ADVERTISEMENT

‘ಸೆಸ್‌’ ಹೊರೆ ಇನ್ನೆಷ್ಟು ದಿನ?

​ಕೇಶವ ಜಿ.ಝಿಂಗಾಡೆ
Published 26 ನವೆಂಬರ್ 2015, 8:27 IST
Last Updated 26 ನವೆಂಬರ್ 2015, 8:27 IST

ಪ್ರಸಕ್ತ ಹಣಕಾಸು ವರ್ಷದ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದ ‘ಸ್ವಚ್ಛ ಭಾರತ್‌ ಸೆಸ್’ ಜಾರಿಗೆ ಬಂದಿದ್ದು, ಗ್ರಾಹಕರು ಪಡೆಯುವ ಸೇವೆಗಳೆಲ್ಲ ಕೆಲಮಟ್ಟಿಗೆ ದುಬಾರಿಯಾಗಲಿವೆ. ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ (ಜಿಎಸ್‌ಟಿ) ಜಾರಿಗೆ ಬಂದರೆ ಇಂತಹ ‘ಸೆಸ್‌’ಗಳಿಗೆ ಅವಕಾಶ ಇರುವುದಿಲ್ಲ ಎಂದು ಕೇಶವ ಜಿ. ಝಿಂಗಾಡೆ ಇಲ್ಲಿ ವಿವರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿರುವ ಸ್ವಚ್ಛತಾ ಅಭಿಯಾನಕ್ಕೆ ಸಂಪನ್ಮೂಲ ಕ್ರೋಡೀಕರಿಸುವ ಉದ್ದೇಶದಿಂದ ಈ ತಿಂಗಳ 15ರಿಂದ ಜಾರಿಗೆ ತಂದಿರುವ ಶೇ 0.5ರಷ್ಟು ‘ಸ್ವಚ್ಛ ಭಾರತ್’ ಉಪಕರ  (ಸೆಸ್) ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ತೆರಿಗೆದಾರರ ಪಾಲಿಗೆ ಹೆಚ್ಚಿನ ಹೊರೆಯನ್ನೂ ಹೇರಲಿದೆ.

ದೀಪಾವಳಿಯ ಬಿಡುವಿನ ದಿನಗಳ ಸಂಭ್ರಮದಲ್ಲಿದ್ದ ಉದ್ದಿಮೆದಾರರು ಮತ್ತು ಬಳಕೆದಾರರ ಮೇಲೆ ಕೇಂದ್ರ ಸರ್ಕಾರವು ನೈರ್ಮಲ್ಯದ ಹೆಸರಿನಲ್ಲಿ ಹೆಚ್ಚುವರಿ ಸೆಸ್‌ನ ಹೊರೆ ಹೇರಿದೆ. ಹಣಕಾಸು ವರ್ಷದ ಮಧ್ಯ ಭಾಗದಲ್ಲಿ ಜಾರಿಗೆ ತಂದಿರುವ ಈ ಉಪಕರದಿಂದಾಗಿ  ಹೋಟೆಲ್, ಮೊಬೈಲ್‌, ಮೇಲ್ದರ್ಜೆಯ ರೈಲು, ಬ್ಯಾಂಕಿಂಗ್‌, ವಿಮಾನಯಾನ ಮುಂತಾದ ಸೇವೆಗಳು ತುಟ್ಟಿಯಾಗಲಿವೆ. ಮೊದಲ ದರ್ಜೆಯ ಎ.ಸಿ. ಮತ್ತು ಇತರ ಎಲ್ಲಾ ದರ್ಜೆಯ ಎ.ಸಿ. ಟಿಕೆಟ್‌ ದರ ಶೇ 4.35ರಷ್ಟು ಹೆಚ್ಚಳವಾಗಿದೆ.

