ADVERTISEMENT

8ಸಕ್ಕರೆ ಕಾರ್ಖಾನೆಗೆ ನೋಟಿಸ್‌

ಕ್ರಿಮಿನಲ್‌ ದಾವೆ: ಬಾಗಲಕೋಟೆ ಡಿ.ಸಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 19:30 IST
Last Updated 26 ನವೆಂಬರ್ 2014, 19:30 IST

ಬಾಗಲಕೋಟೆ: ಇದೇ 27ರಿಂದ ಕಬ್ಬು ನುರಿಸುವುದನ್ನು ಆರಂಭಿಸುವಂತೆ ಎಂಟು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಬುಧವಾರ ತುರ್ತು ನೋಟಿಸ್‌ ಜಾರಿ ಮಾಡಿದ್ದಾರೆ.

ನೋಟಿಸ್‌ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ‘ಕಾರ್ಖಾನೆಗಳು ಕಬ್ಬು ನುರಿಸು ವುದನ್ನು ಪ್ರಾರಂಭಿಸದ ಕಾರಣ ಆರ್ಥಿಕ ನಷ್ಟಕ್ಕೆ ಒಳಗಾಗಿರುವ ರೈತರು ಬೇಸತ್ತು ಆತ್ಮಹತ್ಯೆ ಮಾಡಿಕೊಂಡರೆ ಕಾರ್ಖಾನೆಗಳ ಮಾಲೀಕರನ್ನೇ ಜವಾಬ್ದಾರರನ್ನಾಗಿಸಿ, ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

‘ಕಬ್ಬು ಅರೆಯುವ ಕಾರ್ಯ ಆರಂಭವಾಗದಿರುವುದರಿಂದ ಕಬ್ಬು ಹಾಳಾಗುವ, ಒಣಗುವ ಮತ್ತು ಇಳುವರಿ ಕಡಿಮೆಯಾಗಿ ಉಂಟಾಗುವ ಆರ್ಥಿಕ ಹಾನಿಯ ಹೊಣೆ ಯನ್ನು ಕಾರ್ಖಾನೆಗಳೇ ಹೊರಬೇಕಾಗುತ್ತದೆ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

‘ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಮೂರು ಸಭೆಗಳಲ್ಲೂ ಕಾರ್ಖಾನೆಗಳು ನ. 15ರಿಂದ ಕಬ್ಬು ಅರೆಯುವುದನ್ನು ಆರಂಭಿಸುವುದಾಗಿ ಭರವಸೆ ನೀಡಿದ್ದವು. ಈಗ ಕಾರ್ಖಾನೆ ಆರಂಭಿಸದೇ ನಂಬಿಕೆ ದ್ರೋಹವೆಸಗಿರುವುದರಿಂದ ಐಪಿಸಿ ಕಲಂ 405ರ ಉಲ್ಲಂಘನೆಗೂ ಗುರಿಯಾಗಬೇಕಾಗುತ್ತದೆ’ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

‘ನಿಗದಿತ ಸಮಯದಲ್ಲಿ ಕಬ್ಬು ಅರೆಯುವಿಕೆ ಆರಂಭಿಸದೇ ಉದ್ದೇಶಪೂರ್ವಕವಾಗಿ ರೈತರಿಗೆ ತೊಂದರೆ ನೀಡುತ್ತಿರುವುದು ಸ್ಪಷ್ಟ. ಮುಂದೆ ರೈತರು ಪ್ರತಿಭಟನೆಗೆ ಇಳಿದು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾದಲ್ಲಿ ಅದಕ್ಕೆ ಕಾರ್ಖಾನೆ ಮಾಲೀಕರನ್ನೇ ಹೊಣೆಗಾರರನ್ನಾಗಿಸಿ ಸಿಆರ್‌ಪಿಸಿ ಮತ್ತು ಐಪಿಸಿ ನಿಮಯಗಳನ್ವಯ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೇ, ಸಬೂಬು ಹೇಳದೇ, ಹಟಮಾರಿ ಧೋರಣೆ ಬಿಟ್ಟು, ಕಬ್ಬು ನುರಿಸುವುದನ್ನು ತಕ್ಷಣ ಆರಂಭಿಸಬೇಕು’ ಎಂದು ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಕಟಾವಿಗೆ ಬಂದಿದೆ. ಕಬ್ಬು ಕ್ಷೇತ್ರ ನಿರ್ಧರಿಸಿ, ಸಕ್ಕರೆ ಕಾರ್ಖಾನೆಗೆ ಸರ್ಕಾರ ಪರವಾನಗಿ ನೀಡಿದೆ. ಕಾರ್ಖಾನೆಗಳನ್ನು ನಂಬಿ ರೈತರೂ ಕಬ್ಬು ಬೆಳೆದಿದ್ದಾರೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.