ADVERTISEMENT

ಹೊಸ ಎತ್ತರಕ್ಕೆ ಬಿಎಸ್‌ಇ, ನಿಫ್ಟಿ

ಪಿಟಿಐ
Published 15 ಮೇ 2017, 19:30 IST
Last Updated 15 ಮೇ 2017, 19:30 IST
ಹೊಸ ಎತ್ತರಕ್ಕೆ ಬಿಎಸ್‌ಇ, ನಿಫ್ಟಿ
ಹೊಸ ಎತ್ತರಕ್ಕೆ ಬಿಎಸ್‌ಇ, ನಿಫ್ಟಿ   

ಮುಂಬೈ: ದೇಶದ ಷೇರುಪೇಟೆಗಳ ಮೇಲೆ ಸೈಬರ್‌ ದಾಳಿ ಯಾವುದೇ ರೀತಿಯ ಋಣಾತ್ಮಕ ಪರಿಣಾಮ ಬೀರಿಲ್ಲ. ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆಗಳು ಸೋಮವಾರದ ವಹಿವಾಟಿನಲ್ಲಿ ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 134 ಅಂಶ ಏರಿಕೆ ಕಂಡು, ಗರಿಷ್ಠ ಮಟ್ಟವಾದ 30,251 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್ಇ) ನಿಫ್ಟಿ 44 ಅಂಶ ಏರಿಕೆ ಕಂಡು, ಹೊಸ ಗರಿಷ್ಠ ಮಟ್ಟವಾದ 9,445 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಸಕಾರಾತ್ಮಕ ಅಂಶಗಳು: 2016–17ರ ನಾಲ್ಕನೇ ತ್ರೈಮಾಸಿಕದಲ್ಲಿ ಕಾರ್ಪೊರೇಟ್‌ ವಲಯದ  ಆರ್ಥಿಕ ಸಾಧನೆ ಮಾರುಕಟ್ಟೆ ನಿರೀಕ್ಷೆಯಂತೆ ಉತ್ತಮವಾಗೇ ಇದೆ.

ಇನ್ನು, ಏಪ್ರಿಲ್‌ ತಿಂಗಳ  ಚಿಲ್ಲರೆ ಮತ್ತು ಸಗಟು ಹಣದುಬ್ಬರ ಇಳಿಕೆ ಕಂಡಿವೆ. ಇದರಿಂದ ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಬಡ್ಡಿದರದಲ್ಲಿ ಕಡಿತವಾಗುವ ನಿರೀಕ್ಷೆ ಹೆಚ್ಚಾಗಿದೆ. ಈ ಸಕಾರಾತ್ಮಕ ಅಂಶಗಳು ಸೂಚ್ಯಂಕಗಳ ಏರಿಕೆಗೆ ನೆರವಾದವು.

ರೂಪಾಯಿ ಸಾರ್ವಕಾಲಿಕ ಗರಿಷ್ಠ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 26 ಪೈಸೆಗಳಷ್ಟು ಏರಿಕೆ ಕಂಡು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹64.05ರಂತೆ ವಿನಿಮಯಗೊಂಡಿತು. 2015 ಆಗಸ್ಟ್‌ 10ರ ನಂತರ ಗರಿಷ್ಠ ದಾಖಲಾಗಿರುವ ಗರಿಷ್ಠ ಮಟ್ಟ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.