ADVERTISEMENT

ಹಾರುವ ಕನಸಿಗೆ ವಿದ್ಯುತ್‌ಚಾಲಿತ ವಿಮಾನ...

ಜಕ್ಕಣಕ್ಕಿ ಎಂ ದಯಾನಂದ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST
ಹಾರುವ ಕನಸಿಗೆ ವಿದ್ಯುತ್‌ಚಾಲಿತ ವಿಮಾನ...
ಹಾರುವ ಕನಸಿಗೆ ವಿದ್ಯುತ್‌ಚಾಲಿತ ವಿಮಾನ...   

ಹೈಬ್ರಿಡ್‌ ಮತ್ತು ವಿದ್ಯುತ್‌ ಚಾಲಿತ (ಎಲೆಕ್ಟ್ರಿಕ್‌) ವಾಹನ ಬಳಕೆ ಮೂಲಕ ತೈಲ ಆಮದು ತಗ್ಗಿಸುವ ಹೊಸ ಯೋಜನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಎಲೆಕ್ಟ್ರಿಕ್‌ ಬಸ್‌, ಕಾರುಗಳಂತೂ ಈಗ ಚಾಲನೆಯಲ್ಲಿವೆ. ಈಗ ಈ ಸಾಲಿಗೆ ಎಲೆಕ್ಟ್ರಿಕ್‌ ವಿಮಾನಗಳೂ ಸೇರಲಿವೆ. ಇಂತಹ ವಿಮಾನಗಳನ್ನು ತಯಾರಿಸಲು ಅಮೆರಿಕದ ಸೀಯಾಟಲ್‌ನ ‘ಜುನುಂ ಏರೊ’ ಎಂಬ ಸ್ಟಾರ್ಟ್ಅಫ್‌ ಮುಂದೆ ಬಂದಿದೆ. ಇದಕ್ಕೆ ವಾಯುಯಾನ ಕ್ಷೇತ್ರದಲ್ಲೇ ಹೆಸರು ಮಾಡಿರುವ ಬೋಯಿಂಗ್‌ ಕಂಪೆನಿ ಹಾಗೂ ಜೆಟ್‌ಬ್ಲೂ ಏರ್‌ವೇಸ್‌ ಕಾರ್ಪ್‌ ನೆರವಾಗಲಿವೆ.

ಬೆವೆರ್ಲೆ, ಮೆಸಾಚುಸೆಟ್ಸ್‌ ನಿಂದ ಕಾಲೇಜ್‌ಪಾರ್ಕ್‌, ಮೇರಿಲ್ಯಾಂಡ್‌ ವಿಮಾನ ನಿಲ್ದಾಣಗಳಿಗೆ ಈ ವಿಮಾನಗಳು ಕಡಿಮೆ ದರದಲ್ಲಿ ಹಾರಾಟ ನಡೆಸಲಿವೆ ಎಂದು ಜುನುಂ ಏರೊ ತಿಳಿಸಿದೆ. ‘ವಾಯುಯಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಲು ಮುಂದಾಗಿರುವ ಜುನುಂ ಏರೊ ಪ್ರಯತ್ನಕ್ಕೆ ನಾವು ಬೆಂಬಲ ನೀಡುತ್ತೇವೆ. ಪ್ರಾದೇಶಿಕ ಸಾರಿಗೆ ಉದ್ಯಮ ಈಗ ಪಕ್ವವಾಗಿದೆ ಎಂದೆನಿಸುತ್ತದೆ’ ಎಂದು ಬೋಯಿಂಗ್‌ ಪ್ರತಿಕ್ರಿಯಿಸಿದೆ.

ವಿದ್ಯುತ್‌ಚಾಲಿತ (ಎಲೆಕ್ಟ್ರಿಕ್‌) ವಿಮಾನಗಳ ತಯಾರಿಗೆ ಈಗಾಗಲೇ ಜುನುಂ ಏರೊ ಕಂಪೆನಿಯು ಬೋಯಿಂಗ್‌ ಮತ್ತು ರೋಲ್ಸ್‌ ರಾಯ್ಸ್ ಕಂಪೆನಿಗಳಲ್ಲಿ ಕೆಲಸ ಮಾಡಿದ ತಂತ್ರಜ್ಞರನ್ನು ನೇಮಿಸಿಕೊಳ್ಳಲಿದೆ.

