ADVERTISEMENT

ಮೋದಿ ವಿರುದ್ಧ ಮತ್ತೆ ಶೌರಿ ಟೀಕಾಸ್ತ್ರ

ಜನರು ಮನಮೋಹನ್‌ ಸಿಂಗ್‌ ಆಡಳಿತವನ್ನು ನೆನಪಿಸಿಕೊಳ್ಳುತ್ತಿದ್ದಾರೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2015, 7:08 IST
Last Updated 27 ಅಕ್ಟೋಬರ್ 2015, 7:08 IST

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿಯ ಹಿರಿಯ ನಾಯಕ, ಪತ್ರಕರ್ತ ಅರುಣ್ ಶೌರಿ ಅವರು, ‘ಕೇಂದ್ರದ ಆರ್ಥಿಕ ನೀತಿ ಗೊತ್ತು ಗುರಿಯಿಲ್ಲದ್ದು, ಜನರು ಮತ್ತೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಆಡಳಿತದ ದಿನಗಳನ್ನು ನೆನಪಿಸಿಕೊಳ್ಳುವಂತಾಗಿದೆ’ ಎಂದು ಹೇಳಿದ್ದಾರೆ.

ಮಂಗಳವಾರ ಇಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್ಥಿಕತೆಯನ್ನು ನಿರ್ವಹಿಸುವುದು ಎಂದರೆ ಶೀರ್ಷಿಕೆಯನ್ನು ನಿರ್ವಹಿಸಿದಂತೆ’ ಇದು ಅಂದುಕೊಂಡಷ್ಟು ಸುಲಭವಲ್ಲ ಎಂದರು. ಮೋದಿ ಆಡಳಿತದಲ್ಲಿ ಎಲ್ಲ ಅಧಿಕಾರವೂ ಕೇಂದ್ರೀಕೃತಗೊಂಡಿದೆ. ಈ ವ್ಯವಸ್ಥೆಯಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ದೇಶದ ಆರ್ಥಿಕ ಪ್ರಗತಿ ಆಮೆ ನಡಿಗೆಯಲ್ಲಿದೆ ಎನ್ನುವುದಕ್ಕಿಂತ  ಅದು ನಿದ್ರಿಸುತ್ತಿದೆ ಎನ್ನುವುದೇ ಹೆಚ್ಚು ಸೂಕ್ತ’ ಎಂದು ಅಭಿಪ್ರಾಯಪಟ್ಟರು.

ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಇವೆಲ್ಲವೂ ಯಾವುದೇ ಬದಲಾವಣೆಯಾಗದೆ ಹಿಂದಿನ ಸರ್ಕಾರದಲ್ಲಿ ಇದ್ದ ಹಾಗೆಯೇ ಇದೆ.  ಆರ್ಥಿಕತೆಗೆ ಸಂಬಂಧಿಸಿದಂತೆ ಮೋದಿ  ನೀಡಿರುವ ಭರವಸೆ ಯಾವುದೂ ಈಡೇರುತ್ತಿಲ್ಲ. ಉದ್ಯಮಿಗಳು ಸರ್ಕಾರದ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ. ನೈಜ ಪರಿಸ್ಥಿತಿ ಅವರಿಗೆ ಗೊತ್ತಿದೆ. ಆದರೆ,  ಸತ್ಯ ಬಚ್ಚಿಟ್ಟು, ಮಾಧ್ಯಮದ ಮುಂದೆ ಮಾತ್ರ ಮೋದಿ ಸರ್ಕಾರಕ್ಕೆ 10 ರಲ್ಲಿ 9 ಅಂಕ ನೀಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT