ADVERTISEMENT

ಸಿಂಗಪುರ ವಿಮಾನ ನಿಲ್ದಾಣ ಅಚ್ಚರಿಗಳ ತಾಣ

ಪ್ರವೀಣ ಕುಲಕರ್ಣಿ
Published 14 ಅಕ್ಟೋಬರ್ 2014, 19:30 IST
Last Updated 14 ಅಕ್ಟೋಬರ್ 2014, 19:30 IST

ಸಿಂಗಪುರದಲ್ಲಿ ವಿಮಾನದಿಂದ ಇಳಿದು ‘ಆಗಮನ ದ್ವಾರ’ದ ಮೂಲಕ ಹೊರಬಂದಾಗ ಇದೇನು ವಿಮಾನ ನಿಲ್ದಾಣವೋ ಇಲ್ಲವೆ ನಮ್ಮನ್ನು ಶಾಪಿಂಗ್‌ ಮಾಲ್‌ಗೆ ತಂದು ಬಿಡಲಾಗಿದೆಯೋ ಎನ್ನುವ ಗೊಂದಲ. ಲಾಂಜ್‌ನ ಎಡ–ಬಲ ಬದಿಗಳಲ್ಲಿ ಸಾವಿರ ಮೀಟರ್‌ ಉದ್ದಕ್ಕೂ ಅಂಗಡಿಗಳ ಸಾಲೇ ಸಾಲು. ಪ್ರಪಂಚದ ನಾನಾ ಭಾಗಗಳಿಂದ ಬಂದ ಪ್ರಯಾಣಿಕರು ಆ ಅಂಗಡಿಗಳಿಗೆ ಲಗ್ಗೆ ಇಟ್ಟಿದ್ದರು. ಹೌದು, ಅಲ್ಲಿ ಭಾರತೀಯ ಮುಖಗಳೇ ಹೆಚ್ಚಾಗಿ ಕಾಣುತ್ತಿದ್ದವು.

ಸಿಂಗಪುರದ ಚಾಂಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ತಾಕತ್ತೇ ಅದು. ಇದು ವಿಮಾನ ನಿಲ್ದಾಣವಷ್ಟೇ ಅಲ್ಲ; ಬದಲಾಗಿ ಚಾಂಗಿ ಮರದ (ಸಿಂಗಪುರದ ರಾಷ್ಟ್ರೀಯ ಮರ – ಅದರ ಪಳೆಯುಳಿಕೆಗಳೂ ಈಗ ಉಳಿದಿಲ್ಲ. ಆದರೆ, ಆ ಮರದ ಚಿತ್ರಗಳು ಎಲ್ಲೆಲ್ಲೂ ಸಿಗುತ್ತವೆ) ಟಿಸಿಲುಗಳಂತೆ ಶಾಪಿಂಗ್‌ ಮಾಲ್‌, ಮನರಂಜನೆ ಹಾಲ್‌, ಸೂರ್ಯಕಾಂತಿ ಉದ್ಯಾನ, ಚಿಟ್ಟೆ ವನ ಇತ್ಯಾದಿ, ಇತ್ಯಾದಿಯಾಗಿ ತನ್ನ ಹರವನ್ನು ವಿಸ್ತರಿಸಿಕೊಂಡಿದೆ. ಮಸಾಜ್‌ ಕೇಂದ್ರಗಳೂ ಇಲ್ಲುಂಟು. ಆದರಾತಿಥ್ಯದ ವಿಷಯದಲ್ಲಿ ಈ ವಿಮಾನ ನಿಲ್ದಾಣಕ್ಕೆ ಸರಿಸಾಟಿ ಬೇರಿಲ್ಲ.

ಥರಾವರಿ ಸುಗಂಧ ದ್ರವ್ಯ, ಯುರೋಪಿನ ಎಲ್ಲ ಬ್ರಾಂಡ್‌ಗಳ ಮದ್ಯ, ಫ್ಯಾಕ್ಟರಿಯಿಂದ ನೇರವಾಗಿ ಹಾರಿಬಂದ ಅತ್ಯಾಧುನಿಕ ಇಲೆಕ್ಟ್ರಾನಿಕ್‌ ಸಲಕರಣೆ, ‘ಹೆಂಗಳೆಯರನ್ನು ಮುಂದಕ್ಕೆ ಹೋಗಲು ಬಿಡಲ್ಲ’ ಎಂಬ ಪಣ ತೊಟ್ಟಿರುವ ಚರ್ಮದ ಚಪ್ಪಲಿ–ಬ್ಯಾಗ್‌, ಜಗತ್ತಿನ ಖ್ಯಾತ ವಿನ್ಯಾಸಕಾರರ ಕೈಚಳಕದಲ್ಲಿ ಅರಳಿದ ಉಡುಪು, ಬಂಗಾರವೋ, ಬೇರೆ ಇನ್ಯಾವುದೊ ಲೋಹವೋ, ಒಟ್ಟಿನಲ್ಲಿ ಕಣ್ಣು ಕುಕ್ಕಿಸುವ ಆಭರಣ, ಬಾಯಲ್ಲಿ ನೀರೂರಿಸುವ ಚಾಕ್ಲೇಟ್‌, ಅಂಗಡಿಯಿಂದ ಅಂಗಡಿಗೆ ಸುತ್ತಾಡಿ ಸುಸ್ತಾದವರಿಗೆ ಕರೆದು ಉಪಚಾರ ಮಾಡುವ ಖಾದ್ಯದ ಮಳಿಗೆ... ಅಬ್ಬಬ್ಬಾ, ಅದು ಕೊಳ್ಳುವವರ ಪಾಲಿನ ಸ್ವರ್ಗ.

