ADVERTISEMENT

ಪೇಟೆಯಲ್ಲಿ ದಿನವೂ ಹೊಸ ದಾಖಲೆ

ಪಿಟಿಐ
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST
ಪೇಟೆಯಲ್ಲಿ ದಿನವೂ ಹೊಸ ದಾಖಲೆ
ಪೇಟೆಯಲ್ಲಿ ದಿನವೂ ಹೊಸ ದಾಖಲೆ   

ಮುಂಬೈ: ಕಾರ್ಪೊರೇಟ್‌ ಫಲಿತಾಂಶ ಸಕಾರಾತ್ಮಕವಾಗಿರಲಿದೆ ಎನ್ನುವ ನಿರೀಕ್ಷೆಯೇ ಷೇರುಪೇಟೆ ವಹಿವಾಟಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಇದರಿಂದ ದಿನವೂ ಹೊಸ ದಾಖಲೆ ಸೃಷ್ಟಿಯಾಗುತ್ತಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಸೋಮವಾರದ ಮಧ್ಯಂತರ ವಹಿವಾಟಿನಲ್ಲಿ 34,964 ಅಂಶಗಳಿಗೆ ತಲುಪುವ ಮೂಲಕ ಶುಕ್ರವಾರ ಇದ್ದ ಗರಿಷ್ಠ ಮಟ್ಟವಾದ 34,638ನ್ನು ದಾಟಿತ್ತು. ನಂತರ ಲಾಭ ಗಳಿಕೆ ಉದ್ದೇಶದ ವಹಿವಾಟು ನಡೆದಿದ್ದರಿಂದ ಅಂತಿಮವಾಗಿ 251 ಅಂಶಗಳ ಏರಿಕೆಯೊಂದಿಗೆ 34,843 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 10,700ರ ಗಡಿ ದಾಟಿ, ಹೊಸ ಎತ್ತರವಾದ 10,783 ಅಂಶಗಳನ್ನೂ ತಲುಪಿತ್ತು. ನಂತರ ವಹಿವಾಟಿನ ಅಂತ್ಯದ ವೇಳೆಗೆ 60 ಅಂಶಗಳ ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 10,741 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ADVERTISEMENT

ಬ್ಯಾಂಕಿಂಗ್‌, ಹಣಕಾಸು, ಲೋಹ ಮತ್ತು ಇಂಧನ ವಲಯದ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾದವು.

ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಷೇರುಪೇಟೆ ಚಟುವಟಿಕೆಯ ಮೇಲೆ ನಿಯಂತ್ರಣ ಸಾಧಿಸಿವೆ. ನವೆಂಬರ್ ತಿಂಗಳಿನಲ್ಲಿ ಕೈಗಾರಿಕಾ ಪ್ರಗತಿ 17 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಸಗಟು ಹಣದುಬ್ಬರ ಡಿಸೆಂಬರ್‌ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಈ ಅಂಶಗಳು ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿವೆ.

ದೇಶಿ ಹೂಡಿಕೆ ಪ್ರಮಾಣ, ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಚಟುವಟಿಕೆಯಿಂದಾಗಿ ಷೇರುಪೇಟೆಗಳು ದಾಖಲೆ ಮಟ್ಟವನ್ನು ತಲುಪುತ್ತಿವೆ ಎಂದು ದೆಹಲಿಯ ಷೇರು ದಲ್ಲಾಳಿ ಸಂಸ್ಥೆಯ ಮನೋಜ್‌ ಛೊರಾರಿಯಾ ಹೇಳಿದ್ದಾರೆ.

ಎಚ್‌ಡಿಎಫ್‌ಸಿ ಶೇ 6.17 ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿತು. ಇದು 52 ವಾರಗಳ ಗರಿಷ್ಠ ಮಟ್ಟವಾಗಿದೆ. ಅರ್ಹ ಸಾಂಸ್ಥಿಕ ಹೂಡಿಕೆ (ಕ್ಯೂಐಪಿ) ಮೂಲಕ ₹ 13,000 ಕೋಟಿ ಸಂಗ್ರಹಿಸುವ ಯೋಜನೆ ರೂಪಿಸಿರುವುದಾಗಿ ಸಂಸ್ಥೆಯು ಹೇಳಿಕೆ ನೀಡಿದ್ದು ಈ ಏರಿಕೆಗೆ ಕಾರಣವಾಯಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಬ್ಯಾಂಕಿಂಗ್‌ ವಲಯದಲ್ಲಿ, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಕೋಟಕ್ ಬ್ಯಾಂಕ್ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ ಷೇರುಗಳು ಶೇ 3.73ರವರೆಗೂ ಏರಿಕೆ ದಾಖಲಿಸಿದವು. ಟಾಟಾ ಸ್ಟೀಲ್‌, ಪವರ್‌ ಗ್ರಿಡ್‌, ಏಷ್ಯನ್‌ ಪೈಂಟ್ಸ್, ಎನ್‌ಟಿಪಿಸಿ, ಎಸ್‌ಬಿಐ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ ಶೇ 1.58ರವರೆಗೂ ಏರಿಕೆ ಕಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.