ADVERTISEMENT

ಸಂಕ್ಷಿಪ್ತ ಸುದ್ದಿ

ಪಿಟಿಐ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಚಿನ್ನದ ಆಮದು
ಚಿನ್ನದ ಆಮದು   

ಶೇ 32ರಷ್ಟು ಕುಸಿತ
ನವದೆಹಲಿ: ಜಾಗತಿಕ ಮತ್ತು ದೇಶಿಯ ಮಾರುಕಟ್ಟೆಯಲ್ಲಿ  ಬೆಲೆ ಕುಸಿತ ಮತ್ತು ನೋಟು ರದ್ದತಿಯ ಕಾರಣದಿಂದಾಗಿ  2016ರ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಚಿನ್ನದ ಆಮದು ಶೇ 32ರಷ್ಟು  (₹1.20 ಲಕ್ಷ ಕೋಟಿ) ಕುಸಿದಿದೆ.

2015–16ರ ಹಣಕಾಸು ವರ್ಷದಲ್ಲಿ (ಏಪ್ರಿಲ್‌ನಿಂದ ಮಾರ್ಚ್‌) ₹41.80 ಲಕ್ಷ ಕೋಟಿ ಮೊತ್ತದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿತ್ತು.

ನೋಟು ರದ್ದತಿಯ ನಂತರ ಡಿಸೆಂಬರ್‌ ಒಂದೇ ತಿಂಗಳಲ್ಲಿ ಬಂಗಾರದ ಆಮದು ಶೇ 48.49ರಷ್ಟು (₹13,328 ಕೋಟಿ)  ಕಡಿಮೆಯಾಗಿದೆ.
 
**
ಬಿಎಸ್ ಇ  ಐಪಿಒ  ಇಂದು ಬಿಡುಗಡೆ  
ಮುಂಬೈ:
ಮುಂಬೈ ಷೇರು ವಿನಿಮಯ ಕೇಂದ್ರವು (ಬಿಎಸ್‌ಇ) ಇದೇ 23ರಂದು ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ)  ಬಿಡುಗಡೆ ಮಾಡಲಿದೆ. 
 
‘ತಲಾ ₹ 2 ಮುಖಬೆಲೆಯ ಪ್ರತಿ ಷೇರಿನ ಬೆಲೆ ಪಟ್ಟಿಯನ್ನು ₹ 805 ರಿಂದ ₹ 806ಕ್ಕೆ ನಿಗದಿ ಮಾಡಲಾಗಿದೆ. ‘ಐಪಿಒ’ ನೀಡಿಕೆಯು ಜ. 25ಕ್ಕೆ ಕೊನೆಗೊಳ್ಳಲಿದೆ.  ಕನಿಷ್ಠ ಹೂಡಿಕೆಯು 18 ಷೇರುಗಳಾಗಿವೆ’ ಎಂದು ಬಿಎಸ್‌ಇ ವ್ಯವಸ್ಥಾಪಕ ನಿರ್ದೇಶಕ ಆಶೀಶ್‌ಕುಮಾರ್‌ ಚವಾಣ್‌  ತಿಳಿಸಿದ್ದಾರೆ.
 
ಐಪಿಒ ಮೂಲಕ,1.54 ಕೋಟಿ ಷೇರುಗಳನ್ನು ಬಿಡುಗಡೆ ಮಾಡಲಿದ್ದು, ಅಂದಾಜು ₹ 1,243 ಕೋಟಿಗಳಷ್ಟು ಬಂಡವಾಳ ಸಂಗ್ರಹಿಸುವ ನಿರೀಕ್ಷೆ ಇದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಫೆ.3 ರಿಂದ  ಬಿಎಸ್ಇ   ಷೇರಿನ ವಹಿವಾಟಿಗೆ ಚಾಲನೆ ದೊರೆಯಲಿದೆ.
 
**
ಎನ್ಎಸ್ಇಯಿಂದ  3 ಕಂಪೆನಿ  ಹೊರಕ್ಕೆ 
ನವದೆಹಲಿ: ಅರಿಹಂತ ಥ್ರೆಡ್ಸ್‌, ಕ್ಯಾಂಪರ್‌ ಕಾನ್‌ಕಾಸ್ಟ್‌ ಮತ್ತು ಕೃಷ್ಣಾ ಎಂಜಿನಿಯರಿಂಗ್ ವರ್ಕ್ಸ್‌ ಈ ಮೂರು ಕಂಪೆನಿಗಳನ್ನು ಮುಂದಿನ ತಿಂಗಳಿನಿಂದ  ಮತ್ತೆ ಮೂರು ಕಂಪೆನಿಗಳನ್ನು ಮಾನ್ಯತೆ ಪಟ್ಟಿಯಿಂದ ತೆಗೆದು ಹಾಕಲು ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಮುಂದಾಗಿದೆ. 
 
