ADVERTISEMENT

ವಾಯಿದಾ ವಹಿವಾಟಿನ ಪ್ರಭಾವ

ಪಿಟಿಐ
Published 21 ಮೇ 2017, 19:30 IST
Last Updated 21 ಮೇ 2017, 19:30 IST

ನವದೆಹಲಿ: ಮೇ ತಿಂಗಳ ವಾಯಿದಾ ವಹಿವಾಟು ಗುರುವಾರ ಮುಕ್ತಾಯವಾಗಲಿದೆ. ಹೀಗಾಗಿ ಈ ವಾರ ಷೇರುಪೇಟೆಗಳಲ್ಲಿ ಚಂಚಲ ವಹಿವಾಟು ನಡೆಯುವ ಸಾಧ್ಯತೆ ಇದೆ ಎಂದು ಪರಿಣತರು ಹೇಳಿದ್ದಾರೆ.

‘ನಾಲ್ಕು ವಹಿವಾಟು ಅವಧಿಗಳಲ್ಲಿ ಏರುಮುಖವಾಗಿದ್ದ ಷೇರುಪೇಟೆ  ಹೊಸ ದಾಖಲೆ ಮಟ್ಟವನ್ನೂ ತಲುಪಿತ್ತು. ಈ ಬೆಳವಣಿಗೆಯಿಂದ ಭಾರತದ ಷೇರುಪೇಟೆಗಳು ಜಾಗತಿಕ ಮಟ್ಟದಲ್ಲಿ ಅತ್ಯಂತ ದುಬಾರಿ ಮಾರುಕಟ್ಟೆಯಾಗುತ್ತಿವೆ’ ಎಂದು ಟ್ರೇಡ್‌ ಸ್ಮಾರ್ಟ್‌ ಆನ್‌ಲೈನ್‌ ಸಂಸ್ಥೆಯ ಸ್ಥಾಪಕ ನಿರ್ದೇಶಕ ವಿಜಯ್‌ ಸಿಂಘಾನಿಯಾ ಅಭಿಪ್ರಾಯಪಟ್ಟಿದ್ದಾರೆ.

‘ಮಧ್ಯಂತರ ಅವಧಿಯಲ್ಲಿ ಷೇರುಪೇಟೆ ವಹಿವಾಟಿನ ಮೇಲೆ ಜಾಗತಿಕ ವಿದ್ಯಮಾನಗಳ ಪ್ರಭಾವ ಹೆಚ್ಚರಲಿದೆ. ಯಾವುದೇ ಅಡ್ಡಿಯಾಗದಂತೆ ಜಿಎಸ್‌ಟಿಯನ್ನು  ಜಾರಿಗೊಳಿಸುವುದು ಸದ್ಯಕ್ಕೆ, ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ’ ಎಂದು ಸ್ಯಾಮ್ಕೊಲ ಸೆಕ್ಯುರಿಟೀಸ್‌ನ ಸಿಇಒ ಜಮೀತ್ ಮೋದಿ ಹೇಳಿದ್ದಾರೆ.

4ನೇ ತ್ರೈಮಾಸಿಕ: ತ್ರೈಮಾಸಿಕ ಫಲಿತಾಂಶದಲ್ಲಿ ಟಾಟಾ ಮೋಟಾರ್ಸ್‌, ಐಟಿಸಿ, ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಟೆಕ್‌ ಮಹೀಂದ್ರಾ ಮತ್ತು ಸನ್‌ ಫಾರ್ಮಾ ಕಂಪೆನಿಗಳ ಆರ್ಥಿಕ ಸಾಧನೆಗಳು ಈ ವಾರವೇ ಹೊರಬೀಳಲಿವೆ. ಇದರ ಜತೆಗೆ ರೂಪಾಯಿ ಮೌಲ್ಯದಲ್ಲಿ ಏರಿಳಿತ ಮತ್ತು ಜಾಗತಿಕ ವಿದ್ಯಮಾನಗಳ ಪ್ರಭಾವವೂ ಸೂಚ್ಯಂಕಗಳ ಏರಿಳಿತವನ್ನು ನಿರ್ಧರಿಸಲಿವೆ ಎಂದು ಹೇಳಿದ್ದಾರೆ.
*
ವಾಯಿದಾ ವಹಿವಾಟು ಇರುವುದರಿಂದ ಈ ವಾರ ಷೇರುಪೇಟೆಯಲ್ಲಿ ಲಾಭ ಗಳಿಕೆ  ಉದ್ದೇಶದ ವಹಿವಾಟು ನಡೆಯಲಿದೆ.
ಎಫ್‌. ಪಾರೇಖ್‌
ಬೋನಾಂಜಾ ಪೋರ್ಟ್‌ಫೋಲಿಯೊ ಸಂಸ್ಥೆಯ ವಿಶ್ಲೇಷಕ
*
ಜಿಎಸ್‌ಟಿಯಿಂದ ಷೇರುಪೇಟೆಯಲ್ಲಿ ಸಕಾರಾತ್ಮಕ ಚಟುವಟಿಕೆ ನಡೆಯಲಿದೆ. ಎಫ್‌ಎಂಸಿಜಿ ಮತ್ತು ಲೋಹ ವಲಯದ ಷೇರುಗಳು ಹೆಚ್ಚು ಗಳಿಕೆ ಕಂಡುಕೊಳ್ಳುವ ನಿರೀಕ್ಷೆ ಇದೆ.
ನಿತಾಶಾ ಶಂಕರ್‌,
ಉಪಾಧ್ಯಕ್ಷ, ಯೆಸ್‌ ಸೆಕ್ಯುರಿಟೀಸ್‌ ಇಂಡಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT