ADVERTISEMENT

ವಸ್ತ್ರೋದ್ಯಮದಲ್ಲಿ ‘ಸೂಟು’

ಜೋಮನ್ ವರ್ಗಿಸ್
Published 15 ಏಪ್ರಿಲ್ 2014, 19:30 IST
Last Updated 15 ಏಪ್ರಿಲ್ 2014, 19:30 IST
ಚಿತ್ರಗಳು: ಎಂ.ಎಸ್‌.ಮಂಜುನಾಥ್‌
ಚಿತ್ರಗಳು: ಎಂ.ಎಸ್‌.ಮಂಜುನಾಥ್‌   

ಕೃ ಷಿ ಹೊರತುಪಡಿಸಿದರೆ ದೇಶದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗಾವಕಾಶ ನೀಡಿರುವ ಕ್ಷೇತ್ರ ಸಿದ್ಧ ಉಡುಪು ಉದ್ಯಮ.  ನೇರವಾಗಿ 3.50 ಕೋಟಿ ಜನರಿಗೆ ಉದ್ಯೋಗ ಒದಗಿಸಿದೆ. ದೇಶದ ಒಟ್ಟಾರೆ ರಫ್ತಿನಲ್ಲಿ ಈ ವಲಯದ ಪಾಲು ಶೇ 11ರಷ್ಟಿದೆ. ಅಲ್ಲದೇ ‘ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ’ಗೆ (ಜಿಡಿಪಿ) ಶೇ 4ರಷ್ಟು ಕೊಡುಗೆಯನ್ನೂ ನೀಡುತ್ತಿದೆ.

ಚಿಕ್ಕ ಚಿಕ್ಕ ಘಟಕಗಳನ್ನೂ ಲೆಕ್ಕಕ್ಕೆ ತೆಗೆದುಕೊಂ­ಡರೆ ರಾಜ್ಯದಲ್ಲಿರುವ ಸಿದ್ಧ ಉಡುಪು ತಯಾರಿಕಾ ಘಟಕಗಳ ಸಂಖ್ಯೆ ನಾಲ್ಕು ಸಾವಿರ ದಾಟಬಹುದು. ಇದರಲ್ಲಿ 2500ಕ್ಕೂ ಹೆಚ್ಚು ಘಟಕಗಳು ಬೆಂಗಳೂರಿನಲ್ಲಿಯೇ ನೆಲೆಗೊಂಡಿದ್ದು, ಸುಮಾರು ಎಂಟು ಲಕ್ಷ ಜನರಿಗೆ ಉದ್ಯೋಗ ಒದಗಿಸಿದೆ.  ವಾರ್ಷಿಕ ₨30 ಸಾವಿರ ಕೋಟಿ­ಗಿಂತ ಹೆಚ್ಚಿನ ಮೊತ್ತದ ಸಿದ್ಧ ಉಡುಪುಗಳು ರಾಜ್ಯದಿಂದ ಅಮೆರಿಕ, ಯುರೋಪ್‌ ಸೇರಿದಂತೆ ಅಂತರ­ರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತಾ­ಗುತ್ತವೆ. ಈ ಉದ್ಯಮ ಸ್ಥಳೀಯ ಮಾರು­ಕಟ್ಟೆಗಿಂತ ರಫ್ತು ವಹಿವಾಟನ್ನೇ  ಮುಖ್ಯ­ವಾಗಿ ನೆಚ್ಚಿಕೊಂ­ಡಿದೆ ಎನ್ನು­ತ್ತಾರೆ   ಕರ್ನಾಟಕ ಹೊಸೈರಿ ಅಂಡ್‌ ಗಾರ್ಮೆ­ಂಟ್‌ ಅಸೋಷಿಯೇಷನ್‌ನ ಮಾಜಿ ಅಧ್ಯಕ್ಷ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ ಸ್ಥಳೀಯ ಸಂಘಟನೆ ಸಮಿತಿ ಸಹ ಅಧ್ಯಕ್ಷ ಪಿ.ಎಚ್‌.ರಾಜ್‌ಪುರೋಹಿತ್‌.
ಬ್ರಿಟಿಷರ ಕಾಲದಲ್ಲಿ ಭಾರತ ಪ್ರವೇಶಿಸಿದ ಸೂಟು ಈ ಮೊದಲು ಉನ್ನತ ಸ್ತರದ ಅಧಿಕಾರಿ ವರ್ಗದಲ್ಲಿ ಮಾತ್ರವೇ ಕಾಣ ಬರುತ್ತಿತ್ತು. ದಿನ­ಕಳೆದಂತೆ ಕಾರ್ಪೊರೇಟ್‌ ಪ್ರಪಂಚದಲ್ಲಿ ಗಮನ ಸೆಳೆಯಲಾರಂಭಿಸಿತು.   ನಂತರದಲ್ಲಿ ಕಂಪೆನಿಗಳ ಕಾರ್ಯನಿರ್ವಹಣೆ ಕ್ಷೇತ್ರದಲ್ಲಿ ಪುರುಷ, ಮಹಿಳೆ ಎಂಬ ಭೇದವಿಲ್ಲದೆ ಎಲ್ಲ ಅಧಿಕಾರಿಗಳ ದಿನನಿತ್ಯದ ಧಿರಿಸೇ ಆಗಿಬಿಟ್ಟಿತು. ಹೀಗೆ ಸೀಮಿತವಾದ ಬಳಕೆ­ಯಲ್ಲಷ್ಟೆ ಇದ್ದ ‘ಸೂಟು’ ನಂತರದ ದಿನಗಳಲ್ಲಿ ಮಧ್ಯಮ ವರ್ಗದವರ ಬದುಕಿನಲ್ಲೂ ಪ್ರಮುಖ ಪಾತ್ರ ವಹಿಸಲಾರಂಭಿಸಿತು. ಆಧುನಿಕ ಜೀವನ­ಶೈಲಿಯ ಭಾಗವಾಯಿತು.