ತೆರಿಗೆಗೆ ಒಳಪಡುವ ಮೌಲ್ಯದ ಮೇಲೆ ವಿಧಿಸುವ ಉಪಕರ ಇದಾಗಿದೆ. ತೆರಿಗೆಗೆ ಒಳಪಡುವ ಸೇವೆಗಳ ಪ್ರತಿ ₹ 100ಗಳಿಗೆ 50 ಪೈಸೆಗಳಷ್ಟು ಮಾತ್ರ ಸೆಸ್‌ ಅನ್ವಯವಾಗಲಿದೆ. ಇದು ದೊಡ್ಡ ಹೊರೆ ಅಲ್ಲ ಎಂದರೂ, ಬಜೆಟ್‌ನಲ್ಲಿ ಪ್ರಸ್ತಾಪಿಸಿರುವಂತೆ ಮುಂಬರುವ ದಿನಗಳಲ್ಲಿ ಒಟ್ಟು ಶೇ 2ರಷ್ಟು ಸೆಸ್‌ ವಿಧಿಸಿದರೆ ಗ್ರಾಹಕರ ಜೇಬಿಗೆ ಭಾರವಾಗಲಿರುವುದಂತೂ ನಿಜ. ಸೇವಾ ತೆರಿಗೆಗೆ ಒಳಪಡುವ ಪ್ರತಿಯೊಂದು ಸೇವೆಗಳಿಗಾಗಿ ಗ್ರಾಹಕರು ಇನ್ನು ಮುಂದೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ತೆರಿಗೆಗೆ ಒಳಪಡುವ ಸೇವೆಗಳಿಗೆ ಪಾವತಿಸುವ ಸೇವಾ ತೆರಿಗೆಯು ಈಗ ಶೇ 14ರಿಂದ ಶೇ 14.5ರಷ್ಟಾಗಲಿದೆ.

ಉದ್ದಿಮೆ ಸಂಸ್ಥೆಗಳಿಗೂ ಇದು ಹೊರೆಯಾಗಿ ಪರಿಣಮಿಸಲಿದೆ. ಸೇವಾ ತೆರಿಗೆ ಪಾವತಿಸುವವರು ಮತ್ತು ಸರಕುಗಳ ತಯಾರಿಕಾ ಸಂಸ್ಥೆಗಳ ಪಾಲಿಗೆ ಇದೊಂದು ದೀಪಾವಳಿಯ ಕಹಿ ಕೊಡುಗೆಯಾಗಿದೆ. ಸಾಕಷ್ಟು ಮುನ್ಸೂಚನೆ ಇಲ್ಲದೆ, ವರ್ಷದ ಮಧ್ಯಭಾಗದಲ್ಲಿ, ಹಬ್ಬಗಳ ಸಂದರ್ಭದಲ್ಲಿ  ಜಾರಿಗೆ ತಂದಿರುವ ಈ ‘ಸೆಸ್’ ಬಗ್ಗೆ ಅಪಸ್ವರವೇ ಹೆಚ್ಚಾಗಿ ಕೇಳಿ ಬರುತ್ತಿದೆ. ನವೆಂಬರ್‌ 6ರಂದು ಈ ಸಂಬಂಧ ಅಧಿಸೂಚನೆ ಹೊರಡಿಸಿದ ಅಬಕಾರಿ ಮತ್ತು ಸೀಮಾ ಸುಂಕಗಳ ಕೇಂದ್ರೀಯ ಮಂಡಳಿಯು (ಸಿಬಿಇಸಿ), ನ. 15ರಿಂದ ಸೆಸ್‌ ಜಾರಿಗೆ ಬರಲಿದೆ ಎಂದು ದಿಢೀರಾಗಿ ಪ್ರಕಟಿಸಿತ್ತು.

ಸಾಕಷ್ಟು ಸಮಯಾವಕಾಶ ನೀಡದಿರುವುದು, ಅನೇಕ ಅನುಮಾನಗಳಿಗೆ ಸೂಕ್ತ ಉತ್ತರ ದೊರೆಯದಿರುವುದು ಮತ್ತು  ಇನ್‌ಪುಟ್‌ ಕ್ರೆಡಿಟ್‌ ಸೌಲಭ್ಯ ಇಲ್ಲದಿರುವುದಕ್ಕೆ ಸರ್ಕಾರದ ಈ ನಿರ್ಧಾರ ಟೀಕೆಗೆ ಗುರಿಯಾಗಿದೆ. ಈ ‘ಸೆಸ್‌’ನಲ್ಲಿ ಇನ್‌ಪುಟ್‌ ಕ್ರೆಡಿಟ್‌ ಸೌಲಭ್ಯ ಇಲ್ಲದಿರುವುದರಿಂದ ತೆರಿಗೆ ಮೇಲೆ ತೆರಿಗೆ ಜಾರಿಗೆ ಬರಲಿದೆ. ಹೀಗಾಗಿ ಸೇವೆ ತೆರಿಗೆಯು  ಶೇ 14.5ಕ್ಕಿಂತ ಹೆಚ್ಚಿಗೆ ಇರಲಿದೆ. ಇದು ತಮ್ಮ ಲಾಭದ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದು ಉದ್ದಿಮೆ ಸಂಸ್ಥೆಗಳ ಆತಂಕವಾಗಿದೆ. 2015–16ನೆ ಸಾಲಿನ ಬಜೆಟ್‌ನಲ್ಲಿಯೇ ಶೇ 2ರಷ್ಟು ಪ್ರಮಾಣದಲ್ಲಿ ಈ ‘ಸೆಸ್‌’ ಜಾರಿಗೆ ತರುವ ಬಗ್ಗೆ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಇಂಗಿತ ವ್ಯಕ್ತಪಡಿಸಿದ್ದರು.  ಆ ಸಂದರ್ಭದಲ್ಲಿ ಜಾರಿ ದಿನವನ್ನು ಗೊತ್ತು ಮಾಡಿರಲಿಲ್ಲ.

ಉಳಿದಿರುವ ಶೇ 1.5ರಷ್ಟು ಸೆಸ್‌ ಅನ್ನು ನಂತರದ ದಿನಗಳಲ್ಲಿ ವಿಧಿಸಲಾಗುವುದೇ. ಸೇವಾ ತೆರಿಗೆಯು ಶೇ 16ರಿಂದ ಶೇ 18ರವರೆಗೆ ಏರಿಕೆಯಾಗಲಿದೆಯೇ ಎನ್ನುವ ಅನುಮಾನ ಈಗ  ಕಾಡುತ್ತಿದೆ. ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್‌ಟಿ) ಸಂಬಂಧಿಸಿದಂತೆಯೂ ಇದು  ಗೊಂದಲ ಮೂಡಿಸಿದೆ. ‘ಜಿಎಸ್‌ಟಿ’ಯ ಪ್ರಯೋಜನ ಪಡೆಯದೆ, ‘ಜಿಎಸ್‌ಟಿ’ ಪಾವತಿಸಬೇಕಾದೀತೆ ಎನ್ನುವ ಪ್ರಶ್ನೆಗಳಿಗೂ ಆಸ್ಪದ ಮಾಡಿಕೊಟ್ಟಿದೆ. ಉತ್ತರ ಸಿಗದ ಈ ಎಲ್ಲ ಪ್ರಶ್ನೆಗಳು ಉದ್ದಿಮೆ ವಹಿವಾಟುದಾರರಲ್ಲಿ ಅನಿಶ್ಚಿತತೆ ಮೂಡಿಸಿವೆ. ಸೇವಾ ತೆರಿಗೆಗೆ ಸಂಬಂಧಿಸಿದ ತೆರಿಗೆ ಮೊತ್ತ ಲೆಕ್ಕ ಹಾಕುವುದು, ವಿನಾಯ್ತಿ, ಪಾವತಿ, ದಂಡ ಮುಂತಾದ ನಿಯಮಗಳು ಈ ಸೆಸ್‌ಗೂ ಅನ್ವಯವಾಗಲಿವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಗರಿಷ್ಠ ತೆರಿಗೆ ದರ, ತೆರಿಗೆ ರಿಯಾಯ್ತಿ ರದ್ದತಿ, ಹೊಸ ತೆರಿಗೆ, ಉಪಕರ (ಸೆಸ್‌) ಹೇರಿಕೆಯ ಮಾತು ಕೇಳಿ ಬರುತ್ತಿದೆ.  ಇಂತಹ ಕ್ರಮಗಳಿಂದಾಗಿ  ಪರೋಕ್ಷ ತೆರಿಗೆಗಳು ಈಗಾಗಲೇ ಎರಡು ಪಟ್ಟುಗಳಷ್ಟು ಹೆಚ್ಚಾಗಿವೆ. ಸರಳ ಮತ್ತು ಸ್ಥಿರವಾದ ತೆರಿಗೆ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ವಿದೇಶಿ ಹೂಡಿಕೆದಾರರಿಗೆ ಭರವಸೆ ನೀಡುತ್ತಾರೆ.  ದೇಶಿ ತೆರಿಗೆದಾರರಿಗೂ ಅವರು ಇದೇ ಭರವಸೆಯನ್ನು ನೀಡಲು ಮರೆತಿರುವಂತಿದೆ. 

ಸೆಸ್‌ ಅಥವಾ ಸರ್ಚಾರ್ಜ್‌ ಮೂಲಕ ಸಂಗ್ರಹವಾಗುವ ಮೊತ್ತವನ್ನು ರಾಜ್ಯಗಳಿಗೆ ಹಂಚಿಕೆ ಮಾಡದಿರುವುದರಿಂದ ಇದು ದೇಶದ ಒಕ್ಕೂಟ ವ್ಯವಸ್ಥೆಗೂ ಪೂರಕವಾಗಿರಲಾರದು. ಸರಕುಗಳ ಬೇಡಿಕೆ ಹೆಚ್ಚಿಸಲು  ಬ್ಯಾಂಕ್‌ ಬಡ್ಡಿ ದರ ಕಡಿಮೆ ಮಾಡಲು ಆರ್‌ಬಿಐ ಮೇಲೆ ಒತ್ತಡ ಹೇರುವ ಸರ್ಕಾರ, ಇನ್ನೊಂದೆಡೆ ಬೇಡಿಕೆಗೆ ಕಡಿವಾಣ ಹಾಕುವ ತೆರಿಗೆ ನೀತಿ ಅನುಸರಿಸುತ್ತಿದೆ. ದೇಶದಲ್ಲಿ ಉದ್ದಿಮೆ ವಹಿವಾಟಿಗೆ ಪೂರಕ ವಾತಾವರಣ ಕಲ್ಪಿಸಿಕೊಡುವುದಾಗಿ ಹೇಳುತ್ತಿರುವ ಸರ್ಕಾರದ ಧೋರಣೆಗೆ ಈ ‘ಸೆಸ್‌’ ಹೇರಿಕೆಯು ವಿರುದ್ಧವಾಗಿರುವುದಂತೂ ನಿಜ.

ಏನಿದು ಸೇವಾ ತೆರಿಗೆ
ಸೇವಾ ಸಂಸ್ಥೆಗಳು ಒದಗಿಸುವ ಸೇವೆಗಳಿಗೆ, ಸೇವೆ ಪಡೆಯುವ ಗ್ರಾಹಕರು ಪಾವತಿಸುವ ತೆರಿಗೆ ಇದಾಗಿದೆ.  ಗ್ರಾಹಕರಿಂದ ಸಂಗ್ರಹಿಸುವ ತೆರಿಗೆಯನ್ನು ಸೇವೆ ಒದಗಿಸುವ ಸಂಸ್ಥೆಗಳೇ ಕೇಂದ್ರ ಸರ್ಕಾರಕ್ಕೆ ಪಾವತಿಸುತ್ತವೆ. 1994ರಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಡಾ. ಮನಮೋಹನ್‌ ಸಿಂಗ್‌ ಅವರು ಮೊದಲ ಬಾರಿಗೆ ಈ ತೆರಿಗೆ  ಪದ್ಧತಿಯನ್ನು ಜಾರಿಗೆ ತಂದರು. ಆರಂಭದಲ್ಲಿ ನಿರ್ದಿಷ್ಟ ಸೇವೆಗಳಿಗೆ ಮಾತ್ರ ಈ ಸೇವೆ ಅನ್ವಯವಾಗುತ್ತಿತ್ತು. ಸ್ಥಿರ ದೂರವಾಣಿ, ಸಾಮಾನ್ಯ ವಿಮೆ, ಷೇರು ದಲ್ಲಾಳಿಗಳ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. 2012ರಲ್ಲಿ ಪ್ರತ್ಯೇಕ ಪಟ್ಟಿಯಲ್ಲಿ ಗುರುತಿಸಿದ (negative list) ಕೆಲವೇ ಕೆಲ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು  ಈ ತೆರಿಗೆ ವ್ಯಾಪ್ತಿಗೆ ತರಲಾಗಿದೆ. 

ಶೇ 12ರಷ್ಟಿದ್ದ ಸೇವಾ ತೆರಿಗೆಯು ಈ ವರ್ಷದ ಬಜೆಟ್‌ನಲ್ಲಿ ಶೇ 14ಕ್ಕೆ ಏರಿಕೆಯಾಗಿತ್ತು. ದೇಶದ ಅರ್ಥ ವ್ಯವಸ್ಥೆಯಲ್ಲಿ ಸೇವಾ ವಲಯವು ದೊಡ್ಡ ಪಾಲನ್ನು ಹೊಂದಿದೆ. ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ (ಜಿಡಿಪಿ) ಶೇ 60ರಷ್ಟು ಪಾಲು ಹೊಂದಿದೆ. 2014–15ರಲ್ಲಿ ಸಂಗ್ರಹವಾದ ಒಟ್ಟು ತೆರಿಗೆ ಮೊತ್ತದಲ್ಲಿ ಇದರ ಪಾಲು ಶೇ 15.6ರಷ್ಟಿತ್ತು. 2014–15ನೇ ಹಣಕಾಸು ವರ್ಷದಲ್ಲಿ  ಅಬಕಾರಿ ಮತ್ತು ಸೀಮಾ ಸುಂಕಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಾ ತೆರಿಗೆಯು ಸಂಗ್ರಹವಾಗಿತ್ತು. ಸದ್ಯಕ್ಕೆ ₹ 2 ಲಕ್ಷ ಕೋಟಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಈ ತೆರಿಗೆ ಸಂಗ್ರಹವಾಗುತ್ತಿದೆ.

ತಾತ್ಪೂರ್ತಿಕ ವ್ಯವಸ್ಥೆ
‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)  ವ್ಯವಸ್ಥೆ ಜಾರಿಗೆ ತರಲು  ಒಂದು ವೇಳೆ  ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರ ದೊರೆತರೆ, ಮುಂದಿನ ಹಣಕಾಸು ವರ್ಷದಿಂದ (2016–17) ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬರಬಹುದು. ದೇಶದಾದ್ಯಂತ  ಏಕರೂಪದ ತೆರಿಗೆ ವ್ಯವಸ್ಥೆಯಲ್ಲಿ  ಯಾವುದೇ ‘ಸೆಸ್’ಗಳಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ‘ಸ್ವಚ್ಛ ಭಾರತ್‌ ಸೆಸ್‌’ ತಾತ್ಪೂರ್ತಿಕ ವ್ಯವಸ್ಥೆಯಾಗಿದೆ.

‘ಯಾವುದೇ ಒಂದು ಹೊಸ ತೆರಿಗೆ ವಿಧಿಸುವುದು ಬಳಕೆದಾರರ ಪಾಲಿಗೆ ಹೊರೆಯಾಗಿ ಪರಿಣಮಿಸುತ್ತದೆ. ಸ್ವಚ್ಛ ಭಾರತ್ ಸೆಸ್‌ ವಿಧಿಸುವ ಬಗ್ಗೆ ಬಜೆಟ್‌ನಲ್ಲಿಯೇ ಪ್ರಸ್ತಾಪಿಸಲಾಗಿತ್ತು. ಹೀಗಾಗಿ ಇದೇನೂ ಹೊಸ ತೆರಿಗೆಯಲ್ಲ. ಆದರೆ, ಏಕಾಏಕಿಯಾಗಿ ಜಾರಿಗೆ ತರುತ್ತಿರುವುದು ಸೇವೆ ಒದಗಿಸುವ ಸಂಸ್ಥೆಗಳ ಪಾಲಿಗೆ ಕೊಂಚ ಕಿರಿಕಿರಿಯಾಗಿರುವುದು ಸಹಜ. ಅಂತಿಮವಾಗಿ ಸೇವೆ ಪಡೆಯುವ ಗ್ರಾಹಕನೇ ತೆರಿಗೆ ಪಾವತಿಸಬೇಕಾಗುತ್ತದೆ. ಹೀಗಾಗಿ ತೆರಿಗೆದಾರರ ದೃಷ್ಟಿಯಿಂದ ಇದೊಂದು ಹೊಸ ಹೊರೆ.

‘ಸರಕುಗಳ ಸಾಗಾಣಿಕೆ ವೆಚ್ಚದ ಮೇಲೂ ‘ಸೆಸ್’ ವಿಧಿಸಲಾಗುವುದರಿಂದ ಪ್ರತಿಯೊಂದು ವಸ್ತುವಿನ ಮೇಲೂ ಹೊರೆ ಬೀರಲಿದೆ. ಈ ‘ಸೆಸ್’ ಹಿಂದಿರುವ  ಆಲೋಚನೆ ಚೆನ್ನಾಗಿದೆ. ಅದರ ಸದ್ಬಳಕೆಯಾಗಬೇಕಷ್ಟೆ’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾ ಸಂಘದ ರಾಜ್ಯ ತೆರಿಗೆ ಸಮಿತಿ ಅಧ್ಯಕ್ಷ ಬಿ.ಟಿ. ಮನೋಹರ್ ಅಭಿಪ್ರಾಯಪಡುತ್ತಾರೆ.

ಸೇವಾ ತೆರಿಗೆ
ವರ್ಷ:
1994, 2012, 2015, 2015ರ ನವೆಂಬರ್‍ನಲ್ಲಿ
ಪ್ರಮಾಣ (ಶೇಕಡಾವಾರು): 5, 12, 14, 14.50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT