ADVERTISEMENT

ಹೊಸ ಆ್ಯಪ್‌ಗಳು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2016, 19:30 IST
Last Updated 1 ನವೆಂಬರ್ 2016, 19:30 IST
​ಮಾಲಿನ್ಯ ತಡೆಯುವ ಆ್ಯಪ್
​ಮಾಲಿನ್ಯ ತಡೆಯುವ ಆ್ಯಪ್   

​ಮಾಲಿನ್ಯ ತಡೆಯುವ ಆ್ಯಪ್
ತಂತ್ರಾಂಶ ಮಾರುಕಟ್ಟೆಯಲ್ಲಿ ಹೊಸ ಆ್ಯಪ್‌ವೊಂದು ಬಿಡುಗಡೆಯಾಗಿ ಭಾರಿ ಸುದ್ದಿ ಮಾಡುತ್ತಿದೆ! ಇದಕ್ಕೆ ಮಾಲಿನ್ಯ ತಡೆಯುವ ಆ್ಯಪ್ ಎಂದು ಕರೆಯಲಾಗುತ್ತಿದೆ. ಹಿಂದಿಯಲ್ಲಿ ‘ಹವಾ ಬದ್ಲಾ ಆ್ಯಪ್’

(Pollution App) ಎಂದೂ  ಸಹ ಕರೆಯುತ್ತಾರೆ. ಇದೇನಿದು ಪರಿಸರ ಮಾಲಿನ್ಯವನ್ನು ಈ ಆ್ಯಪ್ ಹೇಗೆ ತಡೆಯುತ್ತದೆ ಎಂಬ ಕುತೂಹಲ ಎಲ್ಲರಿಗೂ ಇರುವಂತಹದೇ! ನಿಜಾಂಶವೆಂದರೆ ಮೊಬೈಲ್‌ಗಳಲ್ಲಿರುವ ಈ ಆ್ಯಪ್ ವಾತಾವರಣದಲ್ಲಿರುವ ಕಲ್ಮಶವನ್ನು ಖಂಡಿತವಾಗಿಯೂ ಕಡಿಮೆ ಮಾಡುವುದಿಲ್ಲ.   ಬದಲಿಗೆ ಮಾಲಿನ್ಯ ಉಂಟಾಗಿರುವ ಸ್ಥಳದಿಂದಲೇ ತಕ್ಷಣದಲ್ಲಿ ಮೊಬೈಲ್‌ನಲ್ಲಿರುವ ಈ ಆ್ಯಪ್ ಮೂಲಕ ದೂರು ಸಲ್ಲಿಸಿದರೆ ಸಂಬಂಧಪಟ್ಟವರು ಮಾಲಿನ್ಯ ಉಂಟುಮಾಡಿದವರ ವಿರುದ್ಧ ಕ್ರಮಕೈಗೊಳ್ಳುತ್ತಾರೆ. ಅರ್ಥಾತ್ ದೂರು ಸಲ್ಲಿಸುವ ಸಲುವಾಗಿಯೇ ಈ ಆ್ಯಪ್ ಅನ್ನು ಸಿದ್ಧಪಡಿಸಲಾಗಿದೆ.

ದೆಹಲಿ ಸರ್ಕಾರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ದೆಹಲಿ ನಾಗರಿಕರು ಆಂಡ್ರಾಯ್ಡ್‌ ಮತ್ತು ಐಒಎಸ್ ಪ್ಲಾಟ್ ಫಾರಂ ಮೂಲಕ ಇದನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಉದಾಹರಣೆಗೆ ದೆಹಲಿಯ ಯಾವುದೋ ಒಂದು ಗಲ್ಲಿಯಲ್ಲಿ ಕಸ, ರಬ್ಬರ್ ಅಥವಾ ಪ್ಲಾಸ್ಟಿಕ್ ಅನ್ನು ಸುಡುವಾಗ ದಟ್ಟ ಹೊಗೆ ಆವರಿಸಿದ್ದರೆ, ಕಟ್ಟಡ ನಿರ್ಮಾಣ ಹಂತದಲ್ಲಿ ವ್ಯಾಪಕ ದೂಳು ಕಂಡು ಬಂದರೆ,  ಸ್ಥಳೀಯ ನಿವಾಸಿಗಳು ಆ್ಯಪ್ ಮೂಲಕ ದೂರು ನೀಡಬಹುದು. 

