮಾರಾಟಕ್ಕೆ ಆದ್ಯತೆ ನೀಡಿದ್ದಾರೆ. ಮೊಟ್ಟೆ ಉತ್ಪಾದನೆ ಕುಸಿತಕ್ಕೆ ಇದು ಒಂದು ಕಾರಣ’ ಎಂದು ಹೇಳಿದ್ದಾರೆ.

ಮುಂಬರುವ ದಿನಗಳಲ್ಲೂ ಮೊಟ್ಟೆ ಬೆಲೆ ಏರಿಕೆ ಪ್ರವೃತ್ತಿ ಇದೇ ರೀತಿ ಏರುಗತಿಯಲ್ಲಿ ಇರಲಿದೆ. ಮೊಟ್ಟೆ ಉತ್ಪಾದನೆಯು ಶೇ 25 ರಿಂದ ಶೇ 30ರಷ್ಟು ಕಡಿಮೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ವರ್ಷ ಮೊಟ್ಟೆಯ ಸಗಟು ಖರೀದಿ ಬೆಲೆ  ಕಡಿಮೆ ಇತ್ತು. ದುಬಾರಿ ಉತ್ಪಾದನಾ ವೆಚ್ಚದಿಂದಾಗಿ ಮೊಟ್ಟೆ ಉತ್ಪಾದನೆಗೆ ಉತ್ತಮ ಬೆಲೆ ಬಂದಿರಲಿಲ್ಲ. ಈ ಕಾರಣಕ್ಕೆ ಕೋಳಿ ಸಾಕಾಣಿಕೆ ಕೇಂದ್ರಗಳು ಪ್ರಸಕ್ತ ಸಾಲಿನಲ್ಲಿ ಮೊಟ್ಟೆ ಉತ್ಪಾದನೆ ತಗ್ಗಿಸಿವೆ. ಬೆಲೆ ದುಬಾರಿಯಾಗಲು ಇದು ವಿದ್ಯಮಾನವು ಕೂಡ ಗಣನೀಯ ಕೊಡುಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.