ಯಾವುದೇ ಅಂಗಡಿ ಹೊಕ್ಕರೂ ಖರೀದಿ ಮಾಡುವ ಹಂಬಲ ಪುಟಿದೇಳುತ್ತದೆ. ಬೆಲೆ ನೋಡಿ ನಿರುತ್ಸಾಹ ಮೂಡಿದಾಗ ನಮ್ಮ ‘ಮೂಡ್‌’ ಅರ್ಥ ಮಾಡಿಕೊಂಡಂತೆ ‘ಮೇ ಐ ಹೆಲ್ಪ್‌ ಯು’ ಎನ್ನುತ್ತಾ ಬರುವ ಸಿಂಗಪುರದ ಸುಂದರಿ, ತನ್ನ ಮುಗುಳ್ನಗೆಯಿಂದಲೇ ನಾವು ಜೇಬಿನಿಂದ ಕ್ರೆಡಿಟ್‌ ಕಾರ್ಡ್‌ ತೆಗೆಯುವಂತೆ ಮಾಡುತ್ತಾಳೆ. ಶಾಪಿಂಗ್‌ನಿಂದ ಬ್ಯಾಂಕ್‌ ಬ್ಯಾಲೆನ್ಸ್‌ ಕುಗ್ಗಿ, ಲಗ್ಗೇಜ್‌ ಹೆಚ್ಚಾಗಿ ತಲೆ ಬಿಸಿಯಾದರೆ ವಿಮಾನ ನಿಲ್ದಾಣದ ಎರಡನೇ ಮಹಡಿಯಲ್ಲಿ ‘ರೂಪ್‌ ಟಾಪ್‌’ ಈಜುಕೊಳವಿದೆ. ಆಕಾಶಕ್ಕೆ ವಿಮಾನ ಚಿಮ್ಮುವುದನ್ನು ನೋಡುತ್ತಾ ನಾವು ಈಜುಕೊಳದೊಳಗೆ ನೆಗೆಯಬಹುದು!

ಸಿಂಗಪುರದ ಮೊದಲ ಹತ್ತು ಪ್ರವಾಸಿ ದೇಶಗಳಲ್ಲಿ ಭಾರತವೂ ಒಂದಾಗಿದೆ. ದಕ್ಷಿಣ ಏಷ್ಯಾ ಭಾಗದ ಲೆಕ್ಕಾಚಾರಕ್ಕೆ ಬಂದರೆ ನಮ್ಮ ದೇಶದ್ದೇ ಪಾರಮ್ಯ. ಕಳೆದ ವರ್ಷ ದಕ್ಷಿಣ ಏಷ್ಯಾದ ರಾಷ್ಟ್ರಗಳಿಂದ 11.61 ಲಕ್ಷ ಪ್ರವಾಸಿಗರು ಸಿಂಗಪುರಕ್ಕೆ ಭೇಟಿ ನೀಡಿದ್ದರು. ಅದರಲ್ಲಿ ಭಾರತದ ಪಾಲೇ 9.33 ಲಕ್ಷ. ಅಂದಹಾಗೆ, ಅದರಲ್ಲಿ 90 ಸಾವಿರ ಜನ ಸಮುದ್ರಯಾನದ ಮೂಲಕ ಬಂದಿದ್ದರು ಎಂಬ ಕುತೂಹಲಕಾರಿ ಮಾಹಿತಿಯನ್ನೂ ನೀಡುತ್ತದೆ ಸಿಂಗಪುರ ಪ್ರವಾಸೋದ್ಯಮ ಮಂಡಳಿ (ಎಸ್‌ಟಿಬಿ). ಸಮುದ್ರದ ಮೂಲಕ ಬಂದವರೂ ವಿಮಾನ ನಿಲ್ದಾಣ ನೋಡದೆ ಹೋಗಿಲ್ಲ ಎನ್ನುವುದು ಎಸ್‌ಟಿಬಿ ವಿವರಣೆ.

