ADVERTISEMENT

4ನೇ ವಾರವೂ ಸೂಚ್ಯಂಕ ಇಳಿಕೆ

ಷೇರುಪೇಟೆ ಮೇಲೆ ದೇಶಿ, ಜಾಗತಿಕ ವಿದ್ಯಮಾನಗಳ ಪರಿಣಾಮ

ಪಿಟಿಐ
Published 24 ಮಾರ್ಚ್ 2018, 19:30 IST
Last Updated 24 ಮಾರ್ಚ್ 2018, 19:30 IST
4ನೇ ವಾರವೂ ಸೂಚ್ಯಂಕ ಇಳಿಕೆ
4ನೇ ವಾರವೂ ಸೂಚ್ಯಂಕ ಇಳಿಕೆ   

ಮುಂಬೈ: ಅಮೆರಿಕ ಮತ್ತು ಚೀನಾದ ಮಧ್ಯೆ ವಾಣಿಜ್ಯ ಸಮರ ಆರಂಭವಾಗುವ ಸಾಧ್ಯತೆಯು ಭಾರತವನ್ನೂ ಒಳಗೊಂಡು ಜಾಗತಿಕ ಷೇರುಪೇಟೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

ದೇಶದ ಷೇರುಪೇಟೆಗಳಲ್ಲಿ ಈ ವಾರ ಬಹುತೇಕ ಇಳಿಮುಖ ವಹಿವಾಟು ನಡೆಯಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) ವಾರದ ವಹಿವಾಟಿನಲ್ಲಿ 579 ಅಂಶ ಇಳಿಕೆ ಕಂಡು, ಐದು ತಿಂಗಳ ಕನಿಷ್ಠ ಮಟ್ಟವಾದ 32,596 ಅಂಶಗಳಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 211 ಅಂಶ ಇಳಿಕೆಯಾಗಿ 9,998 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ADVERTISEMENT

ರಾಜಕೀಯ ಬೆಳವಣಿಗೆ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ಜತೆ ಮುನಿಸಿಕೊಂಡಿರುವ ತೆಲುಗುದೇಶಂ ಪಕ್ಷ (ಟಿಡಿಪಿ) ಶುಕ್ರವಾರ ಎನ್‌ಡಿಎ ಮೈತ್ರಿಕೂಟದಿಂದ ಹೊರ ನಡೆದಿದೆ. ಇದು ಷೇರುಪೇಟೆ ಚಟುವಟಿಕೆಯನ್ನು ತಗ್ಗಿಸಿತು.

ಜಾಗತಿಕ ಬಿಕ್ಕಟ್ಟು: ಚೀನಾದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಒಟ್ಟಾರೆ ₹ 3.90ಲಕ್ಷ ಕೋಟಿಗಳಷ್ಟು ತೆರಿಗೆ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶಿಸಿದ್ದಾರೆ.

ಚೀನಾವು ಅಮೆರಿಕದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕದ್ದಿರುವುದು ಏಳು ತಿಂಗಳ ಕಾಲ ನಡೆದ ತನಿಖೆಯಲ್ಲಿ ಪತ್ತೆಯಾದ ನಂತರ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅಮೆರಿಕವು ಈ ಸಂಬಂಧ ಚೀನಾದ ವಿರುದ್ಧ ವಿಶ್ವ ವ್ಯಾಪಾರ ಸಂಘಟನೆಗೂ (ಡಬ್ಲ್ಯುಟಿಒ) ದೂರು ನೀಡಿದೆ. ಇದಕ್ಕೆ ಪ್ರತೀಕಾರವಾಗಿ ಚೀನಾ ಕೂಡ ಅಮೆರಿಕದ ಉತ್ಪನ್ನಗಳಿಗೆ ಗರಿಷ್ಠ ದರದ ಆಮದು ಸುಂಕ ವಿಧಿಸಿದೆ. ಅಮೆರಿಕದ 128 ಉತ್ಪನ್ನಗಳಿಗೆ ನೀಡಲಾಗುತ್ತಿದ್ದ ಸುಂಕ ವಿನಾಯ್ತಿಯನ್ನೂ ಚೀನಾ ರದ್ದುಪಡಿಸಿದೆ. ಇದು ಸೂಚ್ಯಂಕದ ಗರಿಷ್ಠ ಕುಸಿತಕ್ಕೆ ಕಾರಣವಾಯಿತು.

ದೇಶಿ ಮತ್ತು ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ಷೇರುಪೇಟೆಯಲ್ಲಿ ಅತಿಯಾದ ಮಾರಾಟದ ಒತ್ತಡ ಸೃಷ್ಟಿಯಾಗಿ ಸೂಚ್ಯಂಕ ಇಳಿಕೆ ಕಾಣುವಂತಾಯಿತು. ವಲಯವಾರು ರಿಯಲ್‌ ಎಸ್ಟೇಟ್‌, ಲೋಹ, ಬ್ಯಾಂಕ್‌, ಆರೋಗ್ಯ ಸೇವೆ, ವಾಹನ, ಐ.ಟಿ. ತಂತ್ರಜ್ಞಾನ, ಎಫ್‌ಎಂಸಿಜಿ, ವಿದ್ಯುತ್, ಗ್ರಾಹಕ ಬಳಕೆ ವಸ್ತುಗಳು ಹಾಗೂ ತೈಲ ಮತ್ತು ಅನಿಲ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.