ADVERTISEMENT

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಚೀನಾ ಪ್ರಭಾವ

ವಿಶ್ವನಾಥ ಎಸ್.
Published 26 ಸೆಪ್ಟೆಂಬರ್ 2017, 19:30 IST
Last Updated 26 ಸೆಪ್ಟೆಂಬರ್ 2017, 19:30 IST
ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಚೀನಾ ಪ್ರಭಾವ
ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಚೀನಾ ಪ್ರಭಾವ   

ಸ್ಮಾರ್ಟ್‌ಫೋನ್ ಮಾರುಕಟ್ಟೆ ಬಹಳ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದೆ. 2017ರ ಎರಡನೇ ತ್ರೈಮಾಸಿಕದಲ್ಲಿ ಉತ್ತಮ ಪ್ರಗತಿಯನ್ನೂ ಸಾಧಿಸಿದೆ. ಆದರೆ, ಈಗಾಗಲೇ ಮಾರುಕಟ್ಟೆಯಲ್ಲಿ ನೆಲೆಯೂರಿರುವ ಜನಪ್ರಿಯ ಬ್ರ್ಯಾಂಡ್‌ಗಳು ಹಲವು ಸವಾಲುಗಳನ್ನು ಎದುರಿಸುವಂತಾಗಿದೆ. ಬಿಡಿ ಭಾಗಗಳ ವೆಚ್ಚ ಹೆಚ್ಚಳ, ಚೀನಾ ಕಂಪೆನಿಗಳ ಪ್ರಬಲ ಪೈಪೋಟಿ ಜತೆ ಜತೆಗೆ ಮೊಬೈಲ್ ಸೇವಾದಾತ ಸಂಸ್ಥೆಗಳೂ ತಮ್ಮದೇ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿರುವುದರಿಂದ ಜನಪ್ರಿಯ ಬ್ರ್ಯಾಂಡ್‌ಗಳ ಮಾರಾಟದ ಪ್ರಮಾಣವನ್ನು ತಗ್ಗಿಸುತ್ತಿವೆ.

ಹೊಸ ಗ್ರಾಹಕರನ್ನು ಸೆಳೆಯುವ ಮಾತಿರಲಿ, ಇರುವ ಗ್ರಾಹಕರನ್ನು ಕಾಪಾಡಿಕೊಳ್ಳುವುದು ಹೇಗೆ ಎನ್ನುವ ಆತಂಕವೂ ಇವುಗಳಿಗೆ ಕಾಡತೊಡಗಿದೆ. ಇದಕ್ಕೆ ಆ್ಯಪಲ್ ಕಂಪೆನಿ ಉತ್ತಮ ಉದಾಹರಣೆ. ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈವರೆಗೂ ಮೊದಲ ಸ್ಥಾನದಲ್ಲಿದ್ದ ಆ್ಯಪಲ್ ಕಂಪೆನಿ ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಜೂನ್ ಮತ್ತು ಜುಲೈನಲ್ಲಿ ಚೀನಾದ ಹುವಾವೆ ಸಂಸ್ಥೆಯು ಹ್ಯಾಂಡ್‌ಸೆಟ್‌ ತಯಾರಿಕೆಯಲ್ಲಿ ಆ್ಯಪಲ್‌ ಕಂಪೆನಿಯನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ಇದರಿಂದ ಆ್ಯಪಲ್‌ ಎರಡನೇ ಸ್ಥಾನಕ್ಕೆ ಇಳಿದಿದೆ. ಎರಡನೇ ಸ್ಥಾನದಲ್ಲಿದ್ದ ಸ್ಯಾಮ್ಸಂಗ್‌ ಮೂರನೇ ಸ್ಥಾನ ಪಡೆದುಕೊಂಡಿದೆ. ಜಾಗತಿಕ ಮಟ್ಟದಲ್ಲಿ ಉದ್ಯಮಗಳ ವಿಶ್ಲೇಷಣೆ ಮಾಡುವ ಕೌಂಟರ್‌ಪಾಯಿಂಟ್‌ ಸಂಶೋಧನಾ ಸಂಸ್ಥೆ ಈ ವರದಿ ನೀಡಿದೆ.

