ADVERTISEMENT

ರಾಗಿ ಖರೀದಿ ಕೇಂದ್ರಕ್ಕೆ ರೈತರ ನಿರಾಸಕ್ತಿ

ಮುಕ್ತ ಮಾರುಕಟ್ಟೆಗಿಂತ ಕಡಿಮೆ ಬೆಲೆ: ಗುಣಮಟ್ಟ ಮಾನದಂಡ ಕಠಿಣ

ಆರ್.ಜಿತೇಂದ್ರ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST
ರಾಮನಗರದ ಹಳ್ಳಿಯೊಂದರಲ್ಲಿ ರಸ್ತೆ ಮೇಲೆಯೇ ರೈತರು ರಾಗಿ ಒಕ್ಕಣೆ ಮಾಡುತ್ತಿರುವುದು
ರಾಮನಗರದ ಹಳ್ಳಿಯೊಂದರಲ್ಲಿ ರಸ್ತೆ ಮೇಲೆಯೇ ರೈತರು ರಾಗಿ ಒಕ್ಕಣೆ ಮಾಡುತ್ತಿರುವುದು   

ರಾಮನಗರ: ರಾಗಿಯ ಕಣಜ ಎಂದೇ ಗುರುತಿಸಲ್ಪಡುವ ರಾಮನಗರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರವು ತೆರೆದಿರುವ ರಾಗಿ ಖರೀದಿ ಕೇಂದ್ರಗಳತ್ತ ರೈತರು ಮುಖ ಮಾಡಿಲ್ಲ. ತಿಂಗಳ ಹಿಂದೆಯೇ ಕೇಂದ್ರಗಳು ಆರಂಭಗೊಂಡಿದ್ದರೂ ಇನ್ನೂ ಕ್ವಿಂಟಲ್‌ನಷ್ಟು ಧಾನ್ಯ ಸಹ ಬಂದಿಲ್ಲ.

ಸರ್ಕಾರವು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಫ್‌ಸಿಎಸ್‌ಸಿ) ಮೂಲಕ ರಾಜ್ಯದಾದ್ಯಂತ ರಾಗಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಇಲ್ಲಿ ಖರೀದಿಯಾಗುವ ರಾಗಿಯನ್ನು ಕೇಂದ್ರ ಉಗ್ರಾಣ ನಿಗಮದ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗುತ್ತಿದೆ. ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಜನವರಿ ಆರಂಭದಲ್ಲಿಯೇ ತಲಾ ಒಂದೊಂದು ಖರೀದಿ ಕೇಂದ್ರವನ್ನು ತೆರೆಯಲಾಗಿದೆ. ಆದರೆ ರೈತರಿಂದ ಪ್ರತಿಕ್ರಿಯೆ ಮಾತ್ರ ಶೂನ್ಯವಾಗಿದೆ.

ರಾಮನಗರ ಜಿಲ್ಲೆಯಲ್ಲಿ ಒಣ ಬೇಸಾಯದ ಭೂಮಿ ಹೆಚ್ಚಿದೆ. ಇಲ್ಲಿನ 1.14 ಲಕ್ಷ ಹೆಕ್ಟೇರ್‌ನಷ್ಟು ಕೃಷಿ ಯೋಗ್ಯ ಭೂಮಿಯ ಪೈಕಿ ಸುಮಾರು 76 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬೆಳೆಯಲಾಗುತ್ತಿದೆ. ಈ ವರ್ಷ ಮುಂಗಾರು ಫಲಪ್ರದವಾಗಿರುವ ಕಾರಣ ರಾಗಿ ರೈತರ ಕೈಹಿಡಿದಿದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿಯೇ ಹೆಚ್ಚಾಗಿ ಮಾರಾಟ ನಡೆದಿದ್ದು, ಸರ್ಕಾರಿ ಕೇಂದ್ರಗಳನ್ನು ಕೇಳುವವರೇ ಇಲ್ಲದಾಗಿದೆ.

ADVERTISEMENT

ಕನಿಷ್ಠ ಬೆಲೆ: ಈ ಕೇಂದ್ರಗಳಲ್ಲಿ ಪ್ರತಿ ಕ್ವಿಂಟಲ್ ರಾಗಿಗೆ ₨2300 ದರ ನಿಗದಿಯಾಗಿದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₨2800–3000 ವರೆಗೂ ಬೆಲೆ ಇದೆ. ವರ್ತಕರು ರೈತರ ಮನೆ ಬಾಗಿಲಿಗೆ ತೆರಳಿ ಖರೀದಿ ಮಾಡುತ್ತಿದ್ದಾರೆ.

ಕಠಿಣ ನಿಯಮ: ರಾಗಿ ಮಾರಾಟ ಮಾಡುವ ರೈತರಿಗೆ ಹಲವು ನಿಯಮಗಳನ್ನು ವಿಧಿಸಲಾಗುತ್ತಿದೆ. ರೈತರು ತಮ್ಮ ಹೆಸರಿನಲ್ಲಿ ಜಮೀನಿನ ಪಹಣಿ ಹೊಂದಿರಬೇಕು. ಅವರ ಬ್ಯಾಂಕ್‌ ಖಾತೆಯು ಆಧಾರ್‌ಗೆ ಜೋಡಣೆ ಆಗಿರಬೇಕು. ಜಮೀನಿನ ಬೆಳೆ ವಿವರದಲ್ಲಿ ರಾಗಿ ನಮೂದಾಗಿರಬೇಕು. ಈ ಬಗ್ಗೆ ಗ್ರಾಮಲೆಕ್ಕಿಗರಿಂದ ಧೃಢೀಕರಣ ಪತ್ರ ತರಬೇಕು ಎಂಬ ನಿರ್ಬಂಧಗಳನ್ನು ಹೇರಲಾಗುತ್ತಿದೆ.

