ADVERTISEMENT

ಸಂಗಾತಿಯಂತೆ ಸ್ಪಂದಿಸಲಿವೆ ಸೆಕ್ಸ್‌ ರೋಬೊಗಳು!

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 19:30 IST
Last Updated 11 ಜುಲೈ 2017, 19:30 IST
ಸೆಕ್ಸ್‌ ಗೊಂಬೆ ಸಮಾಂತಾ
ಸೆಕ್ಸ್‌ ಗೊಂಬೆ ಸಮಾಂತಾ   

ಕಾಮ ತೃಷೆ ತಣಿಸಿಕೊಳ್ಳಲು ಕಾಮದ ಬೊಂಬೆಗಳನ್ನು (ಸೆಕ್ಸ್‌ಡಾಲ್‌)ಗಳನ್ನು ಬಳಸುವುದೆಲ್ಲಾ ಈಗ ಹಳೆಯದು. ಈಗೇನಿದ್ದರೂ ಸೆಕ್ಸ್‌ರೋಬೊಗಳ ಕಾಲ. ಸಂಗಾತಿಯಂತೆ ಸ್ಪರ್ಶ ಸುಖ ನೀಡುವ, ಕಾಮದಾಟಕ್ಕೆ ಮನುಷ್ಯನಂತೆ ಸ್ಪಂದಿಸುವ ರೋಬೊಗಳ ಮಾರುಕಟ್ಟೆ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡದಾಗಿ ಬೆಳೆಯುತ್ತಿದೆ.

‘ಮುಂದುವರಿದ ತಂತ್ರಜ್ಞಾನದ ನೆರವಿನಿಂದ ಸೆಕ್ಸ್‌ರೋಬೊಗಳಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಸುಮಾರು 50 ಭಂಗಿಗಳಲ್ಲಿ ಮಿಲನಕ್ಕಿಳಿಯುವ ರೀತಿಯಲ್ಲಿ ತಾಂತ್ರಿಕವಾಗಿ ಸುಧಾರಿಸಿದ ಸೆಕ್ಸ್‌ರೋಬೊಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ’ ಎನ್ನುತ್ತದೆ ಫೌಂಡೇಷನ್‌ ಫಾರ್‌ ರೆಸ್ಪಾನ್ಸಿಬಲ್‌ ರೋಬೋಟಿಕ್ಸ್‌ ಸಂಸ್ಥೆಯ ಇತ್ತೀಚಿನ ಅಧ್ಯಯನ ವರದಿಯೊಂದು.

ಇಂತಹ ಸೆಕ್ಸ್‌ರೋಬೊಗಳಿಂದ ಹಲವು ಅನುಕೂಲಗಳಿವೆ ಎನ್ನುತ್ತದೆ ಈ ವರದಿ. ಈ ರೀತಿಯ ಸೆಕ್ಸ್‌ರೋಬೊಗಳಿಂದ ಲೈಂಗಿಕ ಅಪರಾಧಿಗಳಿಗೆ ಹಾಗೂ ಅಂಗವಿಕಲರಿಗೆ ಲೈಂಗಿಕ ಚಿಕಿತ್ಸೆ (sexual therapy) ನೀಡಲು ಸಹಾಯವಾಗುತ್ತದೆ ಎಂದೂ ಈ ವರದಿ ಹೇಳುತ್ತದೆ.

ADVERTISEMENT

ತನ್ನ ಸಂಗಾತಿ ಹಾಗಿರಬೇಕು, ಹೀಗಿರಬೇಕು ಎಂದು ಬಯಸುವಂತೆ ಈ ಸೆಕ್ಸ್‌ರೋಬೊಗಳಲ್ಲಿ ಕೂಡಾ ಬೇಕೆಂದ ಹಾಗೆ ಬದಲಾವಣೆ ಮಾಡಿಕೊಳ್ಳಬಹುದು. ಈ ರೋಬೊಗಳ ಮೈಯಳತೆ, ಆಕಾರ, ಹೊರ ಅಂಗಾಂಗ, ತಲೆಗೂದಲ ಬಣ್ಣ ಎಲ್ಲವನ್ನೂ ಅವರವರ ಇಷ್ಟದಂತೆ ಬದಲಿಸಿಕೊಳ್ಳಬಹುದು. ಹೀಗೆ ಇಷ್ಟಾನಿಷ್ಟಕ್ಕೆ ಒಗ್ಗಬಲ್ಲ, ಬಗ್ಗಬಲ್ಲ ಸೆಕ್ಸ್‌ರೋಬೊಗಳ ಬೆಲೆ ₹ 3 ಲಕ್ಷದಿಂದ ₹ 10 ಲಕ್ಷದವರೆಗಿದೆ.

‘ಸೆಕ್ಸ್‌ರೋಬೊಗಳ ಮಾರುಕಟ್ಟೆ ಮುಂದೆ ಯಾವ ರೀತಿ ಬೆಳೆಯಬಹುದು, ಇವುಗಳಿಂದ ಸಮಾಜದಲ್ಲಿ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಒಂದಷ್ಟು ವರ್ಷಗಳು ಕಳೆದ ಬಳಿಕ ಈ ಸೆಕ್ಸ್‌ರೋಬೊಗಳಿಂದ ಸಮಾಜದಲ್ಲಿ ಎಂತಹ ಬದಲಾವಣೆ ಆಗಿದೆ ಎಂಬುದನ್ನು ಹೇಳಬಹುದು’ ಎನ್ನುತ್ತಾರೆ ಶೆಫಿಲ್ಡ್‌ ವಿಶ್ವವಿದ್ಯಾಲಯದ ರೋಬೊಟಿಕ್ಸ್‌ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ನೊಯಲ್ ಷಾರ್ಕಿ.

‘ಈ ಸೆಕ್ಸ್‌ರೋಬೊಗಳಿಂದ ಲೈಂಗಿಕ ಸಂತೃಪ್ತಿ ಸಾಧ್ಯವೇ, ಇವುಗಳ ಬಳಕೆಯನ್ನು ಸಮಾಜ ಮುಕ್ತವಾಗಿ ಸ್ವೀಕರಿಸುವುದೇ, ಇವುಗಳು ನಿಜಕ್ಕೂ ಮನುಷ್ಯ ಸಂಬಂಧದಂತಹ ಅನುಭವ ನೀಡಬಲ್ಲವೆ. ಇಂತಹ ಪ್ರಶ್ನೆಗಳಿಗೆಲ್ಲಾ ಸದ್ಯಕ್ಕಂತೂ ಉತ್ತರ ಇಲ್ಲ’ ಎನ್ನುತ್ತಾರೆ ಷಾರ್ಕಿ.

ಈ ಸೆಕ್ಸ್‌ರೋಬೊಗಳ ಬಗ್ಗೆ ತಜ್ಞರು ಹಾಗೂ ಜನ ಸಾಮಾನ್ಯರಲ್ಲೂ ಬೇರೆ ಬೇರೆ ರೀತಿಯ ಅಭಿಪ್ರಾಯಗಳಿವೆ. ಸೆಕ್ಸ್‌ರೋಬೊಗಳಿಂದ ಸಮಾಜದಲ್ಲಿ ಲೈಂಗಿಕ ಅಪರಾಧಗಳು ಕಡಿಮೆಯಾಗಬಹುದು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಇಂತಹ ಕೃತಕ ಸಾಧನಗಳಿಂದ ನಿಜವಾದ ಲೈಂಗಿಕ ಸುಖ ಸಾಧ್ಯವಿಲ್ಲ ಎಂದಿದ್ದಾರೆ.

‘ಸೆಕ್ಸ್‌ರೋಬೊಗಳು ಎಷ್ಟೇ ಬಾಗಿ ಬಳುಕಿದರೂ ಅವು ನೈಜ ಸುಖದ ಅನುಭವ ನೀಡಲಾರವು. ಅವುಗಳ ಸಂವೇದನೆ ಎಷ್ಟೇ ‘ಅನುಕೂಲಕರ’ವಾಗಿದ್ದರೂ ಅದು ಕೃತಕ. ಯಾಕೆಂದರೆ ರೋಬೊಗಳು ಪ್ರೀತಿಯನ್ನು ಅನುಭವಿಸಲಾರವು’ ಎಂಬುದು ಬಹುಸಂಖ್ಯಾತರ ಅಭಿಪ್ರಾಯ.
– ಕೇಟ್‌ ಕೆಲ್ಯಾಂಡ್‌

ರೋಬೊ ಪರಿಚಾರಕಿಯರು!
ಪಾಕಿಸ್ತಾನದ ಮುಲ್ತಾನ್‌ನ ರೆಸ್ಟೊರಂಟ್‌ನಲ್ಲಿ ಮೊದಲ ಬಾರಿಗೆ ರೋಬೊ ಪರಿಚಾರಕಿಯರು ಮುಗುಳುನಗೆಯೊಂದಿಗೆ ಪಿಜ್ಜಾ ಸರ್ವ್‌ ಮಾಡುತ್ತಿರುವುದು ಅಲ್ಲಿನ ಗ್ರಾಹಕರು ಹುಬ್ಬೇರುವಂತೆ ಮಾಡಿದೆ!

ಪಿಜ್ಜಾಡಾಟ್‌ಕಾಮ್‌ ರೆಸ್ಟೊರಂಟ್‌ನ ವ್ಯವಹಾರ ವಿಸ್ತರಣೆಗಾಗಿ ಅದರ ಮಾಲೀಕರು ಈಗ ರೋಬೊ ಪರಿಚಾರಕಿಯರ ಮೊರೆ ಹೋಗಿದ್ದಾರೆ. ‘ಆನ್‌ಲೈನ್‌ ಮೂಲಕ ಬಂದ ಆರ್ಡರ್‌ಗಳಿಗೆ ಡೆಲಿವರಿ ಕೊಡಲು ರೆಸ್ಟೊರಂಟ್‌ನಲ್ಲಿರುವ ಸಿಬ್ಬಂದಿ ಹೊರಗೆ ಹೋದಾಗ ಇಲ್ಲಿನ ಗ್ರಾಹಕರಿಗೆ ಸರ್ವ್‌ ಮಾಡಲು ಸಿಬ್ಬಂದಿ ಕೊರತೆ ಎದುರಾಗುತ್ತಿತ್ತು. ರೋಬೊ ಪರಿಚಾರಕಿಯರ ಮೂಲಕ ಈಗ ಸಿಬ್ಬಂದಿ ಸಮಸ್ಯೆ ದೂರಾಗಿದೆ. ಈ ರೋಬೊಗಳಿಂದ ಗ್ರಾಹಕರಿಗೂ ಖುಷಿಯಾಗುತ್ತಿದೆ’ ಎನ್ನುತ್ತಾರೆ ರೆಸ್ಟೊರಂಟ್‌ನ ಮಾಲೀಕ ಒಸಾಮಾ ಜಫಾರಿ.

‘ಇದೊಂದು ಹೊಸ ಪ್ರಯೋಗ. ರೋಬೊ ಪರಿಚಾರಕಿಯರು ಪಿಜ್ಜಾ ಸರ್ವ್‌ ಮಾಡುವುದು ಒಂದು ಹೊಸ ಅನುಭವ ನೀಡುತ್ತದೆ. ಮಕ್ಕಳಿಗಂತೂ ಇದೊಂದು ಒಳ್ಳೆಯ ಮನರಂಜನೆಯೂ ಹೌದು’ ಎನ್ನುತ್ತಾರೆ ರೆಸ್ಟೊರಂಟ್‌ನ ಗ್ರಾಹಕ ಹಮೀದ್‌ ಬಶೀರ್‌.

‘ಚೀನಾದಲ್ಲಿ ರೋಬೊ ಪರಿಚಾರಕರು ಸರ್ವ್ ಮಾಡುವ ವಿಡಿಯೊ ನೋಡಿದ್ದೆ. ನಮ್ಮ ರೆಸ್ಟೊರಂಟ್‌ನಲ್ಲಿ ರೋಬೊ ಪರಿಚಾರಕಿಯರನ್ನು ಬಳಸಲು ಆ ವಿಡಿಯೊ ಸ್ಫೂರ್ತಿ’ ಎನ್ನುತ್ತಾರೆ ಜಫಾರಿ.

ಅಂದಹಾಗೆ ಇಸ್ಲಾಮಾಬಾದ್‌ನ ನ್ಯಾಷನಲ್‌ ಯೂನಿವರ್ಸಿಟಿ ಆಫ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್‌ ಕಲಿತಿರುವ ಜಫಾರಿ, ತಾವೇ ಈ ರೋಬೊಗಳನ್ನು ತಯಾರಿಸಿದ್ದಾರೆ. ಸುಮಾರು ₹ 6 ಲಕ್ಷ ವೆಚ್ಚದಲ್ಲಿ ಈ ರೋಬೊಗಳನ್ನು ರೂಪಿಸಿದ್ದಾರೆ.

‘ರೋಬೊ ಪರಿಚಾರಕಿಯರು ಪಿಜ್ಜಾ ಸರ್ವ್‌ ಮಾಡುವುದು ಇಲ್ಲಿನ ಗ್ರಾಹಕರಿಗೆ ಇನ್ನಿಲ್ಲದ ಮೋಜು ನೀಡುತ್ತಿದೆ. ನನ್ನ ಈ ಪ್ರಯೋಗವನ್ನು ಮನೆಯವರು, ಸ್ನೇಹಿತರು ಮತ್ತು ಸ್ಥಳೀಯರು ಮೆಚ್ಚಿಕೊಂಡಿದ್ದಾರೆ’ ಎನ್ನುತ್ತಾರೆ ಜಫಾರಿ. 24 ಹರೆಯದ ಜಫಾರಿ ಇನ್ನಷ್ಟು ಸಂವೇದನಾಶೀಲವಾದ ರೋಬೊಗಳನ್ನು ತಯಾರಿಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರೆಸ್ಟೊರಂಟ್‌ನಲ್ಲಿ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವ, ಅವರೊಂದಿಗೆ ಸರಳವಾಗಿ ವ್ಯವಹರಿಸುವ ರೋಬೊಗಳನ್ನು ತಯಾರಿಸಿ ದಕ್ಷಿಣ ಪಾಕಿಸ್ತಾನದಲ್ಲಿರುವ ಅವರ ಕುಟುಂಬಕ್ಕೆ ಸೇರಿದ ಇತರೆ ರೆಸ್ಟೊರಂಟ್‌ಗಳಿಗೂ ಅವುಗಳನ್ನು ಪರಿಚಯಿಸುವ ಇರಾದೆ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.