ADVERTISEMENT

ಷೇರುಪೇಟೆ: ನಿಲ್ಲದ ಮಾರಾಟ ಒತ್ತಡ

ಪಿಟಿಐ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST

ಮುಂಬೈ (ಪಿಟಿಐ): ದೇಶದ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಮುಂದುವರೆದಿದೆ. ಸತತ ಮೂರನೇ ವಹಿವಾಟು ದಿನವಾದ ಮಂಗಳವಾರವೂ ವಹಿವಾಟು ಇಳಿಕೆ ಕಂಡಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌) ವಹಿವಾಟಿನ ಆರಂಭದಲ್ಲಿ ಕಂಡುಕೊಂಡಿದ್ದ ಗಳಿಕೆಯು ವಹಿವಾಟಿನ ಅಂತ್ಯದವರೆಗೂ ಕಾಯ್ದುಕೊಳ್ಳಲಿಲ್ಲ. 71 ಅಂಶ ಇಳಿಕೆಯೊಂದಿಗೆ ವಹಿವಾಟು ಮುಕ್ತಾಯವಾಯಿತು.

ಮೌಲ್ಯಮಾಪನ ಸಂಸ್ಥೆ ಫಿಚ್‌, ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ‘ರೇಟಿಂಗ್‌ ವಾಚ್‌ ನೆಗೆಟಿವ್’ (ಆರ್‌ಡಬ್ಲ್ಯುಎನ್‌) ಸ್ಥಾನ ನೀಡಿದೆ. ಈ ಸುದ್ದಿಯು ಬ್ಯಾಂಕಿಂಗ್‌ ವಲಯದ ಷೇರುಗಳ ಮೌಲ್ಯವನ್ನು ಇಳಿಕೆ ಕಾಣುವಂತೆ ಮಾಡಿ, ಇಳಿಮುಖ ವಹಿವಾಟಿಗೆ ಕಾರಣವಾಯಿತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ADVERTISEMENT

ವಿದೇಶಿ ಹೂಡಿಕೆದಾರರು ಷೇರುಪೇಟೆಯಲ್ಲಿ ಮಾರಾಟಕ್ಕೆ ಒತ್ತು ನೀಡಿರುವುದು, ರೂ‍ಪಾಯಿ ಮೌಲ್ಯ ಇಳಿಕೆಯೂ ಸೂಚ್ಯಂಕವು ಕುಸಿತ ಕಾಣುವಂತೆ ಮಾಡಿದೆ.

ವಹಿವಾಟಿನ ಆರಂಭದಲ್ಲಿ ಸಂವೇದಿ ಸೂಚ್ಯಂಕ186 ಅಂಶ ಏರಿಕೆ ದಾಖಲಿಸಿ 33,961 ಅಂಶಗಳಿಗೆ ಏರಿಕೆ ಕಂಡಿತ್ತು. ನಂತರ ಮಾರಾಟದ ಒತ್ತಡಕ್ಕೆ ಒಳಗಾಗಿ ಕನಿಷ್ಠ ಮಟ್ಟವಾದ 33,658 ಅಂಶಗಳಿಗೆ ಇಳಿಯಿತು. ಅಂತಿಮವಾಗಿ 33,704 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 18 ಅಂಶ ಇಳಿಕೆ ಕಂಡು, 10,360 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಬ್ಯಾಂಕಿಂಗ್‌, ರಿಯಲ್‌ ಎಸ್ಟೇಟ್‌, ಭಾರಿ ಯಂತ್ರೋಪಕರಣಗಳು, ಆರೋಗ್ಯ ಸೇವೆ, ವಾಹನ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಮಾರಾಟದ ಒತ್ತಡ ಕಂಡುಬಂದಿತು.

ಪಿಎನ್‌ಬಿ ಸ್ಥಾನ ಇಳಿಕೆ

ರೇಟಿಂಗ್ಸ್‌ ಸಂಸ್ಥೆ ಫಿಚ್‌, ಪಂಜಾಬ್‌ ಬ್ಯಾಷನಲ್‌ ಬ್ಯಾಂಕ್‌ಗೆ ಬ್ಯಾಂಕ್‌ಗಳ ನಿಗಾ ವ್ಯವಸ್ಥೆಯ ನಕಾರಾತ್ಮಕ (ಆರ್‌ಡಬ್ಲ್ಯುಎನ್‌) ಸ್ಥಾನವಾದ ‘ಬಿಬಿ’ ಸ್ಥಾನ ನೀಡಿದೆ.

ಬ್ಯಾಂಕ್‌ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ವಂಚನೆ ಪ್ರಕರಣ ಇದಾಗಿದೆ. ಇದು ಬ್ಯಾಂಕ್‌ನ ನಿರ್ವಹಣಾ ವ್ಯವಸ್ಥೆಯ ಬಗ್ಗೆಯೇ ಪ್ರಶ್ನೆಗಳನ್ನು ಮೂಡುವಂತೆ ಮಾಡಿದೆ. ಇಷ್ಟು ವರ್ಷಗಳ ವರೆಗೆ ವಂಚನೆಯನ್ನು ಪತ್ತೆ ಮಾಡದೇ ಇರುವುದು  ನಿರ್ವಹಣಾ ವ್ಯವಸ್ಥೆಯ ಮೇಲ್ವಿಚಾರಣೆಯ ಕಳಪೆ ಗುಣಮಟ್ಟವನ್ನು ತೋರಿಸುತ್ತಿದೆ ಎಂದು ಹೇಳಿದೆ.

ಬ್ಯಾಂಕ್‌ನ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಅದಕ್ಕೆ ನೀಡಿರುವ ಸ್ಥಾನವನ್ನು ತಗ್ಗಿಸುವ ಬಗ್ಗೆ ನಿರ್ಧರಿಸುವುದಾಗಿಯೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.