ರೈತರು ತಂದ ಉತ್ಪನ್ನವನ್ನು ಕೃಷಿ ಇಲಾಖೆಯ ಟ್ರೇಡರ್‌ ಹಾಗೂ ವಿಶ್ಲೇಷಣಾಕಾರರಿಂದ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇಂತಿಷ್ಟೇ ಪ್ರಮಾಣದ ತೇವಾಂಶ ಇರಬೇಕು ಎನ್ನುವ ನಿಯಮವೂ ಇದೆ. ಈ ಎಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣವಾದರಷ್ಟೇ ರಾಗಿ ಖರೀದಿಗೆ ಪರಿಗಣಿಸಲ್ಪಡುತ್ತದೆ. ಖರೀದಿಯ ಕೆಲವು ದಿನಗಳ ನಂತರದಲ್ಲಿ ಹಣವು ಆರ್‌ಟಿಜಿಎಸ್ ಮೂಲಕ ರೈತರ ಬ್ಯಾಂಕ್‌ ಖಾತೆಗೆ ಸೇರುತ್ತದೆ.

‘ಈ ವರ್ಷ ಈವರೆಗೆ 450 ಮಂದಿಯಷ್ಟೇ ಖರೀದಿಗೆ ನೋಂದಾಯಿಸಿಕೊಂಡಿದ್ದಾರೆ. ಅವರೂ ಇನ್ನು ಉತ್ಪನ್ನವನ್ನು ತಂದಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ನೋಂದಣಿ ಮತ್ತು ಖರೀದಿ ನಡೆದಿಲ್ಲ’ ಎಂದು ಕೆಎಫ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ಎಚ್‌.ಎಂ. ಚನ್ನಾನಾಯಕ್‌ ತಿಳಿಸಿದರು.
‘ಬೆಂಬಲ ಬೆಲೆಯು ಮಾರುಕಟ್ಟೆ ದರಕ್ಕಿಂತ ಕಡಿಮೆ ಇರುವ ಕಾರಣ ರೈತರು ಮುಂದೆ ಬರುತ್ತಿಲ್ಲ. ಕೆಲವು ರೈತರು ಕಡಿಮೆ ಗುಣಮಟ್ಟದ ಉತ್ಪನ್ನ ತಂದಿದ್ದು, ಅಂತಹವನ್ನು ತಿರಸ್ಕರಿಸಲಾಗಿದೆ’ ಎಂದು ಅವರು ಹೇಳಿದರು. ‘ರೈತರ ನೋಂದಣಿ ಅವಧಿಯನ್ನು ಇದೇ 28ರವರೆಗೆ ವಿಸ್ತರಿಸಲಾಗಿದೆ. ಮಾರ್ಚ್‌ 31ರವರೆಗೂ ಅವರಿಂದ ಉತ್ಪನ್ನ ಖರೀದಿಸಲಾಗುವುದು’ ಎಂದು ಮಾಹಿತಿ ನೀಡಿದರು.

ರೈತರಿಂದ ವಿರೋಧ: ‘ಸರ್ಕಾರವು ಕಡಿಮೆ ಬೆಂಬಲ ಬೆಲೆ ನಿಗದಿ ಮಾಡಿರುವ ಕಾರಣ ಮುಕ್ತ ಮಾರುಕಟ್ಟೆಯಲ್ಲಿಯೂ ಬೆಲೆ ಕುಸಿಯುತ್ತಿದೆ. ವರ್ತಕರೂ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ’ ಎಂದು ಕೃಷಿಕ ಸಮಾಜದ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ದೇವರಾಜು ಆರೋಪಿಸಿದರು.

ಕಳೆದ ವರ್ಷ ದಾಖಲೆಯ ಖರೀದಿ: ‘2017–18ನೇ ಸಾಲಿನಲ್ಲಿ ಬರದ ನಡುವೆಯೂ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳು ಉತ್ತಮ ವಹಿವಾಟು ನಡೆಸಿದ್ದವು. ಈ ಅವಧಿಯಲ್ಲಿ ಸುಮಾರು 6 ಸಾವಿರ ರೈತರು ಖರೀದಿಗೆ ನೋಂದಾಯಿಸಿಕೊಂಡಿದ್ದರು. ₨2100 ಬೆಂಬಲ ಬೆಲೆ ಮೂಲಕ 2 ಲಕ್ಷ ಕ್ವಿಂಟಲ್‌ನಷ್ಟು ರಾಗಿಯನ್ನು ಖರೀದಿ ಮಾಡಲಾಗಿತ್ತು’ ಎಂದು ಎಚ್‌.ಎಂ. ಚನ್ನಾನಾಯಕ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.