ಬೆಂಗಳೂರು: ‘ಉದ್ಯಮಿ ವಿಜಯ ಮಲ್ಯ ಒಡೆತನದ ಯುನೈಟೆಡ್ ಬ್ರಿವರೀಸ್ ಹೋಲ್ಡಿಂಗ್ಸ್ ಲಿಮಿಟೆಡ್ (ಯುಬಿಎಚ್ಎಲ್) ಕಂಪೆನಿಯ ಷೇರುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೈಕೋರ್ಟ್ಗೆ ಮಂಗಳವಾರ ತಿಳಿಸಿದೆ.
ಈ ಕುರಿತಂತೆ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಲಿಖಿತ ಮಾಹಿತಿ ನೀಡಿರುವ ಜಾರಿ ನಿರ್ದೇಶನಾಲಯದ ವಕೀಲ ಎಸ್.ಮಹೇಶ್, ‘ಈಗಾಗಲೇ ಈ ಷೇರುಗಳನ್ನು ಇ.ಡಿ ವಶಕ್ಕೆ ಪಡೆದಿದೆ. ಅವುಗಳ ಮಾರಾಟ ಅಸಾಧ್ಯ’ ಎಂದು ತಿಳಿಸಿದ್ದಾರೆ.
ಈ ಹಿಂದಿನ ವಿಚಾರಣೆ ವೇಳೆ, ‘ಬ್ಯಾಂಕುಗಳ ಸಾಲ ತೀರಿಸಲು ಇ.ಡಿ ವಶದಲ್ಲಿರುವ ಷೇರುಗಳನ್ನು ಮಾರಾಟ ಮಾಡಲು ಅವಕಾಶ ನೀಡಬೇಕು’ ಎಂದು ಯುಬಿಎಚ್ಎಲ್ ಕೋರಿತ್ತು.
ಬೇಸಿಗೆ ರಜೆಯ ಮುಗಿದ ನಂತರ ಈ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಲು ನ್ಯಾಯಪೀಠ ನಿರ್ಧರಿಸಿತು. ಮಲ್ಯ ಅವರು, ‘ಯುಬಿಎಚ್ಎಲ್’ನಲ್ಲಿ ಶೇಕಡ 52.34ರಷ್ಟು ಪ್ರಮಾಣದ ಷೇರುಗಳ ಒಡೆತನ ಹೊಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.