ಸೂಟಿಗೆ ಹೆಚ್ಚಿದ ಬೇಡಿಕೆ
ಇತ್ತೀಚಿನ ದಿನಗಳಲ್ಲಿ ಮದುವೆ, ಜನ್ಮದಿ­ನೋತ್ಸವ, ವಿಶೇಷ ಸಮಾರಂಭಗಳಲ್ಲಿ ಪುರುಷರ ವೇಷಭೂಷಣದಲ್ಲಿ ‘ಸೂಟು’ ಪ್ರಮುಖ ಪಾತ್ರ ವಹಿಸುತ್ತಿದೆ. ಮದುವೆ ಆರತಿ ಅಕ್ಷತೆ ವೇದಿಕೆಯಲ್ಲಿ ನಿಂತ ಮಧುಮಗನಷ್ಟೇ ಅಲ್ಲ, ಬಂದು ಬಳಗದವರಲ್ಲಿ, ಅತಿಥಿಗಳಲ್ಲಿ, ಸಮಾರಂಭದಲ್ಲಿ ನೆರೆದವರ ಮಧ್ಯೆಯೂ ಸೂಟುಧಾರಿಗಳು ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿಯೇ ಕಾಣ­ಸಿಗುತ್ತಾರೆ. ಮಹಾ ನಗರಗಳಲ್ಲಿಯಷ್ಟೇ ಅಲ್ಲ, ಸಣ್ಣ ನಗರಗಳಲ್ಲಿಯೂ ವಿಶೇಷ ಸಮಾರಂಭ­ಗಳಿಗಾಗಿ ಶರ್ಟ್‌, ಪ್ಯಾಂಟ್‌, ಬೆಲ್ಟ್‌, ಟೈ ಧರಿಸಿ­ದರೆ ಪುರುಷ ವೇಷಭೂಷಣ ಪೂರ್ಣ­ಗೊಂಡಂತೆ ಅಲ್ಲ. ಅಲ್ಲಿ ಸೂಟು ಸಹ ಇರಬೇಕು ಎಂಬಂ­ತಾಗಿದೆ.

ಹಾಗಾಗಿಯೇ ಸಿದ್ಧ ಉಡುಪು ಕ್ಷೇತ್ರದಲ್ಲಿಯೂ ಸೂಟಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತಿದೆ. ಈವರೆ­ಗೂ ದೊಡ್ಡ ನಗರಗಳ ಷೋರೂಂಗಳಲ್ಲಿ ಸಿದ್ಧವಾಗಿ ಇಟ್ಟಿರುತ್ತಿದ್ದ ಸೂಟುಗಳನ್ನು ಖರೀದಿ­ಸುವುದು ಸಾಮಾನ್ಯವಾಗಿತ್ತು. ನಿಗದಿತ ಅಳತೆಯ ಈ ಸೂಟುಗಳು ವಿವಿಧ ದೇಹಾಕಾರದ ಪುರು­ಷರಿಗೆ ಹೊಂದಿಕೊಳ್ಳದೇ ಇದ್ದರೂ ಖರೀದಿಸಿ ಧರಿಸುವುದು ಅನಿವಾರ್ಯವೂ ಆಗಿತ್ತು.