4ಜಿ ಪ್ರಭಾವ

ADVERTISEMENT

ಸದ್ಯ ಹೆಚ್ಚು ಸದ್ದು ಮಾಡುತ್ತಿರುವುದು 4ಜಿ ಸೌಲಭ್ಯ ಇರುವ ಫೋನ್‌ಗಳು. ಉಚಿತ ಡೇಟಾ ಕೊಡುಗೆ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಜಿಯೊ ಸೇರಿದಂತೆ ಮೊಬೈಲ್‌ ಸೇವಾದಾತ ಸಂಸ್ಥೆಗಳು ಸಹ ತಮ್ಮದೇ ಆದ 4ಜಿ ಹ್ಯಾಂಡ್‌ಸೆಟ್‌ ಬಿಡುಗಡೆ ಮಾಡುತ್ತಿವೆ. ಇದು ಈಗಾಗಲೇ ಮಾರುಕಟ್ಟೆಯಲ್ಲಿ ನೆಲೆಯೂರಿರುವ ಮೊಬೈಲ್‌ ತಯಾರಿಕಾ ಕಂಪೆನಿಗಳ ನಿದ್ದೆಗೆಡಿಸಿದೆ. ಇನ್ನೊಂದೆಡೆ  ಚೀನಾದ ಮೊಬೈಲ್‌ ತಯಾರಿಕಾ ಕಂಪೆನಿಗಳು ಕೂಡಾ ಪ್ರಬಲ ಪೈಪೋಟಿಯನ್ನೇ ನೀಡುತ್ತಿವೆ. ಅಗ್ಗದ ಬೆಲೆಗೆ ಹಲವು ವೈಶಿಷ್ಟ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಈ ಮೂಲಕ ಪ್ರಮುಖ ಕಂಪೆನಿಗಳ ಮಾರುಕಟ್ಟೆ ಪಾಲನ್ನು ಸ್ವಲ್ಪ ಸ್ವಲ್ಪವಾಗಿಯೇ ಕಸಿದುಕೊಳ್ಳುತ್ತಿವೆ.

ಬಿಡಿಭಾಗಗಳ ವೆಚ್ಚ ಹೆಚ್ಚಳ

ಒಂದೆಡೆ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಅದೇ ಸಂದರ್ಭದಲ್ಲಿ ಅದರ ಕೆಲವು ಸೂಕ್ಷ್ಮ ಬಿಡಿಭಾಗಗಳ ವೆಚ್ಚವೂ ಹೆಚ್ಚುತ್ತಿದೆ ಎನ್ನುತ್ತದೆ ಗಾರ್ಟ್ನರ್‌ ವರದಿ.

ಫ್ಲಾಷ್‌ ಮೆಮೊರಿ, ಒಎಲ್‌ಇಡಿಯಂತಹ ಬಿಡಿ ಭಾಗಗಳ ತಯಾರಿಕಾ ವೆಚ್ಚ ಹೆಚ್ಚಾಗುತ್ತಿದೆ. ಇದರಿಂದ ಮಧ್ಯಮ ಮತ್ತು ಗರಿಷ್ಠ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮಾರಾಟ ತಗ್ಗಲಿದೆ ಎಂದು ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಅಂದರೆ ಜಿಯೊ ಬಂದ ಮೇಲಂತೂ 4ಜಿ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಭಾರತ ಮತ್ತು ಚೀನಾದ ಮಾರುಕಟ್ಟೆಗಳಲ್ಲಿ 4ಜಿ ಸೌಲಭ್ಯ ಇರುವ ಹ್ಯಾಂಡ್‌ಸೆಟ್‌ಗಳು ಬಹಳ ಬೇಗ ಮಾರಾಟವಾಗುತ್ತಿವೆ. ಇದರಿಂದ 2017ರ ದ್ವಿತೀಯಾರ್ಧದಲ್ಲಿ ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯೂ ಉತ್ತಮ ಬೆಳವಣಿಗೆಯತ್ತ ಸಾಗಲಿದೆ ಎನ್ನುವುದು ತಜ್ಞರ ಅಭಿಮತ.

