ADVERTISEMENT

ಯೂನಿಯನ್‌ ಬ್ಯಾಂಕ್‌ಗೆ ₹313 ಕೋಟಿ ವಂಚನೆ

ಹೈದರಾಬಾದ್‌ನಲ್ಲಿ ಸಿಬಿಐ ಶೋಧ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 20:41 IST
Last Updated 22 ಮಾರ್ಚ್ 2018, 20:41 IST

ನವದೆಹಲಿ: ಯೂನಿಯನ್‌ ಬ್ಯಾಂಕ್‌ಗೆ  ₹313.84 ಕೋಟಿ ವಂಚಿಸಿದ್ದಕ್ಕಾಗಿ ಹೈದರಾಬಾದ್‌ನ ‘ತೋಟೆಮ್‌ ಇನ್ಫ್ರಾಸ್ಟ್ರಕ್ಚರ್’ ಕಂಪನಿ ಮತ್ತು ಅದರ ಪ್ರವರ್ತಕರ ವಿರುದ್ಧ ಗುರುವಾರ ಸಿಬಿಐ ಪ್ರಕರಣ ದಾಖಲಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಕಚೇರಿ ಮತ್ತು ಪ್ರವರ್ತಕರ ನಿವಾಸಗಳು ಸೇರಿದಂತೆ ಹೈದರಾಬಾದ್‌ನ ಎರಡು ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು.

ಎಂಟು ಬ್ಯಾಂಕ್‌ಗಳ ಒಕ್ಕೂಟದ ಪರವಾಗಿ ಯೂನಿಯನ್‌ ಬ್ಯಾಂಕ್‌ ವಂಚನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿತ್ತು.

ADVERTISEMENT

ಈ ಕಂಪನಿ ರಸ್ತೆ, ನೀರಾವರಿ, ಕಟ್ಟಡ ನಿರ್ಮಾಣ ಯೋಜನೆಗಳನ್ನು ಕೈಗೊಂಡಿತ್ತು. ಜತೆಗೆ ವಿವಿಧ ಕಂಪನಿಗಳ ಉಪಗುತ್ತಿಗೆಯನ್ನು ಸಹ ಪಡೆದುಕೊಂಡಿತ್ತು.

‘ತೋಟೆಮ್‌ ಇನ್ಫ್ರಾಸ್ಟ್ರಕ್ಚರ್’ ಕಂಪನಿಯು ಎಂಟು ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಸುತ್ತಿತ್ತು. ಈ ಎಲ್ಲ ಬ್ಯಾಂಕ್‌ಗಳಿಗೆ ಒಟ್ಟು ₹1394.43 ಕೋಟಿ ಪಾವತಿಸಬೇಕಾಗಿದೆ. ಬಡ್ಡಿ ಮತ್ತು ಸಾಲದ ಕಂತು ಪಾವತಿಸದ ಕಾರಣ ಈ ಕಂಪನಿಯ ಖಾತೆಯನ್ನು 2012ರ ಜೂನ್‌ 30ರಂದು ವಸೂಲಾಗದ ಸಾಲದ ಪಟ್ಟಿಗೆ ಸೇರಿಸಲಾಗಿತ್ತು.

‘ಈ ಖಾಸಗಿ ಕಂಪನಿ ಎಂಟು ಬ್ಯಾಂಕ್‌ಗಳ ಒಕ್ಕೂಟವನ್ನು ಕೈಬಿಟ್ಟು ಬೇರೆ ಬ್ಯಾಂಕ್‌ಗಳಲ್ಲಿ ಖಾತೆ ತೆರದು ಹಣವನ್ನು ವರ್ಗಾಯಿಸಿತು. ವೇತನ ಪಾವತಿ ಮತ್ತು ಹೆಚ್ಚುವರಿ ವೆಚ್ಚದ ನೆಪದಲ್ಲಿ ಹಣವನ್ನು ವರ್ಗಾವಣೆ ಮಾಡಿದೆ’ ಎಂದು ಸಿಬಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.