ಭಾರತದ ಅಂಕಿ–ಅಂಶಗಳನ್ನು ಇನ್ನಷ್ಟು ಸೀಳಿ ನೋಡಿದರೆ ರಾಜಧಾನಿ ನವದೆಹಲಿಗೆ ಇರುವ ‘ಸಿಂಗಪುರದ ಪ್ರೇಮ’ ಎದ್ದು ಕಾಣುತ್ತದೆ. ನಂತರದ ಸ್ಥಾನದಲ್ಲಿ ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್‌ ಮತ್ತು ಬೆಂಗಳೂರು ನಗರಗಳಿವೆ. ಏಷ್ಯಾ ಪೆಸಿಫಿಕ್‌ ವಲಯದ (ಭಾರತದ ಪೂರ್ವ ಸಾಗರದ ಭಾಗ) ದೇಶಗಳಿಗೆ ತೆರಳುವ ಭಾರತೀಯ ಪ್ರಯಾಣಿಕರಿಗೆ ಸಂಪರ್ಕ ಕೊಂಡಿಯಾಗಿರುವ ಚಾಂಗಿ ವಿಮಾನ ನಿಲ್ದಾಣ, ಅವರೆಲ್ಲ ಮುಂದಕ್ಕೆ ಹಾರುವ ಮುನ್ನ ಒಮ್ಮೆ ತನ್ನ ಸಂತೆಯಲ್ಲಿ ಸುತ್ತಾಡುವಂತೆ ಆಹ್ವಾನಿಸುತ್ತದೆ.

ಅಂತರರಾಷ್ಟ್ರೀಯ ‘ಟ್ರಾನ್ಸಿಟ್‌ ಹಬ್‌’ (ದೇಶ–ದೇಶಗಳ ನಡುವಿನ ಪ್ರವಾಸದ ಸಂಪರ್ಕ ತಾಣ) ಎನಿಸಿರುವ ಚಾಂಗಿ ವಿಮಾನ ನಿಲ್ದಾಣ, 60 ದೇಶಗಳ 300 ನಗರಗಳಿಗೆ ಸಂಪರ್ಕ ಹೊಂದಿದೆ. ಇಲ್ಲಿಂದ ಪ್ರತಿ 90 ಸೆಕೆಂಡ್‌ಗೆ ಒಂದು ವಿಮಾನ ಹಾರುತ್ತದೆ ಇಲ್ಲವೆ ಬಂದು ಇಳಿಯುತ್ತದೆ. ಸೌಕರ್ಯಗಳ ವಿಷಯದಲ್ಲಿ ಜಗತ್ತಿನ ‘ನಂಬರ್‌ ಒನ್‌’ ವಿಮಾನ ನಿಲ್ದಾಣ ಎಂಬ ಹಿರಿಮೆಗೂ ಇದು ಪಾತ್ರವಾಗಿದೆ.
‘ಟ್ರಾನ್ಸಿಟ್‌’ ಪ್ರಯಾ ಣಿಕರ ಮುಂದಿನ ವಿಮಾನಯಾನಕ್ಕೆ ಐದು ಗಂಟೆಗಳಷ್ಟು ಅಂತರವಿದ್ದರೆ ವಿಮಾನ ನಿಲ್ದಾಣದ ವತಿಯಿಂದಲೇ ಪ್ರಯಾಣಿಕರನ್ನು ಉಚಿತವಾಗಿ ಸಿಂಗಪುರ ಸುತ್ತಾಟಕ್ಕೆ ಕರೆದೊಯ್ಯಲಾಗುತ್ತದೆ.