ತೆಳ್ಳನೆ ದೇಹದವರು, ಗಿಡ್ಡ ಆಕೃತಿಯವರು, ತುಸು ಹೊಟ್ಟೆ ಉಬ್ಬಿದವರು ತಮ್ಮ ದೇಹಾಕಾರಕ್ಕೆ ಒಪ್ಪದ ಸೂಟು ಧರಿಸಿದಾಗ ಬೆನ್ನ ಹಿಂದೆ
ನಗುವವರೂ ಇದ್ದಾರೆ. ಸೂಟು ಧರಿಸಲೇಬೇಕು ಎಂಬ ಆಸೆಯ ಬೆನ್ನುಬಿದ್ದವರು ಇಂತಹ ತಮಾಷೆಯ ಪ್ರಸಂಗಗಳನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

ಆದರೆ, ಈಗ ಈ ಸಮಸ್ಯೆಗೆ ಪರಿಹಾರ ಸಿಗುತ್ತಿದೆ. ಈವರೆಗೆ ‘ಸಿದ್ಧ ಉಡುಪು’ ವಿಭಾಗದ­ಲ್ಲಿಯೇ ಇದ್ದ ‘ಸೂಟು’ ಆಕೃತಿ, ವಿನ್ಯಾಸ ಬದಲಾಗಿದೆ. ಪ್ರತಿಯೊಬ್ಬರ ದೇಹಕ್ಕೂ, ಅವರ ದೇಹದ ಅಗಲ, ಎತ್ತರ, ಗಾತ್ರಕ್ಕೆ ತಕ್ಕಂತೆ, ಅವರಿಗೆ ಇಷ್ಟವಾಗುವಂತೆ ಸೂಟುಗಳನ್ನೂ ಅಳತೆ ಕೊಟ್ಟು ಹೊಲಿಸಿಕೊಳ್ಳಬಹುದಾಗಿದೆ.

ಟೈಲರ್‌ಮನ್‌ ಪ್ರವೇಶ
ಜವಳಿ ಖರೀದಿ ವಿಷಯ ಬಂದಾಗ ಈಗ ಗ್ರಾಹಕರ ಮುಂದೆ ವಿಶಾಲ ಶ್ರೇಣಿಯ ಆಯ್ಕೆ­ಗಳಿವೆ. ಸಿದ್ಧ ಉಡು­ಪನ್ನೇ ಖರೀದಿ­ಸುವುದು ಅಥವಾ ಬಟ್ಟೆಯನ್ನು ಖರೀದಿಸಿ ಹೊಲಿಸುವುದು ಎರಡೂ ಚಾಲ್ತಿ­ಯಲ್ಲಿರುವ ಸಾಮಾನ್ಯ ವಿಧಾನಗಳು.

ಈಗ ಹೊಲಿಗೆ ಹಾಕಬೇಕಾದ ಅಗತ್ಯವೇ ಇಲ್ಲದ (stitchless) ಶರ್ಟ್‌ಗಳೂ ಸಹ ಈಗ ಮಾರುಕಟ್ಟೆಗೆ ಬಂದಿವೆ! ತರಹೇವಾರಿ ಬ್ರಾಂಡೆಡ್‌ ಉಡು­ಪುಗಳು ಮಾರು­ಕಟ್ಟೆಯಲ್ಲಿ ಲಭ್ಯವಿದ್ದರೂ ಅನೇಕರು ಬಟ್ಟೆ ಖರೀದಿಸಿ, ಹೊಲಿಸಿ ತೊಡು­ವು­ದನ್ನೇ ಹೆಚ್ಚು ಇಷ್ಟಪ­­ಡುತ್ತಾರೆ. ವಿಶೇಷ­ವಾಗಿ ಮದುವೆ ಮತ್ತಿತರ ಕಾರ್ಯ­ಕ್ರಮಗಳಿಗೆ ಬಳಸುವ ‘ಸೂಟ್‌’ ವಿಚಾರಕ್ಕೆ ಬಂದಾಗ ಹೆಚ್ಚಿನ­­ವರು ಸಿದ್ಧವಾಗಿರುವುದನ್ನು ಖರೀದಿಸುವುದಕ್ಕೆ ಬದಲಾಗಿ ಹೊಲಿಸುವುದಕ್ಕೇ ಆದ್ಯತೆ ನೀಡುತ್ತಾರೆ. ಇದಕ್ಕೆ ಮುಖ್ಯ ಕಾರಣ ದೇಹದ ಆಕಾರ, ಭುಜದ ವಿಸ್ತಾರಕ್ಕೆ       ಒ­ಪ್ಪುವ ಅಳತೆ ಮತ್ತು ವಿನ್ಯಾಸ.

