ADVERTISEMENT

ರಫ್ತುದಾರರಿಗೆ ವಾರದೊಳಗೆ ತೆರಿಗೆ ಮರುಪಾವತಿ ಭರವಸೆ

ಪಿಟಿಐ
Published 20 ಮೇ 2017, 19:30 IST
Last Updated 20 ಮೇ 2017, 19:30 IST
ನಿರ್ಮಲಾ
ನಿರ್ಮಲಾ   

ನವದೆಹಲಿ: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಮುಂಗಡವಾಗಿ ತೆರಿಗೆ ಪಾವತಿಸುವ ರಫ್ತುದಾರರಿಗೆ ಒಂದು ವಾರದೊಳಗೆ ತೆರಿಗೆ ಮರುಪಾವತಿ ಮಾಡಲಾಗುವುದು’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್‌ ಭರವಸೆ ನೀಡಿದರು.

‘ಒಂದೊಮ್ಮೆ ತೆರಿಗೆ ಮರುಪಾವತಿ ವಿಳಂಬವಾದರೆ ಆ ಮೊತ್ತಕ್ಕೆ ಕೇಂದ್ರ ಸರ್ಕಾರವೇ ಶೇ 6 ರಷ್ಟು ಬಡ್ಡಿ ನೀಡಲಿದೆ’ ಎಂದು ಅವರು ತಿಳಿಸಿದರು. ಸದ್ಯ ಮರುಪಾವತಿ ಮೊತ್ತ ರಫ್ತುದಾರರ ಕೈಸೇರಲು ಕನಿಷ್ಠ ಒಂದು ತಿಂಗಳು ಹಿಡಿಯುತ್ತಿದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮೂರು ವರ್ಷಗಳ ಸಾಧನೆಯ ಮಾಹಿತಿ ಇರುವ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
‘ಜುಲೈ 1 ರಿಂದ ಹೊಸ ತೆರಿಗ ವ್ಯವಸ್ಥೆ ಜಾರಿಗೆ ಬರುತ್ತಿರುವುದರಿಂದ ತೆರಿಗೆ ಮರುಪಾವತಿ ವಿಷಯವನ್ನು ಜಿಎಸ್‌ಟಿ ಮಂಡಳಿ ಬಹಳ ಗಂಭೀರವಾಗಿ ಪರಿಗಣಿಸಿದೆ’ ಎಂದರು.

ಸಣ್ಣ ಮತ್ತು ಮಧ್ಯಮ ಪ್ರಮಾಣದ ರಫ್ತುದಾರರಿಗೆ ತೆರಿಗೆ ಪಾವತಿ ಸುಲಭವಾಗುವಂತೆ ವ್ಯವಸ್ಥೆಯೊಂದನ್ನು ರೂಪಿಸುವಂತೆ ಮಂಡಳಿಯನ್ನು ಕೇಳಲಾಗಿದೆ. ಈ ರಫ್ತುದಾರರಿಗೆ ಮುಂಗಡವಾಗಿ ತೆರಿಗೆ ಪಾವತಿಸುವುದು ಸಮಸ್ಯೆಯಾಗಲಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆ ನೀಡುವಂತೆಯೂ ಸಲಹೆ ನೀಡಲಾಗಿದೆ’ ಎಂದು ತಿಳಿಸಿದರು.

‘ಜಿಎಸ್‌ಟಿಯಿಂದ ತಯಾರಿಕಾ ವೆಚ್ಚ ತಗ್ಗಲಿದ್ದು, ರಫ್ತು ವಹಿವಾಟು ಹೆಚ್ಚಾಗಲಿದೆ. ರಫ್ತುದಾರರಿಗೆ ಜಾಗತಿಕ ಮಾರುಕಟ್ಟೆಯ ಪೈಪೋಟಿ ಎದುರಿಸಲು ಸಹ ಅನುಕೂಲವಾಗಲಿದೆ’ ಎಂದು ಹೇಳಿದರು.

‘ಶೀಘ್ರವೇ ಅಂತಿಮ ನಿರ್ಧಾರ’
ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯನ್ನು (ಎಫ್‌ಐಪಿಬಿ) ಮುಚ್ಚುವ ಬಗ್ಗೆ ಕೇಂದ್ರ ಸಚಿವ ಸಂಪುಟ ಶೀಘ್ರವೇ ಅಂತಿಮ ನಿರ್ಧಾರಕ್ಕೆ ಬರಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ತಿಳಿಸಿದರು.

ಆರ್ಥಿಕ ಉದಾರೀಕರಣದ ಉದ್ದೇಶದಿಂದ 1990ರಲ್ಲಿ ಮಂಡಳಿ ರಚನೆ ಮಾಡಲಾಗಿತ್ತು. ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಬರುವ ಪ್ರಸ್ತಾವನೆಗಳ ಪರಿಶೀಲನೆ ನಡೆಸಿ, ಸರ್ಕಾರದ ಒಪ್ಪಿಗೆಗಾಗಿ ಶಿಫಾರಸು ಮಾಡುವ ಕೆಲಸವನ್ನು ಈ ಮಂಡಳಿ ನಿರ್ವಹಿಸುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.