ADVERTISEMENT

ಹೊಸ ಎತ್ತರಕ್ಕೆ ಏರಿದ ಷೇರುಪೇಟೆ

ಆರ್ಥಿಕ ಸುಧಾರಣಾ ಕ್ರಮಗಳ ಪ್ರಭಾವ

ಪಿಟಿಐ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ಹೊಸ ಎತ್ತರಕ್ಕೆ ಏರಿದ ಷೇರುಪೇಟೆ
ಹೊಸ ಎತ್ತರಕ್ಕೆ ಏರಿದ ಷೇರುಪೇಟೆ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಖರೀದಿ ಸಂಭ್ರಮ ಜೋರಾಗಿದ್ದು, ಸೂಚ್ಯಂಕಗಳು ದಿನೇ ದಿನೇ ಹೊಸ ಎತ್ತರ ತಲುಪುತ್ತಿವೆ.

ಆರ್ಥಿಕ ಸುಧಾರಣೆಗೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಷೇರುಪೇಟೆಗೆ ಬಂಡವಾಳ ಒಳಹರಿವನ್ನು ಹೆಚ್ಚಿಸಿವೆ. ಇದರಿಂದ ಸತತ ಮೂರನೇ ವಾರವೂ ಸಕಾರಾತ್ಮಕ ವಹಿವಾಟು ನಡೆದು ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ. ಐದು ದಿನಗಳ ವಹಿವಾಟಿನಲ್ಲಿ ಮೂರು ದಿನಗಳು ಸೂಚ್ಯಂಕಗಳು ಉತ್ತಮ ಗಳಿಕೆ ಕಂಡುಕೊಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 278 ಅಂಶಗಳಷ್ಟು ಏರಿಕೆ ಕಂಡು, 31,028 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮೂರನೇ ವರ್ಷಾಚರಣೆ ಸಂದರ್ಭದಲ್ಲಿಯೇ ಬಿಎಸ್‌ಇ ಸೂಚ್ಯಂಕ 31 ಸಾವಿರ ಗಡಿ ದಾಟಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.

30,639 ಅಂಶಗಳಲ್ಲಿ ವಾರದ ವಹಿವಾಟು ಆರಂಭವಾಯಿತು. ಮಧ್ಯಂತರ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 31,075 ಅಂಶಗಳನ್ನು ತಲುಪಿತ್ತು. ವಾರದ ವಹಿವಾಟಿನಲ್ಲಿ ಸೂಚ್ಯಂಕ ಒಟ್ಟು 563 ಅಂಶ ಏರಿಕೆ ಕಂಡು, 31,028 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.



ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಸಹ 31 ಅಂಶ ಹೆಚ್ಚಾಗಿ, 9,595 ಅಂಶಗಳಿಗೆ ತಲುಪುವ ಮೂಲಕ ಹೊಸ ದಾಖಲೆ ಬರೆದಿದೆ. ನಿಫ್ಟಿ 167 ಅಂಶ ಹೆಚ್ಚಾಗಿ, 9,595 ಅಂಶಗಳಿಗೆ ತಲುಪುವ ಮೂಲಕ ಹೊಸ ದಾಖಲೆ ಬರೆಯಿತು.

ಉತ್ತೇಜಕ ಕ್ರಮಗಳು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ಆದ್ಯತೆಯಂತಹ ಆರ್ಥಿಕ ಸುಧಾರಣಾ ಕ್ರಮಗಳು ಹೂಡಿಕೆದಾರರನ್ನು ಉತ್ತೇಜಿಸಿದೆ. ಇದರಿಂದ ಷೇರುಪೇಟೆಗಳಲ್ಲಿ ಹೂಡಿಕೆ ಪ್ರಮಾಣ ಹೆಚ್ಚಾಗುತ್ತಿದ್ದು, ಸೂಚ್ಯಂಕಗಳು ಹೊಸ ಮಟ್ಟವನ್ನು ತಲುಪುತ್ತಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಜೂನ್‌ ತಿಂಗಳ ವಾಯಿದಾ ವಹಿವಾಟು ಉತ್ತಮ ಆರಂಭ ಪಡೆದುಕೊಂಡಿದೆ. 2016–17ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪೆನಿಗಳು ಮಾರಕಟ್ಟೆ ನಿರೀಕ್ಷೆಯಂತೆ ಉತ್ತಮ ಫಲಿತಾಂಶ ಪ್ರಕಟಿಸಿವೆ. ಈ ಅಂಶಗಳು ಸಹ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿವೆ’ ಎಂದು ತಜ್ಞರು ಹೇಳಿದ್ದಾರೆ.

ವಿದೇಶಿ ಹೂಡಿಕೆ: ವಿದೇಶಿ ಹೂಡಿಕೆದಾರರು ವಾರದ ವಹಿವಾಟಿನಲ್ಲಿ ₹1,403 ಕೋಟಿಗಳಷ್ಟು ಹೂಡಿಕೆ ಮಾಡಿದ್ದಾರೆ. ವಾರದ ವಹಿವಾಟಿನಲ್ಲಿ ಟಾಟಾ ಮೋಟಾರ್ಸ್‌  ಶೇ 8.53,  ಐಟಿಸಿ ಶೇ 7.96, ಟಾಟಾ ಸ್ಟೀಲ್‌ ಶೇ 4.58ರಷ್ಟು ಗರಿಷ್ಠ ಏರಿಕೆ ಕಂಡುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT