ADVERTISEMENT

ಸಂಚಲನ ಮೂಡಿಸಿರುವ ಫೇಸ್‌ಐಡಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2017, 19:30 IST
Last Updated 19 ಡಿಸೆಂಬರ್ 2017, 19:30 IST
ಸಂಚಲನ ಮೂಡಿಸಿರುವ ಫೇಸ್‌ಐಡಿ
ಸಂಚಲನ ಮೂಡಿಸಿರುವ ಫೇಸ್‌ಐಡಿ   

2017ರಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಆವಿಷ್ಕಾರಗಳೇನೂ ನಡೆಯಲಿಲ್ಲ. ಸ್ಮಾರ್ಟ್‌ವಾಚ್‌, ಮುಖಚರ್ಯೆ ಗುರುತಿಸುವ ತಂತ್ರಜ್ಞಾನ, ಸ್ಮಾರ್ಟ್‌ಹೋಂ, ನಿಂಟೆಂಡೊ ಸ್ವಿಚ್‌ನಂತಹ ಹೈಬ್ರಿಡ್ ಗೇಮಿಂಗ್ ಸಾಧನ ಮಾರುಕಟ್ಟೆಗ ಬಂದರೂ ಇವೆಲ್ಲವೂ ನಿರೀಕ್ಷಿಸಿದಷ್ಟು ಸುದ್ದಿ ಮಾಡಲಿಲ್ಲ. 2017 ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ‘ವಿಫಲತೆಯ ವರ್ಷ’ ಎಂದೇ ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಹಲವು ಸೋಲಿನ ನಡುವೆಯೂ, ಮಾಹಿತಿ ಸಂರಕ್ಷಣೆಗೆ ಸಂಬಂಧಿಸಿದ ಹೊಸ ಆವಿಷ್ಕಾರಗಳು ಜಗತ್ತಿನ ಗಮನ ಸೆಳೆದವು. ಪ್ರತಿ ವರ್ಷದಂತೆ ಹ್ಯಾಕರ್‌ಗಳು ಆನ್‌ಲೈನ್‌ ಖಾತೆಗೆ ಖನ್ನ ಹಾಕವುದು, ಡಿಜಿಟಲ್‌ ದತ್ತಾಂಶ ಸೋರಿಕೆ, ಬ್ಯಾಂಕ್‌ ಖಾತೆಯಿಂದ ಹಣ ಕಳೆದುಕೊಳ್ಳುವ ಸುದ್ದಿಗಳು ಈ ಬಾರಿ ಅಷ್ಟಾಗಿ ಕೇಳಿಬರಲಿಲ್ಲ.

ಮಾಹಿತಿ ಸಂರಕ್ಷಣೆಗೆ ಸಂಬಂಧಿಸಿದಂತೆ ಸುಧಾರಿತ ಭದ್ರತಾ ತಂತ್ರಾಂಶಗಳು ಅಭಿವೃದ್ಧಿಗೊಂಡ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಆನ್‌ಲೈನ್‌ ಗ್ರಾಹಕರು ನಿಟ್ಟುಸಿರು ಬಿಟ್ಟರು. ಹ್ಯಾಕರ್‌ಗಳು ವೆಬ್‌ಸೈಟ್‌ಗೆ ಕನ್ನಹಾಕಿ ಬಳಕೆದಾರರ ಹೆಸರು, ಬ್ಯಾಂಕ್‌ ಖಾತೆ ಸಂಖ್ಯೆ, ಇಮೇಲ್‌, ಪಾಸ್‌ವರ್ಡ್‌ ಮತ್ತಿತರ ವೈಯಕ್ತಿಕ ಮಾಹಿತಿಗಳನ್ನು ಕದಿಯುವ ಪ್ರಮಾಣ 2017ರಲ್ಲಿ ಗಣನೀಯವಾಗಿ ಕುಸಿದಿದೆ ಎನ್ನುತ್ತದೆ ಇಕ್ವಿಫಾಕ್ಸ್‌ ಎನ್ನುವ ಕ್ರೆಡಿಟ್‌ ರಿಪೋರ್ಟಿಂಗ್‌ ಕಂಪೆನಿಯ ವರದಿ.