ಸಂಬಂಧಪಟ್ಟ ಇಲಾಖೆಯವರು ಅಲ್ಲಿಗೆ ಧಾವಿಸಿ ಬಂದು ಮಾಲಿನ್ಯಕ್ಕೆ ಕಾರಣವಾದವರ ವಿರುದ್ಧ ಕ್ರಮಕೈಗೊಳ್ಳುತ್ತಾರೆ. ಇನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ವಿಜ್ಞಾನಿಗಳು ಆ ಮಾಲಿನ್ಯ ಮಟ್ಟ ನಿಯಂತ್ರಿಸಲು ಯತ್ನಿಸುತ್ತಾರೆ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಬೂರೇ ಲಾಲ್ ತಿಳಿಸುತ್ತಾರೆ.

ಒಂದು ವೇಳೆ ಸುಳ್ಳು ದೂರು ದಾಖಲಿಸಿದರೇ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದೂ  ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಸಿದೆ.

*
ಗರ್ಭಧಾರಣೆ ನಿಯಂತ್ರಿಸುವ ಆ್ಯಪ್
ಲಂಡನ್ ರಾಯಲ್ ವಿಜ್ಞಾನ ಸಂಸ್ಥೆಯ ‘ನ್ಯಾಚುರಲ್ ಸೈಕಲ್’ ವಿಭಾಗದ ಸಂಶೋಧನಾ ಪ್ರಾಧ್ಯಾಪಕಿ ಎಲಿನಾ ಬರ್ಗುಲ್ಡ್ ಅವರು ಅಸುರಕ್ಷಿತ ಗರ್ಭಧಾರಣೆ ತಪ್ಪಿಸುವಂತಹ ಆ್ಯಪ್

ADVERTISEMENT

(Fertility  App)ಅಭಿವೃದ್ಧಿಪಡಿಸಿದ್ದಾರೆ. ಮುಕ್ತ ಸಾಮಾಜಿಕ ವಾತಾವರಣವಿರುವ ಪಾಶ್ಚಿಮಾತ್ಯ ದೇಶಗಳಲ್ಲಿ ಸಾಕಷ್ಟು ಅವಿವಾಹಿತ ಯುವತಿಯರು ತಮಗೆ ಅರಿವಿಲ್ಲದಂತೆಯೇ ಗರ್ಭಧರಿಸುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ತಪ್ಪಿಸುವ ಸಲುವಾಗಿಯೇ ಈ ಆ್ಯಪ್ ಅನ್ನು ವಿನ್ಯಾಸ ಮಾಡಲಾಗಿದೆ ಎನ್ನುತ್ತಾರೆ ಎಲಿನಾ.

  ಈ ಆ್ಯಪ್ ಅನ್ನು ಯುವತಿಯರು ತಮ್ಮ ಸ್ಮಾರ್ಟ್ ಫೋನ್‌ಗೆ ಡೌನ್ ಲೋಡ್ ಮಾಡಿಕೊಳ್ಳಬೇಕು. ನಂತರ ವೈದ್ಯರ ಸಹಾಯದಿಂದ ದೇಹದ ಉಷ್ಣತೆ, ಮುಟ್ಟಿನ (ಋತು ಚಕ್ರ) ದಿನಾಂಕ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ಮಾಹಿತಿಯನ್ನು ಈ ಆ್ಯಪ್ ನಲ್ಲಿ ಅಪ್ ಡೇಟ್ ಮಾಡಬೇಕು. ಅಸುರಕ್ಷಿತ ದಿನಗಳಲ್ಲಿ ಲೈಂಗಿಕ ಕ್ರಿಯೆಗೆ ತೊಡಗುವ ಮುನ್ನವೇ ‘ದೇಹದ ಉಷ್ಣಾಂಶ ಮತ್ತು ಮುಟ್ಟಿನ ದಿನಾಂಕದ ಆಧಾರದ ಮೇಲೆ ಲೈಂಗಿಕ ಕ್ರಿಯೆಯಲ್ಲಿ ತೊಡಗದಿರುವಂತೆ
ಈ ಆ್ಯಪ್ ಎಚ್ಚರಿಸುತ್ತದೆ.