‘ಸೂಟುಗಳು ವ್ಯಕ್ತಿಯ ಸರಾಸರಿ ಅಳತೆ­ ಆಧರಿಸಿ ತಯಾ­ರಾಗು­ತ್ತವೆ. ಆದರೆ, ಇದು ಎಲ್ಲರ ಶರೀರಕ್ಕೆ ಒಪ್ಪುವು­ದಿಲ್ಲ. ಒಪ್ಪಿದರೂ ಬೆಲೆ ಮತ್ತು ಗುಣ­ಮಟ್ಟ­ದೊಂದಿಗೆ ರಾಜಿ ಮಾಡಿಕೊಳ್ಳಬೇ­ಕಾಗುತ್ತದೆ’ ಎನ್ನುತ್ತಾರೆ ಬೆಂಗಳೂರಿನ ‘ಟೈಲರ್‌­­ಮನ್‌’ ಸಂಸ್ಥೆಯ ಸಹ ಸಂಸ್ಥಾಪಕ­ರಾದ ವಿದ್ಯಾ ನಟರಾಜ್‌ ಮತ್ತು ಗೌತಮ್‌ ಗೋಲ್ಚಾ.

ಗಿರಾಕಿ ಬಯಸಿದಂತೆ ಉಡುಪು ತಯಾರಿಸಿ ಕೊಡುವ ಅಥವಾ ಹೊಲಿ­ದು­ಕೊಡುವ ದರ್ಜಿಗೆ ‘ಬಿಸ್ಪೋಕ್‌’ (Bespoke) ಟೈಲರ್‌ ಎನ್ನುತ್ತೇವೆ. ‘ಟೈಲರ್‌ಮನ್‌’ ಇಂಥ­ದೊಂದು ಸ್ಟಾರ್ಟ್‌ಅಪ್‌ ಕಂಪೆನಿ. ಸೂಟ್ಸ್‌ ತಯಾರಿಕೆ ‘ಟೈಲರ್‌ಮನ್‌’ನ ವಿಶೇಷ.
‘ಶರ್ಟ್‌ ಇರಲಿ, ಪ್ಯಾಂಟ್‌ ಇರಲಿ ಅಥವಾ ಸೂಟೇ ಆಗಿರಲಿ, ನಾವು ಧರಿಸುವ ಬಟ್ಟೆ ನಮ್ಮ ದೇಹಕ್ಕೆ ಅಚ್ಚು­ಕಟ್ಟಾಗಿ ಒಪ್ಪುವಂತಿರಬೇಕು. ಹೀಗಾಗಿ ‘ಒಂದೇ ಅಳತೆ ಎಲ್ಲರಿಗೂ ಹೊಂದಿಕೆ­ಯಾ­ಗುತ್ತದೆ’ (one-- size fits all policy) ಎಂಬ ಸಿದ್ಧ ಉಡುಪು ತಯಾ­ರಿಕಾ ಕಂಪೆನಿಗಳ ಸೂತ್ರದಲ್ಲಿ ನಮಗೆ ನಂಬಿಕೆ ಇಲ್ಲ. ಕೆಲ­ವೊಮ್ಮೆ ನಾವು ಖರೀದಿಸಿದ ಶರ್ಟಿನ ಕೈ ಉದ್ದವಾಗಿ­ರುತ್ತವೆ. ಕಾಲರ್‌ ಬಿಗಿದುಕೊಂಡಿ­ರುತ್ತದೆ. ಎಲ್ಲ ಸರಿ ಇದ್ದರೆ ಎದೆಭಾ­ಗದಲ್ಲಿ ಬಿಗಿಯಾಗಿ­ರುತ್ತದೆ. ಹೀಗೆ ಏನಾದರೊಂದು ಲೋಪ ಇದ್ದೇ ಇರುತ್ತದೆ. ಹೀಗಾಗಿ ಗ್ರಾಹಕ ಖರೀದಿಸಿದ ಉಡು­ಪನ್ನು ಇನ್ಮೊಮ್ಮೆ ಸ್ಥಳೀಯ ದರ್ಜಿಯ ಬಳಿಗೆ ತೆಗೆದುಕೊಂಡು ಹೋಗಿ ತಮ್ಮ ದೇಹಕ್ಕೆ ಒಪ್ಪುವ ಹಾಗೆ ಸರಿ ಹೊಂದಿಸಿಕೊಳ್ಳುವ ಅಥವಾ ಕೆಲವೆಡೆ ಆಕಾರವನ್ನೇ ಬದಲಿ­ಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಪುರುಷರ ಸಿದ್ಧ ಉಡುಪು (menswear) ಉದ್ಯಮ­ದಲ್ಲಿನ ಈ ಸಮಸ್ಯೆಗಳೇ ನಮಗೆ ‘ಟೈಲರ್‌ಮನ್‌’ ಕಂಪೆನಿ ಸ್ಥಾಪಿಸಲು ಪ್ರೇರಣೆ’ ಎನ್ನುತ್ತಾರೆ ವಿದ್ಯಾ.