ಮುಂದಿನ ಪ್ರಯಾಣದ ಬೋರ್ಡಿಂಗ್‌ ಪಾಸ್‌ ಹೊಂದಿದ ‘ಟ್ರಾನ್ಸಿಟ್‌’ ಪ್ರಯಾಣಿಕರು, ಸಿಂಗಪುರದ ವೀಸಾ ಇಲ್ಲದಿದ್ದರೂ ಗರಿಷ್ಠ 96 ಗಂಟೆ (ನಾಲ್ಕು ದಿನ) ನಗರದಲ್ಲಿ ತಂಗಲು ಅವಕಾಶ ಕಲ್ಪಿಸಲಾಗುತ್ತದೆ. ನಗರ ಸುತ್ತಾಟ ಬೇಡವೆಂದವರಿಗೆ ವಿಮಾನ ನಿಲ್ದಾಣದಲ್ಲೇ ವಿಹಾರ ಮಾಡಲು ಐದು (ಕ್ಯಾಕ್ಟಸ್‌, ಆರ್ಕಿಡ್‌, ಸೂರ್ಯಕಾಂತಿ, ಚಿಟ್ಟೆ ಹಾಗೂ ಸಸ್ಯ) ಉದ್ಯಾನಗಳಿವೆ. ಮಕ್ಕಳಿಗಾಗಿ ಆಟಿಕೆ ಸಲಕರಣೆಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಪ್ರಯಾಣಿಕರ ಸ್ನಾನದ ಗೃಹಗಳು ಮತ್ತು ವಿಶ್ರಾಂತಿ ಕೋಣೆಗಳು ನಿಲ್ದಾಣದ ಮೂರೂ ಟರ್ಮಿನಲ್‌ಗಳಲ್ಲಿ ಸಿಗುತ್ತವೆ. ಬಳಕೆ ಮಾಡಿದ ಸಮಯಕ್ಕೆ ಮಾತ್ರ ಪಾವತಿ ಮಾಡುವ ಸೌಲಭ್ಯವುಳ್ಳ ವಿಶೇಷ ಲಾಂಜ್‌ಗಳು, ಐಷಾರಾಮಿ ಹೋಟೆಲ್‌ಗಳು ಸಹ ಇಲ್ಲಿವೆ. 350 ಅಂಗಡಿಗಳು, 120 ಬಾರ್‌ ಮತ್ತು ರೆಸ್ಟೊರೆಂಟ್‌ಗಳು ಇಲ್ಲಿನ ಲಾಂಜ್‌ನಲ್ಲಿ ತುಂಬಿಕೊಂಡಿವೆ. ಮೂರೂ ಟರ್ಮಿನಲ್‌ಗಳ ಸಿನಿಮಾ ಮಂದಿರಗಳು ಪ್ರಯಾಣಿಕರಿಗೆ ಉಚಿತ ಮನರಂಜನೆ ಒದಗಿಸುತ್ತವೆ.

ಟರ್ಮಿನಲ್‌ 1ರಲ್ಲಿರುವ ‘ಕೈನೇಟಿಕ್‌ ರೇನ್‌’ ಎಂಬ ಕುಣಿಯುವ ಡ್ರಾಪ್ಲೆಟ್‌ಗಳ ಮಳೆ ಪ್ರಯಾಣಿಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. 1,216 ಕಂಚಿನ ಡ್ರಾಪ್ಲೆಟ್‌ಗಳನ್ನು ಹೊಂದಿರುವ ‘ಕೈನೇಟಿಕ್‌ ರೇನ್‌’ ಜನರ ಮುಂದೆ ವಿಮಾನವನ್ನು ಹಾರಿಸುತ್ತದೆ, ಬಲೂನನ್ನು ಊದುತ್ತದೆ, ಗಾಳಿಪಟವನ್ನೂ ತೂರಿ ಬಿಡುತ್ತದೆ. ಈ ವೈಭವವನ್ನು ನೋಡುತ್ತಾ ಮೈಮರೆತು ನಿಂತವರಿಗೆ ಹೊರಗೆ ರನ್‌ವೇಯಿಂದ ತಮ್ಮ ವಿಮಾನ ಹಾರಿಹೋದ ಪರಿವೇ ಇರುವುದಿಲ್ಲ. ಇದೇ ಕಾರಣಕ್ಕೆ ಆಗಾಗ ಉದ್ಘೋಷಕರು ‘ನಿಮ್ಮ ವಿಮಾನ ಸಮಯದ ಕಡೆ ಗಮನ ಇಡಬೇಕು’ ಎಂದು ಎಚ್ಚರಿಕೆ ಕೊಡುತ್ತಾರೆ.