ADVERTISEMENT

ಸದ್ಯಕ್ಕೆ ಕೇವಲ 12 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಇರುವ ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿರುವ ಜುನುಂ, ಮುಂದಿನ ಕೆಲವು ವರ್ಷಗಳಲ್ಲಿ 50 ಪ್ರಯಾಣಿಕರು ಪ್ರಯಾಣಿಸಬಹುದಾದ ಎಲೆಕ್ಟ್ರಿಕ್‌ ವಿಮಾನವನ್ನು ಹಾರಾಟಕ್ಕೆ ಬಿಡಲಿದೆ. ಇದು ಸಾವಿರ ಮೈಲುಗಳವರೆಗೆ ಹಾರಾಟ ನಡೆಸಲಿದೆ. ಇದಕ್ಕಾಗಿ ಬ್ಯಾಟರಿ ತಂತ್ರಜ್ಞಾನವನ್ನು ಅಭಿವೃದ್ಧಿಸಲಾಗುತ್ತದೆ.

ಜುನುಂ ಮೊದಲ ಬಾರಿ ಹೈಬ್ರಿಡ್ ಎಲೆಕ್ಟ್ರಿಕ್‌ ವಿಮಾನ ಪರಿಕಲ್ಪನೆ ಬಗ್ಗೆ ಏಪ್ರಿಲ್‌ನಲ್ಲಿ ಘೋಷಣೆ ಮಾಡಿತ್ತು. ಇದರಲ್ಲಿ ಬೋಯಿಂಗ್ ಹಾರಿಜಾನ್‌ ಎಕ್ಸ್‌ ಮತ್ತ ಜೆಟ್‌ಬ್ಲೂ ಟೆಕ್ನಾಲಜಿ ಕಂಪೆನಿಗಳು ಹೂಡಿಕೆ ಮಾಡಲಿದ್ದವು.

ವಿಶ್ವ ಸೋಲಾರ್‌ ಸವಾಲು
ವಿದ್ಯುತ್‌ ಚಾಲಿತ ವಾಹನಗಳ ಸಂಶೋಧನೆಗಳಿಗಿಂತ ಮೊದಲೇ ಸೋಲಾರ್‌ ವಾಹನಗಳ ಕುರಿತ ಅನ್ವೇಷಣೆಗಳು ವಿಶ್ವದಾದ್ಯಂತ ನಡೆಯುತ್ತಲೇ ಇವೆ. ಸೋಲಾರ್ ಕಾರುಗಳಂತೂ ಭಾರಿ ಬೇಡಿಕೆ ಸೃಷ್ಟಿಸಿವೆ. ಇದು ನವೀಕರಿಸಬಹುದಾದ ಇಂಧನ ಮೂಲವಾಗಿರುವ ಕಾರಣ ಹೆಚ್ಚು ಗಮನ ಸೆಳೆಯುತ್ತಿದೆ. ಸೋಲಾರ್‌ ಇಂಧನದ ಬಗ್ಗೆ ‘ಸೋಲಾರ್ ಇಂಪಲ್ಸ್ ವಿಮಾನ’ವು ಈಗಾಗಲೇ ವಿಶ್ವ ಪರ್ಯಟನೆ ಮಾಡಿದೆ.

ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ‘ವಿಶ್ವ ಸೋಲಾರ್‌ ಸವಾಲು 2017 ’(World Solar Challenge) ಎಂಬ ಸ್ಪರ್ಧೆಯೊಂದು ನಡೆಯಿತು. ಇದರಲ್ಲಿ ಸಾಕಷ್ಟು ದೇಶಗಳ ಕಾರುಗಳು ಭಾಗವಹಿಸಿದ್ದವು.ಮೂರು ಸಾವಿರ ಕಿ.ಮೀ ದೂರ ನಡೆದ ಸ್ಪರ್ಧೆಯಲ್ಲಿ ನೆದರ್‌ಲೆಂಡ್‌ನ ‘ರೆಡ್‌ ಶಿಫ್ಟ್‌’ ಹೆಸರಿನ ಕಾರು  ಗಮನಸೆಳೆಯಿತು.

ಸೂರ್ಯನ ಬೆಳಕನ್ನು ಹೀರಿಕೊಳ್ಳಲು ಈ ಕಾರಿನಲ್ಲಿದ್ದ ಸೋಲಾರ್‌ ಪ್ಯಾನೆಲ್‌ಗಳು ಎಲ್ಲರನ್ನೂ ಸೆಳೆದವು. ಭವಿಷ್ಯದಲ್ಲಿ ಸೋಲಾರ್ ಕಾರುಗಳು ಬಗ್ಗೆ ಬಳಕೆದಾರರಲ್ಲಿ ಆತ್ಮವಿಶ್ವಾಸ ಮೂಡಿಸಲು ಈ ಸವಾಲು ಹಮ್ಮಿಕೊಳ್ಳಲಾಗಿತ್ತು. ಸಾಕಷ್ಟು ಉತ್ಸಾಹಿ ಯುವಕರು ತಮ್ಮ ಸೋಲಾರ್‌ ಕಾರುಗಳನ್ನು ಇಲ್ಲಿ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.