ADVERTISEMENT

ಸೀಬರ್ಡ್‌ 2ನೇ ಹಂತದ ಯೋಜನೆ ಮುಂದಿನ ವರ್ಷದಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST
ರಿಯರ್‌ ಅಡ್ಮಿರಲ್‌ ಕೆ.ಜೆ.ಕುಮಾರ್‌
ರಿಯರ್‌ ಅಡ್ಮಿರಲ್‌ ಕೆ.ಜೆ.ಕುಮಾರ್‌   

ಕಾರವಾರ: ಇಲ್ಲಿನ ಸೀಬರ್ಡ್‌ ನೌಕಾನೆಲೆಯ 2ನೇ (ಎ) ಹಂತದ ಯೋಜನೆಯ ಕಾಮಗಾರಿ ಮುಂದಿನ ವರ್ಷದಿಂದ ಆರಂಭವಾಗಲಿದೆ. ₹19,600 ಕೋಟಿ ವೆಚ್ಚದ ಈ ಕಾಮಗಾರಿ 2021ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಕರ್ನಾಟಕದ ನೇವಲ್‌ ಫ್ಲಾಗ್‌ ಆಫೀಸರ್‌ ರಿಯರ್‌ ಅಡ್ಮಿರಲ್‌ ಕೆ.ಜೆ.ಕುಮಾರ್ ಶನಿವಾರ ಇಲ್ಲಿ ಹೇಳಿದರು.

‘ಕಾಮಗಾರಿ ಪೂರ್ಣಗೊಂಡ ನಂತರ ಏಷ್ಯಾದಲ್ಲಿಯೇ ಇದೊಂದು ಸಮಗ್ರ ಹಾಗೂ ಸುಸಜ್ಜಿತವಾದ ನೌಕಾನೆಲೆಯಾಗಿ ರೂಪುಗೊಂಡು ಭಾರತೀಯ ನೌಕಾದಳದ ದೊಡ್ಡ ಶಕ್ತಿ ಕೇಂದ್ರವಾಗಲಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಎರಡನೇ ಹಂತದ ಯೋಜನೆಯಲ್ಲಿ 8 ಪ್ರತ್ಯೇಕ ಜಟ್ಟಿಗಳು ನಿರ್ಮಾಣಗೊಳ್ಳಲಿದೆ. ಈ ಪೈಕಿ ಎರಡು ಜಟ್ಟಿಗಳನ್ನು ಸಬ್‌ಮೆರಿನ್‌ ನಿಲುಗಡೆಗೆ ಬಳಸಲಾಗುವುದು. ನಾಲ್ಕು ಜಟ್ಟಿಗಳನ್ನು ಯುದ್ಧನೌಕೆಗಳು ಲಂಗರು ಹಾಕಲು ಹಾಗೂ ಉಳಿದ ಸಣ್ಣ ನೌಕೆಗಳ ನಿಲುಗಡೆ ಬಳಸಿಕೊಳ್ಳಲಾಗುವುದು. ಇದರಿಂದ ಹೆಚ್ಚು ಯುದ್ಧ ನೌಕೆಗಳು ಒಮ್ಮೆಲೆ ತಂಗಲು ಅನುಕೂಲವಾಗಲಿದೆ. ಅಲ್ಲದೇ ನೌಕೆಗಳ ದುರಸ್ತಿ ಘಟಕಗಳ ನಿರ್ಮಾಣ ಕೂಡ ಆಗಲಿದೆ ಎಂದು ಅವರು ಯೋಜನೆಯ ವಿವರ ನೀಡಿದರು.

ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ವ್ಯಾಪ್ತಿಯ ನೌಕಾನೆಲೆಯ ಜಾಗದಲ್ಲಿ ಹೆಲಿಪ್ಯಾಡ್‌, ಲಘು ವಿಮಾನಗಳು ಇಳಿಯಲು ಸಣ್ಣ ಪ್ರಮಾಣದ ರನ್‌
ವೇ ನಿರ್ಮಿಸಲಾಗುವುದು. ಉದ್ದೇಶಿತ ರನ್‌ ವೇಯನ್ನು ನಾಗರಿಕ ವಿಮಾನ ನಿಲ್ದಾಣವಾಗಿಯೂ ಬಳಕೆ ಮಾಡುವ ಪ್ರಸ್ತಾವ ಇದ್ದು, ವಿಸ್ತರಣೆಗೆ ಇನ್ನೂ ಹೆಚ್ಚಿನ ಭೂಮಿ ಬೇಕಾಗುತ್ತದೆ. ಈ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ಮುಂದುವರಿದಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.