ಭವ್ಯ ಇತಿಹಾಸ
ಚಾಂಗಿ, ಸಿಂಗಪುರದ ಮೂರನೇ ವಿಮಾನ ನಿಲ್ದಾಣ. ಮೊದಲಿನ ಎರಡು ವಿಮಾನ ನಿಲ್ದಾಣಗಳಿಗೆ ಸಂಚಾರ ದಟ್ಟಣೆ ನಿಭಾಯಿಸುವಷ್ಟು ಸಾಮರ್ಥ್ಯ ಇಲ್ಲದ್ದರಿಂದ ಮೂರನೇ ನಿಲ್ದಾಣವನ್ನು ಸಿಂಗಪುರ ಆಡಳಿತ ನಿರ್ಮಿಸಿದೆ. 1,300 ಹೆಕ್ಟೇರ್‌ ವಿಸ್ತೀರ್ಣದಲ್ಲಿ ತಲೆ ಎತ್ತಿದೆ ಹೊಸ ನಿಲ್ದಾಣ. ಅದರಲ್ಲಿ 870 ಹೆಕ್ಟೇರ್‌ ಪ್ರದೇಶವನ್ನು ಸಮುದ್ರದಿಂದ ಸ್ವಾಧೀನಕ್ಕೆ ಪಡೆಯಲಾಗಿದೆ. ಸಮುದ್ರ ತೀರದ ಮರಳನ್ನು ಗುಡಿಸಿ ಮತ್ತು ದೇಶದ ಗುಡ್ಡಗಳ ಮಣ್ಣನ್ನು ಅಗೆದು ತಂದು ಸಮುದ್ರಕ್ಕೆ ಸುರಿದು, 5.2 ಕೋಟಿ ಚದರ ಮೀಟರ್‌ ಭೂಪ್ರದೇಶವನ್ನು ಸೃಷ್ಟಿಸಲಾಗಿದೆ; ರಾಮಾಯಣದ ವಾನರ ಸೇನೆ ಸಮುದ್ರಕ್ಕೆ ಕಲ್ಲು ಹಾಕಿ ಲಂಕೆಗೆ ಸೇತುವೆ ನಿರ್ಮಾಣ ಮಾಡಿದಂತೆ!

ವಿಮಾನ ನಿಲ್ದಾಣದಲ್ಲಿ ಒಟ್ಟಾರೆ 40 ಸಾವಿರ ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡುತ್ತದೆ. ಅದರಲ್ಲಿ ಭಾರತೀಯ ಮೂಲದ ತಮಿಳರ ಸಂಖ್ಯೆಯೇ ಹೆಚ್ಚಿದೆ. ಸಿಂಗಪುರದ ಅಧಿಕೃತವಾದ ನಾಲ್ಕು ಆಡಳಿತ ಭಾಷೆಗಳಲ್ಲಿ ತಮಿಳು ಸಹ ಒಂದಾಗಿದೆ.

ಚಾಂಗಿ ವಿಮಾನ ನಿಲ್ದಾಣ ಮೂರು ಟರ್ಮಿನಲ್ ಹಾಗೂ ಎರಡು ರನ್‌ವೇ ಹೊಂದಿದ್ದು, ವಾರ್ಷಿಕ 6.60 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಕಳೆದ ವರ್ಷ ನಾಲ್ಕನೇ ಟರ್ಮಿನಲ್ ನಿರ್ಮಿಸುವ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. 2017ರಲ್ಲಿ ಅದು ಕಾರ್ಯಾಚರಣೆ ಆರಂಭಿಸಲಿದ್ದು, ಆಗ ವಿಮಾನ ನಿಲ್ದಾಣದ ಒಟ್ಟು ಸಾಮರ್ಥ್ಯ ವಾರ್ಷಿಕ 8 ಕೋಟಿ ಪ್ರಯಾಣಿಕರಿಗೆ ಹೆಚ್ಚಲಿದೆ.

ಚಾಂಗಿ ಏರ್‌ಪೋರ್ಟ್ ಗ್ರೂಪ್‌ನ ಆಡಳಿತ ಮಂಡಳಿಗೆ ಇಷ್ಟಕ್ಕೇ ಸಮಾಧಾನ ಇಲ್ಲ. ಇನ್ನೊಂದು ರನ್‌ವೇ ಹಾಗೂ ಐದನೇ ಟರ್ಮಿನಲ್ ನಿರ್ಮಾಣಕ್ಕೂ ಅದು ಮುಂದಡಿ ಇಟ್ಟಿದೆ. 2024ರ ವೇಳೆಗೆ ಐದನೇ ಟರ್ಮಿನಲ್ ಕಾರ್ಯಾಚರಣೆ ಆರಂಭಿಸಲಿದ್ದು, ಅದೊಂದೇ ವಾರ್ಷಿಕ 8 ಕೋಟಿ ಪ್ರಯಾಣಿಕರ ನಿರ್ವಹಣೆ ಮಾಡಲಿದೆ. ಆಗ ವಿಮಾನ ನಿಲ್ದಾಣದ ವಾರ್ಷಿಕ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ 16 ಕೋಟಿಗೆ ವಿಸ್ತರಣೆಗೊಳ್ಳಲಿದ್ದು, ಜಗತ್ತಿನ ಅತಿದೊಡ್ಡ ವಿಮಾನ ನಿಲ್ದಾಣ ಎಂಬ ಹಿರಿಮೆಗೆ ‘ಚಾಂಗಿ’ ಪಾತ್ರವಾಗಲಿದೆ.
ವಿಮಾನ ನಿಲ್ದಾಣದಲ್ಲಿ ಸಾಮಾಜಿಕ ಮರ (ಸೋಷಿಯಲ್‌ ಟ್ರೀ) ಒಂದಿದೆ. ಈ ಡಿಜಿಟಲ್‌ ಮರದ ಮುಂದೆ ನಿಂತುಕೊಂಡು ನಮ್ಮ ಫೋಟೊವನ್ನು ನಾವೇ ಕ್ಲಿಕ್ಕಿಸಿಕೊಳ್ಳಬಹುದು. ಟೈಪ್‌ ಮಾಡಿದ ಇ–ಮೇಲ್‌ ವಿಳಾಸಕ್ಕೆ ಕ್ಷಣಮಾತ್ರದಲ್ಲಿ ಆ ಫೋಟೊ ರವಾನೆಯಾಗುತ್ತದೆ. ಅಷ್ಟೇ ಅಲ್ಲ, ಆ ಮರದ ರೆಂಬೆಯಲ್ಲಿ ನಮ್ಮ ಫೋಟೊ ಮೂಡುತ್ತದೆ. ಅಂದಹಾಗೆ, ಅಲ್ಲಿಯೂ ಭಾರತೀಯ ಮುಖಗಳದ್ದೇ ಮೆರವಣಿಗೆ!