ಟೈಲರ್‌ಮನ್‌ ವೈಶಿಷ್ಟ್ಯ
ಹೆಸರೇ ಸೂಚಿಸುವಂತೆ ಗ್ರಾಹಕ ಬಯಸಿ­ದಂತೆ ಬಟ್ಟೆ ಹೊಲಿದು ಕೊಡುವ ಕಂಪೆನಿ ಟೈಲರ್‌ಮನ್‌. ವರ್ಷದ ಹಿಂದೆ ಪ್ರಾರಂ­ಭ­ವಾದ ಈ ಕಂಪೆನಿ ಬೆಂಗಳೂ­ರಿನಲ್ಲಿ ನಾಲ್ಕು (ಕಮರ್ಷಿಯಲ್‌ ಸ್ಟ್ರೀಟ್‌, ಜಯನಗರ, ವೈಟ್‌ಫೀಲ್ಡ್‌, ಬನ್ನೇರು­ಘಟ್ಟ ರಸ್ತೆ) ಮತ್ತು ಚೆನ್ನೈನಲ್ಲಿ (ವೆಲ­ಚೇರಿ, ನುಂಗಂಬಾಕ್ಕಂ) ಎರಡು ಮಳಿಗೆಗಳನ್ನು ಹೊಂದಿದೆ. ಗ್ರಾಹ­ಕರು ನೇರವಾಗಿ ಟೈಲರ್‌ಮನ್‌ ಮಳಿಗೆಗೆ ಭೇಟಿ ನೀಡಿ ತಮ್ಮ ದೇಹಕ್ಕೊಪ್ಪುವಂತೆ ಸೂಟ್‌ ಹೊಲಿಸಿ­ಕೊಳ್ಳಬಹುದು  ಅಥವಾ ಕಂಪೆನಿಯ ವೆಬ್‌ ಸೈಟ್‌ಗೆ (www.tailorman.­com) ಭೇಟಿ ನೀಡುವ ಮೂಲಕ ತಮಗಿಷ್ಟದ ವಿನ್ಯಾಸವನ್ನು ಆಯ್ಕೆ ಮಾಡಿ, ಹೊಲಿಗೆ ಅಳತೆ­ಯನ್ನು ತಾವೇ ಖುದ್ದಾಗಿ ದಾಖ­ಲಿಸ­ಬಹುದು. ಮಳಿಗೆಗೆ ಭೇಟಿ ನೀಡಲು ಸಮಯವಿಲ್ಲದವರು ಮನವಿ ಮಾಡಿ­ಕೊಂಡರೆ, ನಿಪುಣ ದರ್ಜಿ­ಯೊಬ್ಬರು ಅವರ ಮನೆ/ಕಚೇರಿಗೇ ಬಂದು ಅಳತೆ ತೆಗೆದುಕೊಂಡು ಹೋಗು­ತ್ತಾರೆ(ಬೆಂಗ­ಳೂರು ಮತ್ತು ಚೆನ್ನೈನಲ್ಲಿ ಮಾತ್ರ ಈ ಸೇವೆ ಲಭ್ಯ).