ADVERTISEMENT

ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಸಾಕಷ್ಟು ನಕಲಿ ಖಾತೆಗಳು ಸೃಷ್ಟಿಯಾಗಿ, ಈ ವರ್ಷ ಸುದ್ದಿಯಾದವು. ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಸೋಲಿನಲ್ಲೂ ಈ ನಕಲಿ ಖಾತೆಗಳು ನಿರ್ಣಾಯಕ ಪಾತ್ರ ವಹಿಸಿದವು. ಹಿಲರಿ ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲು ರಷ್ಯಾ ಬೆಂಬಲಿತ ಸಾವಿರಾರು ನಕಲಿ ಮತ್ತು ಸ್ವಯಂಚಾಲಿತ ಖಾತೆಗಳು ಸೃಷ್ಟಿಯಾದವು. ಈ ನಕಲಿ ಖಾತೆದಾರರು ಹಿಲರಿ ವಿರುದ್ಧ ಪ್ರಚಾರ ನಡೆಸಿ, ಟ್ರಂಪ್‌ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ಟೈಮ್ಸ್‌ ಮತ್ತು ಫೈರ್‌ ಐ ಎಂಬ ಸೈಬರ್‌ ಸೆಕ್ಯುರಿಟಿ ಕಂಪೆನಿ ನಡೆಸಿದ ತನಿಖೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ನಕಲಿ ಖಾತೆಗಳನ್ನು ಸ್ಥಗಿತಗೊಳಿಸಲು ಕ್ರಮ ವಹಿಸುವುದಾಗಿ ಫೇಸ್‌ಬುಕ್‌ ಹಾಗೂ ಟ್ವಿಟರ್‌ ಹೇಳಿಕೊಂಡರೂ, ಅಷ್ಟರಲ್ಲಾಗಲೇ ದೊಡ್ಡ ಹಾನಿ ಆಗಿದ್ದವು. ಈಗಲೂ ಇಂತಹ ನಕಲಿ ಖಾತೆಗಳನ್ನು ಸ್ಥಗಿತಗೊಳಿಸಲು ಪರಿಣಾಮಕಾರಿ ತಂತ್ರಜ್ಞಾನ ಅಭಿವೃದ್ಧಿಯಾಗಿಲ್ಲ.

ಇದೆಲ್ಲವೂ ತಂತ್ರಜ್ಞಾನದ ವಿಫಲತೆ ಸುದ್ದಿಗಳಾದರೆ, ಇನ್ನೊಂದೆಡೆ ಮೊಬೈಲ್‌ ಭದ್ರತೆಗೆ ಸಂಬಂಧಿಸಿದ ಗರಿಷ್ಠ ಗುಣಮಟ್ಟದ ಉಪಕರಣಗಳು, ಸುಧಾರಿತ ತಂತ್ರಜ್ಞಾನಗಳು ಅಭಿವೃದ್ಧಿಯಾದವು. ಆ್ಯಪಲ್‌ನ ಸ್ಮಾರ್ಟ್‌ ವಾಚ್‌ ಸಂಚಲನ ಮೂಡಿಸಿತು. ಆದರೆ, ಸ್ಮಾರ್ಟ್‌ವಾಚ್‌ ಕಾರ್ಯನಿರ್ವಹಿಸಬೇಕಾದರೆ ಐಫೋನ್‌ ಖರೀದಿಸುವುದು ಅನಿವಾರ್ಯವಾಗಿತ್ತು. ವಾಚ್‌ನ ಬ್ಯಾಟರಿ ಬಾಳಿಕೆ ಸಾಮರ್ಥ್ಯ ಕಡಿಮೆ ಇತ್ತು. ಹೀಗಾಗಿ ಈ ಉಪಕರಣ ಮಾರುಕಟ್ಟೆಯಲ್ಲಿ ನಿರೀಕ್ಷಿಸಿದಷ್ಟು ಚುರುಕಾಗಿ ಮುನ್ನುಗ್ಗಲಿಲ್ಲ.

10 ಸಾವಿರ ಡಾಲರ್ ಮೌಲ್ಯದ 18 ಕಾರಟ್‌ ಗೋಲ್ಡ್‌ ಮಾದರಿ ಸ್ಮಾರ್ಟ್‌ವಾಚ್‌ ಕೂಡ ಮಾರುಕಟ್ಟೆಯಲ್ಲಿ ಮುಗ್ಗರಿಸಿತು. ಎಚ್ಚೆತ್ತುಕೊಂಡಿರುವ ಆ್ಯಪಲ್‌ ಕಂಪೆನಿ, ಇದೀಗ ಸ್ಮಾರ್ಟ್‌ವಾಚ್‌ನ ಮೂರನೆಯ ಆವೃತ್ತಿ ಬಿಡುಗಡೆ ಮಾಡಿದೆ. ಐಫೋನ್‌ ಸಂಪರ್ಕ ಇಲ್ಲದೆಯೂ ಇದು ಕಾರ್ಯನಿರ್ವಹಿಸಬಲ್ಲದು. ಒಳ್ಳೆಯ ಬ್ಯಾಟರಿ ಬಾಳಿಕೆ ಮತ್ತು ಧ್ವನಿ ಗುರುತಿಸುವ ತಂತ್ರಜ್ಞಾನ ‘ಸಿರಿ’. ಕೂಡ ಇದರಲ್ಲಿ ಕ್ಷಿಪ್ರಗತಿಯಲ್ಲಿ ಕಾರ್ಯನಿರ್ವಹಿಸಬಲ್ಲದು.

ನಿಂಟೆಂಡೊ ಸ್ವಿಚ್‌

ಜಪಾನಿನ ಗೇಮಿಂಗ್‌ ಕಂಪೆನಿ ನಿಂಟೆಂಡೊ ಹೊರತಂದ ನಿಂಟೆಂಡೊ ಸ್ವಿಚ್‌ ಎಂಬ ಗೇಮಿಂಗ್‌ ಉಪಕರಣ ಈ ವರ್ಷ ಭಾರಿ ಸದ್ದು ಮಾಡಿತು. ವಿಡಿಯೊ ಗೇಮ್‌ ಕನ್ಸೋಲ್‌ ಆಗಿರುವ ಇದು ಬಹು ಬಳಕೆಯ ಉಪಕರಣ. ಟೂ ಇನ್‌ ಒನ್‌’ ಎಂಬ ಅವಕಾಶ ಇದೆ. ಅಂದರೆ ಎರಡು ಗ್ಯಾಜೆಟ್‌ ಒಂದರಲ್ಲೇ ಇವೆ. ಒಂದು ಕನ್ಸೋಲ್‌ ಅನ್ನು ಮನೆಯ ಲಿವಿಂಗ್ ರೂಂನಲ್ಲಿ ಬಳಸಬಹುದಾದರೆ ಮತ್ತೊಂದನ್ನು ಕೈಯಲ್ಲಿ ಹಿಡಿದು ಮನೆಯ ಹೊರ ಹೋಗಬಹುದು. ಇಬ್ಬರು ಆಟಗಾರರು ಪ್ರತ್ಯೇಕವಾಗಿ ಒಂದೊಂದನ್ನು ಹಿಡಿದುಕೊಂಡು ಆಡಬಹುದು. ಟಿ.ವಿ ಮೋಡ್‌, ಹ್ಯಾಂಡ್ ಹೆಲ್ಡ್‌ ಮೋಡ್‌ ಮತ್ತು ಟೇಬಲ್ ಟಾಪ್‌ ಮೋಡ್‌ ಎಂಬ ಮೂರು ಆಯ್ಕೆಗಳಲ್ಲಿ ಇದನ್ನು ಬಳಸಬಹುದು. ವಿಮಾನಗಳಲ್ಲಿ ಪ್ರಯಾಣ ಮಾಡುವಾಗಲೂ ಗೇಮಿಂಗ್‌ ಖುಷಿ ಅನುಭವಿಸಬಹುದು. ಕಳೆದ 10 ತಿಂಗಳಲ್ಲಿ 10 ದಶಲಕ್ಷ ಉಪಕರಣಗಳು ಮಾರಾಟವಾಗಿದೆ.

ಸ್ಮಾರ್ಟ್‌ ಹೋಂ

ಇಡೀ ಮನೆಯನ್ನು ಅಂತರ್ಜಾಲ ಸಂಪರ್ಕಿತ ನಿಯಂತ್ರಣ ವ್ಯವಸ್ಥೆಯಲ್ಲಿಡುವ ಸ್ಮಾರ್ಟ್‌ಹೋಂ ಪರಿಕಲ್ಪನೆ ಕೂಡ ಈ ವರ್ಷ ಹೆಚ್ಚು ಸುದ್ದಿ ಮಾಡಿತು. ಅತ್ಯುತ್ತಮ ಗುಣಮಟ್ಟದ ಕಣ್ಗಾವಲು ಕ್ಯಾಮೆರಾಗಳು, ತನ್ನಿಂದ ತಾನೆ ಸ್ವಿಚ್‌ ಆಫ್‌ ಆಗುವ ವಿದ್ಯುತ್‌ ಬಲ್ಪ್‌ಗಳು. ಆ್ಯಪಲ್‌ನ ‘ಸಿರಿ’, ಅಮೇಜಾನ್‌ನ ‘ಅಲೆಕ್ಸಾ’
ಗೂಗಲ್‌ ಅಸಿಸ್ಟಂಟ್‌ನಂತಹ ಧ್ವನಿ ಆಧಾರಿತ ವರ್ಚುವಲ್‌ ತಂತ್ರಜ್ಞಾನ ಬಳಸಿ, ಮನೆಯ ಜತೆಗೆ ಮನೆಯ ಯಜಮಾನ ಮಾತನಾಡಬಹುದಾದ (ಬಾಗಿಲು ಮುಚ್ಚುವುದು, ಟಿವಿ ಚಾಲನೆ ಮಾಡುವುದು, ದೀಪ ಆರಿಸುವುದು ಇತ್ಯಾದಿ) ಜಾಣ್ಮೆಯ ತಂತ್ರಜ್ಞಾನಗಳು ಸ್ಮಾರ್ಟ್‌ಹೋಂ ಮಾರುಕಟ್ಟೆಯನ್ನು ವಿಸ್ತರಿಸಿದವು.

ಸ್ಮಾರ್ಟ್‌ಹೋಂ ಮಾರುಕಟ್ಟೆ ಅಧ್ಯಯನ ಸಂಸ್ಥೆ ಎನ್‌ಪಿಡಿ ಸಮೂಹದ ವರದಿಯಂತೆ, ಅಮೆರಿಕದಲ್ಲಿ ಈಗಾಗಲೇ ಶೇ 25ರಷ್ಟು ಜನರು ಸ್ಮಾರ್ಟ್‌ಹೋಂ ತಂತ್ರಜ್ಞಾನಕ್ಕೆ ಬದಲಾಗಿದ್ದಾರೆ. ಇದು ಬಹುಬೇಡಿಕೆಯ ತಂತ್ರಜ್ಞಾನ.

