ADVERTISEMENT

‘ವಯ ವಂದನಾ’ ಯೋಜನೆ; ನಿವೃತ್ತರಿಗೆ ಎಷ್ಟು ಪ್ರಯೋಜನ?

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST
ಪಿಂಚಣಿದಾರರು    – ಸಾಂದರ್ಭಿಕ ಚಿತ್ರ
ಪಿಂಚಣಿದಾರರು – ಸಾಂದರ್ಭಿಕ ಚಿತ್ರ   

ಕೇಂದ್ರ ಸರ್ಕಾರ ಈಚೆಗೆ ಜಾರಿಗೆ ತಂದಿರುವ ‘ಪ್ರಧಾನಮಂತ್ರಿ ವಯ ವಂದನಾ ಯೋಜನೆ’ಯಲ್ಲಿ (ಪಿಎಂವಿವಿವೈ)  ಅರವತ್ತು ವರ್ಷ ಮೀರಿದ ಹಿರಿಯ ನಾಗರಿಕರು ಹಣ ಹೂಡಿಕೆ ಮಾಡಬಹುದು. ಈ ಯೋಜನೆಯ ವಿಶೇಷತೆ ಏನೆಂದರೆ, ಹಿರಿಯ ನಾಗರಿಕರೊಬ್ಬರು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದರೆ, ಮರು ತಿಂಗಳಿನಿಂದಲೇ ಆರಂಭಿಸಿ ಹತ್ತು ವರ್ಷಗಳವರೆಗೆ ಪಿಂಚಣಿ ಪಡೆಯಬಹುದು.

ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಜುಲೈ 21ರಂದು ಈ ಯೋಜನೆಯನ್ನು ಘೋಷಿಸಿದ್ದರು. ವಾಸ್ತವದಲ್ಲಿ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) 2017ರ ಮೇ 4ರಿಂದಲೇ ಇದನ್ನು ಜಾರಿ ಮಾಡಿದೆ. ಎಲ್‌ಐಸಿ, ಈ ಯೋಜನೆಯನ್ನು ಜಾರಿ ಮಾಡುವ ಏಕೈಕ ಸಂಸ್ಥೆಯಾಗಿದೆ. 2018ರ ಮೇ 3ರವರೆಗೆ ಈ ಯೋಜನೆಯಲ್ಲಿ ಹಣ ಹೂಡಿಕೆಗೆ ಅವಕಾಶ ನೀಡಲಾಗಿದೆ.

60ವರ್ಷ ಮೀರಿದ ಹಿರಿಯ ನಾಗರಿಕರಿಗೆ ನಿಗದಿತ ಮಾಸಿಕ ಪಿಂಚಣಿ ನೀಡುವ ಸಲುವಾಗಿ 2014ರ ಆಗಸ್ಟ್‌ ತಿಂಗಳಲ್ಲಿ ಸರ್ಕಾರ ‘ವರಿಷ್ಠ ಬಿಮಾ ಯೋಜನೆ’ ಜಾರಿ ಮಾಡಿತ್ತು. ಈಗ ಘೋಷಿಸಿರುವ ಪಿಎಂವಿವಿವೈ ಯೋಜನೆಯ ಉದ್ದೇಶವೂ ಅದೇ ಆಗಿದೆ. ದಿನೇ ದಿನೇ ಬಡ್ಡಿ ದರಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಈ ಯೋಜನೆ ನಿಜವಾಗಿಯೂ ಲಾಭದಾಯಕವೇ ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈ ಯೋಜನೆಯ ಕೆಲವು ಸಂಗತಿಗಳತ್ತ ಇಲ್ಲಿ ಗಮನ ಹರಿಸಲಾಗಿದೆ.

ADVERTISEMENT

ಯೋಜನೆಯ ವಿಶೇಷತೆಗಳು
ಹಿರಿಯ ನಾಗರಿಕರೊಬ್ಬರು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ ಮರು ತಿಂಗಳಿನಿಂದಲೇ ಪಿಂಚಣಿ ಬರಲು ಆರಂಭವಾಗುತ್ತದೆ. ಹೂಡಿಕೆ ಮಾಡಿದ ದಿನದಿಂದ ಆರಂಭಿಸಿ ಮುಂದಿನ ಹತ್ತು ವರ್ಷಗಳವರೆಗೆ ಪಿಂಚಣಿ ಬರುತ್ತಿರುತ್ತದೆ.

ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಹೀಗೆ ಯಾವಾಗ ಪಿಂಚಣಿ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಹೂಡಿಕೆದಾರರಿಗೆ ಅವಕಾಶವಿದೆ. ಈ ಆಯ್ಕೆಯ ಆಧಾರದಲ್ಲಿ ಪಿಂಚಣಿಯ ಮೊತ್ತ ನಿರ್ಧಾರವಾಗುತ್ತದೆ. ಹೂಡಿಕೆದಾರರು ಮಾಸಿಕ ಪಿಂಚಣಿ ಆಯ್ಕೆ ಮಾಡಿಕೊಂಡರೆ ಶೇ 8 ರಷ್ಟು ಹಾಗೂ ವಾರ್ಷಿಕ ಪಿಂಚಣಿ ಆಯ್ಕೆ ಮಾಡಿಕೊಂಡರೆ ರಿಂದ ಶೇ 8.30ರಷ್ಟು ಆದಾಯದ ಖಚಿತತೆಯನ್ನು ಯೋಜನೆ ನೀಡುತ್ತದೆ.

ಒಂದು ಉದಾಹರಣೆ ನೀಡುವುದಾದರೆ; ಹೂಡಿಕೆದಾರರಿಗೆ ಮಾಸಿಕ ₹ 1000 ಪಿಂಚಣಿ ಬೇಕು ಎಂದಾದರೆ ಕನಿಷ್ಠ ₹ 1.50 ಲಕ್ಷ ಹೂಡಿಕೆ ಮಾಡಬೇಕು. ವಾರ್ಷಿಕ ₹ 12,000 ಪಿಂಚಣಿ ಬೇಕಾದರೆ ₹ 1,44,578 ಹೂಡಿಕೆ ಮಾಡಬೇಕು.

ಒಬ್ಬ ಹೂಡಿಕೆದಾರರಿಗೆ ಗರಿಷ್ಠ ₹ 7.50ಲಕ್ಷ ಹೂಡಿಕೆಯ ಮಿತಿ ಇದೆ. ಇಷ್ಟು ಹಣ ಹೂಡಿಕೆ ಮಾಡಿದರೆ  ಪ್ರತಿ ತಿಂಗಳೂ ₹ 5,000 ಪಿಂಚಣಿ ಪಡೆಯಬಹುದು (ವಾರ್ಷಿಕ ₹ 60,000 ಪಿಂಚಣಿಗೆ ₹7,22,892 ಹೂಡಿಕೆ ಮಾಡಬೇಕು). ಆದರೆ, ಈ ₹ 7.50ಲಕ್ಷ ಗರಿಷ್ಠ ಹೂಡಿಕೆ ಮಿತಿ ಇಡೀ ಕುಟುಂಬಕ್ಕೆ ಅನ್ವಯಿಸುತ್ತದೆ (ಪತಿ,ಪತ್ನಿ ಮತ್ತು ಅವಲಂಬಿತರು).

ಹೂಡಿಕೆದಾರ (ಪಿಂಚಣಿದಾರ) ಅಥವಾ ಅವರ ಪತಿ/ಪತ್ನಿ ಗಂಭೀರ ಕಾಯಿಲೆಗೆ ತುತ್ತಾರೆ ಅವಧಿಗೂ ಪೂರ್ವದಲ್ಲಿ ಹಣವನ್ನು ವಾಪಸ್‌ ಪಡೆಯಲು ಅವಕಾಶ ಇದೆ. ಇಂಥ ಸಂದರ್ಭದಲ್ಲಿ ಮೂಲ ಹೂಡಿಕೆಯ ಶೇ 98ರಷ್ಟು ಹಣವನ್ನು ಮಾತ್ರ ಹಿಂತಿರುಗಿಸಲಾಗುತ್ತದೆ.

ಹತ್ತು ವರ್ಷ ಪೂರ್ಣಗೊಂಡ ಬಳಿಕ ಮೂಲ ಹೂಡಿಕೆಯ ಹಣವನ್ನು ಹೂಡಿಕೆದಾರರಿಗೆ ಮರಳಿಸಲಾಗುತ್ತದೆ. ಒಂದು ವೇಳೆ ಈ ಅವಧಿಯಲ್ಲಿ ಹೂಡಿಕೆದಾರರು ನಿಧನ ಹೊಂದಿದರೆ ಅವರು ನಾಮನಿರ್ದೇಶನ ಮಾಡಿದ ವ್ಯಕ್ತಿಗೆ ಹಣ ಸಂದಾಯವಾಗುತ್ತದೆ. ಹೂಡಿಕೆ ಮಾಡಿದ ಮೂರು ವರ್ಷಗಳ ಬಳಿಕ ಹೂಡಿಕೆ ಮೊತ್ತದ ಶೇ 75ರಷ್ಟನ್ನು ಸಾಲದ ರೂಪದಲ್ಲಿ ಪಡೆಯಲು ಸಹ ಅವಕಾಶ ಇದೆ.

