ADVERTISEMENT

‘ಬ್ರಿಕ್ಸ್‌’ ಬ್ಯಾಂಕ್‌ ಅಧ್ಯಕ್ಷರಾಗಿ ಕನ್ನಡಿಗ ಕಾಮತ್‌

​ಪ್ರಜಾವಾಣಿ ವಾರ್ತೆ
Published 11 ಮೇ 2015, 19:30 IST
Last Updated 11 ಮೇ 2015, 19:30 IST

ನವದೆಹಲಿ (ಪಿಟಿಐ): ಕೆ.ವಿ.ಕಾಮತ್‌ ಎಂದೇ ಪರಿಚಿತರಾಗಿರುವ, ಮಂಗಳೂರಿನ ಕುಂದಾಪುರ ವಾಮನ ಕಾಮತ್‌ ಅವರು ‘ಬ್ರಿಕ್ಸ್‌’ ಬ್ಯಾಂಕ್‌ನ ಮೊದಲ ಅಧ್ಯಕ್ಷರಾಗಿ ಸೋಮವಾರ ನೇಮಕಗೊಂಡರು.

ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (ಬ್ರಿಕ್ಸ್‌) ರಾಷ್ಟ್ರಗಳ ಈ ಅಭಿವೃದ್ಧಿ ಬ್ಯಾಂಕ್‌ (ಎನ್‌ಡಿಬಿ) ಮುಂದಿನ ಒಂದು ವರ್ಷದಲ್ಲಿ ಕಾರ್ಯಾರಂಭ ಮಾಡಲಿದೆ. ಮೊದಲ ಅಧ್ಯಕ್ಷರಾಗಿ ಕಾಮತ್‌ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕೇಂದ್ರದ ಹಣಕಾಸು ಕಾರ್ಯದರ್ಶಿ ರಾಜೀವ್ ಮೆಹರ್ಷಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಅಧಿಕಾರಾವಧಿ ಐದು ವರ್ಷ?
 ಕಾಮತ್‌ ಅವರು ಎಷ್ಟು ವರ್ಷಗಳ ಅವಧಿಗೆ ಬ್ಯಾಂಕ್‌ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಅಧ್ಯಕ್ಷರ ಅಧಿಕಾರ ಅವಧಿ ಐದು ವರ್ಷಗಳವರೆಗೆ ನಿಗದಿಯಾಗುವ ಸಾಧ್ಯತೆ ಇದೆ. ಅವರ ನೇಮಕಕ್ಕೆ ರಾಷ್ಟ್ರಪತಿಗಳಿಂದ ಅನುಮತಿ ಪಡೆದುಕೊಳ್ಳಲಾಗಿದೆ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.

ಕಳೆದ ವರ್ಷ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ‘ನ್ಯೂ ಡೆವಲಪ್‌ಮೆಂಟ್‌ ಬ್ಯಾಂಕ್‌’ (ಎನ್‌ಡಿಬಿ) ಸ್ಥಾಪಿಸಲು ಸದಸ್ಯ ರಾಷ್ಟ್ರಗಳು ಒಪ್ಪಿಗೆ ನೀಡಿವೆ. 10 ಸಾವಿರ ಕೋಟಿ ಡಾಲರ್‌ (₨ 6.38 ಲಕ್ಷ ಕೋಟಿ) ಹೂಡಿಕೆಯಲ್ಲಿ ಈ ಬ್ಯಾಂಕ್‌ ಸ್ಥಾಪಿಸುತ್ತಿವೆ. ಈ ಬ್ಯಾಂಕ್‌ನ ಕೇಂದ್ರ ಕಚೇರಿ ಶಾಂಘೈನಲ್ಲಿ ನೆಲೆಗೊಳ್ಳಲಿದೆ. ಒಪ್ಪಂದದ ಪ್ರಕಾರ ಮೊದಲ ಅಧ್ಯಕ್ಷರ ನೇಮಕ ಮಾಡುವ ಅಧಿಕಾರವನ್ನು ಭಾರತ ಪಡೆದುಕೊಂಡಿದೆ ಎಂದು ಮೆಹರ್ಷಿ ವಿವರಿಸಿದರು.

ಐದು ಸದಸ್ಯ ದೇಶಗಳಿಗೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ‘ಬ್ರಿಕ್ಸ್‌ ಬ್ಯಾಂಕ್‌’ ಸಾಲದ ನೆರವು ನೀಡಲಿದೆ. ‘ಬ್ರಿಕ್ಸ್‌’ ರಾಷ್ಟ್ರಗಳು ವಿಶ್ವದ ‘ಜಿಡಿಪಿ’ಗೆ ಒಟ್ಟಾರೆ ₨ 16 ಲಕ್ಷ ಕೋಟಿ ಮೌಲ್ಯದ ಕೊಡುಗೆ ನೀಡುತ್ತಿವೆ. ವಿಶ್ವದ ಶೇ 40ರಷ್ಟು ಜನಸಂಖ್ಯೆ  ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT