ADVERTISEMENT

1 ಅಟ್ಟಿಗೆ ₹ 1,000 ಬೆಲೆ

ಉಡುಪಿ ಮಲ್ಲಿಗೆ ಇಳುವರಿ ಕುಸಿತ

ಪ್ರಕಾಶ ಸುವರ್ಣ ಕಟಪಾಡಿ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಉಡುಪಿ ಮಲ್ಲಿಗೆ
ಉಡುಪಿ ಮಲ್ಲಿಗೆ   
ಶಿರ್ವ: ಚಳಿಯ ವಾತಾವರಣದಿಂದಾಗಿ ಉಡುಪಿ ತಾಲ್ಲೂಕಿನ ಕಟಪಾಡಿ, ಶಂಕರಪುರ ವ್ಯಾಪ್ತಿಯಲ್ಲಿ ಬೆಳೆಯುವ ಉಡುಪಿ ಮಲ್ಲಿಗೆ ಬೆಳೆಯ ಇಳುವರಿಯಲ್ಲಿ ಕುಸಿತ ಕಂಡಿರುವ ಪರಿಣಾಮ 1 ಅಟ್ಟಿಗೆ ಮಲ್ಲಿಗೆಗೆ ಬೆಲೆ ₹1,000 ಆಗಿದೆ.
 
ಮಲ್ಲಿಗೆ ಇಳುವರಿ ಕಡಿಮೆ ಇರುವುದರಿಂದ ಮಾರುಕಟ್ಟೆಗೆ ಬರುವ ಮೊದಲು ದರ ನಿಗದಿ ಆಗುತ್ತಿದ್ದು, ಮಾರುಕಟ್ಟೆಗಳಲ್ಲಿ ಉಡುಪಿ ಮಲ್ಲಿಗೆ ಕಡಿಮೆ ಆಗಿದೆ. ಹೆಚ್ಚಿನ ಧಾರಣೆ ಕಾರಣಕ್ಕೆ ಉಡುಪಿ, ಮಂಗಳೂರು ಮಾರುಕಟ್ಟೆಗಳಲ್ಲಿ ಮಲ್ಲಿಗೆ ಧಾರಣೆ ಮತ್ತಷ್ಟು ಹೆಚ್ಚಿದೆ. ಮದುವೆ, ಶುಭ ಸಮಾರಂಭಗಳಿಗೆ ಮಲ್ಲಿಗೆ ಸಿಗದಂತಹ ಪರಿಸ್ಥಿತಿ ಇದೆ. ಚಳಿ ಹೆಚ್ಚಿರುವ ಕಾರಣ ಗಿಡಗಳಲ್ಲಿ ಸಾಕಷ್ಟು ಹೂ ಅರಳುತ್ತಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ. 
 
ಅಟ್ಟಿಗೆ ₹ 820 ಬೆಲೆ ಇದ್ದರೂ ಗ್ರಾಹಕರು ನೇರವಾಗಿ ಮಾರುಕಟ್ಟೆಗೆ ಹೋಗುವುದರಿಂದ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಗಳಲ್ಲಿ ಒಂದು ದೊಡ್ಡ ಅಟ್ಟಿ ಮಲ್ಲಿಗೆ ₹1,200 ಕ್ಕೂ ಹೆಚ್ಚು ಬೆಲೆಗೆ  ಮಾರಾಟವಾಗುತ್ತಿದೆ. ಸಣ್ಣ ಅಟ್ಟಿಗೆ ₹ 8,00ಕ್ಕೆ ಮಾರಾಟ ಆಗುತ್ತಿದೆ. ಕಳೆದ ವರ್ಷ ನವರಾತ್ರಿ ಹಬ್ಬಕ್ಕೆ 1 ಅಟ್ಟಿಗೆ ಮಲ್ಲಿಗೆ ಬೆಲೆ 
₹ 2 ಸಾವಿರ ಆಗಿತ್ತು. 
 
ಉಡುಪಿ ಮಲ್ಲಿಗೆ ಬೆಳೆಯುವ ಶಂಕರಪುರ, ಶಿರ್ವ, ಬೆಳ್ಮಣ್ ಪ್ರದೇಶದ ಮಲ್ಲಿಗೆ ತೋಟಗಳಲ್ಲಿ ಇಳುವರಿ ಕಡಿಮೆ ಇರುವುದರಿಂದ ದರ ಏರಿದೆ. ಮಂಗಳೂರು, ಮುಂಬೈ ಮಾರುಕಟ್ಟೆಗಳಿಂದ ಮಲ್ಲಿಗೆಗೆ ಬೇಡಿಕೆ ಇದ್ದರೂ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದು ರೈತರು ತಿಳಿಸಿದರು.
 
ಉತ್ತಮ ಬೆಲೆ ಇದೆ. ಆದರೆ ಇಳುವರಿ ಕಡಿಮೆ ಇದೆ. ಮಾರಾಟಗಾರರಿಗೆ ಹೂ ಸಿಗುತ್ತಿಲ್ಲ.  ಶಂಕರಪುರದಲ್ಲಿ ಕೃಷಿಕರಿಗೆ ಅಟ್ಟಿಯೊಂದಕ್ಕೆ ₹820 ಬೆಲೆ ಸಿಗುತ್ತಿದೆ. ಈ ಹಿಂದೆ ಅಟ್ಟಿಗೆ ₹220 ರಿಂದ ₹420ರ ಬೆಲೆ ಸಿಗುತ್ತಿತ್ತು. ಬರುವ ದಿನಗಳಲ್ಲಿ ಇಳುವರಿ ಹೆಚ್ಚಾಗಬಹುದು ಎಂದು ಕೃಷಿಕ ರೋನಾಲ್ಡ್ ಕೆಸ್ತೊಲಿನೊ ಹೇಳಿದರು.
 
**
ಉಡುಪಿ ಮಲ್ಲಿಗೆ ಬದಲು ಭಟ್ಕಳ ಮಲ್ಲಿಗೆ!
ಮಾರುಕಟ್ಟೆಗಳಲ್ಲಿ ಇದೀಗ ಉಡುಪಿ ಮಲ್ಲಿಗೆ ಕೊರತೆ ಎದ್ದು ಕಾಣುತ್ತಿರುವುದರಿಂದ ಭಟ್ಕಳ ಮಲ್ಲಿಗೆ ಮಾರಾಟ ಆಗುತ್ತಿದೆ. 1 ಚೆಂಡಿಗೆ ₹100 ಬೆಲೆ ಇದೆ. ಉಡುಪಿ ಮಲ್ಲಿಗೆ ಖರೀದಿ ಮಾಡುವ ಬದಲು ಭಟ್ಕಳ ಮಲ್ಲಿಗೆಯತ್ತ ಮುಖ ಮಾಡಿದ್ದಾರೆ. ಉಡುಪಿ ಮಲ್ಲಿಗೆಯಷ್ಟು ಸುವಾಸನೆ ಪರಿಮಳ ಭಟ್ಕಳ ಮಲ್ಲಿಗೆಗೆ ಇಲ್ಲ. ಅನಿವಾರ್ಯವಾಗಿ ಮಾರಾಟ ಮಾಡಬೇಕಾಗಿದೆ ಎಂದು ಕಟಪಾಡಿ ಮಲ್ಲಿಗೆ ವ್ಯಾಪಾರಿ ಮಹಮ್ಮದ್ ಆರಿಫ್ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.