ADVERTISEMENT

ರೂ1,500 ಕೋಟಿ ಸಂಗ್ರಹ: ಸ್ಪೈಸ್‌ಜೆಟ್‌

ನಿರ್ದೇಶಕ ಸ್ಥಾನಕ್ಕೆ ಮಾರನ್‌ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 19:30 IST
Last Updated 30 ಜನವರಿ 2015, 19:30 IST

ನವದೆಹಲಿ (ಪಿಟಿಐ): ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆ ಸಾಲಪತ್ರಗಳ ಮೂಲಕ ರೂ1500 ಕೋಟಿ ಬಂಡವಾಳ ಸಂಗ್ರಹಿಸಲು ಸಜ್ಜಾಗಿದೆ.

ಇದೇ ವೇಳೆ, ಸ್ಪೈಸ್‌ಜೆಟ್‌ನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಕಲಾನಿಧಿ ಮಾರನ್‌ ರಾಜೀನಾಮೆ ನೀಡಿದ್ದಾರೆ. ತಮ್ಮ ಕುಟುಂಬದ ಬಳಿ ಇದ್ದ ಸಂಸ್ಥೆಯ  ಷೇರುಗಳನ್ನು ಸಂಸ್ಥೆಯ ಸಂಸ್ಥಾಪಕ ಅಜಯ್‌  ಸಿಂಗ್‌ ಅವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ.

ಹೊಸದಾಗಿ ಬಂಡವಾಳ ಸಂಗ್ರಹಿಸುವುದು ಮತ್ತು ಮಾರನ್‌ ಕುಟುಂಬದ ವಶದಲ್ಲಿರುವ ಎಲ್ಲಾ ಷೇರು­ಗಳನ್ನು ಒಟ್ಟಾಗಿ ಅಜಯ್‌ ಸಿಂಗ್‌ ಅವರಿಗೆ ಮಾರಾಟ ಮಾಡುವ ಎರಡೂ ಪ್ರಸ್ತಾವನೆಗಳಿಗೆ ಇಲ್ಲಿ ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.
ಮಾರನ್‌ ಕುಟುಂಬದಲ್ಲಿದ್ದ ಸಂಸ್ಥೆಯ ಶೇ58.46­­ರಷ್ಟು (ರೂ700 ಕೋಟಿ ಮೌಲ್ಯದ) ಷೇರು­ಗಳು ಸದ್ಯ­ದಲ್ಲೇ ಅಜಯ್‌ ಸಿಂಗ್‌ ಅವರಿಗೆ ವರ್ಗಾವಣೆ­ಗೊಳ್ಳಲಿವೆ.

ಮತ್ತೆ ಹೂಡಿಕೆ
ಈ ಷೇರುಗಳ ಮಾರಾಟದಿಂದ ಬರುವ ಹಣದಲ್ಲಿ ರೂ375 ಕೋಟಿಯನ್ನು ‘ಪರಿವರ್ತಿಸಲಾಗದ ಷೇರುಗಳ’ ಮೂಲಕ ಮತ್ತೆ  ಸ್ಪೈಸ್‌ಜೆಟ್‌ನಲ್ಲಿಯೇ ಹೂಡಿಕೆ ಮಾಡಲು ಮಾರನ್‌ ನಿರ್ಧರಿಸಿದ್ದಾರೆ. ಮಾರನ್‌ ಅವರ ಹೂಡಿಕೆ ಮತ್ತು ಸಾಲಪತ್ರಗಳ ವಿತರಣೆ ಸೇರಿದಂತೆ ಸ್ಪೈಸ್‌ಜೆಟ್‌ಗೆ ಹೊಸದಾಗಿ ಒಟ್ಟಾರೆಯಾಗಿ ರೂ1,875 ಕೋಟಿ ಬಂಡವಾಳ ದೊರೆಯಲಿದೆ.

ಸಂಸ್ಥೆಯ ಮಾಲಿಕ ಅಜಯ್‌ ಸಿಂಗ್‌ ಅವರೂ ಮತ್ತಷ್ಟು ಬಂಡವಾಳ ಹೂಡಲಿದ್ದಾರೆ. ಅಲ್ಲದೇ, ವಿದೇಶಿ ಹೂಡಿಕೆಗೂ ಅವಕಾಶ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕಚೇರಿ ಸ್ಥಳಾಂತರ
ತಮಿಳುನಾಡಿನಲ್ಲಿರುವ ಸ್ಪೈಸ್‌ಜೆಟ್‌ನ ಮುಖ್ಯ ಕಚೇರಿಯನ್ನು ದೆಹಲಿಗೆ ಬದಲಾಯಿಸುವುದಕ್ಕೂ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.

ರಾಜೀನಾಮೆ
ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಕಲಾನಿಧಿ ಮಾರನ್‌, ಅವರ ಪತ್ನಿ ಕಾವೇರಿ ಕಲಾನಿಧಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್‌.ನಟರಾಜನ್‌ ರಾಜೀನಾಮೆ ನೀಡಿದ್ದಾರೆ.

ಷೇರುಗಳ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ ನಡೆದಿರುವ ಒಪ್ಪಂದಗಳ ಬಗ್ಗೆ ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ (ಬಿಎಸ್‌ಇ) ಸ್ಪೈಸ್‌ಜೆಟ್‌ ಕಂಪೆನಿ ಶುಕ್ರವಾರ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.