ಎಲ್‌ಐಸಿಯಿಂದ ಆನ್‌ ಲೈನ್‌ ಅಥವಾ ಆಫ್‌ ಲೈನ್‌ ಮೂಲಕ ಈ ಯೋಜನೆಯಲ್ಲಿ ಹೂಡಿಕೆಗೆ ಅವಕಾಶ ಇದೆ. ಈ ಯೋಜನೆ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿದೆ.‌ ಇವಿಷ್ಟು ಯೋಜನೆಯ ಮುಖ್ಯಾಂಶಗಳು. ಈಗ ಈ ಯೋಜನೆ ನಿಜವಾಗಿಯೂ ಉತ್ತಮವಾಗಿದೆಯೇ ಎಂಬ ಬಗ್ಗೆ ಗಮನ ಹರಿಸೋಣ.

ಇದಕ್ಕೆ ಉತ್ತರ ಕಂಡುಕೊಳ್ಳಬೇಕಾದರೆ ಇದನ್ನು ಇಂಥದ್ದೇ ಇನ್ನೊಂದು ಯೋಜನೆಯ ಜೊತೆ ಹೋಲಿಸಬೇಕಾಗುತ್ತದೆ. ಅದಕ್ಕಾಗಿ ಅಂಚೆ ಕಚೇರಿಗಳಲ್ಲಿ ಲಭ್ಯವಿರುವ ‘ಹಿರಿಯ ನಾಗರಿಕರ ಉಳಿತಾಯ ಯೋಜನೆ’ಯ ಜೊತೆ ಇದರ ಹೋಲಿಕೆ ಮಾಡುವುದು ಸೂಕ್ತ.

ಅಂಚೆ ಕಚೇರಿಯ ಉಳಿತಾಯ ಯೋಜನೆಗೆ ಆದಾಯ ತೆರಿಗೆ 80ಸಿ ಅಡಿ ರಿಯಾಯ್ತಿಗಳಿವೆ. ಆದರೆ, ‘ಪಿಎಂವಿವಿವೈ’ಗೆ ಈ ರಿಯಾಯ್ತಿ ಅನ್ವಯವಾಗುವುದಿಲ್ಲ. ಆದರೆ, ಪಿಂಚಣಿಯ ಅವಧಿ ಹಾಗೂ ಕಂತುಗಳ ಆಯ್ಕೆ ವಿಚಾರದಲ್ಲಿ ‘ಪಿಎಂವಿವಿವೈ’ ಹೆಚ್ಚು ಅನುಕೂಲಕರವಾಗಿದೆ.

ಯೋಜನೆಯ ಮಿತಿಗಳು
‘ಪಿಎಂವಿವಿವೈ’ ಹೂಡಿಕೆಯ ಗರಿಷ್ಠ ಮಿತಿ ₹ 7.50ಲಕ್ಷ ಇದ್ದು, ಮಾಸಿಕ ಗರಿಷ್ಠ ₹ 5,000 ಪಿಂಚಣಿ ಪಡೆಯಲು ಮಾತ್ರ ಅವಕಾಶ ಇದೆ. ಬೆಲೆ ಏರಿಕೆಯಾಗುತ್ತಿರುವ ಇಂದಿನ ದಿನಮಾನದಲ್ಲಿ ಈ ಮೊತ್ತ ಒಂದು ಕುಟುಂಬದ ನಿರ್ವಹಣೆಗೆ ಸಾಕಾಗದು. ₹ 7.50ಲಕ್ಷವನ್ನು ಇಡೀ ಕುಟುಂಬದ ಹೂಡಿಕೆಯ ಗರಿಷ್ಠ ಮಿತಿ ಎಂದು ನಿರ್ಣಯಿಸಿರುವುದೂ ಇನ್ನೊಂದು ಕೊರತೆಯಾಗಿ ಕಾಣುತ್ತದೆ. ಈ ಮಿತಿಯನ್ನು ₹ 15ಲಕ್ಷಕ್ಕೆ ಏರಿಸಿದ್ದರೆ ಹೂಡಿಕೆದಾರರು ಗೌರವಯುತ ಎನ್ನಬಹುದಾದ ₹ 10,000 ಪಿಂಚಣಿ ಪಡೆಯಬಹುದಾಗಿತ್ತು.

ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ ನೀಡುವುದು ಸರ್ಕಾರದ ಉದ್ದೇಶವಾಗಿರುವುದರಿಂದ ಯೋಜನೆಯ ಅವಧಿಯನ್ನು 10 ವರ್ಷಕ್ಕೆ ಮಿತಿಗೊಳಿಸಿರುವುದೂ ಒಂದು ಕೊರತೆಯಾಗಿ ಕಾಣುತ್ತದೆ.