‘ಒಂದು ವೇಳೆ ಹೊಲಿದ ಸೂಟು ಗ್ರಾಹಕರಿಗೆ ಇಷ್ಟವಾ­ಗದೇ ಇದ್ದಲ್ಲಿ 30 ದಿನದೊಳಗೆ ವಾಪಸ್‌ ಮಾಡಬ­ಹುದು. ಯಾಕೆ ಮರಳಿಸುತ್ತಿದ್ದೀರಾ? ಎಂಬ ಒಂದೇ ಒಂದು ಪ್ರಶ್ನೆಯನ್ನೂ ಕಂಪೆನಿ ಕೇಳುವು­ದಿಲ್ಲ. ಗ್ರಾಹಕರಿಗೆ  ಹೆಚ್ಚು­ವರಿಯಾಗಿ ಯಾವುದೇ ಸಣ್ಣ ಪುಟ್ಟ ಬದಲಾವಣೆ ಬೇಕಿದ್ದರೂ ಉಚಿತವಾಗಿ  ಮಾಡಿಕೊಡು­ತ್ತೇವೆ. ದೇಶದ ಸಿದ್ಧ ಉಡುಪು ಉದ್ಯಮ­ದಲ್ಲಿ ಇದೊಂದು ವಿಭಿನ್ನವಾದ ಪ್ರಯೋಗ’ ಎನ್ನು­ತ್ತಾರೆ ಗೌತಮ್‌ ಗೋಲ್ಚಾ.

ಜಾಕೆಟ್‌, ಬ್ಲೇಜರ್‌, ಶರ್ಟ್‌, ಪ್ಯಾಂಟ್‌, ವೆಸ್ಟ್‌ಕೋಟ್‌ ಸೇರಿದಂತೆ ಕಾರ್ಪೊರೇಟ್‌, ಪಾರ್ಟಿ ವೇರ್‌ ಮತ್ತು ಸಂಜೆವೇಳೆಯ ವಿಶೇಷ ಕಾರ್ಯಕ್ರಮಗಳಿಗೆ ತೊಡುವ ಟಕ್ಸಿಡೊ ಸೂಟುಗಳನ್ನು ಟೈಲರ್‌ಮನ್‌ ತಯಾರಿಸುತ್ತದೆ. ಈ ಸೂಟುಗಳ ಬೆಲೆ ₨9 ಸಾವಿರದಿಂದ ₨2 ಲಕ್ಷದವರೆಗೆ ಇದೆ.

‘ಪ್ರಪಂಚದ ವಿವಿಧೆಡೆ ಆಯ್ದ ಗಿರಣಿ­ಗಳಿಂದ ಗರಿಷ್ಠ ಗುಣಮಟ್ಟದ ಬಟ್ಟೆ­ಗಳನ್ನು ಆಮದು ಮಾಡಿಕೊಂಡು ಸೂಟು­ಗಳನ್ನು ಹೊಲಿ­ಯ­ಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದ ಸಿದ್ಧ ಉಡುಪು ಕಂಪೆನಿಗಳಿಗೂ ಸೂಟ್‌ ಪೂರೈಸಲಾಗುತ್ತದೆ. ಹೊಲಿಗೆಗೆ ಬಳ­ಸುವ ನೂಲಿನಿಂದ ಹಿಡಿದು ಬಟನ್‌ವರೆಗೆ ಪ್ರತಿ­ಯೊಂದು ವಿಷಯದಲ್ಲೂ ಗುಣ­ಮಟ್ಟ ಕಾಯ್ದು­ಕೊ­ಳ್ಳ­­ಲಾಗುತ್ತದೆ. ‘ಡಿಜಿ­ಟಲ್‌ ಕಟ್ಟಿಂಗ್‌’ ತಂತ್ರಜ್ಞಾನದ ಮೂಲಕ ಸೂಟು­­ಗಳನ್ನು ಹೊಲಿಯ­ಲಾಗುತ್ತದೆ. ಹೀಗಾಗಿ ಅಳತೆಯಲ್ಲಿ ಕೂದಲೆಳೆಯ ವ್ಯತ್ಯಾಸವೂ ಇರುವುದಿಲ್ಲ’ ಎನ್ನುತ್ತಾರೆ ಗೌತಮ್‌.



 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.