ADVERTISEMENT

29 ಸಾವಿರದ ಗಡಿ ದಾಟಿದ ಸೂಚ್ಯಂಕ

ಪಿಟಿಐ
Published 8 ಸೆಪ್ಟೆಂಬರ್ 2016, 19:30 IST
Last Updated 8 ಸೆಪ್ಟೆಂಬರ್ 2016, 19:30 IST
29 ಸಾವಿರದ ಗಡಿ ದಾಟಿದ ಸೂಚ್ಯಂಕ
29 ಸಾವಿರದ ಗಡಿ ದಾಟಿದ ಸೂಚ್ಯಂಕ   

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಗುರುವಾರದ ವಹಿವಾಟಿನಲ್ಲಿ 17 ತಿಂಗಳ ಬಳಿಕ ಮೊದಲ ಬಾರಿಗೆ 29 ಸಾವಿರದ ಅಂಶಗಳ ಗಡಿ ದಾಟಿತು.

ಸೂಚ್ಯಂಕವು 119 ಅಂಶಗಳಷ್ಟು ಏರಿಕೆ ಕಂಡು, 29,045 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯ ಕಂಡಿತು. ಇದು 2015ರ ಏಪ್ರಿಲ್‌ 13ರ ನಂತರ ವಹಿವಾಟಿನ ಗರಿಷ್ಠ ಮಟ್ಟದ ಅಂತ್ಯವಾಗಿದೆ. ವಾಹನ ಮತ್ತು ರಿಯಲ್‌ ಎಸ್ಟೇಟ್‌ ವಲಯದಲ್ಲಿ ಉತ್ತಮ ವಹಿವಾಟು ನಡೆದಿದ್ದು, ಸೂಚ್ಯಂಕದ ದಾಖಲೆ ವಹಿವಾಟಿಗೆ ಕಾರಣವಾಯಿತು.

ತನ್ನ ಅಮೆರಿಕದ ಹಣಕಾಸು ಗ್ರಾಹಕರು ವೆಚ್ಚಕ್ಕೆ ಕಡಿವಾಣ ಹಾಕಿದ್ದರಿಂದ  ತನ್ನ ಭವಿಷ್ಯದ ವರಮಾನದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆ ಟಿಸಿಎಸ್‌ ಪ್ರಕಟಿಸಿದ್ದರಿಂದ ಐ.ಟಿ ಸಂಸ್ಥೆಗಳ ಷೇರುಗಳು ನಷ್ಟಕ್ಕೆ ಗುರಿಯಾದವು. ಟಿಸಿಎಸ್‌  ಷೇರು ಬೆಲೆ ಶೇ 5 (₹ 2,321) ಕಡಿಮೆಯಾಯಿತು. 

ಷೇರುಗಳು ಲಾಭ ಗಳಿಕೆ ವಹಿವಾಟಿಗೆ ಒಳಗಾಗಿದ್ದರಿಂದ ಸೂಚ್ಯಂಕ ದಿನದ ಕನಿಷ್ಠವಾದ 28,855 ಅಂಶಗಳಿಗೆ ಇಳಿದು, ನಂತರ 29,077ಕ್ಕೆ ಗರಿಷ್ಠ ಏರಿಕೆ ಕಂಡಿತು. ಅಮೆರಿಕದ ಫೆಡರಲ್‌ ರಿಸರ್ವ್‌, ಸೆಪ್ಟೆಂಬರ್‌ನಲ್ಲಿ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ತಗ್ಗಿದೆ. ಇದರಿಂದ ದೇಶಿ ಷೇರುಪೇಟೆಯಲ್ಲಿ ಹೂಡಿಕೆ ಪ್ರಮಾಣ ಹೆಚ್ಚಾಗಿದೆ.

ವಾಹನ ಮಾರಾಟದ ಪ್ರಭಾವ: ಆಗಸ್ಟ್‌ ತಿಂಗಳ ವಾಹನ ಮಾರಾಟದ ಅಂಕಿ–ಅಂಶ ಬಿಡುಗಡೆ ಆಗಿದ್ದು, ಪ್ರಯಾಣಿಕ ಕಾರುಗಳ ಮಾರಾಟವು ಸತತ 14ನೇ ತಿಂಗಳಿನಲ್ಲಿಯೂ ಶೇ 17ರಷ್ಟು ಏರಿಕೆ ಕಂಡಿದೆ. ಇದು ವಾಹನ ವಲಯದ ಷೇರುಗಳ ಖರೀದಿ ವಹಿವಾಟನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.