ADVERTISEMENT

‘ಎನ್‌ಎಸ್‌ಇ’ ಷೇರು: ಚಿಲ್ಲರೆ ಹೂಡಿಕೆದಾರರ ಪಾಲು ಶೇ 21

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ನವದೆಹಲಿ (ಪಿಟಿಐ): ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್‌ಎಸ್‌ಇ) ನೋಂದಾಯಿತ ಕಂಪೆನಿಗಳಲ್ಲಿ ಚಿಲ್ಲರೆ ಹೂಡಿಕೆದಾರರ ಷೇರುಪಾಲು ಆರು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.

2015ರ ಮಾರ್ಚ್‌ ತಿಂಗಳ ಅಂತ್ಯಕ್ಕೆ  ಶೇ 21.35ರಷ್ಟು ಷೇರುಗಳನ್ನು ಅಂದರೆ ಮೌಲ್ಯದ ಲೆಕ್ಕದಲ್ಲಿ ಚಿಲ್ಲರೆ ಹೂಡಿಕೆದಾರರು ಒಟ್ಟು ₨8 ಲಕ್ಷ ಕೋಟಿಯಷ್ಟು ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಈ ಹಿಂದೆ, 2014ರ ಮಾರ್ಚ್‌ನಲ್ಲಿ ಚಿಲ್ಲರೆ ಹೂಡಿಕೆದಾರರು ‘ಎನ್‌ಎಸ್‌ಇ’ ವಹಿವಾಟು ಪಟ್ಟಿಯಲ್ಲಿನ ಕಂಪೆನಿಗಳಲ್ಲಿ ಶೇ 20.99ರಷ್ಟು ಷೇರುಗಳನ್ನು ಹೊಂದಿದ್ದರು ಎಂದು ಪ್ರೈಮ್‌ ಡಾಟಾ ಬೇಸ್‌ ಮಾಹಿತಿ ನೀಡಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶೇ 6.44ರಷ್ಟು ಮತ್ತು ದೇಶಿ ಸಾಂಸ್ಥಿಕ ಹೂಡಿಕೆದಾರರು ಶೇ 5.01ರಷ್ಟು ಷೇರುಗಳನ್ನು ಹೊಂದಿದ್ದಾರೆ. ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಆರ್ಥಿಕ ಸುಧಾರಣಾ ಕ್ರಮಗಳಿಂದಾಗಿ ಉತ್ತೇಜಿತರಾಗಿ ಚಿಲ್ಲರೆ ಹೂಡಿಕೆದಾರರು ಹೆಚ್ಚು ಷೇರು ಹೊಂದಿದ್ದಾರೆ ಎಂದು ಷೇರುಪೇಟೆ ತಜ್ಞರು ಹೇಳಿದ್ದಾರೆ.

ಹೆಚ್ಚು ಹೂಡಿಕೆ: ರಿಲಯನ್ಸ್‌ ಪವರ್‌, ರಿಲಯನ್ಸ್ ಇಂಡಸ್ಟ್ರೀಸ್‌, ರಿಲಯನ್ಸ್‌ ಕಮ್ಯುನಿಕೇಷನ್ಸ್‌, ಎಸ್‌ಬಿಐ, ರಿಲಯನ್ಸ್‌ ಇನ್ಫ್ರಾಸ್ಟ್ರಕ್ಚರ್‌ ಅತಿ ಹೆಚ್ಚು ಚಿಲ್ಲರೆ ಹೂಡಿಕೆದಾರರನ್ನು ಆಕರ್ಷಿಸಿರುವ ಪ್ರಮುಖ ಕಂಪೆನಿಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.