ಆಗಸ್ಟ್‌ –ನವೆಂಬರ್‌ ಅವಧಿಯಲ್ಲಿ 28 ಕಂಪೆನಿಗಳ ನೋಂದಣಿಯನ್ನು ಎನ್‌ಎಸ್‌ಇ ರದ್ದುಪಡಿಸಿತ್ತು. 
 
**
ಶಿಕ್ಷಣ ಸಾಲ ವಿತರಣೆಗೆ  ಆರ್‌ಬಿಐ ಉತ್ತೇಜನ   
ನವದೆಹಲಿ: ಬ್ಯಾಂಕ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣ ಸಾಲವನ್ನು ನೀಡುವಂತೆ ಉತ್ತೇಜಿಸಲು ಮುಂದಾಗಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ವಸೂಲಾಗದ ಸಾಲ (ಎನ್‌ಪಿಎ) ಎಂದು ಪರಿಗಣಿಸದಂತೆ ಸೂಚಿಸಿದೆ. 
 
 ಶಿಕ್ಷಣ ಸಾಲ ಮರು ಪಾವತಿ ಕಂತುಗಳ ಅವಧಿಯನ್ನು ಹೆಚ್ಚಿಸಲು ಅವಕಾಶವಿದ್ದು  ಅದನ್ನು ವಸೂಲಾಗದ ಸಾಲ ಎಂದು ಪರಿಗಣಿಸಬಾರದು ಎಂದು ಆರ್‌ಬಿಐ ಸೂಚಿಸಿದೆ. 
 
**
5 ಕಂಪೆನಿಗಳಿಗೆ ₹39 ಸಾವಿರ ಕೋಟಿ ನಷ್ಟ!
ನವದೆಹಲಿ: ರಿಲಯನ್ಸ್‌ (ಆರ್‌ಐಎಲ್‌), ಇನ್ಫೊಸಿಸ್‌, ಎಚ್‌ಡಿಎಫ್‌ಸಿ  ಸೇರಿದಂತೆ ದೇಶದ ಐದು ಅಗ್ರಮಾನ್ಯ ಕಂಪೆನಿಗಳು ಒಟ್ಟು  ₹39,593 ಕೋಟಿ ಮಾರುಕಟ್ಟೆ ಬಂಡವಾಳದಲ್ಲಿ ನಷ್ಟ ಅನುಭವಿಸಿವೆ. 
 
**
ವೆಚ್ಚ ಕಡಿತಕ್ಕೆ ಮುಂದಾದ ಟಾಟಾ ಮೋಟರ್ಸ್‌ 
ನವದೆಹಲಿ: ಟಾಟಾ ಮೋಟರ್ಸ್‌ ವಹಿವಾಟು, ಕಾರ್ಖಾನೆ ಮತ್ತು ಮಾರಾಟ ಜಾಲ ಸೇರಿದಂತೆ 20 ಪ್ರಮುಖ ವಿಭಾಗಗಳ ವೆಚ್ಚ ಕಡಿತಕ್ಕೆ ಮುಂದಾಗಿದೆ. ಉತ್ಪಾದನೆ ದಕ್ಷತೆ ಹೆಚ್ಚಿಸಲು ವಿವಿಧ ವಿಭಾಗಗಳಲ್ಲಿ ಭಾರಿ ಬದಲಾವಣೆ ತರುತ್ತಿರುವುದಾಗಿ ಕಂಪೆನಿ ಹೇಳಿಕೊಂಡಿದೆ. 
 
**
‘ನೋಟು ರದ್ದು: ಸುಸ್ಥಿರ ಆರ್ಥಿಕ ಪ್ರಗತಿ’
ನವದೆಹಲಿ: ನೋಟು ರದ್ದತಿಯಿಂದ ತೆರಿಗೆ ಮೂಲ ವಿಸ್ತಾರಗೊಳ್ಳುವುದಲ್ಲದೇ ಬಡ್ಡಿದರ ಇಳಿಯಲಿವೆ ಎಂದು ಹಣಕಾಸು ಸಚಿವಾಲಯ  ಸಮರ್ಥಿಸಿಕೊಂಡಿದೆ. 
 
ದೊಡ್ಡ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದಿರುವುದರಿಂದ ದೇಶ ಸುಸ್ಥಿರ ಮತ್ತು ತ್ವರಿತ ಆರ್ಥಿಕ ಪ್ರಗತಿ ಕಾಣಲಿದೆ ಎಂದು  ಸಚಿವಾಲಯ, ಸಂಸತ್‌ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿದ ಲಿಖಿತ ಉತ್ತರ ನೀಡಿದೆ. 
 
ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಕಾಳಧನ ಮರು ಚಲಾವಣೆಗೆ ಬರುವುದರಿಂದ ಉತ್ಪಾದನಾ ಉದ್ದೇಶಗಳಿಗೆ ಬಳಕೆಯಾಗುತ್ತದೆ ಎಂದು ರೆವಿನ್ಯೂ ಇಲಾಖೆ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT