ADVERTISEMENT

ಸಕ್ಕರೆ ಉತ್ಪಾದನೆ ಹೆಚ್ಚಳ

ಪಿಟಿಐ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST
ಸಕ್ಕರೆ ಉತ್ಪಾದನೆ ಹೆಚ್ಚಳ
ಸಕ್ಕರೆ ಉತ್ಪಾದನೆ ಹೆಚ್ಚಳ   

ನವದೆಹಲಿ: ಪ್ರಸಕ್ತ ಅವಧಿಯಲ್ಲಿ ನವೆಂಬರ್‌ 15ರವರೆಗೆ 13.73 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ಪಾದನೆ ಪ್ರಮಾಣ ಶೇ 79 ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಐಎಸ್‌ಎಂಎ) ತಿಳಿಸಿದೆ.

ಕಳೆದ ವರ್ಷ ಸಕ್ಕರೆ ಉತ್ಪಾದನೆ ಪ್ರಮಾಣ 7.67 ಲಕ್ಷ ಟನ್‌ ಇತ್ತು. ಈ ಬಾರಿ ಅವಧಿಗೂ ಮುನ್ನವೇ ಕಬ್ಬು ಅರೆಯುವ ಕಾರ್ಯ ಆರಂಭವಾಗಿದೆ. ಹೀಗಾಗಿ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ. ಕಳೆದ ವರ್ಷ 222 ಕಾರ್ಖಾನೆಗಳು ಕಬ್ಬು ಅರೆಯುವಿಕೆ ಆರಂಭಿಸಿದ್ದವು. ಈ ಬಾರಿ 313 ಕಾರ್ಖಾನೆಗಳು ಕಬ್ಬು ಅರೆಯುವಿಕೆಯಲ್ಲಿ ನಿರತವಾಗಿವೆ.

2017–18ರ ಅವಧಿಗೆ (ಅಕ್ಟೋಬರ್‌–ಸೆಪ್ಟೆಂಬರ್) ಒಟ್ಟಾರೆ 2.50 ಕೋಟಿ ಟನ್‌ ಸಕ್ಕರೆ ಉತ್ಪಾದನೆ ಆಗುವ ನಿರೀಕ್ಷೆ ಮಾಡಿದೆ. 2016–17ರಲ್ಲಿ 2 ಕೋಟಿ ಟನ್‌ ಉತ್ಪಾದನೆ ಆಗಿತ್ತು.

ADVERTISEMENT

ಈ ಬಾರಿ ಹೆಚ್ಚಿನ ಉತ್ಪಾದನೆ ನಿರೀಕ್ಷೆ ಮಾಡಲಾಗಿದೆ. ಹೀಗಾಗಿ ತಕ್ಷಣವೇ ಜಾರಿಗೆ ಬರುವಂತೆ ವರ್ತಕರಿಗೆ ವಿಧಿಸಿರುವ ಸಕ್ಕರೆ ದಾಸ್ತಾನು ಮಿತಿ ನಿರ್ಬಂಧ ಹಿಂದಕ್ಕೆ ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಒಕ್ಕೂಟ ಹೇಳಿದೆ.

ಕೇಂದ್ರ ಸರ್ಕಾರ ಡಿಸೆಂಬರ್‌ 31ರವರೆಗೂ ಸಕ್ಕರೆ ದಾಸ್ತಾನು ಮಿತಿಯನ್ನು ಮುಂದುವರಿಸಿದೆ.

ಉತ್ತರ ಪ್ರದೇಶದಲ್ಲಿ 5.67 ಲಕ್ಷ ಟನ್‌ ಮತ್ತು ಮಹಾರಾಷ್ಟ್ರದಲ್ಲಿ 3.26 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಆಗಿದೆ. ಕರ್ನಾಟಕದಲ್ಲಿ ಕಳೆದ ಬಾರಿಯಷ್ಟೇ ಈ ಬಾರಿಯೂ ಉತ್ಪಾದನೆ ಆಗಿದೆ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.