ಮುಖಚರ್ಯೆ ಗುರುತು

ಬೆರಳಚ್ಚು, ಧ್ವನಿ ಗುರುತಿಸಿ ಕಾರ್ಯನಿರ್ವಹಿಸಬಲ್ಲ ತಂತ್ರಾಂಶಗಳು ಈಗಾಗಲೇ ಬಳಕೆಗೆ ಬಂದಿವೆ. ಬಳಕೆದಾರನ ಮುಖಚರ್ಯೆ ಗುರುತಿಸಿ, ಪಾಸ್‌ವರ್ಡ್‌ ತೆರೆಯಬಲ್ಲಂತಹ ಉಪಕರಣಗಳು ಹೊಸ ಸೇರ್ಪಡೆ. ‘ಮೈನಾರಿಟಿ ರಿಪೋರ್ಟ್‌’, ‘ದಿ ಇನ್‌ಕ್ರೆಡಿಬಲ್ಸ್‌’ನಂತಹ ಸಿನೆಮಾಗಳಲ್ಲಿ ಈ ರೀತಿ ಮುಖಚರ್ಯೆ ಗುರುತಿಸಿ ಕಾರ್ಯನಿರ್ವಹಿಸುವ ಆಗುವ ಗ್ಯಾಡ್ಜೆಟ್‌ಗಳನ್ನು ನೆನಪಿಸಿಕೊಳ್ಳಿ. ಸ್ಯಾಮ್ಸಂಗ್‌ ಗ್ಯಾಲಕ್ಸಿ ಸರಣಿಯ ಸ್ಮಾರ್ಟ್‌ಫೋನ್‌ನಲ್ಲಿ ಇಂತಹ ತಂತ್ರಜ್ಞಾನ ಪರಿಚಯಿಸಿತಾದರೂ ಇದು ನಿರೀಕ್ಷಿದಷ್ಟು ಯಶಸ್ವಿಯಾಗಲಿಲ್ಲ. ಅನೇಕ ಸಂದರ್ಭದಲ್ಲಿ ಗ್ಯಾಡ್ಜೆಟ್‌ ಕಪ್ಪು ಬಣ್ಣ ಹೊಂದಿರುವವರ ಮುಖವನ್ನು ಗುರುತಿಸುವಲ್ಲಿ ವಿಫಲವಾಯಿತು. ಆದರೆ, ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾದ ಆ್ಯಪಲ್‌ನ ಎಕ್ಸ್‌ ಸರಣಿಯ ಸ್ಮಾರ್ಟ್‌ಫೋನ್‌ನಲ್ಲಿ ‘ಫೇಸ್‌ಐಡಿ’ ಎಂಬ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಇದು ಎಷ್ಟು ಚತುರ ತಂತ್ರಜ್ಞಾನ ಎಂದರೆ ಇಡೀ ದಿನದಲ್ಲಿ ಬಳಕೆದಾನ ಮುಖಭಾವ ಹೇಗೆಲ್ಲಾ ಬದಲಾಗುತ್ತಿರುತ್ತದೆ ಎನ್ನುವುದನ್ನು ಗುರುತಿಸುತ್ತದೆ. ಮುಖದಲ್ಲಿ ಗಡ್ಡ ಬೆಳೆದರೆ, ಮೀಸೆ ತೆಗೆದರೆ, ತಲೆ ಕೂದಲು ಬೆಳೆಸಿದರೆ, ಹೆಲ್ಮೆಟ್‌ ಹಾಕಿಕೊಂಡರೆ, ತಲೆಗೆ ಸ್ಕಾರ್ಪ್‌ ಕಟ್ಟಿಕೊಂಡರೆ ಹೀಗೆ ಯಾವ ಹೊತ್ತಿನಲ್ಲಿ ಮುಖಭಾವ ಹೇಗೆ ಬದಲಾದರೂ, ಅಸಲಿ ಬಳಕೆದಾರರನ್ನೇ ‘ಫೇಸ್‌ ಐಡಿ’ ಗುರುತಿಸುತ್ತದೆ. ಮತ್ತು ನೈಜ ಬಳಕೆದಾರನ ಮುಖ ದರ್ಶನದ ನಂತರವೇ ಪಾಸ್‌ವರ್ಡ್‌ ಓಪನ್‌ ಆಗುತ್ತದೆ.

-ಬ್ರಿಯಾನ್‌ ಎಕ್ಸ್‌ ಚೆನ್‌ (ನ್ಯೂಯಾರ್ಕ್‌ ಟೈಮ್ಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.