***
ಜನಸಂಖ್ಯೆಗಿಂತ ಪ್ರವಾಸಿಗರೇ ಹೆಚ್ಚು!
2013ರಲ್ಲಿ 5.37 ಕೋಟಿ ವಿದೇಶಿಯರು ತಮ್ಮ ಪ್ರವಾಸಕ್ಕಾಗಿ ಚಾಂಗಿ ವಿಮಾನ ನಿಲ್ದಾಣವನ್ನು ಬಳಕೆ ಮಾಡಿದ್ದಾರೆ. ಸಿಂಗಪುರದ ಒಟ್ಟು

ಜನಸಂಖ್ಯೆಯೇ 53 ಲಕ್ಷ. ತನ್ನ ಜನಸಂಖ್ಯೆಗಿಂತ ಹತ್ತು ಪಟ್ಟು ಅಧಿಕ ವಿದೇಶಿ ಪ್ರವಾಸಿಗರನ್ನು ಕಳೆದ ವರ್ಷ ಸಿಂಗಪುರ ಕಂಡಿದೆ.

ADVERTISEMENT

ಭಾರತದಲ್ಲಿ ಹೂಡಿಕೆಗೆ ಆಸಕ್ತಿ
‘ನಮ್ಮದು ಪುಟ್ಟ ದೇಶ. ಇರುವುದು ಒಂದೇ ನಗರ. ನಮಗೆ ಇನ್ನಷ್ಟು, ಮತ್ತಷ್ಟು ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಹಂಬಲವಿದ್ದರೂ ಸಿಂಗಪುರದಲ್ಲಿ ಅದಕ್ಕೆ ಅವಕಾಶ ಇಲ್ಲ. ಹೀಗಾಗಿ ಭಾರತವೂ ಸೇರಿದಂತೆ ಹಲವು ದೇಶಗಳ ಕಡೆಗೆ ನಮ್ಮ ಚಿತ್ತ ಹರಿದಿದೆ’ ಎನ್ನುತ್ತಾರೆ ಚಾಂಗಿ ಏರ್‌ಪೋರ್ಟ್ ಗ್ರೂಪ್‌ನ ಸಹಾಯಕ ಉಪಾಧ್ಯಕ್ಷ ರಾಬಿನ್ ಗೋಹ್.

ಬಂಡವಾಳ ಹೂಡಿಕೆ, ಯೋಜನೆ ಸಹಭಾಗಿತ್ವ, ತಾಂತ್ರಿಕ ಮಾರ್ಗದರ್ಶನ ಯಾವ ರೂಪದಲ್ಲಾದರೂ ಒಪ್ಪಂದಕ್ಕೆ ನಾವು ಸಿದ್ಧರಿದ್ದೇವೆ. ಭಾರತ ವಿಸ್ತಾರವಾದ ದೇಶ. ಹಲವು ನಗರಗಳಲ್ಲಿ ವಿಮಾನ ನಿಲ್ದಾಣ ಆಗಬೇಕಿದ್ದು, ಈಗಾಗಲೇ ವಿಮಾನ ನಿಲ್ದಾಣ ಇರುವ ನಗರಗಳಲ್ಲಿ ಅವುಗಳನ್ನು ಮೇಲ್ದರ್ಜೆಗೆ ಏರಿಸುವ ಚಿಂತನೆಯೂ ನಡೆದಿದೆ. ಆ ಯೋಜನೆಗಳಲ್ಲಿ ಅವಕಾಶ ಸಿಕ್ಕರೆ ಸಹಭಾಗಿತ್ವಕ್ಕೆ ಸಿದ್ಧ’ ಎಂದು ಹೇಳುತ್ತಾರೆ.

‘ನಮ್ಮ ವಿಮಾನ ನಿಲ್ದಾಣ ಲಾಭ ಗಳಿಕೆಯಲ್ಲೂ ಮುಂದಿದೆ. ಕಳೆದ ವರ್ಷ 75.14 ಕೋಟಿ ಸಿಂಗಪುರ ಡಾಲರ್ ನಿವ್ವಳ ಲಾಭ ಗಳಿಸಿದೆ’ ಎಂದು ಗೋಹ್ ವಿವರಿಸುತ್ತಾರೆ.

ಜಾದೂ ಮಾಡುವ ಸ್ಕೈ ಟ್ರೇನ್‌ಗಳು!
ಮೂರು ಟರ್ಮಿನಲ್‌ಗಳ ಮಧ್ಯೆ ಸಂಪರ್ಕ ಕಲ್ಪಿಸಲು ಅತ್ಯಾಧುನಿಕ
ಸ್ಕೈ ಟ್ರೇನ್‌ಗಳ ವ್ಯವಸ್ಥೆ ಮಾಡಲಾಗಿದೆ. ಚಾಲಕರಹಿತ ಈ ಸ್ಕೈ ಟ್ರೇನ್‌ಗಳು ಸಮಯ ಪರಿಪಾಲನೆಯಲ್ಲಿ ಸದಾ ಮುಂದು. ಟರ್ಮಿನಲ್‌ಗಳ ನಡುವಿನ ಈ ಸಂಚಾರ ಸೌಲಭ್ಯವನ್ನು ಪ್ರಯಾಣಿಕರಿಗೆ ಉಚಿತವಾಗಿ ಒದಗಿಸಲಾಗಿದೆ.

ಹೆಚ್ಚಲಿದೆ ಭಾರತೀಯರ ವಿದೇಶ ಯಾತ್ರೆ!
ವಿದೇಶಗಳಿಗೆ ಹೋಗುವ ಭಾರತೀಯ ಪ್ರವಾಸಿಗರ ಬಗೆಗೆ ಸಿಂಗಪುರ ಪ್ರವಾಸೋದ್ಯಮ ಮಂಡಳಿ (ಎಸ್‌ಟಿಬಿ) ಬಹುದೊಡ್ಡ ಸಂಶೋಧನೆಯನ್ನೇ ನಡೆಸಿದೆ. ಎಸ್‌ಟಿಬಿ ವರದಿ ಪ್ರಕಾರ, ಭಾರತೀಯರ ನೆಚ್ಚಿನ ಐದು ವಿದೇಶಿ ತಾಣಗಳಲ್ಲಿ ಸಿಂಗಪುರಕ್ಕೀಗ ನಾಲ್ಕನೇ ಸ್ಥಾನ. ಸೌದಿ ಅರೇಬಿಯಾ, ಅಮೆರಿಕ ಮತ್ತು ಥಾಯ್ಲೆಂಡ್ ಮೊದಲ ಮೂರು ಸ್ಥಾನಗಳಲ್ಲಿವೆ. ಭಾರತೀಯ ಪ್ರವಾಸಿಗರಲ್ಲಿ ಶೇ 68ರಷ್ಟು ಜನ ವಿಹಾರ ಮತ್ತು ಶಿಕ್ಷಣದ ಉದ್ದೇಶಕ್ಕಾಗಿ ಹೊರದೇಶಗಳಿಗೆ ಹೋದರೆ ಉಳಿದ ಶೇ 32ರಷ್ಟು ಜನ ವಾಣಿಜ್ಯದ ಉದ್ದೇಶಕ್ಕಾಗಿ ವಿದೇಶದತ್ತ ಮುಖ ಮಾಡುತ್ತಾರೆ. ವಿದೇಶಕ್ಕೆ ಪ್ರವಾಸ ಮಾಡುವ ಭಾರತೀಯರ ಸಂಖ್ಯೆ ಪ್ರತಿವರ್ಷ ಶೇ 13ರಷ್ಟು ಪ್ರಮಾಣದಲ್ಲಿ ಹೆಚ್ಚುತ್ತಾ ಹೊರಟಿದೆ ಎಂಬ ವಿವರಣೆ ಆ ವರದಿಯಲ್ಲಿದೆ.

