ADVERTISEMENT

ಸಂಸದರ ಅನುದಾನ ಹೆಚ್ಚಳಕ್ಕೆ ನಕಾರ

ಒಲವು ತೋರದ ಹಣಕಾಸು ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 23:30 IST
Last Updated 20 ಜುಲೈ 2016, 23:30 IST
ಸಂಸದರ ಅನುದಾನ ಹೆಚ್ಚಳಕ್ಕೆ ನಕಾರ
ಸಂಸದರ ಅನುದಾನ ಹೆಚ್ಚಳಕ್ಕೆ ನಕಾರ   

ನವದೆಹಲಿ (ಪಿಟಿಐ):  ಸಂಸತ್‌ ಸದಸ್ಯರ ಸ್ಥಳೀಯ  ಪ್ರದೇಶಾಭಿವೃದ್ಧಿ ಯೋಜನೆಯ (ಎಂಪಿಎಲ್‌ಎಡಿ) ವಾರ್ಷಿಕ ಅನುದಾನದ ಮೊತ್ತವನ್ನು ₹ 5 ಕೋಟಿಗಳಿಂದ ₹ 25 ಕೋಟಿಗಳಿಗೆ ಹೆಚ್ಚಿಸುವುದಕ್ಕೆ ಹಣಕಾಸು ಸಚಿವಾಲಯವು ಒಲವು ತೋರಿಲ್ಲ ಎಂದು ಸಂಸತ್ತಿಗೆ ತಿಳಿಸಲಾಗಿದೆ.

‘ಅನುದಾನದ ಮೊತ್ತವನ್ನು ಐದು ಪಟ್ಟು ಹೆಚ್ಚಿಸಲು ಬೇಡಿಕೆ ಸಲ್ಲಿಸಲಾಗಿದೆ. ಇದನ್ನು ಒಪ್ಪಿಕೊಂಡರೆ ಬಜೆಟ್‌ ಹಂಚಿಕೆ  ಪ್ರಮಾಣವು ಸದ್ಯದ ₹ 3,950 ಕೋಟಿಗಳಿಂದ ₹ 19,750 ಕೋಟಿಗಳಿಗೆ ಏರಿಕೆಯಾಗುತ್ತದೆ.  ಇಷ್ಟು ದೊಡ್ಡ  ಮೊತ್ತ ಒದಗಿಸುವುದು ಸರ್ಕಾರಕ್ಕೆ ಹೊರೆಯಾಗಲಿದೆ’ ಎಂದು ಸಾಂಖ್ಯಿತ ಸಚಿವ ಡಿ. ವಿ. ಸದಾನಂದಗೌಡ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು.

‘ಎಂಪಿಎಲ್‌ಎಡಿ’ಯ ಅನುದಾನದ ಪ್ರಮಾಣವನ್ನು ₹ 2 ಕೋಟಿಗಳಿಂದ ₹ 5 ಕೋಟಿಗಳಿಗೆ 12 ವರ್ಷಗಳ ನಂತರ ಹೆಚ್ಚಿಸಲಾಗಿತ್ತು. ಈಗ ಮುಂದಿಟ್ಟಿರುವ ಬೇಡಿಕೆಯು ಕೇವಲ 5 ವರ್ಷಗಳ ನಂತರ ಕೇಳಿಬಂದಿದೆ.  ಲೆಕ್ಕಪತ್ರ ವರದಿ, ಯೋಜನೆಯ  ಮೌಲ್ಯಮಾಪನ, ಇದುವರೆಗೆ ಬಿಡುಗಡೆ ಮಾಡಿರುವ ಅನುದಾನದ ಬಳಕೆ, ಬಳಕೆ ಮಾಡದ ಅನುದಾನ ಮತ್ತಿತರ ಸಂಗತಿಗಳನ್ನು  ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು.  ಸದ್ಯಕ್ಕಂತೂ ಅನುದಾನ ಪ್ರಮಾಣ ಹೆಚ್ಚಿಸುವ ಆಲೋಚನೆ ತಮ್ಮ ಇಲಾಖೆಗೂ ಇಲ್ಲ’ ಎಂದು ಸದಾನಂದ ಗೌಡ ಅವರು ಸದನಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

‘ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆ ಕಾರ್ಯಗತಗೊಳಿಸಲು ಪ್ರತಿಯೊಬ್ಬ ಸಂಸದನಿಗೆ ಕೊಡಮಾಡುವ ವಾರ್ಷಿಕ ಅನುದಾನದ ಮೊತ್ತವನ್ನು ₹ 10 ಕೋಟಿಗಳಿಗೆ ಏರಿಸಬಹುದು ಎಂದು ‘ಎಂಪಿಎಲ್‌್ಎಡಿ’ಗೆ ಸಂಬಂಧಿಸಿದ  ಲೋಕಸಭಾ ಸಮಿತಿಯು, 2013ರಲ್ಲಿಯೇ ಶಿಫಾರಸು ಮಾಡಿತ್ತು.  ಈ ಅನುದಾನ ಮೊತ್ತವನ್ನು ₹ 25 ಕೋಟಿಗಳಿಗೆ  ಹೆಚ್ಚಿಸಬೇಕು ಎಂದು ಸಂಸತ್‌್ ಸಮಿತಿಯು  ಮನವಿ ಮಾಡಿಕೊಂಡಿತ್ತು’ ಎಂದರು.

ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಬಳಕೆಯಾಗದೆ ಉಳಿದ ಹಣವನ್ನು ಮರು ವರ್ಷವೂ  ಬಳಸಬಹುದಾದ ಸೌಲಭ್ಯವನ್ನು ಈ ಯೋಜನೆ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.