ವೈದ್ಯಕೀಯ ತಜ್ಞರು ಮತ್ತು ತಂತ್ರಾಂಶ ಪರಿಣತರು ಮಹಿಳೆಯ ತಿಂಗಳ ಋತು ಚಕ್ರವನ್ನು ಎರಡು ವಿಭಾಗಗಳಾಗಿ ವರ್ಗಿಕರಿಸುತ್ತಾರೆ. ಮುಟ್ಟಿನ ನಂತರದ 15 ದಿನಗಳನ್ನು ಕೆಂಪು ದಿನಗಳು ಮತ್ತು ಮುಟ್ಟಿನ ಪೂರ್ವದ 15 ದಿನಗಳನ್ನು ಹಸಿರು ದಿನಗಳು ಎಂದು ವಿಂಗಡಿಸಿರುತ್ತಾರೆ. ಈ  ಸೂತ್ರದ ಆಧಾರದ ಮೇಲೆ  ಆ್ಯಪ್ ಗರ್ಭಧಾರಣೆ ನಿಯಂತ್ರಣ ಕೆಲಸ ಮಾಡುತ್ತದೆ.

ಉದಾಹರಣೆಗೆ ಈ ಆ್ಯಪ್ ಬಳಸುತ್ತಿರುವ ಅವಿವಾಹಿತ ಯುವತಿಯೊಬ್ಬರು ಮುಟ್ಟಿನ ನಂತರದ 8-10 ದಿನಗಳಲ್ಲಿ ತನ್ನ ಗೆಳೆಯನ ಜೊತೆ ಮಿಲನಕ್ಕೆ ಮುಂದಾದರೆ ಆ ಆ್ಯಪ್‌ನಲ್ಲಿರುವ ಕೆಂಪು ದೀಪ ಬೆಳಗುವ ಮೂಲಕ ಎಚ್ಚರಿಕೆ ಕೊಡುತ್ತದೆ. ಈ ಹಂತದಲ್ಲಿ ಅವರು ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಮುಂದುವರಿಯಬಹುದು. ಇದರಿಂದ ಗರ್ಭಧಾರಣೆಯನ್ನು ತಪ್ಪಿಸಬಹುದು ಎನ್ನುತ್ತಾರೆ ಎಲಿನಾ.

ಅದೇ ಯುವತಿ ಋತುಚಕ್ರಕ್ಕೆ ಇನ್ನೂ 8-10 ದಿನಗಳು ಇರುವಾಗ ಲೈಂಗಿಕ ಕ್ರಿಯೆಗೆ ಮುಂದಾದರೆ ಆ್ಯಪ್ ನಲ್ಲಿರುವ ಹಸಿರು ದೀಪ ಬೆಳಗುತ್ತದೆ. ಈ ಹಂತದಲ್ಲಿ ನಿರೋಧ್‌ ಅಥವಾ ಯಾವುದೇ ಸುರಕ್ಷಿತ ಮಾತ್ರೆಗಳನ್ನು ತೆಗೆದುಕೊಳ್ಳದೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಯಾವುದೇ ಅಪಾಯವಿಲ್ಲ ಎಂಬುದನ್ನು ಹಸಿರು ದೀಪ ಸೂಚಿಸುತ್ತದೆ.

ಒಟ್ಟಿನಲ್ಲಿ ಮುಟ್ಟಾಗುವ ದಿನಾಂಕಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳದ ಯುವತಿಯರಿಗೆ ಈ ಆ್ಯಪ್ ತುಂಬಾ ಸಹಾಯ ಮಾಡುತ್ತದೆ ಎನ್ನುತ್ತಾರೆ ಆ್ಯಪ್ ಮಾರುಕಟ್ಟೆಯ ವಿಶ್ಲೇಷಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.