ಭಾರತೀಯರು ಸಿಂಗಪುರದಲ್ಲಿ ಖರ್ಚು ಮಾಡುವ ವಿಧಾನದ ಕುರಿತೂ ವರದಿ ಬೆಳಕು ಚೆಲ್ಲಿದೆ. ಸಿಂಗಪುರಕ್ಕೆ ಬರುವ ಪ್ರತಿಯೊಬ್ಬ ಭಾರತೀಯ ಪ್ರವಾಸಿ ಸರಾಸರಿ 1,400 ಸಿಂಗಪುರ ಡಾಲರ್ ವೆಚ್ಚ ಮಾಡುತ್ತಾನೆ. ಅದರಲ್ಲಿ ಶೇ 22ರಷ್ಟು ಶಾಪಿಂಗ್, ಶೇ 33ರಷ್ಟು ವಸತಿ, ಶೇ 15ರಷ್ಟು ಊಟ ಮತ್ತು ಪೇಯ, ಶೇ 12ರಷ್ಟು ವಿಮಾನ ದರ ಹಾಗೂ ಉಳಿದ ಶೇ 18ರಷ್ಟು ಇತರ ಉದ್ದೇಶಗಳಿಗೆ ಖರ್ಚು ಮಾಡುತ್ತಾನಂತೆ.

ಇಲೆಕ್ಟ್ರಾನಿಕ್ ಸಲಕರಣೆ, ಗ್ಯಾಜೆಟ್‌, ಸೌಂದರ್ಯವರ್ಧಕ, ಫ್ಯಾಷನ್ ಸಾಮಗ್ರಿ ಹಾಗೂ ಚಿನ್ನಾಭರಣ ಭಾರತೀಯರ ನೆಚ್ಚಿನ ಖರೀದಿ ವಸ್ತುಗಳಾಗಿವೆ. ಭಾಷೆ, ಆಹಾರ ಮತ್ತು ವಿನಿಮಯ ದರ (ನಿರಂತರವಾಗಿ ಕುಸಿದ ರೂಪಾಯಿ ಮೌಲ್ಯ) ಹೆಚ್ಚಿನ ಭಾರತೀಯರ ವಿದೇಶಯಾನಕ್ಕೆ ಮುಖ್ಯ ತೊಡಕುಗಳಾಗಿವೆ ಎನ್ನುವುದು ಎಸ್‌ಟಿಬಿ ನೀಡುವ ವಿವರಣೆ. 2020ರ ವೇಳೆಗೆ ಪ್ರತಿವರ್ಷ ಭಾರತದ 5 ಕೋಟಿಯಷ್ಟು ಜನ ವಿದೇಶ ಪ್ರಯಾಣ ಮಾಡಲಿದ್ದಾರೆ ಎಂಬ  ಅಂದಾಜು ಮಾಡಲಾಗಿದೆ.

ಇನ್ನು ಆರು ವರ್ಷಗಳಲ್ಲಿ ಚೀನಿಯರನ್ನು ಹೊರತುಪಡಿಸಿದರೆ ಭಾರತೀಯರೇ ಹೆಚ್ಚಿನ ಪ್ರಮಾಣದಲ್ಲಿ ವಿದೇಶ ಯಾತ್ರೆ ಕೈಗೊಳ್ಳಲಿದ್ದಾರೆ ಎಂಬುದು ಎಸ್‌ಟಿಬಿ ಲೆಕ್ಕಾಚಾರ. ಇದೇ ಕಾರಣದಿಂದ ಭಾರತದ ಕಡೆಗೆ ಸಿಂಗಪುರ ಆಸೆಗಣ್ಣಿನಿಂದ ನೋಡುತ್ತಿದೆ. ಭಾರತೀಯರಿಗಾಗಿ ವಿಮಾನ ನಿಲ್ದಾಣದಲ್ಲಿ ಸಸ್ಯಾಹಾರಿ ಊಟ–ಉಪಹಾರ ಪೂರೈಸುವ ಆನಂದ ಭವನ ಮತ್ತು ಕಾವೇರಿ ರೆಸ್ಟೊರೆಂಟ್‌ಗಳನ್ನೂ ಆರಂಭಿಸಲಾಗಿದೆ.

ಕಳೆದ ಐದು ವರ್ಷಗಳಲ್ಲಿ ಭಾರತ–ಸಿಂಗಪುರ ನಡುವಿನ ವಾಣಿಜ್ಯ ವಹಿವಾಟು ವೃದ್ಧಿಸಿದೆ. 2013ರಲ್ಲಿ ಈ ಎರಡೂ ದೇಶಗಳ ಮಧ್ಯೆ 25.5 ಶತಕೋಟಿ ಸಿಂಗಪುರ ಡಾಲರ್‌ ವಹಿವಾಟು ನಡೆದಿದೆ.

(ಚಾಂಗಿ ಏರ್‌ಪೋರ್ಟ್‌ ಗ್ರೂಪ್‌ ಆಹ್ವಾನದ ಮೇರೆಗೆ ಈ ವರದಿಗಾರ ಸಿಂಗಪುರಕ್ಕೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.