ಹೀಗಿದ್ದರೂ ಫ್ಲಾಷ್‌ ಮೆಮೊರಿ ಮತ್ತು ಒಎಲ್‌ಇಡಿಯಂತಹ ಸಾಧನಗಳ ಅಭಾವ ಮಾರುಕಟ್ಟೆಯ ಪ್ರಗತಿಯ ವೇಗಕ್ಕೆ ಕಡಿವಾಣ ಹಾಕುವ ಸಾಧ್ಯತೆಯೂ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹುವಾವೆಯ ಪಿ10ನಲ್ಲಿ ಫ್ಲ್ಯಾಷ್‌ ಮೆಮೊರಿ ಕೊರತೆ ಉಂಟಾಗಿ ಸಮಸ್ಯೆ ಎದುರಿಸಿದೆ. ಇದರಿಂದ ಸ್ಮಾರ್ಟ್‌ಫೋನ್‌ ಕಾರ್ಯಾಚರಣೆ ವೇಗ ತಗ್ಗಿದ್ದು, ಬಳಕೆ ಕಷ್ಟವಾಗಿದೆ. ಇದು ತಾಂತ್ರಿಕ ಸಮಸ್ಯೆ. ಚೀನಾದ ಕಂಪೆನಿಗಳ ಆಕ್ರಮಣಕಾರಿ ಮಾರಾಟ ನೀತಿಯಿಂದ ಎಚ್‌ಟಿಸಿ, ಎಲ್‌ಜಿ ಮತ್ತು ಸೋನಿಯಂತಹ ಕಂಪೆನಿಗಳ ಜನಪ್ರಿಯತೆ ತಗ್ಗತ್ತಿದೆ. ಮಾರುಕಟ್ಟೆ ಪಾಲಿನಲ್ಲಿ ಪ್ರಭುತ್ವ ಸಾಧಿಸಿರುವ ಸ್ಯಾಮ್ಸಂಗ್‌ ಮತ್ತು ಆ್ಯಪಲ್‌ನಂತಹ ಪ್ರೀಮಿಯಂ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳ ಮಾರಾಟವನ್ನೂ ಕುಗ್ಗಿಸಿವೆ.

ಜಾಗತಿಕ ಮಾರುಕಟ್ಟೆಯಲ್ಲಿ 2017ರ ಜೂನ್‌ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 36 ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ. ವರ್ಷದಿಂದ ವರ್ಷಕ್ಕೆ ಶೇ 6.7 ರಷ್ಟು ಪ್ರಗತಿ ದಾಖಲಿಸಿದೆ. ಇದರಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಶೇ 87.7 ರಷ್ಟಿದ್ದರೆ, ಐಒಎಸ್‌ ಶೇ 12.1 ರಷ್ಟಿದೆ. ಸ್ಯಾಮ್ಸಂಗ್‌ ಒಟ್ಟು 8.2 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದ್ದು ಶೇ 7.5 ರಷ್ಟು ಪ್ರಗತಿ ದಾಖಲಿಸಿದೆ. ಕಳೆದ ವರ್ಷ ಗ್ಯಾಲಕ್ಸಿ ನೋಟ್ 7 ಬ್ಯಾಟರಿಯಲ್ಲಿ ದೋಷ ಕಂಡುಬಂದು  ಬ್ರ್ಯಾಂಡ್‌ ಬಗ್ಗೆ ಗ್ರಾಹಕರಲ್ಲಿ ಹಲವು ರೀತಿಯ ಅನುಮಾನಗಳನ್ನು ಮೂಡಿಸಿತ್ತು. ಚೀನಾದ ಹುವಾವೆ, ಒಪ್ಪೊ ಮತ್ತು ವಿವೊ ಬ್ರ್ಯಾಂಡ್‌ಗಳಿಂದ ಪೈಪೋಟಿ ಹೆಚ್ಚಾಗುತ್ತಿದ್ದರೂ ಈಚೆಗೆ ಬಿಡುಗಡೆ ಆಗಿರುವ ಗ್ಯಾಲಕ್ಸಿ ಎಸ್‌8 ಮತ್ತು ಎಸ್‌8 ಪ್ಲಸ್‌ ಸ್ಮಾರ್ಟ್‌ಫೋನ್‌ಗಳು ಬ್ರ್ಯಾಂಡ್ ಜನಪ್ರಿಯತೆಯನ್ನು ಮರಳಿ ತಂದುಕೊಡಲಿವೆ ಎನ್ನುತ್ತದೆ ಗಾರ್ಟ್ನರ್‌ ವರದಿ.

ಹೆಚ್ಚಿನ ಮಾಹಿತಿ ಸಂಗ್ರಹಣಾ ಸಾಮರ್ಥ್ಯ, ಉತ್ತಮ ಪ್ರೊಸೆಸರ್ ಮತ್ತು ಆಧುನಿಕ ಕ್ಯಾಮೆರಾ ಒಳಗೊಂಡಿರುವ 4 ಜಿ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಮಧ್ಯಮ ಬೆಲೆಯ ಅಂದರೆ ₹9,600 ರಿಂದ ₹12,800ರ ಬೆಲೆ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ ಎನ್ನುತ್ತಾರೆ ಸಂಶೋಧನಾ ಮುಖ್ಯಸ್ಥ ಅನ್ಶುಲ್‌ ಗುಪ್ತಾ.

ಚೀನಾ ಬ್ರ್ಯಾಂಡ್‌ಗಳ ಲಗ್ಗೆ

ಚೀನಾದ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. 2017ರ ಎರಡನೇ ತ್ರೈಮಾಸಿಕದಲ್ಲಿ ಉತ್ತಮ ಪ್ರಗತಿ ಸಾಧಿಸಿವೆ. ಶಿಯೋಮಿ, ವಿವೊ ಮತ್ತು ಒಪ್ಪೊ ಕಂಪೆನಿಗಳ ಮಾರುಕಟ್ಟೆ ಪಾಲು 2017ರ ಮೊದಲ ತ್ರೈಮಾಸಿಕದಲ್ಲಿ ಶೇ 51 ರಷ್ಟಿತ್ತು. ಎರಡನೇ ತ್ರೈಮಾಸಿಕದಲ್ಲಿ ಶೇ 54ಕ್ಕೆ ಏರಿಕೆಯಾಗಿದೆ.

ಕೊರಿಯಾದ ಸ್ಯಾಮ್ಸಂಗ್‌ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಆದರೆ ಅದರ ಮಾರುಕಟ್ಟೆ ಪಾಲು ಶೇ 28 ರಿಂದ ಶೇ 24ಕ್ಕೆ ಇಳಿಕೆ ಕಂಡಿದೆ.

ಶಿಯೋಮಿ ಮಾರುಕಟ್ಟೆ ಪಾಲಿನ ಲೆಕ್ಕದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದು ಶೇ 17 ರಷ್ಟು ಪಾಲು ಹೊಂದಿದೆ. ಎರಡನೇ ತ್ರೈಮಾಸಿಕದಲ್ಲಿ ಶೇ 25 ರಷ್ಟು ಪ್ರಗತಿ ಸಾಧಿಸಿದೆ. ಆಫ್‌ಲೈನ್‌ ಮಾರಾಟ ಹೆಚ್ಚುತ್ತಿರುವುದೇ ಮಾರುಕಟ್ಟೆ ಪಾಲಿನಲ್ಲಿ ಏರಿಕೆ ಕಾಣಲು ಪ‍್ರಮುಖ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಇನ್ನು ಆಫ್‌ಲೈನ್‌ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಿರುವ ವಿವೊ, ಶೇ 13 ರಷ್ಟು ಪಾಲು ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದೆ. 2ನೇ ತ್ರೈಮಾಸಿದಲ್ಲಿ ಮಾರಾಟ ಪ್ರಗತಿ ಶೇ 10.5 ರಿಂದ ಶೇ 26ಕ್ಕೆ ಏರಿಕೆ ಕಂಡಿದೆ.

ಚೇತರಿಕೆ ನಿರೀಕ್ಷೆಯಲ್ಲಿ ಭಾರತದ ಕಂಪೆನಿಗಳು

ಭಾರತದ ಕಂಪೆನಿಗಳ ಮೊಬೈಲ್ ಮಾರಾಟ ಸತತ ಮೂರು ತ್ರೈಮಾಸಿಕಗಳಲ್ಲಿಯೂ ಇಳಿಕೆ ಕಂಡಿತ್ತು. ಇದೀಗ 2017ರ ಎರಡನೇ ತ್ರೈಮಾಸಿಕದಲ್ಲಿ ಶೇ 18 ರಷ್ಟು ಪ್ರಗತಿ ಸಾಧಿಸುವ ಮೂಲಕ ಚೇತರಿಕೆಯ ಸುಳಿವು ನೀಡಿವೆ. ಹೀಗಿದ್ದರೂ ಒಟ್ಟಾರೆ ಮಾರುಕಟ್ಟೆ ಪಾಲು ಕೇವಲ ಶೇ 15 ರಷ್ಟಿದೆ. ಭಾರತದ ಕಂಪೆನಿಗಳು ಉತ್ತಮ ಪ್ರಗತಿ ಸಾಧಿಸುವ ಸಾಧ್ಯತೆ ಇದೆ. ಸದ್ಯ, ಚೀನಾದ ಕಂಪೆನಿಗಳು  ₹10 ಸಾವಿರ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಹಿಡಿತ ಸಾಧಿಸಿವೆ. ಈ ಮಾರುಕಟ್ಟೆ ಬಗ್ಗೆ ಭಾರತದ ಕಂಪೆನಿಗಳು ಹೆಚ್ಚು ಗಮನ ನೀಡಲಾರಂಭಿಸಿವೆ ಎಂದು ಐಡಿಸಿ ತಿಳಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.