ADVERTISEMENT

ಲೆಕ್ಕಪತ್ರಗಳ ಪರಿಶೀಲನೆಗೆ ಆನ್‌ಲೈನ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 19:15 IST
Last Updated 20 ಮಾರ್ಚ್ 2018, 19:15 IST

ಬೆಂಗಳೂರು: ‘ಎಪಿಎಂಸಿ ವರ್ತಕರ ವ್ಯವಹಾರದ ಲೆಕ್ಕಪತ್ರಗಳ ಪರಿಶೀಲನೆಗೆ ಸಂಪೂರ್ಣ ಆನ್‌ಲೈನ್‌ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಇದು ಮೇ ಅಂತ್ಯದೊಳಗೆ ಜಾರಿಗೆ ಬರಲಿದೆ’ ಎಂದು ಸಹಕಾರ ಇಲಾಖೆ ಕಾರ್ಯದರ್ಶಿ ಪಿ.ಹೇಮಲತಾ ತಿಳಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿ) ಆಯೋಜಿಸಿದ್ದ ಎಪಿಎಂಸಿ ಸಮಸ್ಯೆಗಳು ಮತ್ತು ಸವಾಲು ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ವಿಚಕ್ಷಣ ದಳದ ತಪಾಸಣೆ ಮತ್ತು ಅನಗತ್ಯ ಪರಿಶೀಲನೆ ಹೆಸರಿನಲ್ಲಿ ಅಧಿಕಾರಿಗಳು ನಿತ್ಯ ನೀಡುತ್ತಿರುವ ಕಿರುಕುಳದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಇದು ನಿಲ್ಲಬೇಕು’ ಎಂದು ವರ್ತಕ ಪ್ರತಿನಿಧಿಗಳು ಮನವಿ ಮಾಡಿದರು.

ADVERTISEMENT

‘ಲೆಕ್ಕ ಪರಿಶೀಲನೆಯಲ್ಲಿ ಅಧಿಕಾರಿಗಳ ಅನವಶ್ಯ ಹಸ್ತಕ್ಷೇಪ ತಗ್ಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಮಲತಾ ತಿಳಿಸಿದರು. ಇಲಾಖಾ ಆಡಳಿತಾತ್ಮಕ ವಿಷಯಗಳಲ್ಲಿ ಅಗತ್ಯ ಬದಲಾವಣೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಬೇರೆ ಇಲಾಖೆಗಳಿಗೆ ಮತ್ತು ಇಲಾಖಾ ನೀತಿಗಳಿಗೆ ಸಂಬಂಧಿಸಿ ಅಗತ್ಯ ಮಾರ್ಪಾಡು ಮಾಡಲು ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

‘ಎಪಿಎಂಸಿಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯ ಕೊರತೆ ನಿವಾರಿಸಲು ತಕ್ಷಣ ಗಮನ ಹರಿಸಬೇಕು. ಆದ್ಯತಾ ಸೇವೆಯಾಗಿ ಇವುಗಳನ್ನು ಒದಗಿಸಬೇಕು’ ಎಂದರು.

ಲೆಕ್ಕಪತ್ರ, ದಾಖಲೆಗಳನ್ನು ಸಲ್ಲಿಸಲು, ಪರವಾನಗಿ ನವೀಕರಣಕ್ಕಾಗಿ ವರ್ತಕರಿಗೆ ಪ್ರತ್ಯೇಕ ಅಂತರ್ಜಾಲ ತಾಣ ಆರಂಭಿಸಲಾಗುವುದು. ಅಲ್ಲದೆ, ಡಿಜಿಟಲ್‌ ಸಹಿ ಒಳಗೊಂಡ ಪರವಾನಗಿ ನೀಡುವ ಚಿಂತನೆ ಇದೆ’ ಎಂದು ಕೃಷಿ ಮಾರುಕಟ್ಟೆ ನಿರ್ದೇಶಕ ಎಂ.ಬಿ.ರಾಜೇಶಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.