ನಮ್ಮ ದೇಶದ ಜನರ ಜೀವಿತಾವಧಿ ಏರಿಕೆ ಆಗುತ್ತಲೇ ಇದೆ. ಹೂಡಿಕೆದಾರರು ಒಂದು ವೇಳೆ ಈ ಅವಧಿಗಿಂತಲೂ ಹೆಚ್ಚು ಕಾಲ ಬದುಕಿದ್ದರೆ ಆಗ ಏನು ಮಾಡಬೇಕು? ಬಡ್ಡಿ ದರ ಕುಸಿಯುತ್ತಿರುವ ದಿನಗಳಲ್ಲಿ ವಯೋವೃದ್ಧ ನಾಗರಿಕರು ಹಣವನ್ನು ಬೇರೆ ಎಲ್ಲಾದರೂ ಹೂಡಿಕೆ ಮಾಡಬೇಕಾದ ಒತ್ತಡಕ್ಕೆ ಸಿಲುಕಬಹುದು. ಹಿರಿಯ ನಾಗರಿಕರು ಇಂಥ ಸಂಕಷ್ಟಕ್ಕೆ ಸಿಲುಕಲು ಸರ್ಕಾರ ಅವಕಾಶ ಕೊಡಬೇಕೇ?

ಯೋಜನೆಯಲ್ಲಿ ಕಣ್ಣಿಗೆ ರಾಚುವಂತಿರುವ ಅಂಶವೆಂದರೆ 80ಸಿ ಅಡಿ ರಿಯಾಯ್ತಿಗಳನ್ನು ನೀಡದಿರುವುದು. ಈ ಹೂಡಿಕೆಯು ರಿಯಾಯ್ತಿ, ರಿಯಾಯ್ತಿ, ರಿಯಾಯ್ತಿ  ನಿಯಮದಡಿ ಬರುತ್ತದೆ.

ಇಂಥ ಸನ್ನಿವೇಶದಲ್ಲಿ ಹಿರಿಯ ನಾಗರಿಕರು ಅನುಸರಿಸಬಹುದಾದ ಕ್ರಮವೆಂದರೆ, ‘ಪಿಎಂವಿವಿವೈ’ ಯೋಜನೆಯಲ್ಲಿ ₹ 7.50ಲಕ್ಷ ಹೂಡಿಕೆ ಮಾಡುವುದು, ಜೊತೆಗೆ ಅಂಚೆ ಕಚೇರಿ ಉಳಿತಾಯ ಯೋಜನೆಯಲ್ಲಿ ₹ 15 ಲಕ್ಷ ಹೂಡಿಕೆ ಮಾಡುವುದು. ಇದರಿಂದ ಮಾಸಿಕ ₹ 15,000ರವರೆಗೆ ಪಿಂಚಣಿ ಪಡೆಯಬಹುದು.

ಅಂಕಿಅಂಶಗಳು

₹ 7.50 ಲಕ್ಷ

ಗರಿಷ್ಠ ಹೂಡಿಕೆಯ ಮಿತಿ

₹ 5,000

ಪ್ರತಿ ತಿಂಗಳ ಪಿಂಚಣಿ ಮೊತ್ತ

ಪ್ರತಿ ತಿಂಗಳ ₹ 1000 ಪಿಂಚಣಿಗೆ ಕನಿಷ್ಠ ₹ 1.50 ಲಕ್ಷ ಹೂಡಿಕೆ

* * 

ವೈಶಿಷ್ಟ್ಯತೆಗಳು

ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ ಮರು ತಿಂಗಳಿನಿಂದಲೇ ಪಿಂಚಣಿ ಜಾರಿ

10 ವರ್ಷಗಳವರೆಗೆ ಪಿಂಚಣಿ

ತಿಂಗಳ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಪಿಂಚಣಿ ಆಯ್ಕೆ ಅವಕಾಶ

ತಿಂಗಳ ಪಿಂಚಣಿಗೆ ಶೇ 8ರಷ್ಟು ಬಡ್ಡಿ

ವಾರ್ಷಿಕ ಪಿಂಚಣಿಗೆ ಶೇ 8.5 ಬಡ್ಡಿ

10 ವರ್ಷಗಳ ನಂತರ ಹೂಡಿಕೆ ಹಣ ವಾಪಸ್‌

ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ

ಮಿತಿಗಳು

ಅನ್ವಯವಾಗದ ಆದಾಯ ತೆರಿಗೆಯ 80ಸಿ ರಿಯಾಯ್ತಿಗಳು

ವಸಂತ ಜಿ. ಹೆಗಡೆ
(ನಿವೃತ್ತ ಬ್ಯಾಂಕ್‌ ಉದ್ಯೋಗಿ, ಬೆಂಗಳೂರಿನ ಮಣಿಪಾಲ್‌ ಅಕಾಡೆಮಿ ಆಫ್‌ ಬ್ಯಾಂಕಿಂಗ್‌ನಲ್ಲಿ ಬೋಧಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.